ಮಂಗಳೂರು : ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ ನೀಡುವ ಕಥಾಯಜ್ಞ ರಾಷ್ಟ್ರೀಯ ಕಥಾ ಪುರಸ್ಕಾರಕ್ಕೆ ಹಿರಿಯ ಕಥೆಗಾರ ಬೆಂಗಳೂರಿನ ಪದ್ಮನಾಭನಗರದ ಎ ಎನ್ ಪ್ರಸನ್ನ ಅವರ 'ಬಿಡುಗಡೆ' ಕಥಾಸಂಕಲನವು ಆಯ್ಕೆಯಾಗಿದೆ. ಮಾನದಂಡದಲ್ಲಿ ಈ ಆಯ್ಕೆ ನಡೆದಿದೆ. ಕಥಾಯಜ್ಞ ರಾಷ್ಟ್ರೀಯ ಕಥಾ ಪುರಸ್ಕಾರವು 25 ಸಾವಿರ ರೂಪಾಯಿ ನಗದು, ಪದಕ, ಪ್ರಶಸ್ತಿ ಫಲಕ ಮತ್ತು ಸನ್ಮಾನಗಳನ್ನು ಒಳಗೊಂಡಿದೆ.
ಆಗಸ್ಟ್ 26ರಂದು ಮಂಗಳೂರಿನ ತುಳುಭವನದ ಸಿರಿಚಾವಡಿ ವೇದಿಕೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ,ದ.ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು,ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಇವರು ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ ಟ್ರಸ್ಟ್ ಸಹಕಾರದೊಂದಿಗೆ ಏರ್ಪಡಿಸಿರುವ ಚುಟುಕು ಸಾಹಿತ್ಯ ಪರಿಷತ್ತಿನ 9ನೇ ಜಿಲ್ಲಾ ಸಮ್ಮೇಳನೋತ್ತರ ಚುಟುಕು ಸಾಹಿತ್ಯ ಸಂಭ್ರಮ ಮತ್ತು ಬೃಹತ್ ವಿದ್ಯಾರ್ಥಿ ಸನ್ಮಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
1943ರಲ್ಲಿ ಜನಿಸಿದ ಎ ಎನ್ ಪ್ರಸನ್ನ ಅವರು, ದಾವಣಗೆರೆಯಲ್ಲಿ ಇಂಜಿನಿಯರಿಂಗ್ ಪದವಿಯ ನಂತರ ಕೆಪಿಟಿಸಿಎಲ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರು. ಸಾಹಿತ್ಯ,ನಾಟಕ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಸಕ್ರಿಯರು. ಇವರ 'ಉಳಿದವರು' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 'ರಥ ಸಪ್ತಮಿ' ಕೃತಿಗೆ ಬಿ ಹೆಚ್ ಶ್ರೀಧರ ಪ್ರಶಸ್ತಿ, ಪ್ರತಿಫಲನ ಕೃತಿಗೆ ' ಮಾಸ್ತಿ ಕಥಾ ಪುರಸ್ಕಾರಗಳು ಲಭಿಸಿವೆ. 'ನೂರು ವರ್ಷದ ಏಕಾಂತ' ಅನುವಾದಿತ ಕಾದಂಬರಿಗೆ ಕುವೆಂಪು ಭಾಷಾ ಭಾರತಿ ಪ್ರಶಸ್ತಿ, 'ಒಂದಾನೊಂದು ಕಾಡಿನಲ್ಲಿ' ಮಕ್ಕಳ ನಾಟಕಕ್ಕೆ ಬಾಲಭವನ ಪ್ರಶಸ್ತಿ ದೊರಕಿದೆ. 'ಹಾರು ಹಕ್ಕಿಯನೇರಿ' ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ.
ದೂರದರ್ಶನದಲ್ಲಿ 'ಸಂಬಂಧಗಳು' ಧಾರಾವಾಹಿಯನ್ನು ನಿರ್ದೇಶಿಸಿದ್ದಾರೆ. 6ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಏಷಿಯನ್ ಫಿಲ್ಮ್ ಅವಾರ್ಡ್ ತೀರ್ಪುಗಾರರ ಸಮಿತಿಯ ಸದಸ್ಯರಾಗಿದ್ದರು.