ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಅಗ್ನಿಪಥ್ -ಪರಿಕಲ್ಪನೆ ಮತ್ತು ಅವಕಾಶದ ಮಾಹಿತಿ ಕಾರ್ಯಾಗಾರ
ಪುತ್ತೂರು: ನಮ್ಮೊಳಗಿನ ಸಾಮರ್ಥ್ಯವನ್ನು ಗುರುತಿಸಿ ಪರಿಣಿತಗೊಳಿಸುವ ಕಾರ್ಯ ಸೇನಾ ತರಬೇತಿಯ ಮುಖೇನ ಆಗುತ್ತದೆ ಎನ್ನುವುದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವ ವಿಷಯ. ಇಂತಹ ಕಾರ್ಯವನ್ನು ಪುಷ್ಠೀಕರಿಸುವ ನೆಲೆಯಲ್ಲಿ ಅಗ್ನೀಪಥ್ ಯೋಜನೆ ನಿಜಕ್ಕೂ ಶ್ಲಾಘನೀಯ ನಡೆ. ಒಬ್ಬ ಜವಾಬ್ದಾರಿಯುತ ಪ್ರಜೆಯನ್ನು ದೇಶಕ್ಕೆ ನೀಡುವ ಕೆಲಸ ಈ ಯೋಜನೆಯ ಮುಖಾಂತರ ಆಗಲಿದ್ದು ಇದೊಂದು ಧನಾತ್ಮಕ ಪರಿವರ್ತನೆಯ ಯೋಜನೆಯಾಗಿದೆ ಎಂದು ಮಾಜಿ ಭಾರತೀಯ ಸೇನಾ ಅಧಿಕಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.
ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ ಅಗ್ನಿಪಥ್-ಪರಿಕಲ್ಪನೆ ಮತ್ತು ಅವಕಾಶದ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಭಾವನೆಯನ್ನು ಉದ್ದೀಪನಗೊಳಿಸಿ ಭಾವೈಕ್ಯತೆ ನಿರ್ಮಿಸುವ ನಿಟ್ಟಿನಲ್ಲಿ ಆಗ್ನಿಪಥ್ ಯೋಜನೆ ನಿಜಕ್ಕೂ ಉತ್ತಮ ಅವಕಾಶವಾಗಿದ್ದು, ಇಂತಹ ಸೌಲಭ್ಯವನ್ನು ಯುವಕರು ಸಧ್ವಿನಿಯೋಗಿಸಿಕೊಳ್ಳಬೇಕು. ಶಿಸ್ತು ಕೌಶಲ್ಯ ಹಾಗೂ ಸೇನಾ ತರಬೇತಿಯೊಂದಿಗೆ ರಾಷ್ಟ್ರ ನಿರ್ಮಾಣದ ಪುಣ್ಯ ಕಾರ್ಯದಲ್ಲಿ ಭಾಗವಹಿಸುವ ಅವಕಾಶ ಈ ಮೂಲಕ ಸಿಗಲಿದೆ. ಛಲ ಹಾಗೂ ಸಾಮರ್ಥ್ಯವಿರುವ ಯುವ ಪೀಳಿಗೆಗೆ ಭಾರತಿಯ ಸೇನೆ ಅನೇಕ ಅವಕಾಶಗಳನ್ನು ಒದಗಿಸುತ್ತಿದೆ. ಅಗ್ನಿ ವೀರರಾಗಿ ಕಾರ್ಯನಿರ್ವಹಿಸಿದ ಬಳಿಕ ಸಮಾಜದ ವಿವಿಧ ಸ್ಥರಗಳಲ್ಲಿ ಹಲವಾರು ಸವಲತ್ತಗಳು ಕೂಡ ಲಭ್ಯವಿದೆ. ಹೀಗಾಗಿ ಯುವಕರು ಭವಿಷ್ಯದ ಬಗ್ಗೆ ಯಾವುದೇ ಭಯಪಡುವ ಅಗತ್ಯವಿಲ್ಲ. ಪಾರದರ್ಶಕ ಮತ್ತು ಕಠಿಣ ಅಯ್ಕೆ ಪ್ರಕ್ರಿಯೆ ನಡೆಯಲಿದ್ದು ಸಮಾಜದ ಅನೇಕ ವಿಕೃತ ಮನಸ್ಥಿತಿಗಳ ಮಾತುಗಳಿಗೆ ತಲೆ ಕೆಡಿಸಕೊಳ್ಳದೆ ದೃಢ ನಿರ್ಧಾರದಿಂದ ಸೈನಿಕರಾಗಲು ತಯಾರಾಗಬೇಕು ಎಂದು ತಿಳಿಸಿದರು.
ಅಲ್ಲದೆ ಈ ಯೋಜನೆಯ ಸತ್ಯಾಸತ್ಯತೆಗಳನ್ನ ತಿಳಿಯದೆ ವಿರೋಧ ವ್ಯಕ್ತ ಪಡಿಸುವ ವ್ಯಕ್ತಿಗಳು ನಿಜಕ್ಕೂ ದೇಶ ದ್ರೋಹಿಗಳು. ದೇಶದಲ್ಲಿ ಅನೇಕ ನಕಾರಾತ್ಮಕ ಬೆಳವಣಿಗೆಗಳು ನಡೆಯುತ್ತಿದೆ. ನಾವೆಲ್ಲರೂ ಐಕ್ಯಗೊಂಡು ದೇಶಕ್ಕಾಗಿ ದುಡಿಯಬೇಕು. ದೇಶದ ಪ್ರಜೆಗಳು ಒಗ್ಗೂಡಿ ಒಂದೇ ದಿಕ್ಕಿನೆಡೆಗೆ ಹೆಜ್ಜೆ ಹಾಕಿದಾಗ ಉತ್ತಮ ರಾಷ್ಟ್ರ ನಿರ್ಮಾಣ ಸಾಧ್ಯ. ಇಂತಹ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವುದು ಭಾರತೀಯ ಸೇನೆ. ಧರ್ಮ ಪಂಥಗಳ ಚೌಕಟ್ಟಿನಿಂದ ಹೊರಬಂದು ತಾನೊಬ್ಬ ಭಾರತೀಯನೆಂಬ ಭಾವನೆಯನ್ನು ಹೊಂದಿ ದೇಶಕ್ಕಾಗಿ ದುಡಿಯಬೇಕು ಎಂದು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ ಮಾತನಾಡಿ, ಇಂತಹ ಅರ್ಥ ಪೂರ್ಣ ಕಾರ್ಯಕ್ರಮ ಪ್ರಸ್ತುತ ಸಂದರ್ಭದಲ್ಲಿ ಅತ್ಯಗತ್ಯವಾಗಿದೆ. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರಂತಹ ವ್ಯಕ್ತಿಗಳ ಜೀವನ ಯುವಕರಿಗೆ ಪ್ರೇರಣೆಯಾಗಿದೆ. ಈ ಯೋಜನೆಯಿಂದ ದೇಶ ಇನ್ನೂ ಹೆಚ್ಚು ಬಲಿಷ್ಟವಾಗಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಗೋಪಾಲಕೃಷ್ಣ ಭಟ್ ಹಾಗೂ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿಗಳ ತಂಡದಿಂದ ವಾದ್ಯ ಸಂಗೀತದ ಮೂಲಕ ಪ್ರಾರ್ಥನೆ ನಡೆಯಿತು. ಕಾಲೇಜಿನ ಗಣಕ ಶಾಸ್ತ್ರ ವಿಭಾದ ಮುಖ್ಯಸ್ಥ ದೇವಿ ಚರಣ್ ರೈ ಸ್ವಾಗತಿಸಿ ಪ್ರಸ್ತಾವನೆಗೈದರು. ಕನ್ನಡ ವಿಭಾಗದ ಮುಖ್ಯಸ್ಥೆ ಪುಷ್ಪಲತಾ ವಂದಿಸಿದರು. ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ. ಶ್ರುತಿ ಕಾರ್ಯಕ್ರಮ ನಿರೂಪಿಸಿದರು.