ಕೌಶಲ್ಯ ಭಾರತ ನಮ್ಮದಾಗಲಿ
-ಡಾ.ಎ. ಜಯಕುಮಾರ ಶೆಟ್ಟಿ
ಮುಖ್ಯಸ್ಥರು, ಅರ್ಥಶಾಸ್ತ್ರ ವಿಭಾಗ
ಶ್ರೀ.ಧ.ಮಂ.ಕಾಲೇಜು, ಉಜಿರೆ-574240
9448154001
ajkshetty@sdmcujire.in
ವಿಶ್ವ ಯುವ ಕೌಶಲ್ಯ ದಿನ
ಆರ್ಥಿಕ ಬೆಳವಣಿಗೆ ಹಾಗೂ ವೈಯುಕ್ತಿಕ ಯಶಸ್ಸನ್ನು ಸಾಧಿಸುವಲ್ಲಿ ಕೌಶಲ್ಯಗಳು ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಪ್ರಚುರಪಡಿಸಲು ಹಾಗೂ ಕೌಶಲ್ಯಗಳ ಅಭಿವೃದ್ಧಿ ಬಗ್ಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಚರ್ಚೆ ಮತ್ತು ಒಲವು ಮೂಡಿಸುವ ಉದ್ದೇಶದಿಂದ ನವಂಬರ್ 2014 ರ ತನ್ನ ಸಾಮಾನ್ಯ ಸಭೆಯಲ್ಲಿ ವಿಶ್ವ ಸಂಸ್ಥೆಯು ಜುಲೈ 15 ನ್ನು ವಿಶ್ವ ಯುವ ಕೌಶಲ್ಯ ದಿನ ಎಂದು ಘೋಷಿಸಿತು. ಈ ವರ್ಷದ ಧ್ಯೇಯ ವಾಕ್ಯ “ಭವಿಷ್ಯಕ್ಕಾಗಿ ಯುವ ಕೌಶಲ್ಯಗಳನ್ನು ಪರಿವರ್ತಿಸುವುದು”
ವಿಶ್ವದ ಮಾನವ ಸಂಪನ್ಮೂಲ ಬಂಡವಾಳವಾಗಿ ಭಾರತ
ಚೀನಾ ವಿಶ್ವದ ಉತ್ಪಾದನೆ ಕಾರ್ಖಾನೆಯಾಗಿ ಗುರುತಿಸಲಾಗಿದ್ದರೆ ಭಾರತವು ವಿಶ್ವದ ಮಾನವ ಸಂಪನ್ಮೂಲ ಬಂಡವಳವಾಗಿಸುವ ನಿಟ್ಟಿನಲ್ಲಿ ಹೆಜ್ಜೆಯಿಡುತ್ತಿದ್ದೇವೆ. ಅನುಕೂಲಕರ ಜನಸಂಖ್ಯಾ ರಚನೆ ಮತ್ತು ಹೆಚ್ಚುತ್ತಿರುವ ಪದವೀಧರರ ಸಂಖ್ಯೆಯು ದೇಶಿಯ ಮತ್ತು ಅಂತರಾಷ್ಟ್ರೀಯ ಕಾರ್ಮಿಕ ಮಾರುಕಟ್ಟೆಗಳಲ್ಲಿ ಬದಲಾಗುತ್ತಿರುವ ಆವಶ್ಯಕತೆಗಳನ್ನು ಪೂರೈಸಲು ಭಾರತವು ಅನುಕೂಲಕರವಾದ ಅವಕಾಶವನ್ನು ಹೊಂದಿದೆ. ಭಾರತ್ದ ಮಹತ್ವದ ‘ಜನಸಂಖ್ಯಾ ಲಾಭಾಂಶ’ವು ದೇಶದ ಬೆಳವಣಿಗೆಗೆ ಶಕ್ತಿ ತುಂಬುವುದಲ್ಲದೆ, ಪ್ರತಿಭೆಗಳ ಜಾಗತಿಕ ಕೇಂದ್ರವಾಗಿಸಲು ಸಹಕಾರಿಯಾಗುತ್ತದೆ.
ಭವಿಷ್ಯದ ಭರವಸೆ: ಸವಾಲುಗಳು ಹಾಗೂ ಅವಕಾಶಗಳು
ರಾಷ್ಟ್ರೀಯ ಅಭಿವೃದ್ಧಿಯನ್ನು ನಿರ್ಧರಿಸುವ ಸಮೀಕರಣಗಳು ಇತ್ತೀಚಿನ ವರ್ಷಗಳಲ್ಲಿ ಬದಲಾಗಿವೆ ಮತ್ತು ಹಿಂದೆಂದಿಗಿಂತಲೂ ಹೆಚ್ಚಿನ ಸಾಧ್ಯತೆಗಳನ್ನು ತೆರೆದಿಡುವ ಮೂಲಕ ಭವಿಷ್ಯದಲ್ಲಿ ಹೆಚ್ಚಿನ ಬದಲಾವಣೆಗಳಿಗಾಗಿ ಕಾಯುತ್ತಿವೆ.
ಇಂದು ಜಾಗತಿಕ ಜನಸಂಖ್ಯೆಯ 16% ಜನ 15 ರಿಂದ 24 ವಯಸ್ಸಿನ 1.3 ಬಿಲಿಯನ್ ಯುವಕ ಯುವತಿಯರಿದ್ದಾರೆ. ಸುಸ್ಥಿರ, ಒಳಗೊಳ್ಳುವ ಹಾಗೂ ಸ್ಥಿರ ಸಮಾಜ ರಚನೆಯಲ್ಲಿ ಯುವಕರ ಸಕ್ರಿಯ ಪಾಲ್ಗೊಳ್ಳುವಿಕೆ ಅತೀ ಮಹತ್ವದ್ದಾಗಿದೆ. ಅತೀ ಹೆಚ್ಚು ಉದ್ಯೋಗವನ್ನು ಒದಗಿಸುವ ವಲಯಗಳಾಗಿ ಸೇವೆ ಹಾಗೂ ಹೆಚ್ಚು ಬಂಡವಾಳ ಅಗತ್ಯವಿರುವ ಉತ್ಪಾದನಾ ಕ್ಷೇತ್ರಗಳು ಮೂಡಿಬರುತ್ತವೆ. ಇಂದಿನ ಮಾರುಕಟ್ಟೆ ಆಧಾರಿತ ಆರ್ಥಿಕ ವ್ಯವಸ್ಥೆಯ ಹಿನ್ನೆಲೆಯಲ್ಲಿ ನಮ್ಮ ದೇಶದ ಯುವ ಜನರ ಕೌಶಲ್ಯ ವರ್ಧನೆಯ ಬಗೆಗಿನ ಚರ್ಚೆ ಮುನ್ನಲೆಗೆ ಬಂದಿದೆ.
ಆರ್ಥಿಕತೆಯ ರಚನಾತ್ಮಕ ಪರಿವರ್ತನೆ
ಉದ್ಯೋಗದಲ್ಲಿನ ರಚನಾತ್ಮಕ ಬದಲಾವಣೆಯು ಜಾಗತಿಕವಾಗಿ ಬೆಸೆದುಕೊಂಡ ಹಾಗೂ ಸದಾ ಬದಲಾವಣೆಗಳಿಗೆ ತೆರೆದುಕೊಳ್ಳುವ ಪುರೋಗಾಮಿ ಚಿಂತನೆಯುಳ್ಳ ಭಾರತದಂತಹ ಕ್ರಿಯಾತ್ಮಕ ಆರ್ಥಿಕತೆಯಲ್ಲಿ ಸಹಜವಾಗಿ ಹೊಸತನದ ಸವಾಲುಗಳಿಗೆ ಧನಾತ್ಮಕವಾಗಿ ಪ್ರತಿಸ್ಪಂದಿಸುವ ಸಾಮರ್ಥ ಇರುವ ಆತ್ಯಾಧುನಿಕ ಕಾರ್ಮಿಕರಿಗೆ ಬೇಡಿಕೆಯನ್ನು ಹೆಚ್ಚಿಸುತ್ತದೆ. ಇದಕ್ಕೆ ಪೂರಕವಾದ ವ್ಯವಸ್ಥೆಯನ್ನು ರಚಿಸಲು ಭಾರತಕ್ಕೆ ಸಾಧ್ಯವಾಗದ ಹೊರತು ಕೆಲವೇ ವರ್ಷಗಳ ತನಕ ಅಯಾಚಿತವಾಗಿ ನಮಗೆ ದೊರೆಯಲಿರುವ “ಜನಸಂಖ್ಯಾ ಲಾಭಾಂಶ” ನಿಷ್ಪ್ರಯೋಜಕವಾಗುವುದರಲ್ಲಿ ಸಂದೇಹವಿಲ್ಲ.
ಪ್ರಸ್ತುತ ಜಾಗತೀಕರಣದ ಯುಗದಲ್ಲಿ ಮುಂದುವರಿದ ಹಾಗೂ ಅಭಿವೃದ್ಧಿಶೀಲ ದೇಶಗಳ ಮಾರುಕಟ್ಟೆ ಹಾಗೂ ಕೈಗಾರಿಕೆಗಳಲ್ಲಿ ತೀವೃವಾದ ಸ್ಪರ್ಧೆಯನ್ನು ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ಉತ್ಪಾದನಾ ಪ್ರಕ್ರಿಯೆಯಲ್ಲಿ ದಕ್ಷತೆಯನ್ನು ಹೆಚ್ಚಿಸಲು ಹಾಗೂ ಸೇವಾ ಗುಣಮಟ್ಟವನ್ನು ಸುಧಾರಿಸಲು ಅಗತ್ಯವಾದ ಆವಿಷ್ಕಾರಗಳಲ್ಲಿ ತೊಡಗಿಸಿಕೊಳ್ಳಲು ಪೂರಕವಾದ ಕೌಶಲಮಟ್ಟವನ್ನು ಕಾರ್ಮಿಕರು ಹೊಂದಿರುವುದು ಅನಿವಾರ್ಯವಾಗಿದೆ.
ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ (CMKKY)
ಕಾರ್ಮಿಕ ಮಾರುಕಟ್ಟೆಯಲ್ಲಿ ಬದಲಾಗುತ್ತಿರುವ ತಂತ್ರಜ್ಞಾನದೊಂದಿಗೆ ಕೌಶಲ್ಯವುಳ್ಳ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆಯಿರುವ ಹಿನ್ನೆಲೆಯಲ್ಲಿ ಶಾಲೆಯಿಂದ ಹೊರಗುಳಿದ ಹಾಗೂ ಕೌಶಲ್ಯರಹಿತ ಯುವಕ ಯುವತಿಯರಿಗೆ ಲಾಭಾದಾಯಕ ಉದ್ಯೋಗ ಪಡೆಯುವುದು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಜ್ಞಾನ ಆಯೋಗವು 2030 ರ ವರೆಗೆ ವಿವಿಧ ವಲಯಗಳ ವೃತ್ತಿಗಳಲ್ಲಿ 1.88 ಕೋಟಿ ಯುವಜನರಿಗೆ ಕೌಶಲ್ಯ ತರಬೇತಿ ನೀಡುವ ಬಗ್ಗೆ ಗುರಿಯನ್ನು ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳ ಕಾರ್ಯಕ್ರಮಗಳನ್ನು ಒಗ್ಗೂಡಿಸಿ “ಕುಶಲತೆಯ ಬೆಂಬಲ, ಯುವ ಕೈಗಳಿಗೆ ಬಲ” ಎನ್ನುವ ಘೋಷವಾಕ್ಯದೊಂದಿಗೆ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ (CMKKY) ಯನ್ನು ರೂಪಿಸಲಾಗಿದೆ. ಈ ಯೋಜನೆಯಲ್ಲಿ ನಾನಾ ವೃತ್ತಿ ತರಬೇತಿಗಳು, ಮೌಲ್ಯಮಾಪನಗಳು ಹಾಗೂ ಪ್ರಮಾಣೀಕರಣವನ್ನು ಹೊಂದಿದೆ. ತರಬೇತಿ ಪಡೆದವರಿಗೆ ಉದ್ಯೋಗ ದೊರಕಿಸಲು ಪ್ರಯತ್ನಿಸಲಾಗುತ್ತದೆ. ತರಬೇತಿ ಪಡೆದ ವ್ಯಕ್ತಿಯು ಉದ್ಯೋಗ, ಯೋಗ್ಯ ವೇತನ ಅಥವಾ ಸ್ವಯಂ ಉದ್ಯೋಗವನ್ನು ಪಡಯುವುದನ್ನು ಖಾತ್ರಿಪಡಿಸುವ ಆಶಯ ಸ್ವಾಗತಾರ್ಹ.
ಕೌಶಲ್ಯ ಕರ್ನಾಟಕ ಮಾಸಪತ್ರಿಕೆ ಹಾಗೂ ವೆಬ್ ಸೈಟ್ ಮೂಲಕ ಪೂರಕ ಮಾಹಿತಿಯನ್ನು ಒದಗಿಸಲಾಗುತ್ತಿದೆ. 2019 ರಿಂದ ಈ ವರೆಗೆ ಒಟ್ಟು 298648 ಅಭ್ಯರ್ಥಿಗಳು ನೊಂದಾಯಸಿಕೊಂಡಿದ್ದು, 134610 ಅಭ್ಯರ್ಥಿಗಳ ತರಬೇತಿ ಪೂರ್ಣಗೊಂಡಿದೆ. ಕೌಶಲ್ಯದಿಂದಲೇ ಉದ್ಯೋಗ ಕಂಡುಕೊಳ್ಳಲು ಸಾಧ್ಯ. ಉದ್ಯೋಗದಾತರು ಬಯಸುವ ಕೌಶಲ್ಯಯುತ ಯುವಕ ಯುವತಿಯರು ದೊರಕದೇ ಇರುವುದರಿಂದ ಕೌಶಲ್ಯಾಭಿವೃದ್ದಿ ಬಹು ಅಗತ್ಯ.
ಕೌಶಲ್ಯ ಸಂಪರ್ಕ ವೇದಿಕೆ
ಕರ್ನಾಟಕದ ಕೌಶಲ್ಯಾಭಿವೃದ್ಧಿ ನಿಗಮದ ಕೌಶಲ್ಯ ಸಂಪರ್ಕ ಪೋರ್ಟಲ್ ಆರಂಭಿಸಿದೆ. ಈ ವೇದಿಕೆಯ ಮೂಲಕ ಉದ್ಯೋಗದಾತರು ಹಾಗೂ ಉದ್ಯೋಗಾಂಕ್ಷಿಗಳನ್ನು ಒಂದೇ ವೇದಿಕೆಗೆ ತಂದು ಉದ್ಯೋಗ ಕೊಡಮಾಡಿಸುವ ಗುರಿ ಇಡಲಾಗಿದೆ. ಎಲ್ಲೆಲ್ಲಿ ಉದ್ಯೋಗ ಅವಕಾಶಗಳವೆ ಹಾಗೂ ಯಾರಿಗೆ ಕೆಲಸದ ಅಗತ್ಯವಿದೆ ಎಂಬ ಮಾಹಿತಿಯನ್ನು ಈ ವೇದಿಕೆ ಒದಗಿಸುತ್ತದೆ. ಲಭ್ಯವಿರುವ ಉದ್ಯೋಗಗಳಿಗೆ ಅಗತ್ಯವಾದ ತರಬೇತಿಯನ್ನು ನೀಡಿ, ಮಾರುಕಟ್ಟಯ ಬೇಡಿಕೆಗೆ ಅನುಗುಣವಾದ ಕೌಶಲ್ಯಗಳಲ್ಲಿ ಅಣಿಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಪೋರ್ಟಲ್ ನಲ್ಲಿ ನೊಂದಾಯಿಸಿದ ಅಭ್ಯರ್ಥಿಗಳಗೆ ಅವರಿಗೆ ಹೊಂದುವಂತಹ ಹಾಗೂ ಮಾರುಕಟ್ಟೆಯ ಬೇಡಿಕೆಗೆ ಪೂರಕವಾದ ತರಬೇತಿಯನ್ನು ನೀಡಿ ಅವರ ಸ್ಪರ್ಧಾತ್ಮಕತೆಯನ್ನ ಹೆಚ್ಚಿಸಲಾಗುವುದು. ಉದ್ಯೋಗ ಮಾರುಕಟ್ಟೆಯ ಬೇಡಕೆಗೆ ಅನುಗುಣವಾಗಿ ಯುವಕರು ಉದ್ಯೋಗ ಹುಡುಕವುದು ಹಾಗ ಅದಕ್ಕೆ ಅನುಗುಣವಾಗ ಕೌಶಲ್ಯ ಪಡೆಯುವುದು ಕೂಡಾ ಸುಲಲತವಾಗುತ್ತದೆ. ಇದರೊಂದಿಗೆ ಉದ್ಯೋಗಿಗಳು ಬೇಕಾಗುವ ಕಂಪೆನಿಗಳು ಕೂಡಾ ಆಕಾಂಕ್ಶಿಗಳ ಮಾಹಿತಿಯನ್ನು ನಡಿ, ತಮಗೆ ಸೂಕ್ತವಾದ ಅಬ್ಯರ್ಥಿಗಳನ್ನ ನೇರ ಸಂದರ್ಶನಕ್ಕೆ ಕರೆಯಬಹುದು. ಕೌಶಲ್ಯ ಸಂಪರ್ಕ ವೇದಿಕೆಯ ಪರಿಕಲ್ಪನೆ ಉದ್ಯೋಗ ಅರಸುವವರಿಗೂ, ಉದ್ಯೋಗದಾತರಿಗೂ ಹಾಗೂ ಆರ್ಥಿಕತೆಗೂ ಅಪ್ಯಾಮಾನವಾದ ಪ್ರಕ್ರಿಯೆ.
ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ
ಶಾಲೆಯಿಂದ ಹೊರಗುಳಿದ ವಿಧ್ಯಾರ್ಥಿಯಿಂದ ಹಿಡಿದು ಎಂಜಿನಿಯರಿಂಗ್ ವಿದ್ಯಾರ್ಥಿಗಳವರೆಗೆ ಪ್ರತಿಯೊಬ್ಬರಿಗೂ ಕೈಗಾರಿಕೆಗೆ ಸಂಬಂಧಿಸಿದ ಸ್ವಯಂ ಉದ್ಯೋಗ ಅಥವಾ ಉದ್ಯೋಗ ಪಡೆಯಲು ಸೂಕ್ತವಾದ ಕೌಶಲ್ಯ ತರಬೇತಿ ನೀಡುವ ಮೂಲಕ ಆತ್ಮನಿರ್ಭರ ಭಾರತ ಆಶಯದ ಸಾಕ್ಷಾತ್ಕಾರಕ್ಕಾಗಿ ಈ ಯೋಜನೆಯು ರೂಪುಗೊಂಡದೆ. ಕೌಶಲ್ಯ ತರಬೇತಿ ಕೇಂದ್ರಗಳು ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟಿನ (NSQF) ಪ್ರಕಾರ ತರಬೇತಿ ನೀಡುವುದರೊಂದಿಗೆ ಮೃದು ಕೌಶಲ್ಯಗಳು, ಉದ್ಯಮಶೀಲತೆ, ಹಣಕಾಸಿನ ಸಾಕ್ಷರತೆಯ ವಿಶಯದಲ್ಲಿ 144 ರಿಂದ 312 ಘಂಟೆಗಳ ತರಬೇತಿಯ ನಂತರ ಸೂಕ್ತ ಉದ್ಯೋಗ ಅವಕಾಶಕ್ಕೆ ನೆರವನ್ನು ನೀಡಲಾಗುತ್ತದೆ.
ಕೌಶಲ್ಯ ಅಂತರ ಅಧ್ಯಯನ
ಕೌಶಲ್ಯ ಅಭಿವೃದ್ಧಿ ಇಲಾಖೆ ಜೀವನೋಪಾಯ ಪ್ರಚಾರಕ್ಕಾಗಿ ವಿಶ್ವಬ್ಯಾಂಕ್ ನೆರವಿನೊಂದಿಗೆ ಕೌಶಲ್ಯ ಅರಿವು ಯೋಜನೆಯನ್ನು ಜಾರಿಗಳಿಸಿದೆ. ಈ ಯೋಜನೆಯಲ್ಲಿ ರಾಜ್ಯದ ಜಲ್ಲೆಗಳ ಮಟ್ಟದಲ್ಲಿ ಕೌಶಲ್ಯ ಅಂತರ (Skill Gap) ಅಂದರೆ ಕೌಶಲ್ಯದ ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರದ ಅಧ್ಯಯನವನ್ನು ಕೈಗೆತ್ತಿಕೊಂಡಿದೆ. ಸ್ತಳೀಯ ವಷ್ಯ ಅಥವಾ ಅಗತ್ಯತೆಯ ಆಧಾರದ ಮೇಲೆ ವಿವಿಧ ಉದ್ಯೋಗಗಳನ್ನು ಗುರುತಿಸಿ ಅಗತ್ಯ ತರಬೇತಿ ಕಾರ್ಯಕ್ರಮಗಳನ್ನು ಆಯೋಜಸಲಾಗತ್ತಿದೆ.
ಕರ್ನಾಟಕ ಕೌಶಾಲ್ಯಾಭಿವೃದ್ಧಿ ನಿಗಮವು ಕೌಶಲ್ಯಾಭಿವೃದ್ಧಿ ವಾತಾವರಣವನ್ನು ಬಲಪಡಿಸಲು ಉದ್ಯಮಗಳ ಜೊತೆ ಕೈಗಾರಕಾ ಸಂಪರ್ಕ ಕೋಶವನ್ನು ಆರಂಭಿಸಿದೆ. ಬೇಡಿಕೆ ಆದಾರಿತ ಕೌಶಲ್ಯಾಭಿವೃದ್ಧಿ ವಾತಾವರಣವನ್ನು ಕಲ್ಪಿಸುವ ನಿಟ್ಟಿನಲ್ಲಿ ಇದೊಂದು ಪ್ರಗತಿಪರ ಹೆಜ್ಜೆ. ಈ ಪ್ರಯತ್ನ ಉದ್ದಿಮೆಗಳ ಜೊತೆಗೆ ಶಿಕ್ಷಣ ಸಂಸ್ಥೆಗಳಿಗೆ ಬಲವಾದ ಸಂಬಂಧವನ್ನು ಕಲ್ಪಿಸಿದಂತಾಗುತ್ತದೆ. ಈ ಪ್ರಯತ್ನಗಳು ಕೌಶಲ್ಯಕ್ಕೆ ಸಂಬಂಧಿಸಿದ ಅಂತರವನ್ನು ನಿವಾರಿಸುವ ಮೂಲಕ ಮಾನವ ಸಂಪನ್ಮೂಲದ ಸದ್ಬಳಕಯನ್ನು ಖಾತರಿಪಡಿಸಲಿದೆ.
ರಾಷ್ಟ್ರೀಯ ಜೀವನೋಪಾಯ ಅಭಿಯಾನದಲ್ಲಿ ಸ್ವಸಹಾಯ ಗುಂಪುಗಳ ಮಾರುಕಟ್ಟೆ ಸಾಮರ್ಥ್ಯ ಮತ್ತು ಸ್ಪರ್ಧಾತ್ಮಕತೆಯನ್ನು ಅಭಿವೃದ್ಧಿಪಡಿಸುವ ವಿವಿಧ ಕಾರ್ಯಯೋಜನೆಗಳು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅಂಚಿಕೆ ತಳ್ಳಲ್ಪಟ್ಟ ವರ್ಗಗಳನ್ನು ಮುಖ್ಯ ವಾಹಿನಿಗೆ ತರುವಲ್ಲಿ ಕಾರ್ಯೋನ್ಮುಖವಾಗಿದೆ.
ಅನುಕರಣೀಯ ರುಡ್ಸೆಟ್ ಮಾದರಿ
ಅಭಿವೃದ್ಧಿ ಎಂದರೆ ಪ್ರತಿಯೊಬ್ಬ ಮನುಷ್ಯನ ಜ್ಞಾನ, ಮನೋಧರ್ಮ ಹಾಗೂ ಕೌಶಲಗಳಲ್ಲಿ ಅಗತ್ಯ ಬದಲಾವಣೆಗಳು ಆಗಿ ಆ ಮೂಲಕ ನಡವಳಿಕೆಗಳಲ್ಲಿ ಪ್ರಗತಿಪರ ಬದಲಾವಣೆಗಳನ್ನು ಕಂಡುಕೊಂಡಾಗ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ರಾಮ ರಾಜ್ಯದ ಕನಸು ನನಸಾಗಲು ಸಾಧ್ಯ. ಈ ನಿಟ್ಟಿನಲ್ಲಿ ರುಡ್‌ಸೆಟ್ ಸಂಸ್ಥೆ ಅನುಕರಣೀಯ ಮಾದರಿಯಾಗಿ ಗುರುತಿಸಲ್ಪಟ್ಟಿದೆ.
ಬಡತನ ನಿರ್ಮೂಲನೆಯಲ್ಲಿ ಉದ್ಯಮಶೀಲತೆ ಹಾಗೂ ಸ್ವಾವಲಂಬನೆಗೆ ಒತ್ತು ಕೊಡುವ ಅಗತ್ಯತೆಯನ್ನು ಮನಗಂಡ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ಕಲ್ಪನೆಯಲ್ಲಿ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ (ರುಡ್ಸೆಟ್) ಸಂಸ್ಥೆ ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಸಹಭಾಗಿತ್ವದೊಂದಿಗೆ 1982ರಲ್ಲಿ ರೂಪುಗೊಂಡಿತು. ದೇಶದಾದ್ಯಂತ ಇರುವ 27 ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆದ 73% ಜನರು ಅಗತ್ಯ ಕೌಶಲ್ಯಗಳನ್ನು ತಮ್ಮದಾಗಿಸಿಕೊಂಡು ಸ್ವ ಉದ್ಯೋಗಿಗಳಾಗುತ್ತಿರುವ ಯಶೋಗಾಥೆಯನ್ನು ಕೇಂದ್ರ ಸರಕಾರ ಗಮನಿಸಿ ಅದೇ ಮಾದರಿಯಲ್ಲಿ 523 ಆರ್‌ಸೆಟಿಗಳನ್ನು ಪ್ರಾರಂಭಿಸಿದೆ. ರುಡ್ಸೆಟ್ ನಾಯಕತ್ವದಲ್ಲಿ ಅದೇ ಮಾದರಿಯಲ್ಲಿ ಆರ್‌ಸೆಟಿಗಳು ಕೂಡಾ ಕಾರ್ಯಾಚರಿಸುತ್ತಿವೆ.
ಬಡವರಿಗೆ ಹಾಗೂ ವಂಚಿತರಿಗೆ ಸುಸ್ಥಿರ ಹಾಗೂ ಗೌರವಯುತ ಜೀವನಾಧಾರವನ್ನು ಒದಗಿಸಲು ಅಗತ್ಯ ಪ್ರೇರಣೆ, ತರಬೇತಿ ಹಾಗೂ ಮಾರ್ಗದರ್ಶನವನ್ನು ನಿರಂತರ ನೀಡುವ ಮೂಲಕ ಸೇರ್ಪಡೆಯುಳ್ಳ ಆರ್ಥಿಕ ಅಭಿವೃದ್ಧಿಯ ಉದ್ದೇಶಗಳನ್ನು ಸಾಕಾರಗೊಳಿಸುವತ್ತ ಯಶಸ್ವೀ ಹೆಜ್ಜೆ ಇಡುತ್ತಿರುವ ರುಡ್ಸೆಟ್ ಸಂಸ್ಥೆ ಇಂದು ಅನುಕರಣೀಯ ಮಾದರಿ ಸಂಸ್ಥೆಯಾಗಿ ರಾಷ್ಟ್ರದಾದ್ಯಂತ ಗುರುತಿಸಲ್ಪಟ್ಟಿದೆ.
ಬದುಕು ರೂಪಿಸುವ ಕಲೆ
ಅಭಿವೃದ್ಧಿ ಪಥದತ್ತ ಮುನ್ನುಗ್ಗುತ್ತಿರುವ ದೇಶದ ಸರ್ವಾಂಗೀಣ ಪ್ರಗತಿಗೆ ಆಧುನಿಕ ಶಿಕ್ಷಣ ಹಾಗೂ ಕೌಶಲ ವರ್ಧನೆ ಅತ್ಯಗತ್ಯ. ದೇಶದ ಉತ್ಪಾದಕತೆಯನ್ನು ಹೆಚ್ಚಿಸಿಕೊಂಡು, ಲಭ್ಯ ಸಂಪನ್ಮೂಲಗಳನ್ನು ಜಾಣತನದಿಂದ ಬಳಸಿಕೊಂಡರೆ ಮಾತ್ರ ಮುಂದಿನ ದಿನಗಳಲ್ಲಿ ಭಾರತೀಯರ ಬದುಕು ಸಹನೀಯವಾಗಿರಲು ಸಾಧ್ಯವಿದೆ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಜನಸಂಖ್ಯೆಯನ್ನು ಮಾನವ ಸಂಪನ್ಮೂಲವಾಗಿ ಪರಿವರ್ತಿಸುವ ಯೋಚನೆ ಹಾಗೂ ಯೋಜನೆಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಅರ್ಥಶಾಸ್ತ್ರ ನಮಗೆ ತಿಳಿಸುತ್ತದೆ. ಭಾರತ ಈಗ ಜನಸಂಖ್ಯಾ ಹೆಚ್ಚಳದೊಂದಿಗೆ ಬಹು ಮುಖ್ಯ ಅವಕಾಶ ಮತ್ತು ಸವಾಲನ್ನು ತನ್ನದಾಗಿಸಿಕೊಂಡಿದೆ. ಕೆಲಸ ಮಾಡುವ ಪ್ರಾಯ ಹಾಗೂ ಸಾಮರ್ಥ್ಯ ಇರುವ ವಿಪುಲ ಯುವ ಸಮುದಾಯ. ಯುವಜನತೆಯ ಸದ್ಬಳಕೆ ನಮ್ಮ ದೇಶದ ಅಭಿವೃದ್ಧಿಗಿರುವ ರಹದಾರಿ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ