ನೆನಪಿನ ಬುತ್ತಿಯಿಂದ: ನಾನು ಚಾಲಕನಾಗಿದ್ದಾಗ- ಭಾಗ 5

Upayuktha
0



ದೇಶವನ್ನು ಸುತ್ತುವ ಹಂಬಲ ಯಾರಿಗಿಲ್ಲ ಹೇಳಿ. ನನಗೂ ಅದು ಹೊರತಾಗಿರಲಿಲ್ಲ. ಹಾಗೆಂದು ನನಗೆ ಅದು ಅಷ್ಟು ಬೇಗ, ಅಷ್ಟು ಸುಲಭದಲ್ಲಿ, ಜತೆಗೆ ಅಷ್ಟೊಂದು ಗೌರವದೊಂದಿಗೆ ಪ್ರಾಪ್ತವಾಗುತ್ತದೆ ಎಂದು ಮಾತ್ರ ಗೊತ್ತಿರಲಿಲ್ಲ. ನಾನು ಯಾವಾಗ ಪುತ್ತಿಗೆ ಮಠಕ್ಕೆ ಸೇರಿದೆನೋ ಅಂದು ನನಗೆ ಭಾರತ ಸುತ್ತುವ ಯೋಗ ದೊರಕಿತ್ತು. ಮುಂದೆ ಹತ್ತು ವರ್ಷಗಳಷ್ಟು ದೀರ್ಘ ಕಾಲ ಅವರೊಡನೆ ಸಂಚರಿಸಿದ ದಿನಗಳು ಮಾತ್ರ ಅವಿಸ್ಮರಣೀಯ. ನನಗೆ ನನ್ನ ಜೀವನದಲ್ಲಿ ಸ್ವರ್ಣಾಕ್ಷರದಿಂದ ಬರೆಯಲ್ಪಡುವ ದಿನಗಳಿದ್ದರೆ ನಾನು ಉಡುಪಿಯ ಸ್ವಾಮೀಜಿಗಳೊಡನೆ ಇದ್ದಂಥ ದಿವಸಗಳು. ಮನೆಯ ಬಗ್ಗೆ ಕಾಳಜಿ ಇಲ್ಲ, ಹೆಂಡತಿ ಮಕ್ಕಳೆಂಬ ಸಂಸಾರ ಬಂಧವಿಲ್ಲ, ಅನಾರೋಗ್ಯದ ಸಮಸ್ಯೆ ಇಲ್ಲ, ಯಾವುದೇ ದುರಾಭ್ಯಾಸವಿಲ್ಲ, ದಿನಕ್ಕೊಂದು ಊರು-ದಿನಕ್ಕೊಂದು ಜನರ ಸಾಂಗತ್ಯ, ಬೇರೆ ಬೇರೆ ಪರಿಸರ, ಬೇರೆ ಬೇರೆ ಭಾಷೆಯ ವೈವಿಧ್ಯತೆ ಇತ್ಯಾದಿ ಅನೇಕ ಅನುಭವಗಳ ಮೂಟೆಗಳೇ ನನ್ನೆದುರಿಗೆ ತೆರೆದಿಟ್ಟಂತೆ ಅನಿಸಿತ್ತು ಮಾತ್ರವಲ್ಲ ಅದು ಸತ್ಯವೂ ಆಗಿತ್ತು. ಅರಿತುಕೊಳ್ಳುವ ಮನಸ್ಸಿದ್ದಲ್ಲಿ, ಕುತೂಹಲವಿದ್ದಲ್ಲಿ ಊರೂರು ತಿರುಗುವುದು ಕೂಡ ಸಂಚಾರಿ ಪಾಠಶಾಲೆ ಇದ್ದಂತೆ. ಮುಂಬಯಿಯೋ ಚೆನ್ನೈಯೋ ಬೆಳಗ್ಗೆ ಎದ್ದೊಡನೆ ನಾನೆಲ್ಲಿದ್ದೇನೆ ಎಂದು ಜ್ಞಾಪಿಸಿಕೊಳ್ಳಬೇಕು. 


ಅಂತೆಯೇ ನಾವು ಸಂಚಾರ ಮಾಡುತ್ತ ರಾಜಸ್ಥಾನಕ್ಕೆ ಹೋಗಿದ್ದೆವು. ಅಲ್ಲಿ ಪುಷ್ಕರಣಿ ಎನ್ನುವಂಥ ಸರೋವರದಲ್ಲಿ ಸ್ನಾನ ಮಾಡುವುದೆಂದರೆ ಬಹಳ ಪವಿತ್ರವಾದದ್ದು. ಜನರ ಅಪಸವ್ಯಗಳಿಗೆ ಅದರ ಮಹತ್ವ ಇಂದು ಕ್ಷೀಣವಾಗಿದೆ ಎನ್ನುವುದು ಬಿಟ್ಟರೆ ಅಲ್ಲಿಯ ಪರಿಸರದ ಸೌಂದರ್ಯ, ಸ್ನಾನ ಮಾಡುವಾಗ ಆಗುವಂಥ ಮಾನಸಿಕವಾದ ಶುಭ್ರತೆ, ನಾವೆಲ್ಲ ಪಾಪಗಳನ್ನು ಕಳಕೊಂಡಿರುವೆವು ಎಂಬ ಭಾವ.. ಖಂಡಿತ ಅಲ್ಲಗೆಳೆಯುವಂತಿಲ್ಲ. ಅದೇರೀತಿ ನಾವು ಅಂದರೆ ಒಂದಿಪ್ಪತೈದರಷ್ಟು ಯಾತ್ರಿಕರು ನಾಲ್ಕು ವಾಹನಗಳಲ್ಲಿ ಪುಷ್ಕರಣಿಗೆ ಹೋಗಿದ್ದೆವು.   ಮುಂದೆ ಅಲ್ಲಿಂದ ದೆಹಲಿ, ಬದರಿನಾಥದವರೆಗೆ ಹೋಗುವವರಿದ್ದೆವು. ಸ್ವಾಮೀಜಿಯವರ ಒಟ್ಟಿಗೆ ಎಲ್ಲ ಸಂಚಾರಗಳಲ್ಲೂ ಭಾಗಿಯಾಗುವವರು ಮತ್ತು ನಿರ್ದಿಷ್ಟವಾದ ಸಂಚಾರಗಳಿಗೆ ಮಾತ್ರ ಸ್ವಾಮೀಜಿಯವರ ಜತೆ ಬರುವವರು ಎಂಬ ಎರಡು ವಿಭಾಗಗಳಿವೆ. ಹಾಗೆಯೇ ನಮ್ಮ ಸಿಬ್ಬಂದಿಗಳಲ್ಲಿ ಒಬ್ಬರಾದ ಶ್ರೀಶಾಚಾರ್ ಎನ್ನುವವರ ತಂದೆಯವರೂ ನಮ್ಮೊಂದಿಗೆ ಬಂದಿದ್ದರು. ವಯೋವೃದ್ಧರಾದರೂ ಬಹಳ ಚುಟಿಯಾಗಿದ್ದರು. ಸಂಚಾರದಲ್ಲಿದ್ದರೂ ನಿತ್ಯವೂ 

ಜಪತಪಾದಿಗಳನ್ನು ಬಿಡದೆ ಶ್ರದ್ಧೆಯಿಂದಲೇ ಮಾಡುತ್ತಿದ್ದರು. ಒಂದು ದಿನದ ಸ್ನಾನಗಳು, ಸಂದರ್ಶನಗಳು ಮುಗಿದು ರಾತ್ರಿ ವಿಶ್ರಾಂತಿ ಪಡೆಯಲು ನಾವೆಲ್ಲರೂ ನಮ್ಮ ನಮ್ಮ ಠಿಕಾಣಿಗೆ ಹೋದೆವು. ಶ್ರೀಶಾಚಾರ್ರು ಮತ್ತು ಅವರ ತಂದೆ ಅವರಿಗೆ ಮೀಸಲಾದ ಕೊಠಡಿಯಲ್ಲಿ ಮಲಗಿದ್ದರು.  


ಎಂದಿನಂತೆ ಬೆಳಗ್ಗಿನ ಜಾವದಲ್ಲಿ ಎದ್ದು ಸ್ನಾನಾದಿಗಳನ್ನು ಪೂರೈಸಿ ಇನ್ನೇನು ಹೊರಡಬೇಕು ಎನ್ನುವಾಗ ಆಚಾರ್ರು ಕಾಣಲೇ ಇಲ್ಲ. ಬಹುಷ ಹೊರಗೆಲ್ಲೋ ವರಾಂಡದಲ್ಲಿದ್ದಾರೆಂದು ನಾವು ಎಣಿಸಿದ್ದೆವು. ಆದರೆ ಹೊರಗೆ ಪರಿಚಿತವಾದ ಜಾಗವಿಲ್ಲದಿರುವುದರಿಂದ ಬಹಳ ದೂರವಿರಲಿಕ್ಕಿಲ್ಲ ಇಲ್ಲೇ ಎಲ್ಲಾದರು ಜಗಲಿಗಳಲ್ಲಿ ಕೂತಿರಬಹುದೆಂದು ಕರಕೊಂಡು ಬರಲು ನಾವು ಹೋದರೆ ಆಚಾರ್ರು ಎಲ್ಲೂ ಇರಲಿಲ್ಲ. ಆಗ ನಮಗೆ ಸ್ವಲ್ಪ ಗಾಬರಿಯಾಯಿತು. ಭಾಷೆಯೂ ಬಾರದು, ಯಾರ ಪರಿಚಯವೂ ಇರದು ಆದ್ದರಿಂದ ಎಲ್ಲಾದರೂ ದಾರಿ ತಪ್ಪಿರಬಹುದೆಂದು ನಾವು ಎರಡು ಮೂರು ಜನ ಹುಡುಕಲು ಪ್ರಾರಂಭಿಸಿದೆವು. ವೇಳೆ ಸರಿದಂತೆ ಆಚಾರ್ರು ಸಿಗವುದು ಕಷ್ಟವೆಂದು ಸಣ್ಣ ಅನುಮಾನವೂ ಪ್ರಾರಂಭವಾಯಿತು. ಶ್ರೀಶಾಚಾರ್ರಿಗೆ ಸಮಾಧಾನ ಮಾಡಬೇಕು, ಅವರ ತಂದೆಯನ್ನು ಹುಡುಕಬೇಕು. ಸ್ವಾಮೀಜಿಯವರ ಸಹಿತ ನಾವು ಪ್ರತಿ ಗಲ್ಲಿ ಗಲ್ಲಿಯೂ ಹುಡುಕಲು ಪ್ರಾರಂಭಿಸಿದೆವು. ಪರಿಣಾಮ ಶೂನ್ಯವೇ.


ದಾರಿಯಲ್ಲಿ ಸಿಕ್ಕವರಲ್ಲಿ, ಪೋಲೀಸರಲ್ಲಿ, ಅಂಗಡಿ ಹೋಟೇಲುಗಳಲ್ಲಿ, ಸರೋವರದ ಪಕ್ಕದಲ್ಲಿರುವ ಅಂಗಡಿಗಳಲ್ಲಿ ಎಲ್ಲೆಂದರಲ್ಲಿ ತಪ್ಪಿಸಿಕೊಂಡ ಆಚಾರ್ಯರ ಗುರುತು ಹೇಳಿ, ಸಿಕ್ಕಿದಲ್ಲಿ ನಮ್ಮ ವಿಳಾಸಕ್ಕೆ ತಿಳಿಸಿ ಎಂದು ವಿನಂತಿಸಿಕೊಂಡೆವು. ಹೊತ್ತು ಸಂಜೆಯಾಗತೊಡಗಿತು. ಆಚಾರ್ಯರ ಹತ್ತಿರ ಹಣವೂ ಇಲ್ಲ, ಭಾಷೆಯೂ ಬಾರದು. ಮೇಲಾಗಿ ಅವರು ಹೋಟೇಲಿನಲ್ಲೂ ತಿನ್ನಲಾರರು. ಹಚ್ಚೇಕೆ ಹೊರಗೆ ನೀರನ್ನೂ ಕುಡಿಯಲಾರರು. ಅಂತಹ ಸ್ಥಿತಿಯಲ್ಲಿ, ಅವರು ಇನ್ನೂ ಬದುಕಿರಬಹುದೆಂಬ ಆಸೆಯೂ ಕರಗತೊಡಗಿತು. ರಾತ್ರಿ ಹನ್ನೆರಡಾದರೂ ಹುಡುಕಾಟ ಮುಗಿಯಲಿಲ್ಲ. ರಾತ್ರಿ ತಿರುಗಬೇಡಿ ಹಾಗೇನಾದರು ಸುಳಿವು ಸಿಕ್ಕಲ್ಲಿ ನಾವೇ ತಿಳಿಸುತ್ತೇವೆ ಎಂದು ಫೋಲೀಸರೇ ಹೇಳಿದ ಮೇಲೆ ನಮ್ಮ ಠಿಕಾಣಿಗೆ ಹೋಗಿ ಮಲಗಿಕೊಂಡೆವು.  


ರಾತ್ರಿ ನಿದ್ದೆಯೂ ಇಲ್ಲ. ಆಚಾರ್ರು ಸಿಗುವಲ್ಲಿವರೆಗೆ ನಮಗೆ ಮುಂದಿನ ಪ್ರಯಾಣವೂ ಇಲ್ಲ. ಸಿಗುವಂಥ ದಾರಿಯೂ ಗೊತ್ತಿಲ್ಲ. ಅಂತು ಬಹಳ ಕಠಿಣ ಪರೀಕ್ಷೆಗೆ ಒಳಪಟ್ಟೆವು. ಇದುವರೆಗೆ ಹುಡುಕಾಟ ಆಚಾರ್ರದ್ದಾದರೆ ಈಗ ಆಚಾರ್ರ ಹೆಣವಾದರೂ ಸಿಗಬಹುದೋ ಏನೊ ಎಂಬ ಹುಡುಕಾಟ. ಮಾನಸಿಕ ಒತ್ತಡದೊಂದಿಗೆ ಎರಡು ದಿನಗಳು ಪೂರ್ತಿ ಆದ ಮೇಲೆ ಮೂರನೇ ದಿನ ಒಂದು ಸುದ್ದಿ ಸಿಕ್ಕಿತು. ಪುಷ್ಕರಣಿಯ ಹೊರಗೆ ಮರುಭೂಮಿ ಪ್ರಾರಂಭವಾಗುತ್ತದೆ. ಎಲ್ಲೆಲ್ಲೂ ಹೊಯಿಗೆಯದ್ದೇ ಕಾರುಬಾರು. ನೆರಳಿಗೆ ಒಂದು ಸಣ್ಣ ಸಸ್ಯವೂ ಇಲ್ಲದ ಸ್ಥಿತಿ. ಅಲ್ಲಿ ಸಂಚಾರವೆಂದರೆ ಒಂಟೆಯ ಗಾಡಿಗಳು ಮಾತ್ರ. ಅದುಕೂಡ ಗಾಡಿಯ ಮಾರ್ಗಗಳು ಸವಾರರಿಗೆ ಮಾತ್ರ ತಿಳಿಯಬಹುದೇ ಹೊರತು ಹೊರಗಿನವರಿಗೆ ಕಣ್ಣು ಕಟ್ಟಿ ಬಿಟ್ಟಂತೆಯೇ. ಅಂತೆಯೇ ಅಲ್ಲಿ ಸಂಚಾರ ಮಾಡುವ ಒಂಟೆ ಗಾಡಿಯವನೊಬ್ಬ ಬಂದು ಪೋಲೀಸರಲ್ಲಿ ಹೇಳಿದನಂತೆ 'ಮರಳು ಗಾಡಿನ ಆ ಹಾದಿಯಲ್ಲಿ ದೂರದಲ್ಲೆಲ್ಲೋ ಒಂದು ಮಾನವಾಕೃತಿ ಕಾಣುತ್ತದೆ. ಜತೆಗೆ ವಾಸನೆಯೂ ಬರುತ್ತದೆ' ಎಂದು. ನಮ್ಮ ಹುಡುಕಾಟ ತಿಳಿದಂಥ ಪೋಲೀಸರು ನಮ್ಮ ಗಮನಕ್ಕೆ ಈ ವಿಷಯ ತಂದಾಗ ಹೆಣವಾದರೂ ಸಿಗಬಹುದೆಂಬ ಆಶಾಭಾವವಿತ್ತು. ಸರಿ ನಾವೆಲ್ಲರೂ ಹೊರಟೆವು. ಸಾಧಾರಣ ಮೂರು ನಾಲ್ಕು ಕಿ.ಮೀ. ಮರುಭೂಮಿ ಪಯಣ. ನಮ್ಮಂಥ ಆರೋಗ್ಯವಂತರಿಗೇ ಈ ನಡಿಗೆ ಭಾರಿ ಸುಸ್ತು ಉಂಟು ಮಾಡಿತ್ತು. ಅಂತು ಆ ಹೆಣದ ಹತ್ತಿರ ಮೂಗು ಮುಚ್ಚಿಯೇ ಹೋಗಬೇಕಾಯಿತು. ದೂರದಿಂದ ನೋಡುವಾಗ ಒಂದು ಮಾಂಸದ ಮುದ್ದೆಯಂತೇ ಇತ್ತು. ನಮಗಾದರೋ ಸಂಶಯ ಹೆಣ ಆಚಾರ್ರದ್ದೋ ಅಥವಾ ಇನ್ಯಾರದ್ದೋ ಎಂದು. ಆಚಾರ್ರು ಉಟ್ಟುಕೊಂಡ ಬಟ್ಟೆಗಳು ಕೊಳೆತು ಗುರುತು ಸಿಗುತ್ತಿರಲಿಲ್ಲ ಹಾಗಾದರೆ ಈ ಹೆಣ ಆಚಾರ್ರದ್ದೇ ಎಂದು ಗೊತ್ತಾದದ್ದು ಕುತ್ತಿಗೆಯಲ್ಲಿದ್ದ ಬಂಗಾರದ ತುಳಸಿಮಣಿ ಸರ. ಹೆಚ್ಚಿನ ಕುರುಹುಗಳೆಲ್ಲ ನಶಿಸಿ ಹೋಗಿದ್ದರೂ ಸರ ಮತ್ತು ತಲೆಯ ಬಿಳಿ ಕೂದಲು ಗುರುತು ಹಿಡಿಯುವುದರಲ್ಲಿ ನಮಗೆ ಅನುಕೂಲವಾಯಿತು.


ನಡೆದದ್ದಿಷ್ಟೆ.. ಆಚಾರ್ರು ಉಡುಪಿಯಲ್ಲಿರುವಾಗ ಪ್ರತಿ ದಿನವೂ ಒಂದುವರೆ ಕಿ. ಮೀ. ದೂರದಲ್ಲಿರುವ ಕೃಷ್ಣ ಮಠಕ್ಕೆ ನಡೆದುಕೊಂಡೇ ಹೋಗಿ ಬರುತ್ತಿದ್ದರು. ಬಹುಷ ಆ ದಿನವೂ ಬೆಳಿಗ್ಗೆ ನಿತ್ಯಾಹ್ನಿಕ ಪೂರೈಸಿ ವಯೋ ಸಹಜ ಮರೆವಿನಿಂದ ಉಡುಪಿಯಲ್ಲಿ ನಡೆದಂತೆ ನಡೆಯಲು ಪ್ರಾರಂಭಿಸಿದರು. ದಾರಿ ಹಿಡಿದುಕೊಂಡು ಹೊರಟವರಿಗೆ ದಾರಿ ತಪ್ಪಿದ್ದು ಅರಿವಿಗೆ ಬರುವಾಗ ಹಿಂದೆ ಬರುವಷ್ಟು ಕಾಯದಲ್ಲಿ ಕಸುವಿರಲಿಲ್ಲ. ನಡೆಯಲು ಸಾಧ್ಯವಾಗದೇ ಇರುವಾಗ ಬಿಸಿಲಿನ ಆಘಾತಕ್ಕೆ ತಲೆ ತಿರುಗಿ ಬಿದ್ದಿದ್ದಾರೆ. ಮತ್ತೆ ಮೇಲೇಳಲಾಗದೆ ಬಿಸಿಲ ಹೊಡೆತಕ್ಕೆ ಪ್ರಾಣ ಪಕ್ಷಿ ಹಾರಿ ಹೋಗಿದೆ.  ಅವರು ಮೊದಲ ದಿವಸವೇ ಅಲ್ಲಿಗೆ ಹೋಗಿರುವುದರಿಂದ ಎರಡು ದಿನದ ಬಿಸಿಲಿನ ಝಳಕ್ಕೆ ಅಧ್ವಾನವಾದ ಹೆಣವು ಗುರುತು ಸಿಗದಷ್ಟು ವಿಕಾರವಾಗಿತ್ತು. ತುಳಸಿಮಣಿ ಸರವಲ್ಲದಿದ್ದರೆ ನಮಗೂ ಕಷ್ಟವಾಗುತ್ತಿತ್ತು. ಅಂತು ಸೃಷ್ಟಿಯಾದ ಸಮಸ್ಯೆಗೆ ಪರಿಹಾರ ದೊರೆತು ಆಚಾರ್ಯರ ಅಂತ್ಯಕ್ರಿಯೆಯನ್ನೂ ಮಾಡಿ ನಮ್ಮ ಸಂಚಾರವನ್ನು ಮೊಟಕು ಗೊಳಿಸಿ ಉಡುಪಿಗೆ ಬಂದಾಗ ನಮ್ಮ ಯಾತ್ರೆಗೆ ಅಲ್ಪ ವಿರಾಮವಾದರೆ ಆಚಾರ್ರ ಯಾತ್ರೆಗೆ ಪೂರ್ಣ ವಿರಾಮವಾಯಿತು. 

ಮುಂದೆ ನೋಡೋಣ...

**********

-ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top