ಮಂಗಳೂರು: "ವಿದ್ಯಾಭ್ಯಾಸವು ಜೀವನ ನಡೆಸಲು ಅನುಕೂಲವಾಗುವಂತಿರಬೇಕು. ಅಂಕಗಳಲ್ಲಿ ದಾಖಲೆ ಸೃಷ್ಟಿ ಮಾಡಿದರೂ ಪ್ರಾಪಂಚಿಕ ಜ್ಞಾನ ಪಡೆಯದೆ ಉದ್ಯೋಗಕ್ಕಾಗಿ ನಡೆಸುವ ಸಂದರ್ಶನದಲ್ಲಿ ಸಫಲರಾಗಲು ಕಷ್ಟ. ಅದಕ್ಕಾಗಿ ಪ್ರತಿದಿನ ಕನಿಷ್ಠ ಮೂರು ದಿನಪತ್ರಿಕೆಗಳನ್ನು ಓದಿ ಪ್ರಪಂಚ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಲಕ್ಷಾಂತರ ಮಂದಿ ಉದ್ಯೋಗಾಕಾಂಕ್ಷಿಗಳು ಕಾಯುವ ಬದಲು ಹೊಸ ಉದ್ಯಮ ಆರಂಭಿಸಿ ಇತರರಿಗೆ ಉದ್ಯೋಗ ನೀಡುವ ಮಹತ್ವದ ಸಂಕಲ್ಪ ಮಾಡಬೇಕಾಗಿದೆ" ಎಂದು ಜ್ಯೋತಿ ಲ್ಯಾಬ್ ಲಿಮಿಟೆಡ್ ಮಾಜಿ ಜಂಟಿ ಆಡಳಿತ ನಿರ್ದೇಶಕ ಸಿಎ ಕೆ. ಉಲ್ಲಾಸ್ ಕಾಮತ್ ನುಡಿದರು.
ಮಂಗಳೂರು ಕೆನರಾ ಕಾಲೇಜಿನ 50ನೇ ವರ್ಷದ ಅಂಗವಾಗಿ 'ಸುವರ್ಣ ಮಹೋತ್ಸವ'ವನ್ನು ವರ್ಷವಿಡೀ ಆಚರಿಸುವ ಹಿನ್ನೆಲೆಯಲ್ಲಿ ಚಾಲನೆ ನೀಡುವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ವಿ.ವಿ ಕುಲಪತಿ ಡಾ. ಪಿ.ಎಸ್. ಯಡಪಡಿತ್ತಾಯ ಮಾತನಾಡಿ, "ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ. ವಿದ್ಯಾರ್ಥಿ ಸಾಮಾಜಿಕ ಬೌದ್ಧಿಕ ವಿಚಾರಗಳ ಮೂಲಕ ಸಶಕ್ತ ನಾಗುವುದರಲ್ಲಿ ದೇಶದ ಅಭಿವೃದ್ಧಿ ಇದೆ "ಎಂದರು.
ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ "ಸಾವಿರಾರು ಮಂದಿಗೆ ಶಕ್ತಿ ತುಂಬಿ ಬದುಕು ರೂಪಿಸುವ ವಿದ್ಯೆಯನ್ನು ಕೆನರಾ ಶಿಕ್ಷಣ ಸಂಸ್ಥೆ ನೀಡುತ್ತಿರುವುದು ಶ್ಲಾಘನೀಯ ಕಾರ್ಯ" ಎಂದು ಹೇಳಿದರು.
ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, "50ಕ್ಕೂ ಅಧಿಕ ದೇಶಗಳ ವಿದ್ಯಾರ್ಥಿಗಳು ಮಂಗಳೂರಿನ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿದ್ದಾರೆ. ಮಂಗಳೂರು ಶಿಕ್ಷಣ ಕಾಶಿ" ಎಂದರು.
ಉದಯವಾಣಿಯ ವಿಶ್ರಾಂತ ಸಹಾಯಕ ಸಂಪಾದಕ ಮನೋಹರ ಪ್ರಸಾದ್ ಮಾತನಾಡಿ "ಕೆನರಾ ಶಿಕ್ಷಣ ಸಂಸ್ಥೆಯು ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳನ್ನು ನೀಡುವಲ್ಲಿ ಮಹತ್ತರ ಪಾತ್ರವಹಿಸಿದೆ" ಎಂದರು.
ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ಶ್ರೀ ಎಂ. ರಂಗನಾಥ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಸಂಚಾಲಕರಾದ ಶ್ರೀ ಸಿಎ ಎಂ. ಜಗನ್ನಾಥ್ ಕಾಮತ್, ಶಿವಾನಂದ ಕಾಮತ್, ಸಿಎ ಎಂ ವಾಮನ್ ಕಾಮತ್, ಶ್ರೀಮತಿ ಅನಿಲ, ಹಾರ್ದಿಕ್ ಚೌಹಾಣ್ ಉಪಸ್ಥಿತರಿದ್ದರು.
46 ವರ್ಷಗಳ ಹಿಂದೆ ರಾಂಕ್ ಪಡೆದ 10 ಮಂದಿ ಹಳೇ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರೇಮಲತಾ. ವಿ ಸ್ವಾಗತಿಸಿ, ಶ್ರೀಮತಿ ದೇಜಮ್ಮ ವಂದಿಸಿದರು. ಧನಶ್ರೀ ಕುಲಕರ್ಣಿ ನಿರೂಪಿಸಿದರು.