ಪರಿಚಯ: ಅಂಬಾತನಯ ತನಯ ಯಕ್ಷಪ್ರವೀಣ

Upayuktha
0

08-07-1978 ರಂದು ಶ್ರೀಯುತ ಅಂಬಾತನಯ ಮುದ್ರಾಡಿ ಹಾಗೂ ಶ್ರೀಮತಿ ಅಕ್ಕಮ್ಮ ಇವರ ಮಗನಾಗಿ ಶ್ರೀ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ ಅವರ ಜನನ. ಪ್ರೌಢಶಾಲೆವರೆಗೆ ವಿದ್ಯಾಭ್ಯಾಸ. ತಂದೆ ಅಂಬಾತನಯ ಮುದ್ರಾಡಿ ಅವರ ಪ್ರೇರಣೆಯಿಂದ ಯಕ್ಷಗಾನ ರಂಗಕ್ಕೆ ಬಂದರು. ಹಾಗೆಯೆ ಅಜ್ಜ ಯಕ್ಷಗಾನ ಕಲಾವಿದರೂ, ಪ್ರಸಂಗಕರ್ಥರೂ ಆಗಿದ್ದರು. ತಂದೆ ಹರಿಕೀರ್ತನೆ ಮಾಡುತ್ತಿದ್ದರು, ತಾಳಮದ್ದಲೆ ಅರ್ಥಧಾರಿ, ಪ್ರಸಂಗಕರ್ಥ, ಹಾಗೂ ಯಕ್ಷಗಾನ ವೇಷಧಾರಿಯಾಗಿದ್ದರು. ಹಾಗೆ ಸೋದರ ಮಾವನೂ ಭಾಗವತರಾಗಿದ್ದರು. ಹಾಗಾಗಿ ಯಕ್ಷಗಾನ ಇವರಿಗೆ ರಕ್ತಗತವಾಗಿ ಬಂದದ್ದು. ಕಾಳಿಂಗ ನಾವಡರ ಪದ್ಯವನ್ನು ಕೇಳಿ ಕೇಳಿ ಯಕ್ಷಗಾನದತ್ತ ಆಕರ್ಷಣೆ ಹೆಚ್ಚಾಯಿತು. ಹಾಗಾಗಿ ಪ್ರೌಢಶಾಲೆಯಲ್ಲಿ ಶಿಕ್ಷಣವನ್ನು ಮೊಟಕುಗೊಳಿಸಿ, ಯಕ್ಷಗಾನಕ್ಕೆ ಸೇರಿದರು.


ನೀಲಾವರ ಲಕ್ಷ್ಮೀನಾರಾಯಣ ರಾವ್, ಚಂದ್ರಹಾಸ ಪುರಾಣಿಕ್, ಎ.ಪಿ.ಪಾಠಕ್, ಕಪ್ಪೇಕೇರೆ ಸುಬ್ರಾಯ ಹೆಗ್ಡೆ, ಗೋರ್ಪಾಡಿ ವಿಠ್ಠಲ ಪಾಟೀಲ್, ಹೊಸ್ತೋಟ ಮಂಜುನಾಥ ಭಾಗವತರು, ಬನ್ನಂಜೆ ಸಂಜೀವ ಸುವರ್ಣ ಇವರ ಯಕ್ಷಗಾನದ ಗುರುಗಳು.


ರಾಮ ಪಟ್ಟಾಭಿಷೇಕ, ಪಂಚವಟಿ, ಮೀನಾಕ್ಷಿ ಕಲ್ಯಾಣ, ಕರ್ಣ ಪರ್ವ, ಕೃಷ್ಣ ಸಂಧಾನ, ಇವರ ನೆಚ್ಚಿನ ಪ್ರಸಂಗಗಳು.

ಅಭಿಮನ್ಯು ಕಾಳಗದಲ್ಲಿ ಸುಭದ್ರೆ; ಶಶಿಪ್ರಭಾ ಪರಿಣಯದಲ್ಲಿ ಮಾರ್ತಾಂಡತೇಜ, ಕಮಲಧ್ವಜ; ಜಾಂಬವತಿ ಕಲ್ಯಾಣದಲ್ಲಿ ಕೃಷ್ಣ, ಬಲರಾಮ, ಜಾಂಬವ; ಗದಾಯುದ್ಧದ ಕೌರವ, ಅಶ್ವತ್ಥಾಮ ಇವರ ನೆಚ್ಚಿನ ವೇಷಗಳು.


ತಿರುಗಾಟ ಮಾಡಿದ ಮೇಳಗಳು:-

ಇವರು ಪ್ರಥಮವಾಗಿ ರಂಗ ಪ್ರವೇಶ ಮಾಡಿದ್ದು ಉತ್ತರಕನ್ನಡದ ಯಕ್ಷಗಾನ ಕಾಶಿ ಎಂದೇ ಕರೆಯಲ್ಪಡುವ ಯಕ್ಷಗಾನ ಕಾಶಿ ಗುಂಡಬಾಳ ಮೇಳ, ಮಾರಣಕಟ್ಟೆ ಮೇಳ, ಅಮೃತೇಶ್ವರಿ ಮೇಳ, ಮಡಾಮಕ್ಕಿ ಮೇಳ, ಸಾಲಿಗ್ರಾಮ ಮೇಳ ಹೀಗೆ ಒಟ್ಟು 10 ವರ್ಷಗಳ ಕಾಲ ತಿರುಗಾಟ ಮಾಡಿದ ಅನುಭವ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿಯವರದು.


ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ ಎಂದು ಕೇಳಿದಾಗ:-

ಹೆಚ್ಚಿನ ಪೌರಾಣಿಕ ಪ್ರಸಂಗಗಳು, ರೂಢಿಯಲ್ಲಿ ಇರುವಂತಹ ಪ್ರಸಂಗಗಳು ಮಸ್ತಕದಲ್ಲಿ ಇವೆ, ಆದ್ರೂ ರಂಗಕ್ಕೆ ಹೋಗುವ ಮೊದಲು ಒಮ್ಮೆ ಪುಸ್ತಕ ಓದಿ ನೆನಪು ಮಾಡಿಕೊಂಡು ರಂಗಕ್ಕೆ ಹೋಗುತ್ತೇನೆ ಎಂದು ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿಯವರು ಹೇಳುತ್ತಾರೆ.


ಯಕ್ಷಗಾನದ ಇಂದಿನ ಸ್ಥಿತಿಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಯಕ್ಷಗಾನ ಅಳಿದು ಹೋಗುತ್ತ ಇದೆ, ಬದಲಾವಣೆ ಆಗುತ್ತಾ ಇದೆ ಅಂತ ಕೆಲವು ಕಡೆ ಹೇಳುತ್ತಾರೆ. ಯಾವುದೇ ಕಲಾ ಪ್ರಕಾರಗಳಿರಬಹುದು, ಕಾಲ ಕಾಲಕ್ಕೆ ಬದಲಾವಣೆ ಆಗುವುದು ಸಹಜ. ಆಯಾಯ ಕಾಲಕ್ಕೆ ಆಯಾಯ ಸಂದರ್ಭಕ್ಕೆ ಸರಿಯಾಗಿ ಬದಲಾವಣೆ ಆಗುವುದನ್ನು ನಾವು ಒಪ್ಪಿಕೊಳ್ಳಲೇಬೇಕು. ನಾವು ಬಾಲ್ಯಾವಸ್ಥೆಯಲ್ಲಿ ಇದ್ದಂತಹ ಜೀವನ ಪದ್ಧತಿ ಈಗ ಇಲ್ಲ. ಅದೇ ರೀತಿ ಕಲಾ ಪ್ರಾಕಾರಗಳೂ ಹಾಗೆಯೇ.. ಏರಿಳಿತಗಳನ್ನು ಕಾಣುತ್ತವೆ. ಹಾಗಂತ ಯಕ್ಷಗಾನ ಅಳಿದು ಹೋಗುತ್ತಾ ಇಲ್ಲ. ಒಂದು ಮಟ್ಟದಲ್ಲಿ ಯಕ್ಷಗಾನ ಬೆಳವಣಿಗೆ ಆಗ್ತಾ ಇದೆ. ಒಂದಷ್ಟು ಶಾಲಾ ವಿದ್ಯಾರ್ಥಿಗಳು, ಹವ್ಯಾಸಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾ ಇದ್ದಾರೆ. ಅಪೇಕ್ಷೆ ಇಷ್ಟೇ.. ಒಂದಷ್ಟು ಯಕ್ಷಗಾನವನ್ನು ಕಲಿತವರು ಒಂದು ಉತ್ತಮ ಕಲಾವಿದರು ಆಗದಿದ್ದರೂ ಸಹ ಒಂದು ಉತ್ತಮ ಪ್ರೇಕ್ಷಕ ಆಗಲು ಸಾಧ್ಯವಿದೆ.


ಈಗ ವ್ಯಾಪಾರ ಮಟ್ಟಕ್ಕೆ ಇಳಿದಿದ್ದೇವೆ. ಯಕ್ಷಗಾನ ಅನ್ನುವಂತಹದ್ದು ಆರಾಧನಾ ನೆಲೆಯಲ್ಲಿ ಬಂದಂತಹ ಕಲೆ. ಅದು ಆರಾಧನೆಯಾಗಿ ಉಳಿದಿಲ್ಲ. ಯಾವಾಗ ವ್ಯಾಪಾರ ಮಟ್ಟಕ್ಕೆ ಇಳಿಯಿತೋ ಆಗ ಕಲೆ ತನ್ನ ನಿಜ ಸ್ವರೂಪವನ್ನು ಕಳೆದುಕೊಳ್ಳುತ್ತಾ ಬಂತು. ಆಧುನಿಕತೆಯತ್ತ ಮಾರುಹೋಯಿತು. ಅಂದ್ರೆ ಚಲನಚಿತ್ರಗಳ ಹಾಡುಗಳ ಬಳಕೆಯನ್ನು ಮಾಡುವಂಥದ್ದು, ಅಥವಾ ಅದರ ರಾಗಗಳನ್ನು ಬಳಸುವಂತಹದ್ದು, ಅಥವಾ ಚಲನಚಿತ್ರದ ಹಾಡನ್ನೇ ಯಕ್ಷಗಾನದಲ್ಲಿ ಬಳಸುವಂತಹದ್ದು. ನಿಜವಾದ ಯಕ್ಷಗಾನ ಶೈಲಿ ಅನ್ನುವಂತಹದ್ದು ಬಿಟ್ಟು ಹೋಗಿದೆ. ಆದ್ರೆ ನಾವು ಏನೇ ಹೊಸ ಪ್ರಯೋಗ ಮಾಡುವುದಿದ್ದರೂ ಯಕ್ಷಗಾನದ ಮೂಲ ಚೌಕಟ್ಟನ್ನು ಇಟ್ಟುಕೊಂಡು, ಆ ಮೂಲ ಚೌಕಟ್ಟಿಗೆ ಗೌರವವನ್ನು ಕೊಟ್ಟು ಆ ಪರಂಪರೆಯನ್ನು ಉಳಿಸಿಕೊಂಡು ನಾವು ಸ್ವಲ್ಪ ಮಟ್ಟಿನ ಬದಲಾವಣೆಯನ್ನು ಮಾಡಿಕೊಳ್ಳಬಹುದು.


ಇವತ್ತಿನ ಯಕ್ಷಗಾನದ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಇವತ್ತಿನ ಪ್ರೇಕ್ಷಕರಲ್ಲಿ 2 ವರ್ಗ ಇದೆ. ಒಂದನೇ ವರ್ಗದಲ್ಲಿ ಪೌರಾಣಿಕ ಪ್ರಸಂಗಗಳನ್ನು ಮಾತ್ರ ನೋಡುವಂತಹ ಪ್ರೇಕ್ಷಕ ವರ್ಗ. ಇನ್ನೊಂದು ಸಾಮಾಜಿಕ ಪ್ರಸಂಗವನ್ನೇ ಅಪೇಕ್ಷೆ ಪಡುವಂತಹ ವರ್ಗ ಇದೆ. ಸಾಮಾಜಿಕ ಪ್ರಸಂಗವನ್ನು ಅಪೇಕ್ಷೆ ಪಡುವಂತಹ ಪ್ರೇಕ್ಷಕ ವರ್ಗ ಫಿಲ್ಮಿ ಡ್ಯಾನ್ಸ್, ಫಿಲ್ಮಿ ಸಾಂಗ್, ಇದನ್ನೇ ಬಯಸುತ್ತಾರೆ. ಒಂದು ವೇಳೆ ಸಾಮಾಜಿಕ ಪ್ರಸಂಗವನ್ನು ಬೆಳಿಗ್ಗೆ ತನಕ ನೋಡಿದ ಪ್ರೇಕ್ಷಕರಲ್ಲಿ ಕಥೆ ಏನಾಗಿದೆ, ಕಥೆ ಏನು ಅಂತ ಕೇಳಿದ್ರೆ ಕಥೆ ಗೊತ್ತಿರುವುದಿಲ್ಲ. ಒಂದಿಷ್ಟು ಮನೋರಂಜನೆಗಾಗಿ ನಡೆದಿದೆ ಬಿಟ್ರೆ ಬೇರೇನೂ ಇಲ್ಲ. ಆದರೆ ಪೌರಾಣಿಕ ಪ್ರಸಂಗದ ಪ್ರೇಕ್ಷಕರು ಪ್ರಜ್ಞಾವಂತರಾಗಿರುತ್ತಾರೆ. ಅವ್ರಿಗೆ ಯಕ್ಷಗಾನದಲ್ಲಿ ಒಬ್ಬ ಕಲಾವಿದ ರಾಗ ತಪ್ಪಿದ್ರೆ, ಶೃತಿ ತಪ್ಪಿದ್ರೆ, ಸಾಹಿತ್ಯ ತಪ್ಪಿದ್ರೆ, ನೃತ್ಯ ತಪ್ಪಿದ್ರೆ ಅವ ತಪ್ಪಿದ ಎಂದು ಹೇಳುವಂತಹ ಸಾಮರ್ಥ್ಯ ಪೌರಾಣಿಕ ಪ್ರಸಂಗವನ್ನು ನೋಡುವ ಪ್ರಜ್ಞಾವಂತ ಪ್ರೇಕ್ಷಕರಲ್ಲಿ ಇದೆ. ಅದು ಸರಿ, ಇದು ತಪ್ಪು ಅಂತ ಹೇಳುವ ಸಾಮರ್ಥ್ಯ ಪೌರಾಣಿಕ ಪ್ರಸಂಗ ನೋಡುವ ಪ್ರೇಕ್ಷಕರಿಗೆ ಇದೆ. ಸಾಮಾಜಿಕ ಪ್ರಸಂಗ ಯಾವತ್ತೇ ಆಗಲಿ ಕಲಾವಿದರು ಆ ಮಟ್ಟಕ್ಕೆ ಒಂದು ಚಲನಚಿತ್ರ ಹಾಡನ್ನು ಬಳಸಿಕೊಳ್ಳುವಂತದ್ದು, ಅಥವಾ ಆಧುನಿಕತೆಯ ಧಾರಾವಾಹಿಗಳನ್ನು ನೋಡಿ ಅದನ್ನು ಪ್ರಸ್ತಾಪ ಮಾಡುವಂತಹದ್ದು... ಯಾವಾಗ ಇದನ್ನು ಆಟ ನೋಡುವಾಗ ಪ್ರೇಕ್ಷಕರು ಪ್ರತಿಭಟಿಸಲಿಲ್ಲವೋ, ಪ್ರಶ್ನಿಸಲಿಲ್ಲವೋ ಆವಾಗ್ಲೇ ಅದರ ಮಟ್ಟ ಕುಸಿದು ಹೋಗಿದೆ ಅಂತ ಲೆಕ್ಕ. ಯಾವಾಗಲೂ ಪ್ರೇಕ್ಷಕರು ಅದನ್ನು ಪ್ರಶ್ನೆ ಮಾಡಬೇಕು. ಪ್ರಶ್ನೆ ಮಾಡಿದಾಗ ಮಾತ್ರ ಸಾಮಾಜಿಕ ಪ್ರಸಂಗಗಳು ಬೆಳಕಿಗೆ ಬರಲು ಸಾಧ್ಯವಿಲ್ಲ ಅಥವಾ ಅತಿಯಾದ ಪ್ರಚಾರವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಪ್ರೇಕ್ಷಕರು ಜಾಗೃತರಾಗಬೇಕು. ಪ್ರೇಕ್ಷಕರು ಅದನ್ನು ಬಯಸಿದಾಗ ಮಾತ್ರ ಕಲಾವಿದ ಅದನ್ನ ಮಾಡಲು ಮುಂದಾಗುತ್ತಾರೆ. ಪ್ರೇಕ್ಷಕರು ಅದನ್ನು ಖಂಡಿಸಿದರೆ ಅದನ್ನು ಬಿಟ್ಟುಬಿಡುತ್ತಾರೆ.


10 ವರ್ಷಗಳ ನನ್ನ ಮೇಳದ ತಿರುಗಾಟದಲ್ಲಿ, ಮೇಳಗಳ ಕಲಾವಿದರು ಹೇಗಂದ್ರೆ ಒಂದಷ್ಟು ದುಶ್ಚಟಗಳನ್ನು ಅಂಟಿಸಿಕೊಳ್ಳುವಂತದ್ದು, ಸಹವಾಸ ದೋಷಗಳು. ಯಕ್ಷಗಾನ ಕಲಾವಿದರ ಬಗ್ಗೆ ಒಂದು ಕಾಲದಲ್ಲಿ ಕೀಳರಿಮೆಗಳು ಇತ್ತು. ಯಕ್ಷಗಾನದವರು ಅಂದ್ರೆ ದುಶ್ಚಟದವರು, ಅವ್ರಿಗೆ ಬೇಡದಿದ್ದ ಚಟಗಳು ಅಷ್ಟೂ ಇರ್ತದೆ. ಅವ್ರಿಗೆ ಗುಣಮಟ್ಟ ಇರುವುದಿಲ್ಲ ಅನ್ನುವ ಭಾವನೆ ಇತ್ತು. ನಾನು ಮೇಳಕ್ಕೆ ಹೋದದ್ದು ಯಾಕಂದ್ರೆ ನನಗೊಂದು ಅನುಭವ ಬೇಕು ಅಂತ. ನಾನು ಪ್ರೌಢ ಶಿಕ್ಷಣವನ್ನು ಮೊಟಕುಗೊಳಿಸಿ ಯಕ್ಷಗಾನಕ್ಕೆ ಪಾದಾರ್ಪಣೆ ಮಾಡಿದಾಗ ತಂದೆಯವರಿಂದ ಒಂದಷ್ಟು ಬೈಗುಳವನ್ನು ತಿಂದವ ನಾನು. ಆದರೆ ನಾನು ಆ ಕ್ಷೇತ್ರಕ್ಕೆ ಇಳಿದ ಮೇಲೆ ಸಾಧನೆ ಮಾಡಬೇಕು ಅನ್ನುವಂತಹ ಹಠ ಇತ್ತು. ಛಲ ಇತ್ತು. ಆ ಕಾರಣಕ್ಕಾಗಿ ನಾನು ಮೇಳಕ್ಕೆ ಹೋದೆ. ಒಂದಿಷ್ಟು ಅನುಭವಗಳನ್ನು ಮಾಡಿಕೊಂಡೆ.  ಈ ದುಷ್ಚಟಗಳ ಕಾರಣದಿಂದಾಗಿ ನಾನು ಮೇಳದಿಂದ ಹೊರಗೆ ಬಂದೆ. ತರಬೇತಿಯ ವೃತ್ತಿಯನ್ನು ಶುರು ಮಾಡಿದೆ. ಅದರಲ್ಲಿ ನನಗೆ ಉತ್ತಮವಾದಂತಹ ಯಶಸ್ಸು ಸಿಕ್ಕಿದೆ,  ಸಿಗ್ತಾ ಇದೆ ಎಂದು ಹೇಳುತ್ತಾರೆ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿಯವರು.


ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಇವರು ಹೀಗೆ ಹೇಳುತ್ತಾರೆ:

ಯಕ್ಷಗಾನದಲ್ಲಿ ಅಳಿದು ಹೋದ, ಅಳಿದು ಹೋಗುತ್ತಿರುವ ಪ್ರಾಕಾರಗಳು ಇವೆ. ಹಾಗಾಗಿ ಹವ್ಯಾಸಿಗಳಿಗೆ, ಶಾಲಾ ಮಕ್ಕಳಿಗೆ ತರಬೇತಿ ನೀಡುವಾಗ ಅಳಿದು ಹೋಗಿರುವಂತಹ ಹಾಗೂ ಅಳಿದು ಹೋಗುತ್ತಿರುವ ಪ್ರಾಕಾರಗಳನ್ನು ಅವ್ರಿಗೆ ಹೇಳಿಕೊಟ್ಟು ಅವರ ಮುಖಾಂತರವಾಗಿ ಪ್ರಸ್ತುತ ಪಡಿಸುವಂತಹದ್ದು. ಅಂದರೆ ಅದನ್ನು ಮುಂದಿನ ಪೀಳಿಗೆಗೆ ದಾಟಿಸುವಂತಹ ಯೋಜನೆ ನನ್ನದ್ದಾಗಿದೆ.


ಇವರಿಗೆ ಸಿಕ್ಕಿರುವ ಸನ್ಮಾನ ಹಾಗೂ ಪ್ರಶಸ್ತಿಗಳು:-

ಸನ್ಮಾನದ ಹಾಗೂ ಪ್ರಶಸ್ತಿಗಳ ಅಪೇಕ್ಷೆ ನನಗಿಲ್ಲ. .

ಹಲವಾರು ಪ್ರಶಸ್ತಿಗಳು ಅರಸಿ ಬಂದರೂ ದೂರೀಕರಿಸಿದ್ದೇನೆ. ಯಾಕಂದರೆ ನಾನು ಮಾಡುವಂತಹ ಪ್ರಾಮಾಣಿಕವಾದಂತಹ ವೃತ್ತಿ ವಿದ್ಯಾರ್ಥಿಗಳಿಗೆ ಹೇಳಿಕೊಡುವಂತಹದ್ದು. ಅದರಲ್ಲೇ ಸಂತೃಪ್ತಿ ಪಡೆದುಕೊಳ್ಳುತ್ತೇನೆ.

ಪ್ರಜ್ಞಾವಂತರು ನನ್ನ ನಿರ್ದೇಶನವನ್ನು, ತರಬೇತಿಯನ್ನು ಒಪ್ಪಿ, ಶುಭ ಹಾರೈಸಿದರೆ ಆಶೀರ್ವದಿಸಿದರೆ ಅದಕ್ಕಿಂತ ದೊಡ್ಡ ಪ್ರಶಸ್ತಿ ಬೇರೊಂದಿಲ್ಲ ಎಂದು ತಿಳಿದುಕೊಂಡವ ನಾನು.. ಎಂದು ಹೇಳುತ್ತಾರೆ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ.


ಓದುವುದು, ಕವನ ಬರೆಯುವುದು. ಇತ್ತೀಚಿನ ದಿನಗಳಲ್ಲಿ ಪ್ರಸಂಗ ಪದ್ಯಗಳನ್ನು ಬರೆಯುವುದು ಇವರ ಹವ್ಯಾಸಗಳು.


ಒಂದು ಕಡೆ ಒಬ್ರ ಪ್ರಸಂಗಕ್ಕೆ ಪದ್ಯ ಬರೆಯುವ ಅನಿವಾರ್ಯತೆ ಒದಗಿ ಬಂತು. ಛಂದಸ್ಸನ್ನು ಅಭ್ಯಾಸ ಮಾಡದೆ  1 ತಿಂಗಳ ಅವಧಿಯಲ್ಲಿ ಒಟ್ಟು 125 ಪದ್ಯಗಳನ್ನು ಬರೆದು, ಅದನ್ನು ತಂದೆಗೆ ಹೋಗಿ ತೋರಿಸಿದಾಗ ‘ನೀನು ಯಾರತ್ರ ಕಲಿತು ಬರೆದಿದ್ದೀಯ, ಎಲ್ಲಾ ಛಂದೋಬದ್ಧವಾಗಿ ಉಂಟಲ್ಲ’ ಅಂತ ಹೇಳಿ ಪ್ರೋತ್ಸಾಹಿಸಿದರು. ಇವೆಲ್ಲವೂ ದೈವೀ ಅನುಗ್ರಹ ಹಾಗೂ ಗುರುಗಳ ಆಶೀರ್ವಾದ ಎಂದು ಇವರು ಹೇಳುತ್ತಾರೆ.


25.10.2008 ರಂದು ಪ್ರಮೀಳಾ ಅವರನ್ನು ವಿವಾಹವಾಗಿ ಮಕ್ಕಳಾದ ಅತ್ರಿ, ಅರ್ಕ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

8971275651


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top