1997 ರಲ್ಲಿ ಮಂಜೇಶ್ವರದ ಹೊಸಂಗಡಿಯಲ್ಲಿ ಡಾ|| ಮುರಲೀ ಮೋಹನ್ ಚೂಂತಾರು ಮತ್ತು ಡಾ|| ರಾಜಶ್ರೀ ದಂಪತಿಗಳು ಆರಂಭಿಸಿರುವ ಸುರಕ್ಷಾ ದಂತ ಚಿಕಿತ್ಸಾಲಯ ತನ್ನ ಸಮಾಜಮುಖಿ ಚಿಂತನೆ ಮತ್ತು ಉಪಕ್ರಮಗಳಿಂದ, ಚಿಕಿತ್ಸಾಲಯವು ಒಂದು ಸಂಸ್ಥೆಯ ಸ್ವರೂಪದಲ್ಲಿ ವಿಸ್ತಾರಗೊಂಡು, ಇದೀಗ 25 ವರ್ಷಗಳನ್ನು ಪೂರೈಸಿದ ರಜತ ಸಂಭ್ರಮದ ಹೊತ್ತಿನಲ್ಲಿದೆ. ಅದೇನು ಮಹಾ ಒಂದು ದಂತ ಚಿಕಿತ್ಸಾಲಯಕ್ಕೆ 25 ವರ್ಷಗಳಾದರೆ? ಎಂಬ ಪ್ರಶ್ನೆ ಬರಲೂಬಹುದು. ಅಲ್ಲೇ ಇರುವುದು ಅದರ ವಿಶೇಷತೆ.
ಅಂದು ಏಕ ದಂತ ಕುರ್ಚಿಯಿಂದ, ಎಕ್ಸ್‌ರೇ ವಿಭಾಗದೊಂದಿಗೆ ಆರಂಭಗೊಂಡ ಸುರಕ್ಷಾ ದಂತ ಚಿಕಿತ್ಸಾಲಯ ಪ್ರಸ್ತುತ 10 ದಂತ ಕುರ್ಚಿಗಳೊಂದಿಗೆ, ದಂತ ಕ್ಷಕಿರಣ, ದಂತ ಇಂಪ್ಲಾಂಟ್ ವಿಭಾಗದೊಂದಿಗೆ ವಿಸ್ತೃತವಾಗಿ, ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಹೊಸಂಗಡಿಯ ಕೇಂದ್ರ ಸ್ಥಳದಲ್ಲಿರುವ, ಹೈಲ್ಯಾಂಡ್ ಕಾಂಪ್ಲೆಕ್ಸ್‍ನಲ್ಲಿ ತನ್ನ ಬಹುಮುಖಿ ಮತ್ತು ಸಮಾಜಮುಖಿ ಕಾರ್ಯಗಳೊಂದಿಗೆ ಜನಸೇವಾ ಕೇಂದ್ರವಾಗಿ ಜನಮನ ತಟ್ಟಿದೆ.
ವೈದ್ಯಕೀಯ ವೃತ್ತಿಯೇ ಒಂದು ಸೇವೆ. ಅದಷ್ಟಕ್ಕೇ ಸೀಮಿತವಾಗಿದ್ದು, ಸುರಕ್ಷಿತವಾಗಿ ಜೀವನ ಸಾಗಿಸಿದರೆ ಸಾಕೆಂಬಂತಿರುವ ಹೊತ್ತಿನಲ್ಲಿ, ಸುರಕ್ಷಾ ದಂತ ಚಿಕಿತ್ಸಾಲಯವನ್ನು ಆರಂಭಿಸಿದ ಡಾ|| ಮುರಲೀ ಮೋಹನ್ ಚೂಂತಾರು ಮತ್ತು ಡಾ|| ರಾಜಶ್ರೀ ಮೋಹನ್ ರವರು, ದಂತ ಕ್ಲಿನಿಕ್ ಆರಂಭಿಸಿದ ದಿನಗಳಿಂದಲೇ ಕನಸುಗಳನ್ನು ಕಟ್ಟುವುದರ ಜೊತೆಗೆ ಅವುಗಳನ್ನು ನನಸು ಮಾಡುವತ್ತ ಇಟ್ಟ ಹೆಜ್ಜೆಗಳು, ಇವತ್ತು ವೈದ್ಯಕೀಯ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಾಮಾಜಿಕ ಕ್ಷೇತ್ರದಲ್ಲೂ ಭೀಮ ಹೆಜ್ಜೆಗಳಾಗಿವೆ. ಈ ಹಿನ್ನೆಲೆಯಲ್ಲಿ ದಂತ ವೈದ್ಯ ದಂಪತಿಗಳ ವೃತ್ತಿ ಬದುಕು ಮತ್ತು ಸಾಮುದಾಯಕ ಬದುಕು ಬಲು ರೋಚಕವಾಗಿದೆ. ಹಲ್ಲಿನ ಮೂಲಕ ಮುಖ ಸೌಂದರ್ಯ ಮಾತ್ರವಲ್ಲ ಜೀವನ ಸೌಂದರ್ಯದ ಮೌಲ್ಯಗಳನ್ನು ಬಿತ್ತಿ ಬೆಳೆಸಿದ ಹೆಗ್ಗಳಿಕೆ ಸುರಕ್ಷಾ ದಂತ ಚಿಕಿತ್ಸಾಲಯದ್ದು.
ಇಪ್ಪತೈದು ಸಣ್ಣದಲ್ಲ. ಕೇವಲ ಒಂದು ಚಿಕಿತ್ಸಾಲಯಕ್ಕೆ ಸಂಸ್ಥೆಯ ರೂಪು ನೀಡಿ, ಆ ಮಟ್ಟಕ್ಕೆ ಜನಮಾನಸದಲ್ಲಿ ಸುರಕ್ಷಾ ದಂತ ಚಿಕಿತ್ಸಾಲಯ ಸ್ಥಾನ ಪಡೆದದ್ದು ಬಲು ದೊಡ್ಡ ವಿಸ್ಮಯದ ಬೆಳವಣಿಗೆ.
ಸುಳ್ಯ ತಾಲೂಕಿನ ಅಮರಪಡ್ನೂರು (ಚೊಕ್ಕಾಡಿ) ಗ್ರಾಮದ ಚೂಂತಾರು ಅಪ್ಪಟ ಹಳ್ಳಿ ಸಂಸ್ಕೃತಿಯನ್ನು ಹೊದ್ದು ಮಲಗಿರುವ ಪ್ರದೇಶ. ವೈದಿಕ ಮನೆತನದ ಚೂಂತಾರು ಲಕ್ಷ್ಮೀ ನಾರಾಯಣ ಭಟ್ಟ ಮತ್ತು ಸರೋಜಿನಿ ದಂಪತಿಗಳ ಮಗನಾಗಿ, ಹಳ್ಳಿಯಲ್ಲೇ ಶಿಕ್ಷಣ ಪಡೆದು, ತಂದೆಯ ಪೌರೋಹಿತ್ಯ ವೃತ್ತಿಯ ಪ್ರೇರಣೆಯೋ... ಏನೋ, ಪುರದ ಹಿತವನ್ನು ಬಯಸಿ ದಂತ ವೈದ್ಯರಾದ ಡಾ|| ಮುರಲೀ ಮೋಹನ್ ರವರು ವೃತ್ತಿಗೆ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಅತ್ಯಂತ ಗೌರವ ಸಲ್ಲಿಸುತ್ತಿರುವ ಮತ್ತು ನ್ಯಾಯ ನೀಡಿದ ವೈದ್ಯರು.
ಬೆಂಗಳೂರಿನ ದಂತ ವೈದ್ಯಕೀಯ ಕಾಲೇಜಿನಲ್ಲಿ ಬಿ.ಡಿ.ಎಸ್ ಪದವಿ, ದಾವಣಗೆರೆಯ ಕಾಲೇಜಿನಲ್ಲಿ ಎಂ.ಡಿ.ಎಸ್ ಪದವಿ ಪಡೆದು ವೃತ್ತಿಯ ಜೊತೆ ಜೊತೆಗೆ ದಂತ ವೈದ್ಯಕೀಯ ಕ್ಷೇತ್ರದಲ್ಲಿ ಬಾಯಿ, ಮುಖ, ದವಡೆ ಚಿಕಿತ್ಸಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಖ್ಯಾತ ಶಸ್ತ್ರಚಿಕಿತ್ಸಾ ತಜ್ಞರೆಂಬ ಖ್ಯಾತಿಗಳಿಸಿದವರು. ಭಾರತೀಯ ರಾಷ್ಟ್ರೀಯ ಪರೀಕ್ಷಾ ಮಂಡಳಿಯ ದಂತ ವೈದ್ಯಕೀಯ ಶಾಸ್ತ್ರದಲ್ಲಿ ಡಿ.ಎನ್.ಬಿ ಪದವಿ ಪಡೆದು, ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಎಡಿನ್‍ಬರ್ಗ್ ಇಂಗ್ಲೆಂಡ್ ಇದರ ಎಂ.ಒ.ಎಸ್.ಆರ್.ಸಿ.ಎಸ್. ಅಲಗಪ್ಪ ವಿಶ್ವವಿದ್ಯಾನಿಲಯದಿಂದ ಆಸ್ಪತ್ರೆ ನಿರ್ವಹಣೆ ವಿಷಯದಲ್ಲಿ ಎಂ.ಬಿ.ಎ ಪದವಿ ಹೀಗೆ ಇವರ ಪದವಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಇದೆಲ್ಲ ಅವರ ಪ್ರತಿಭೆಗೆ ಮತ್ತು ಅರ್ಹತೆಗೆ ದಕ್ಕಿದ ಪದವಿ ಗೌರವಗಳು.
ವೃತ್ತಿ, ವ್ಯಾಸಂಗ ಮತ್ತು ಸಮಾಜ ಸೇವೆಯ ಸಮನ್ವಯತೆಯೊಂದಿಗೆ ಬೆಳೆದ (ಅಪ್‍ಡೇಟ್ ಆದ) ಸುರಕ್ಷಾ ದಂತ ಚಿಕಿತ್ಸಾಲಯವು ಪ್ರಸ್ತುತ ದಂತ ಚಿಕಿತ್ಸಾ ವಿಭಾಗದಲ್ಲಿ ಸಮಗ್ರ ಚಿಕಿತ್ಸೆ ನೀಡುವ ಕೇಂದ್ರವಾಗಿದೆ. ಶ್ರೀಯುತರು ಕೇವಲ ವೈದ್ಯರಲ್ಲ. ಬಾಯಿ, ಮುಖ ದವಡೆ ಶಾಸ್ತ್ರದಲ್ಲಿ ಹಿರಿಯ ಪ್ರಾಧ್ಯಾಪಕರಾಗಿದ್ದು, ಹೆಚ್ಚಿನ ಜ್ಞಾನಾರ್ಜನೆಗೆ ಮತ್ತು ಜ್ಞಾನ ಪ್ರಸಾರಕ್ಕೆ ಶ್ರೀಲಂಕಾ, ಥೈಲಾಂಡ್, ಮಲೇಷ್ಯಾ, ಸಿಂಗಾಪುರ್, ಚೀನಾ, ಈಜಿಪ್ಟ್, ದುಬೈ, ಶಾರ್ಜಾ, ಹಾಂಕಾಂಗ್, ಮಕಾವ್, ರಷ್ಯಾ, ಮಾಲ್ದೀವ್ಸ್ ಮೊದಲಾದ ದೇಶಗಳಿಗೆ ಪ್ರಯಾಣ ಬೆಳೆಸಿದವರೂ ಆಗಿದ್ದಾರೆ. ಪ್ರಸ್ತುತ ಹೊಸಗಂಡಿಯ “ಸುರಕ್ಷಾ ದಂತ ಚಿಕಿತ್ಸಾಲಯ” ಎಂದ ಕೂಡಲೆ ನೆನಪಾಗುವುದು ಡಾ|| ಮುರಲೀ ಮೋಹನ್ ಮತ್ತು ಡಾ|| ರಾಜಶ್ರೀ ಮೋಹನ್ ದಂಪತಿಗಳ ಸಮಾಜಮುಖಿ, ಮನುಜಮುಖಿ ಸೇವಾ ಪ್ರಕಲ್ಪಗಳು.
ಇವರು ದುಡಿದ ಮತ್ತು ದುಡಿಯುತ್ತಿರುವ ಸಂಘ-ಸಂಸ್ಥೆಗಳು ಅಪಾರ. ಭಾರತೀಯ ದಂತ ವೈದ್ಯಕೀಯ ಸಂಘ ಮಂಗಳೂರು ಇದರ ಅಧ್ಯಕ್ಷರಾಗಿ, ಭಾರತೀಯ ರೆಡ್‍ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲೆ ಇದರ ಸಭಾಪತಿಗಳಾಗಿ, ನಿಟ್ಟೆ ವಿಶ್ವ ವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ, ಅದೇ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಂಘಟನಾಕಾರಿಯಾಗಿ ಮಾಡಿದ ಕೆಲಸ ಅಪೂರ್ವ ಮತ್ತು ಅನನ್ಯ. ಪ್ರಸ್ತುತ ಇವರು 2015 ರಿಂದ ದಕ್ಷಿಣ ಕನ್ನಡ ಜಿಲ್ಲೆಯ ಗೃಹರಕ್ಷಕದಳಕ್ಕೆ ಹೊಸ ಚೈತನ್ಯ ತುಂಬಿ, ಗೃಹರಕ್ಷಕದಳವನ್ನು ಸಮುದಾಯದೊಂದಿಗೆ ಬೆಸೆದು ಬೆಳೆಸಿದ ಕೀರ್ತಿ ಇವರಿಗೆ ಸಲ್ಲಬೇಕು. ಜೊತೆಗೆ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿಯೂ ತನ್ನನ್ನು ತೊಡಗಿಸಿಕೊಂಡು ವಿಶಿಷ್ಟ ಸಂಘಟಕರೂ ಆಗಿದ್ದಾರೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣಾ ದಳದ ಮುಖ್ಯ ಪಾಲಕರಾಗಿ 2020 ರಿಂದ ಮುನ್ನೆಡೆಸುತ್ತಿದ್ದಾರೆ.
ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಇವರು ತನ್ನ ತಾಯಿಯ ಹೆಸರಿನಲ್ಲಿ ಸ್ಥಾಪಿಸಿದ ಸಂಸ್ಥೆ ಇದರ ಮೂಲಕ “ಆಶ್ರಯ, ಆಸರೆ, ಆರೋಗ್ಯ” ಎಂಬ ಆಶಯದೊಂದಿಗೆ ಮಾಡಿದ ಸೇವಾ ಕಾರ್ಯಗಳು ನಾಡಿನಾದ್ಯಂತ ಸುಪರಿಚಿತ. ಈ ಮೂಲಕ ನಾಡಿನ ಉದ್ದಗಲಕ್ಕೂ ಉಚಿತ ದಂತ ಚಿಕಿತ್ಸಾ ಶಿಬಿರ, ರಕ್ತದಾನ ಶಿಬಿರ, ಉಚಿತ ಗಿಡಗಳ ವಿತರಣೆ, ವನಮಹೋತ್ಸವ, ಸ್ವಚ್ಛತಾ ಆಂದೋಲನ ಮೊದಲಾದ ಸೇವಾ ಕಾರ್ಯಗಳು ಸಾರ್ವಕಾಲಿಕ ದಾಖಲೆಗಳಾಗಿವೆ. 5000 ಕ್ಕೂ ಅಧಿಕ ತಂಬಾಕು ವ್ಯಸನಿಗಳನ್ನು ವ್ಯಸನಮುಕ್ತರನ್ನಾಗಿಸಿದ್ದಾರೆ. ಹೀಗೆ ಇವರ ಸೇವಾ ಕಾರ್ಯಗಳ ಪಟ್ಟಿ ಉದ್ದವಾಗುತ್ತಲೇ ಇದೆ.
ಸರೋಜಿನಿ ಭಟ್ ಪ್ರತಿಷ್ಠಾನದ ಮೂಲಕ 20 ಕ್ಕೂ ಅಧಿಕ ಶಾಲೆಗಳಿಗೆ, 5000 ಕ್ಕಿಂತ ಅಧಿಕ ಪುಸ್ತಕಗಳನ್ನು ಶಾಲಾ ಗ್ರಂಥಾಲಯಕ್ಕೆ ನೀಡಿ, ಅಕ್ಷರ ಸಂಸ್ಕøತಿ ಪ್ರಸಾರದಲ್ಲಿ ತೊಡಗಿಕೊಂಡಿದ್ದಾರೆ. ಸ್ವತಃ ಬರಹಗಾರರಾಗಿರುವ ಇವರು ವೈದ್ಯಕೀಯ ವಿಜ್ಞಾನಕ್ಕೆ ಸಂಬಂಧಿಸಿದಂತೆ, ಕನ್ನಡ ಸಾರಸ್ವತ ಲೋಕಕ್ಕೆ ಇವರು ನೀಡಿದ ಕೊಡುಗೆ ಅಪಾರ. ಈಗಾಗಲೆ ವೈದ್ಯಕೀಯ ವಿಷಯಕ್ಕೆ ಸಂಬಂಧಿಸಿದಂತೆ 13 ಕೃತಿಗಳನ್ನು ಪ್ರಕಟಿಸಿದ್ದಾರೆ. ಅದರಲ್ಲಿ “ರಕ್ತದಾನ-ಜೀವದಾನ” ಎಂಬ ಕೃತಿ 14 ಮರು ಮುದ್ರಣ ಕಂಡಿದ್ದು ಸುಮಾರು 30,000ಕ್ಕಿಂತ ಅಧಿಕ ಪುಸ್ತಕಗಳು ಜನರ ಕೈಗೆ ತಲುಪಿದೆ. ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಇವರ ವೈದ್ಯಕೀಯ ವಿಭಾಗಕ್ಕೆ ಸಂಬಂಧಿಸಿದಂತೆ ಜಾಗೃತಿ, ಮಾಹಿತಿ ಲೇಖನಗಳು ಪ್ರಕಟವಾಗುತ್ತಲೇ ಇದೆ. ಈವರೆಗೆ ಸುಮಾರು 1000 ಕ್ಕಿಂತ ಅಧಿಕ ಬರಹಗಳು ಪ್ರಕಟವಾಗಿದೆ.
ಇವರ ವೈದ್ಯಕೀಯ ಸಾಹಿತ್ಯ ಸೇವೆಗೆ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಅಕಾಡೆಮಿ ಮತ್ತು ವಿಜ್ಞಾನ ತಂತ್ರಜ್ಞಾನ ಅಕಾಡೆಮಿ ಪ್ರಶಸ್ತಿ-ಗೌರವಗಳು ನೀಡಲ್ಪಟ್ಟಿದೆ. ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪುರಸ್ಕಾರ ಮತ್ತು ಡಾ|| ಪಿ.ಎಸ್ ಶಂಕರ್ ಪ್ರತಿಷ್ಠಾನ ಶ್ರೇಷ್ಠ ವೈದ್ಯ ಸಾಹಿತ್ಯ ಗೌರವವೂ ಲಭಿಸಿದೆ. ಹೀಗೆ ದಂತ ವೈದ್ಯರಾಗಿದ್ದುಕೊಂಡು ಸಾಹಿತ್ಯ, ಕಲೆ, ಸಂಸ್ಕೃತಿ, ಸಮಾಜಸೇವೆ, ಸಂಘಟನೆ ಮುಂತಾದ ಕ್ಷೇತ್ರಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರುವ ಅಪೂರ್ವ ದಂಪತಿಗಳು ಕಟ್ಟಿ ಬೆಳೆಸಿದ ಸುರಕ್ಷಾ ದಂತ ಚಿಕಿತ್ಸಾಲಯ ಮತ್ತು ಸಮಾಜಸೇವಾ ಕೈಂಕರ್ಯಗಳು ಮಾದರಿಯಾಗಿದೆ.
25 ವರ್ಷಗಳ ಸುದೀರ್ಘ ಸೇವೆ, ಇದೀಗ ಬೆಳ್ಳಿ ನಡಿಗೆಯೊಂದಿಗೆ, ಚಿನ್ನದ ಮೆರುಗಿನೊಂದಿಗೆ ಸುರಕ್ಷಾ ದಂತ ಚಿಕಿತ್ಸಾಲಯ ಶೋಭಿಸುತ್ತಿದೆ. ಜನರಿಗೆ ಸುರಕ್ಷತೆಯ ಸಾರ್ಥಕ ಭಾವವನ್ನು ಮೂಡಿಸಿದೆ.
-ರಾಮಕೃಷ್ಣ ಭಟ್ ಚೊಕ್ಕಾಡಿ
ಬೆಳಾಲು
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ