ತಾಳ್ಮೆ, ಸಹನೆಯಿಂದ ಅದ್ಭುತ ಸಾಧನೆ ಸಾಧ್ಯ: ರಾಘವೇಶ್ವರ ಶ್ರೀ

Upayuktha
0

ಗೋಕರ್ಣ: ಮನುಸ್ಮೃತಿಯಲ್ಲಿ ಉಲ್ಲೇಖಿಸಿದ ಹತ್ತು ಗುಣಗಳಲ್ಲಿ ಸಹನೆ, ಕ್ಷಮೆ, ತಾಳ್ಮೆ ಪ್ರಮುಖವಾದದ್ದು; ನಮ್ಮ ಜೀವನದ ಪ್ರತಿ ಹಂತದಲ್ಲಿ ಇದು ಅಗತ್ಯ. ತಾಳ್ಮೆಯನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಅದ್ಭುತಗಳನ್ನು ಸಾಧಿಸಬಹುದು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.


ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಹತ್ತನೇ ದಿನವಾದ ಶುಕ್ರವಾರ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, "ಸಹನೆಗೆ ಹೆಚ್ಚಿನ ಬಲ ಬೇಕು. ಅದ್ಭುತ ಮನೋಬಲವೂ ಬೇಕು. ಇಂಥ ಸಹನೆಯನ್ನು ನಾವು ರಾಮನಿಂದ ಪಡೆದುಕೊಳ್ಳಬೇಕು. ಕಷ್ಟ ಸಹಿಸುವ ಶಕ್ತಿ ಸಹನೆಯಿಂದ ಬರುತ್ತದೆ. ಸಹನೆ ತಪ್ಪಿದರೆ ಕೈಗೆ ಬಂದ ಭಾಗ್ಯವೂ ದಕ್ಕುವುದಿಲ್ಲ" ಎಂದು ವಿಶ್ಲೇಷಿಸಿದರು.


ಸಹನೆ ಕಳೆದುಕೊಂಡರೆ ನಮ್ಮ ಅರ್ಹ ಅಭ್ಯುದಯ ಕೈ ತಪ್ಪುತ್ತದೆ ಮಾತ್ರವಲ್ಲದೇ ಇದು ಅನಾಹುತಕ್ಕೂ ದಾರಿಯಾಗುತ್ತದೆ. ಸಹನೆ ತಪ್ಪಿದಲ್ಲಿ ದುಡುಕಿನಿಂದ ಅವಿವೇಕ ಉಂಟಾಗುತ್ತದೆ. ಇದು ಎಲ್ಲ ಆಪತ್ತುಗಳಿಗೆ ಕಾರಣವಾಗುತ್ತದೆ. ಆದ್ದರಿಂದಲೇ ತಾಳಿದವನು ಬಾಳಿಯಾನು ಎಂಬ ನಾಣ್ನುಡಿ ಹುಟ್ಟಿಕೊಂಡಿದೆ. ಮಾತನಾಡುವ ಮೊದಲು, ಹೆಜ್ಜೆ ಇಡುವ ಮೊದಲು ಸಮಾಧಾನ, ಸಮಾಲೋಚನೆ ಇದ್ದರೆ ಬದುಕು ಶ್ರೇಷ್ಠವಾಗುತ್ತದೆ ಎಂದು ಕಿವಿಮಾತು ಹೇಳಿದರು.


ಮಹರ್ಷಿ ಕಶ್ಯಪರ ಪತ್ನಿಯರು ತಾಳ್ಮೆ ಕಳೆದುಕೊಂಡಿದ್ದರಿಂದ ಮೊದಲ ಪತ್ನಿ ಕದ್ರು ಸಾವಿರ ಮೊಟ್ಟೆಗಳಿಗೆ ಜನ್ಮ ನೀಡುತ್ತಾಳೆ. ಮತ್ತೊಬ್ಬ ಪತ್ನಿ ವಿನತಿ ತಾಳ್ಮೆ ಕಳೆದುಕೊಂಡ ಫಲವಾಗಿ ಅರುಣ ಹೆಳವನಾಗಿ ಹುಟ್ಟುತ್ತಾನೆ. ತನ್ನ ಸಾಮರ್ಥ್ಯದಿಂದ ಆತ ಸೂರ್ಯ ಸಾರಥಿಯಾದರೂ, ತನ್ನ ವೈಕಲ್ಯಕ್ಕೆ ತಾಯಿಯ ಅಸೂಯೆ ಕಾರಣ ಎಂಬುದನ್ನು ತಿಳಿದು ಶಾಪ ನೀಡುತ್ತಾನೆ. ಇದರ ಫಲವಾಗಿ ಕದ್ರುವಿನ ದಾಸ್ಯದಲ್ಲಿ 500 ವರ್ಷವನ್ನು ಕಳೆಯಬೇಕಾಗುತ್ತದೆ. ಕೊನೆಗೆ 500 ವರ್ಷ ತಾಳ್ಮೆಯಿಂದ ಕಾದ ಫಲವಾಗಿ ಮತ್ತೊಂದು ಮೊಟ್ಟೆಯಿಂದ ಗರುಡನ ಜನನವಾಗುತ್ತದೆ. ಆಕೆಯ ದಾಸ್ಯವೂ ಮುಕ್ತಿಯಾಗುತ್ತದೆ. ಈ ಕಥೆ ತಾಳ್ಮೆ ಕಳೆದುಕೊಂಡರೆ ಎಂಥ ಅನಾಹುತವಾಗುತ್ತದೆ ಹಾಗೂ ತಾಳ್ಮೆಯಿಂದ ಕಾದರೆ ಎಂಥ ಫಲ ಸಿಗುತ್ತದೆ ಎನ್ನುವುದಕ್ಕೆ ನಿದರ್ಶನ ಎಂದು ಬಣ್ಣಿಸಿದರು.


ಮಹಾಭಾರತದಲ್ಲಿ ಗಾಂಧಾರಿ ಕೂಡಾ ಕುಂತಿಗೆ ಮಕ್ಕಳಾದ್ದನ್ನು ಕಂಡು ಮತ್ಸರ ಹುಟ್ಟಿತು. ಮತ್ಸರದಿಂದ ಹುಟ್ಟಿದ್ದು, ಪಿಂಡದ ಉಂಡೆ. ಬಳಿಕ ಅದನ್ನು ವಿಭಜಿಸಿದಾಗ ನೂರು ಮಕ್ಕಳು ಹುಟ್ಟುತ್ತಾರೆ. ಗಾಂಧಾರಿಯ ಅವಸರ, ಮಾತ್ಸರ್ಯ ವಿನಾಶಕ್ಕೆ ಕಾರಣವಾಯಿತು ಎಂದು ಹೇಳಿದರು.


ಸಂಪೆಕಟ್ಟೆ ಮಂಡಲದ ಶಿಷ್ಯಭಕ್ತರ ವತಿಯಿಂದ ಶುಕ್ರವಾಋ ಶ್ರೀಗುರುಭಿಕ್ಷೆ ನೆರವೇರಿತು. ಚಾತುರ್ಮಾಸ್ಯದ ಧಾರ್ಮಿಕ ಕಾರ್ಯಕ್ರಮದಲ್ಲಿ ಶುಕ್ರವಾರ ನವಚಂಡೀಯಾಗ ನಡೆಯಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top