ಜಗತ್ತಿನ ಅಭಿವೃದ್ಧಿ ಹೊಂದಿದ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪೈಕಿ ಭಾರತವು DIGITALISATION ಎಂಬ ನಾಜೂಕಾದ ವಲಯದಲ್ಲಿ ಸರ್ವ ಚಟುವಟಿಕೆಗಳನ್ನು ದಾಖಲಿಸಲು ಹೊರಟಿದೆ. ಪ್ರಾರಂಭದಲ್ಲಿ ಭದ್ರತೆ ಮತ್ತು ಖಾಸಗಿತನದ ಮಡಿವಂತಿಕೆಯಿತ್ತು. ಜನರ ವ್ಯವಹಾರ ಮತ್ತು ಅವಶ್ಯಕತೆ, ಹಾಗೂ ಸರ್ಕಾರದ ಕೆಲವು ನಿರ್ಣಯಗಳು ಬಹುತೇಕ ಜನರು ಈ DIGITALISATION ಎಂಬ ಮಂತ್ರ ಜಪಿಸುವಂತೆ ಮಾಡಿದೆ. ಪರಿಣಾಮವಾಗಿ ವ್ಯಾಪಾರ ವಹಿವಾಟು ವೇಗಗೊಳ್ಳುತ್ತಿದ್ದರೂ, ಅಲ್ಲಲ್ಲಿ ಅದರ ದುರುಪಯೋಗಕ್ಕೆ ಒಳಗಾದವರ ಸಂಖ್ಯೆಯನ್ನು ಅಲ್ಲಗಳೆಯುವಂತಿಲ್ಲ. ಸರಕಾರವು ಅದರ ಬೊಕ್ಕಸಕ್ಕೆ ಬರುವ, ಬರಲಿರುವ ತೆರಿಗೆ ಮೂಲಗಳ ಬಗ್ಗೆ ಮೊದಲಿನಿಂದಲೂ ಹದ್ದಿನ ಕಣ್ಣಿಟ್ಟಿದೆ. ಜನರ, ಸಂಸ್ಥೆಗಳ ಹಾಗೂ ಇತರ ತೆರಿಗೆದಾರರ DIGITAL ವ್ಯವಹಾರಗಳ ಅವಲಂಬನೆಯನ್ನು ಗಮನಿಸಿ ಸರಕಾರದ ಕೆಲವು ಇಲಾಖೆಗಳು ಸಂಬಂಧಪಟ್ಟ ಮಾಹಿತಿಯನ್ನು ತೆರಿಗೆ ಇಲಾಖೆಗೆ ನೀಡಲೇಬೇಕಾಗಿದೆ.
ವಾರ್ಷಿಕ ತೆರಿಗೆ ರಿಟರ್ನ್ಸ್ ಸಲ್ಲಿಕೆಯಿಂದ ತೆರಿಗೆದಾರನ ಆದಾಯ ಮೂಲಗಳು ಸರ್ಕಾರದ ಗಮನಕ್ಕೆ ಬರುತ್ತವೆ. ಭಾರತದ ಜನಸಂಖ್ಯೆಯಲ್ಲಿ ಶೇಕಡಾ ಒಂದರಷ್ಟು ಜನರು ಮಾತ್ರ ತೆರಿಗೆ ಪಾವತಿಸುತ್ತಿದ್ದಾರೆ. ರಿಟರ್ನ್ಸ್ ಸಲ್ಲಿಕೆ ಯಿಂದ ತೆರಿಗೆದಾರರ ಆದಾಯ ಮೂಲಗಳು ಸರ್ಕಾರದ ಗಮನಕ್ಕೆ ಬರುತ್ತವೆ. ಆದರೆ ಶೇಕಡ ನೂರರಷ್ಟು ವ್ಯವಹಾರಗಳು ಈ ರಿಟರ್ನ್ಸ್ ನಲ್ಲಿ ಪ್ರತಿ ಫಲಿಸುವುದಿಲ್ಲ. ಪರಿಣಾಮವಾಗಿ ತೆರಿಗೆ ಇಲಾಖೆಯು ವಿವಿಧ ಇಲಾಖೆಗಳ ನೆರವಿನಿಂದ ತೆರಿಗೆದಾರನ ವಿವಿಧ ಹೂಡಿಕೆಗಳು ಖರ್ಚುಗಳು ಮತ್ತು ವಿಶೇಷವಾಗಿ ಹಣಕಾಸು ವರ್ಗಾವಣೆಗಳ ಮೌಲ್ಯ ಮತ್ತು ಗಾತ್ರದ ಮೇಲೆ ಹೆಚ್ಚು ಗಮನ ಹರಿಸುತ್ತಿದೆ.
ವಾರ್ಷಿಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಗಡುವು ಸಮೀಪಿಸುತ್ತಿರುವ ಈ ಸಮಯದಲ್ಲಿ, ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಮೊದಲು ಕೆಲವೊಂದು ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಹಾಗಾದರೆ ಈ ಅಧಿಕ ಮೌಲ್ಯದ ಹೂಡಿಕೆಗಳು ಯಾವವು? ತೆರಿಗೆ ಇಲಾಖೆಯು ಗಮನಿಸಬಹುದಾದ ವಹಿವಾಟುಗಳು ಯಾವುವು? ತೆರಿಗೆ ಇಲಾಖೆಗೆ ಈ ರೀತಿಯ ಮಾಹಿತಿಗಳನ್ನು ನೀಡುವ ಸಂಬಂಧಪಟ್ಟ ಇಲಾಖೆಗಳು ಯಾವುವು? ಹಾಗಾಗಿ ನಾವೇನು ಮಾಡಬೇಕು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಇಲ್ಲಿದೆ.
ಆದಾಯ ತೆರಿಗೆ ಕಾಯ್ದೆ 1961 ರ ಅಡಿಯಲ್ಲಿ ಹೆಚ್ಚಿನ ಮೌಲ್ಯದ ವಹಿವಾಟುಗಳು:
ಸರ್ಕಾರವು ತೆರಿಗೆ ವಂಚನೆಯನ್ನು ಕಡಿಮೆಮಾಡಲು ದಿನದಿಂದ ದಿನಕ್ಕೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದಕ್ಕಾಗಿ ವಿನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದೆ. ಈ ಕಾರ್ಯಾಚರಣೆ ಡಿಜಿಟಲ್ ಮೂಲಗಳಿಂದ ವಿವಿಧ ಇಲಾಖೆಗಳ ಮುಖಾಂತರ ಸೂಕ್ಷ್ಮವಾಗಿ ಗಮನಿಸಲಾಗುತ್ತದೆ.
ಆದಾಯ ತೆರಿಗೆ ಇಲಾಖೆಯು ಗಮನಿಸಬಹುದಾದ ಪ್ರಮುಖ ವಹಿವಾಟುಗಳು:
1. ಸ್ಥಿರ ಆಸ್ತಿ: ಸ್ಥಿರಾಸ್ತಿಗಳು ಮಾರಾಟವಾಗುವ ನೋಂದಣಿ ಕೇಂದ್ರದಲ್ಲಿ( SUB REGISTRAR OFFICE) ಸ್ಟ್ಯಾಂಪ್ ಡ್ಯೂಟಿ ಸಲುವಾಗಿ ಆಸ್ತಿಗಳುಮೌಲೀಕರಣ ಗೊಳ್ಳುತ್ತದೆ. 30 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಮೊತ್ತದ ಆಸ್ತಿಗಳು ಮಾರಾಟ ಮತ್ತು ಖರೀದಿಯಾದರೆ ನೋಂದಣಾಧಿಕಾರಿಗಳು ಆದಾಯ ತೆರಿಗೆ ಇಲಾಖೆಗೆ ತಿಳಿಸಬೇಕಾಗುತ್ತದೆ.
2. ವೃತ್ತಿಪರರು: ವೃತ್ತಿಪರರು ಸರಕು ಮತ್ತು ಸೇವೆಗಳ ಮಾರಾಟಕ್ಕಾಗಿ ಎರಡು ಲಕ್ಷ ರೂಪಾಯಿಗಳಿಗಿಂತ ಹೆಚ್ಚು ನಗದನ್ನು ಸ್ವೀಕರಿಸಿದರೆ, ಪಾವತಿಯನ್ನು ಸ್ವೀಕರಿಸಿದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ತಿಳಿಸಬೇಕು.
3. ಬ್ಯಾಂಕುಗಳಲ್ಲಿ ಠೇವಣಿ: ಬ್ಯಾಂಕ್ ಖಾತೆದಾರರು( ಪೋಸ್ಟ್ ಆಫೀಸ್ ಸೇರಿದಂತೆ) ಒಂದು ಹಣಕಾಸು ವರ್ಷದಲ್ಲಿ 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ TERM DEPOSIT ಮಾಡಿದರೆ ಖಾತೆದಾರನ ಠೇವಣಿ ಮೊತ್ತದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕಾಗುತ್ತದೆ.
4. ಚಾಲ್ತಿ ಖಾತೆಗಳಲ್ಲಿನ ಠೇವಣಿ: ಯಾವುದೇ ಬ್ಯಾಂಕ್ ಖಾತೆದಾರರು ತಮ್ಮ ಚಾಲ್ತಿ ಖಾತೆಗಳಲ್ಲಿ ಒಂದು ಹಣಕಾಸು ವರ್ಷದಲ್ಲಿ 50 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಮೊತ್ತವನ್ನು ಠೇವಣಿ ಅಥವಾ ಹಿಂಪಡೆದರೆ ತೆರಿಗೆ ಇಲಾಖೆಗೆ ಬ್ಯಾಂಕ್ ಅಧಿಕಾರಿಗಳು ತಿಳಿಸಬೇಕಾಗುತ್ತದೆ.
5. ಬ್ಯಾಂಕ್ ಡ್ರಾಫ್ಟ್ ಖರೀದಿ: ಯಾವುದೇ ಬ್ಯಾಂಕ್ ನಲ್ಲಿ 10 ಲಕ್ಷರೂ ಮತ್ತು ಅಧಿಕ ಮೊತ್ತದ ಬ್ಯಾಂಕ್ ಡ್ರಾಫ್ಟ್ ಖರೀದಿ ಮಾಡಿದರೆ, ಖರೀದಿ ಮಾಡಿದವರ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಆದಾಯ ತೆರಿಗೆ ಇಲಾಖೆಗೆ ವರದಿ ಮಾಡಬೇಕಾಗುತ್ತದೆ.
6. ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ: ಕ್ರೆಡಿಟ್ ಕಾರ್ಡ್ ಹೊಂದಿರುವವರು ಹಣಕಾಸು ವರ್ಷದಲ್ಲಿ 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತದ ಬಿಲ್ ಪಾವತಿ ಮಾಡಿದ್ದರೆ (ನಗದು ಅಥವಾ NEFT) ಕ್ರೆಡಿಟ್ ಕಾರ್ಡ್ ಸೇವೆ ನೀಡಿದ ಸಂಸ್ಥೆಯು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕಾಗುತ್ತದೆ.
7. ಸೆಕ್ಯೂರಿಟೀಸ್ ಗಳಲ್ಲಿ ಹೂಡಿಕೆ: ಹೂಡಿಕೆದಾರರು ಹಣಕಾಸು ವರ್ಷದಲ್ಲಿ 10 ಲಕ್ಷರೂ ಅಥವಾ ಅಧಿಕ ಮೊತ್ತದ ಬಾಂಡ್ಗಳು, ಸಾಲಪತ್ರಗಳು ಷೇರು ಪತ್ರಗಳು ಅಥವಾ ಮ್ಯೂಚುಯಲ್ ಫಂಡ್ ಗಳನ್ನು ಖರೀದಿ ಮಾಡಿದರೆ ಹೂಡಿಕೆಗಳಿಗೆ ಒಳಪಟ್ಟ ಕಂಪನಿಗಳು ಆದಾಯ ತೆರಿಗೆ ಇಲಾಖೆಗೆ ವರದಿ ಮಾಡಬೇಕಾಗಿದೆ.
ಈ ಮೇಲಿನ ವಹಿವಾಟುಗಳ ಮಾಹಿತಿಯು ಆದಾಯ ತೆರಿಗೆ ಇಲಾಖೆಗೆ ಹೇಗೆ ತಿಳಿಯುತ್ತದೆ?
● ಬ್ಯಾಂಕ್ ಗಳು, ಅಂಚೆ ಕಛೇರಿ, ನೋಂದಾವಣ ಅಧಿಕಾರಿಗಳು(ಸಬ್ ರಿಜಿಸ್ಟ್ರಾರ್), ಕಂಪನಿಗಳು FORM 61A ಮೂಲಕ ಆದಾಯ ತೆರಿಗೆ ಇಲಾಖೆಗೆ ವರದಿ ಸಲ್ಲಿಸುತ್ತಾರೆ.
● ಈ ರೀತಿಯ ವರದಿಯನ್ನು ಪರಿಶೀಲಿಸಿ, ಸಂಬಂಧಪಟ್ಟ ತೆರಿಗೆದಾರರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳುತ್ತಾರೆ.
● ವಾರ್ಷಿಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದರೆ ಈ ಮೇಲಿನ ಎಲ್ಲಾ ವಹಿವಾಟುಗಳನ್ನು ನಮೂದಿಸಿ ಸರಿಯಾದ ಆದಾಯ ತೆರಿಗೆ ಪಾವತಿಸಿದ್ದಾರೆಯೇ ಎಂದು ಪರಿಶೀಲಿಸುತ್ತಾರೆ.
● FORM 26AS; ಆದಾಯ ತೆರಿಗೆ ಇಲಾಖೆಯು ಈ ರೀತಿಯ ಅಧಿಕ ಮೌಲ್ಯದ ವಹಿವಾಟಿನ ವಿವರಗಳನ್ನು FORM 26AS ನ ಮೂಲಕ ಪಡೆಯುತ್ತಾರೆ, ಹಾಗೆಯೇ ತೆರಿಗೆದಾರರು ಇದನ್ನು ಪರಿಶೀಲಿಸಿ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ತೆರಿಗೆದಾರರು ಪಾವತಿಸಿದ ಮೊತ್ತದಲ್ಲಿ ವ್ಯತ್ಯಾಸ ವಿದ್ದಲ್ಲಿ, ತೆರಿಗೆ ಇಲಾಖೆಯು ನೋಟಿಸ್ ಜಾರಿ ಮಾಡುತ್ತದೆ.
ಫಾರ್ಮ್ 26AS ನಲ್ಲಿ ಹೆಚ್ಚಿನ ಮೌಲ್ಯದ ವಹಿವಾಟಿನ ಮಾಹಿತಿಯನ್ನು ನೀಡುವವರು ಯಾರು?
ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 285 ರ ಪ್ರಕಾರ FORM 16A(SFT- Statement of Financial Transactions) ಅಥವಾ FORM 61B (Statement of Reportable Account) ನಲ್ಲಿ ತೆರಿಗೆದಾರನ ವಹಿವಾಟಿನ ಸ್ವರೂಪ ಮತ್ತು ಮೌಲ್ಯವನ್ನು ವರದಿ ಮಾಡಲಾಗುತ್ತದೆ
ಈ ರೀತಿಯ ವರದಿಯ ಸಲ್ಲಿಕೆಯು ಈ ಕೆಳಕಂಡವರ ಜವಾಬ್ದಾರಿಯಾಗುತ್ತದೆ:
● ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 44B ಯ ಪ್ರಕಾರ ಲೆಕ್ಕಪತ್ರಗಳು ಲೆಕ್ಕಪರಿಶೋಧನೆ(Audit) ಗೆ ಒಳಪಟ್ಟ ತೆರಿಗೆದಾರರು
● ಬ್ಯಾಂಕಿಂಗ್ ಕಂಪನಿಗಳು ಅಥವಾ ಸಹಕಾರಿ ಬ್ಯಾಂಕುಗಳು
● ಪೋಸ್ಟ್ ಆಫೀಸ್ ನ ಪೋಸ್ಟ್ ಮಾಸ್ಟರ್ ಜನರಲ್
● ನಿಧಿ ಕಂಪನಿಗಳು
● NBFC (ಬ್ಯಾಂಕೇತರ ಹಣಕಾಸು ಸಂಸ್ಥೆಗಳು)
● ಕ್ರೆಡಿಟ್ ಕಾರ್ಡ್ ನೀಡುವ ಸಂಸ್ಥೆಗಳು
● ಬಾಂಡುಗಳು ಮತ್ತು ಸಾಲಪತ್ರಗಳನ್ನು (DEBENTURES) ವಿತರಿಸುವ ಕಂಪನಿಗಳು
● ಮ್ಯೂಚುಯಲ್ ಫಂಡ್ ಕಂಪನಿಗಳು
● ರಿಯಲ್ ಎಸ್ಟೇಟ್ ವ್ಯವಹಾರಗಳ ಉಪ ರಿಜಿಸ್ಟ್ರಾರ್ ಕಛೇರಿಗಳು
● ಅಧಿಕೃತ ವ್ಯಾಪಾರಿಗಳು
ಹಾಗದರೆ ತೆರಿಗೆದಾರರು ನೆನಪಿಡಬೇಕಾದ ಅಂಶಗಳು ಯಾವುವು?
● ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಮೇಲ್ಕಂಡ ವ್ಯವಹಾರಗಳಿಗೆ ಸಂಬಂಧಿಸಿದ ಎಲ್ಲಾ ವಹಿವಾಟುಗಳ ಅರಿವು ಹೊಂದಿರಬೇಕು
● ತೆರಿಗೆದಾರರ ಹೂಡಿಕೆಗಳು ಮತ್ತು ಅಧಿಕ ಹಣದ ವಹಿವಾಟಿನ ವಿವರಗಳನ್ನು ITR ನಲ್ಲಿ ತಪ್ಪದೇ ನಮೂದಿಸಬೇಕು
● ನಿಗದಿತ ದಿನಾಂಕದಲ್ಲಿ ರಿಟರ್ನ್ ಸಲ್ಲಿಕೆ ಒಳ್ಳೆಯದು
● ಪ್ರತೀ ತ್ರೈಮಾಸಿಕ ವರದಿಯಲ್ಲಿ ಟಿ.ಡಿ.ಎಸ್ ಗೆ ಸಂಬಂಧಿಸಿದಂತೆ 26AS ನಲ್ಲಿ ದಾಖಲಾಗಿರುವ ವಿವರಗಳನ್ನು ಪರಿಶೀಲಿಸುತ್ತಿರಬೇಕು
● 26AS ನಲ್ಲಿ ANNUAL INFORMATION RETURN ಮೂಲಕ ಯಾವುದಾದರೂ ವಿವರಗಳು ದಾಖಲಾಗಿದೆಯೇ ಎಂದು ಪರಿಶೀಲಿಸುತ್ತಿರಬೇಕು.
● ತೆರಿಗೆ ಸಲ್ಲಿಸುವಾಗ ಎಲ್ಲಾ ರೀತಿಯ ವಿವರಗಳನ್ನು ಸಲ್ಲಿಸಿದ ಬಗ್ಗೆ ಖಚಿತಪಡಿಸಿಕೊಳ್ಳಬೇಕು, ಗೊಂದಲಗಳಿದ್ದಲ್ಲಿ ತಿದ್ದುಪಡಿ ಮಾಡಿ ಪುನಃ ಸಲ್ಲಿಸುವುದು (Revised Return)
● ಅಧಿಕ ಮೊತ್ತದ ಆರ್ಥಿಕ ವಹಿವಾಟುಗಳು, ಹೂಡಿಕೆಗಳು ಮತ್ತು ಖರ್ಚುಗಳ ವಿವರಗಳನ್ನು ದಾಖಲಿಸಿಕೊಳ್ಳುವುದು ಉತ್ತಮ.
ಭಾರತೀಯ ಸಂವಿಧಾನ ರೀತಿಯ ತೆರಿಗೆ ಸಂಗ್ರಹದ ವಿಧಾನದಲ್ಲಿ ಪ್ರಾಮಾಣಿಕ ವರದಿ ಸಲ್ಲಿಸುವ ಮುಖಾಂತರ ದೇಶದ ಭವಿಷ್ಯ ಮತ್ತು ಭದ್ರತೆಗೆ ನಾವು ಗಳಿಸಿದ ಆದಾಯದ ಸ್ವಲ್ಪ ಪ್ರಮಾಣದ ಮೊತ್ತವನ್ನು ತೆರಿಗೆ ರೀತಿಯಲ್ಲಿ ನೀಡೋಣ. ಪ್ರಜ್ಞಾವಂತ ಪ್ರಾಮಾಣಿಕ ತೆರಿಗೆದಾರರ ಪಟ್ಟಿಯಲ್ಲಿ ಸೇರೋಣ.
- ಭುವನಹಳ್ಳಿ ಭಾನುಪ್ರಕಾಶ್,
ತೆರಿಗೆ ಸಲಹೆಗಾರರು,
ಮೊ:9164030536
E Mail:bhanusunshine09@gmail.Com