ಕೃತಕ ಸಿಹಿಕಾರಕಗಳು: ಅತಿಯಾದ ಬಳಕೆ ಒಳ್ಳೆಯದಲ್ಲ

Upayuktha
0


ಇತ್ತೀಚಿನ ದಿನಗಳಲ್ಲಿ ಸಕ್ಕರೆಯ ಬದಲಾಗಿ ಕೃತಕ ಸಿಹಿಕಾರಕ ವಸ್ತುಗಳನ್ನು ಬಳಸುವುದನ್ನು ನಾವು ಹೆಚ್ಚು ಕಾಣುತ್ತಿದ್ದೇವೆ. ಈ ಕೃತಕ ಸಿಹಿಕಾರಕಗಳು, ನಮ್ಮ ಪಾನೀಯಕ್ಕೆ ಸಿಹಿಯನ್ನು ನೀಡುತ್ತದೆ ಮತ್ತು ಅತೀ ಕಡಿಮೆ ಕ್ಯಾಲರಿ ನೀಡುತ್ತದೆ ಹಾಗೂ ನಾವು ತಿನ್ನುವ ಆಹಾರಕ್ಕೆ ಸಿಹಿ ರುಚಿಯನ್ನು ನೀಡುತ್ತದೆ. ಇದೊಂದು ರಾಸಾಯನಿಕವಾಗಿದ್ದು, ಅತಿಯಾಗಿ ಬಳಸುವುದರಿಂದ ಸಾಕಷ್ಟು ಆರೋಗ್ಯ ಸಂಬಂಧಿ ತೊಂದರೆಗಳನ್ನು ಉಂಟುಮಾಡುವ ಸಾಧ್ಯತೆ ಇದೆ ಎಂದು ಇತ್ತೀಚಿನ ಸಂಶೋದನೆಗಳಿಂದ ತಿಳಿದು ಬಂದಿದೆ. ಅತೀ ಸಾಮಾನ್ಯವಾಗಿ ಬಳಸುವ ಕೃತಕ ಸಕ್ಕರೆಗಳು ಯಾವುವೆಂದರೆ

1. ಸ್ಯಾಕರಿನ್

2. ಆಸ್ಪರ್‍ಟೇಮ್

3. ಸುಖ್ರಾಲೋಸ್

4. ಸ್ಟೀವಿಯ


1. ಸ್ಯಾಕರಿನ್: ಕೃತಕ ರಾಸಾಯನಿಕವಾಗಿದ್ದು, ಓ ಟೋಲೀನ್ ಸಲ್ಪೋನಮೈಡ್ ಅಥವಾ ಥಾಲಿಕ್ ಎನ್‍ಹೈಡ್ರೈಟ್ ಎಂಬ ವಸ್ತುವಿನಿಂದ ತಯಾರಿಸಲಾಗುತ್ತದೆ. ಇದು ನೈಸರ್ಗಿಕ ಸಕ್ಕರೆಯಾದ ಮತ್ತು ಲೋಹದ (ಮೆಟಾಲಿಕ್) ರುಚಿ ಹೊಂದಿರುತ್ತದೆ. ಸುಕ್ರೋಸ್‍ಗಿಂತ 300 ರಿಂದ 400 ಪಟ್ಟು ಸಿಹಿಯಾಗಿರುತ್ತದೆ.

2. ಆಸ್ಪರ್‍ಟೇಮ್: ಇದು ಸುಕ್ರೋಸ್‍ಗಿಂತ 200 ಪಟ್ಟು ಶಕ್ತಿಶಾಲಿಯಾಗಿದ್ದು ಇದರಲ್ಲಿ ಅಮಿನೋ ಆಸಿಡ್, ಆಸ್ಟ್ರಟಿಕ್ ಆಸಿಡ್ ಮತ್ತು ಫೀನಾಯ್ಲ ಅಲನೈನ್ ಇರುತ್ತದೆ.

3. ಸುಖ್ರ್ರ್ರಾಲೋಸ್: ಸುಕ್ರೋಸ್‍ನಿಂದ ಮಾಡಲ್ಪಟ್ಟ ರಾಸಾಯನಿಕ ಇದಾಗಿದೆ. ನೈಸರ್ಗಿಕ ಸುಕ್ರೋಸ್‍ಗೆ ಕ್ಲೋರಿನ್ ಸೇರಿಸಿ ಈ ಉತ್ಪನ್ನ ಮಾಡಲಾಗುತ್ತದೆ ಮತ್ತು ಸುಕ್ರೋಸ್‍ಗಿಂತ 300 ರಿಂದ 1000 ಪಟ್ಟು ಸಿಹಿಯಾಗಿರುತ್ತದೆ.   

4. ಸ್ಟೀವಿಯಾ: ಇದೊಂದು ನೈಸರ್ಗಿಕ ಸಸ್ಯಜನ್ಯ ಸಕ್ಕರೆಯಾಗಿದ್ದು ಬಹಳ ಹೆಚ್ಚಾಗಿ ಬಳಸುತ್ತಾರೆ. ಸ್ಟೀವಿಯಾ ರಿದೆಬಾಡಯಾನಾ ಎಂಬ ಸಸ್ಯದಿಂದ ಈ ಉತ್ಪನ್ನ ಪಡೆಯಲಾಗುತ್ತದೆ. ಇದು ಸುಕ್ರೋಸ್‍ಗಿಂತ 30 ರಿಂದ 150 ಪಟ್ಟು ಸಿಹಿಯಾಗಿರುತ್ತದೆ. 

ಇದೇ ರೀತಿ ಮಾರುಕಟ್ಟೆಯಲ್ಲಿ ಹತ್ತಾರು ಕೃತಕ ಸಿಹಿಕಾರಕ ವಸ್ತುಗಳು ಲಭ್ಯವಿದೆ. ಆದರೆ ಮೇಲೆ ತಿಳಿಸಿದ ನಾಲ್ಕು ರಾಸಾಯನಿಕಗಳು ಅತೀ ಸಾಮಾನ್ಯವಾಗಿರುತ್ತದೆ.  ಇವುಗಳು ಜೀರೋ ಕ್ಯಾಲರಿ ಹೊಂದಿದ್ದು, ನಾವು ತಿನ್ನುವ ಆಹಾರಕ್ಕೆ ಸಿಹಿ ರುಚಿಯನ್ನು  ಮಾತ್ರ ನೀಡುತ್ತದೆ ಹಾಗೂ ಯಾವುದೇ ರೀತಿಯ ಕ್ಯಾಲರಿಯನ್ನು ಅನಗತ್ಯವಾಗಿ ದೇಹಕ್ಕೆ ನೀಡುವುದಿಲ್ಲ.


ಅಡ್ಡಪರಿಣಾಮಗಳೇನು?

ಕೃತಕ ಸಿಹಿಕಾರಗಳಿಂದ ಹಲವಾರು ಅಡ್ಡ ಪರಿಣಾಮ ಇದೆ.  

1. ಹಸಿವು ಹೆಚ್ಚಾಗುವುದು ಮತ್ತು ತೂಕ ಹೆಚ್ಚಾಗುವುದು: ನೀವು ಜಾಸ್ತಿ ಕೃತಕ ಸಿಹಿಕಾರಕ ಬಳಸಿದಷ್ಟು ನಿಮ್ಮ ಹಸಿವೆ ಹೆಚ್ಚಾಗುತ್ತದೆ. ಇನ್ನಷ್ಟು ಸಕ್ಕರೆ ಅಥವಾ ಸಿಹಿ ತಿನ್ನಬೇಕು ಎಂಬ ದಾಹ ಹೆಚ್ಚಾಗುತ್ತದೆ. ಇದರಿಂದಾಗಿ ಹೆಚ್ಚು ತಿನ್ನುವ ಗೀಳು ಉಂಟಾಗಿ, ದೇಹ ಬೊಜ್ಜು ಹಾಗೂ ತೂಕ ಹೆಚ್ಚಾಗುತ್ತದೆ. ಇದರಿಂದ ಮಧುಮೇಹ ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ. ನಮ್ಮ ಮೆದುಳಿಗೆ ಜೀರೋ ಕ್ಯಾಲರಿಯ ಸಿಹಿ ಸಿಕ್ಕಾಗ ಗೊಂದಲ ಉಂಟಾಗಿ ಮತ್ತಷ್ಟು ತಿನ್ನುವಂತೆ ಪ್ರಚೋದಿಸುತ್ತದೆ. ಹಸಿವೆ ಹೆಚ್ಚಾಗುವಂತೆ ಮಾಡುತ್ತದೆ.


2. ಕ್ಯಾನ್ಸರ್ ಅಪಾಯ:- ಅತಿಯಾದ ಕೃತಕ ಸಿಹಿಕಾರಕ ಸ್ಯಾಕರಿನ್ ಬಳಕೆಯಿಂದ ಮೆದುಳು ಕ್ಯಾನ್ಸರ್ ಮತ್ತು ಬ್ಲಾಡರ್ (ಮೂತ್ರ ಚೀಲ) ಕ್ಯಾನ್ಸರ್‍ಗೆ ಕಾರಣವಾಗುತ್ತದೆ ಎಂದೂ ತಿಳಿದುಬಂದಿದೆ. ಇತ್ತೀಚೆಗೆ ಫ್ರಾನ್ಸ್ ದೇಶದಲ್ಲಿ ನಡೆದ ಅಧ್ಯಯನದಲ್ಲಿ ಕೃತಕ ಸಿಹಿಕಾರಕ ಬಳಸುವ 15,02,865 ಮಂದಿ ಭಾಗವಹಿಸಿದ್ದರು. ಇವರಲ್ಲಿ ಸುಮಾರು 7 ವರ್ಷಗಳ ಕಾಲ ಅಧ್ಯಯನ ಮಾಡಿದಾಗ 3.358 ಮಂದಿಗೆ ಕ್ಯಾನ್ಸರ್ ಪತ್ತೆಯಾಗಿದೆ. ಇದರಲ್ಲಿ ಹೆಚ್ಚಿನವರು ಆಸ್ಪರ್‍ಟೇಮ್ ಎಂಬ ಕೃತಕ ಸಿಹಿಕಾರಕ ಬಳಸಿದ್ದರು. ಕೃತಕ ಸಿಹಿಕಾರಕ ಬಳಸುವವರಿಗೆ ಇತರರಿಗಿಂತ 15 ಶೇಕಡಾ ಜಾಸ್ತಿ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.


3. ಖಿನ್ನತೆ: ಅತಿಯಾಗಿ ಆಸ್ಪರ್‍ಟೇಮ್ ಎಂಬ ಕೃತಕ ಸಕ್ಕರೆ ಬಳಸುವವರಿಗೆ ಖಿನ್ನತೆ ಬರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಮೊದಲೇ ಖಿನ್ನತೆಯಿಂದ ಬಳಲುತ್ತಿರುವವರಿಗೆ ಖಿನ್ನತೆ ಮತ್ತಷ್ಟು ಉಗ್ರವಾಗಿ ಕೆರಳಿಸುತ್ತದೆಂದು ತಿಳಿದುಬಂದಿದೆ.

4. ತಲೆನೋವು: ಅತಿಯಾಗಿ ಕೃತಕ ಸಿಹಿಕಾರಕ ಬಳಸುವವರಿಗೆ ಪದೇ ಪದೇ ತಲೆನೋವು ಕಾಡುತ್ತದೆ ಎಂದು ತಿಳಿದುಬಂದಿದೆ. ಮೊದಲೇ ಮೈಗ್ರೇನ್ ರೋಗದಿಂದ ಬಳಲುತ್ತಿರುವವರಿಗೆ ತಲೆನೋವು ಹೆಚ್ಚು ಕಂಡುಬರುತ್ತದೆ.


5. ಅತಿಯಾದ ಕೃತಕ ಸಿಹಿಕಾರಕ ಬಳಸುವುದರಿಂದ ಕರುಳಿನ ಒಳಭಾಗದಲ್ಲಿ ಋಣಾತ್ಮಕ ಪರಿಣಾಮ ಬೀರಿ ಜೀವಕೋಶಗಳು ಇನ್ಸುಲಿನ್ ರಸದೂತಕ್ಕೆ ಹೆಚ್ಚು ಪ್ರತಿರೋಧ ತೋರುವಂತೆ ಮಾಡಿ ಮಧುಮೇಹಕ್ಕೆ ಸದ್ದಿಲ್ಲದೆ ಮುನ್ನುಡಿ ಬರೆಯುತ್ತದೆ ಎಂದು ಅಧ್ಯಯನಗಳು ವರದಿ ಮಾಡಿದೆ.


6. ಕೃತಕ ಸಿಹಿಕಾರಕ ಕರುಳಿನ ಒಳಭಾಗದಲ್ಲಿರುವ ಮನುಷ್ಯಸ್ನೇಹಿ ಬ್ಯಾಕ್ಟೀರಿಯಾಗಳ ಸಮತೋಲನ ತಪ್ಪುವಂತೆ ಮಾಡುತ್ತದೆ. ಈ ಪರಿಣಾಮ ಆರೋಗ್ಯವಂತ ವ್ಯಕ್ತಿಗಳಲ್ಲಿ ಹೆಚ್ಚು ಕಂಡುಬಂದಿದೆ.  ಈ ಕಾರಣದಿಂದ ಮಧುಮೇಹ ಬಾರದೇ ಇರಲಿ ಎಂಬ ದೃಷ್ಠಿಕೋನದಿಂದ ಕೃತಕ ಸಕ್ಕರೆ ಬಳಸುವುದು ಬಹಳ ಅಪಾಯಕಾರಿ ಎಂದು ಅಧ್ಯಯನಗಳು ವರದಿ ಮಾಡಿದೆ.


7. ಅತಿಯಾದ ಕೃತಕ ಸಿಹಿಕಾರಕ ಬಳಕೆಯಿಂದ ಮರೆಗುಳಿತನ, ಸ್ಟ್ರೋಕ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗೂ ನೆನಪು ಶಕ್ತಿ ಕುಂಠಿತವಾಗುತ್ತದೆ. 

8. ಅತಿಯಾದ ಕೃತಕ ಸಿಹಿಕಾರಕ ಬಳಕೆಯಿಂದ IBS  ಅಥವಾ ಕರುಳು ಕಿರಿಕಿರಿ ಖಾಯಿಲೆಗೆ ಕಾರಣವಾಗಲೂಬಹುದು.  ಅದೇ ರೀತಿ ಕರುಳಿಗೆ ಸಂಬಂಧಿಸಿದ ಕ್ರೋನ್ಸ್ ಡಿಸೀಸ್ ಎಂಬ ರೋಗಕ್ಕೆ ಕಾರಣವಾಗುತ್ತದೆ ಎಂದೂ ತಿಳಿದು ಬಂದಿದೆ.


9. ಅತಿಯಾದ ಕೃತಕ ಸಿಹಿಕಾರಕ ಬಳಕೆಯಿಂದ ನಿಮ್ಮ ಲಿವರ್ ಅಥವಾ ಯಕೃತ್‍ನಲ್ಲಿ ಅತಿಯಾಗಿ ಕೊಬ್ಬು ಶೇಖರಣೆಯಾಗಿ ಲಿವರ್ ಪೈಬೋಸಿಸ್ ರೋಗಕ್ಕೆ ಕಾರಣವಾಗುತ್ತದೆ ಮತ್ತು ಯಕೃತ್ತಿನ ಕಾರ್ಯಕ್ಷಮತೆ ಕುಂದುತ್ತದೆ.


10. ಗರ್ಭಿಣಿಯರಲ್ಲಿ ಕೃತಕ ಸಿಹಿಕಾರಕ ಬಳಕೆಯಿಂದ ಹುಟ್ಟುವ ಮಕ್ಕಳಲ್ಲಿ ಬೊಜ್ಜು ಮತ್ತು ಇತರ ಮೆಟಬಾಲಿಕ್ ಡಿಸಾರ್ಡರ್‌ಗಳಾದ (ತೊಂದರೆಗಳು) ಆರ್ಡರ್‌ಗಳಾದ ಮಧುಮೇಹ ಕಿಡ್ನಿ ತೊಂದರೆ ಹಾಗೂ ಹೃದಯ ರೋಗಗಳು ಬರುವ ಸಾಧ್ಯತೆ ಇರುತ್ತದೆ.


ಕೊನೆ ಮಾತು:

ಯಾವುದೇ ವಸ್ತುವನ್ನು ಅಗತ್ಯಕ್ಕಿಂತ ಜಾಸ್ತಿ ತಿನ್ನಲೇ ಬಾರದು. ಅತಿಯಾದರೆ ಅಮೃತವೂ ವಿಷ ಎಂಬ ಮಾತು ನಮಗೆಲ್ಲಾ ತಿಳಿದೇ ಇದೆ. ನೀವು ತಿನ್ನುವ ಕೃತಕ ಸಿಹಿಕಾರಕ ವಸ್ತು, ನಿಮ್ಮ ರುಚಿ ಗ್ರಂಥಿಗಳನ್ನು ಖುಷಿಪಡಿಸಿ ಆಹಾರ ಸಿಹಿಯಾಗುವಂತೆ ಮಾಡಿ, ಕ್ಯಾಲರಿ ಬಳಕೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ. ಆದರೆ ಅತಿಯಾದ ಸಿಹಿಕಾರಕ ಬಳಕೆಯಿಂದ ಹತ್ತು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ನೀವು ಸಕ್ಕರೆ ಇಲ್ಲದ ಕೃತಕ ಸಿಹಿಕಾರಕ ಬಳಸುತ್ತೇನೆ ಎಂಬ ಭ್ರಮೆಯಿಂದ, ಜಾಸ್ತಿ ಜಾಸ್ತಿ ಚಾಕೋಲೇಟ್ ಕೇಕ್‍ಗಳು ಮತ್ತು ಪೇಷ್ಟ್ರಿಗಳನ್ನು ಬಳಸಲು ಆರಂಭಿಸಿದಲ್ಲಿ ನಿಮ್ಮ ದೇಹದಲ್ಲಿ ಅನಗತ್ಯ ಬೊಜ್ಜು ಸೇರಿ, ಕೊಲೆಸ್ಟ್ರಾಲ್ ಕೂಡಾ ಸೇರಿಕೊಂಡು ಸ್ಟ್ರೋಕ್ ಮತ್ತು ಹೃದಯ ರೋಗಗಳಿಗೆ ಕಾರಣವಾಗುತ್ತದೆ. ಎಲ್ಲಾ ಕೃತಕ ಸಿಹಿಕಾರಕಗಳು ನೈಸರ್ಗಿಕ ಸಕ್ಕರೆಗಿಂತ ನೂರು ಪಾಲು ಶಕ್ತಿಶಾಲಿಯಾಗಿದ್ದು, ನಿಮ್ಮ ಸಿಹಿಯನ್ನು ಗುರುತಿಸುವ ವಾಹಕಗಳನ್ನು ಮತ್ತು ರುಚಿಗ್ರಂಥಿಗಳನ್ನು ಮತ್ತಷ್ಟು ಪ್ರಚೋಧಿಸಿ ಹೆಚ್ಚು ಸಿಹಿ ಇರುವ ವಸ್ತುಗಳನ್ನು ತಿನ್ನುವಂತೆ ಮಾಡುತ್ತದೆ. ಸಿಹಿ ಇಲ್ಲದ ಆರೋಗ್ಯಕರ ಆಹಾರಗಳಾದ ತರಕಾರಿಗಳನ್ನು ತಿನ್ನದಂತಹ ಮನೋಸ್ಥಿತಿಗೆ ಕಾರಣವಾಗುತ್ತದೆ. ಇದರಿಂದ ಆಹಾರದ ಸಮತೋಲನ ತಪ್ಪಿಹೋಗಿ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದೇ ರೀತಿ ಕೃತಕ ಸಿಹಿಕಾರಕಗಳಿಗೆ ಜನರು ಜೋತು ಬಿದ್ದು ಅದನ್ನೇ ಮತ್ತೆ ಮತ್ತೆ ತಿನ್ನಬೇಕೆಂಬ ಗೀಳಿಗೆ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಎಲ್ಲಾ ಕಾರಣಗಳಿಂದ ಏನೋ ಮಾಡಲು ಹೋಗಿ ಇನ್ನೇನೋ ಆಗುವಂತೆ, ನೈಸರ್ಗಿಕ ಸಕ್ಕರೆ ಬದಲಾಗಿ ಕೃತಕ ಸಿಹಿಕಾರಕ ಬಳಸಿ ಬೊಜ್ಜುತನ, ಮಧುಮೇಹ, ಸ್ಟ್ರೋಕ್ ಮತ್ತು ಹೃದಯ ಸಮಸ್ಯೆಗಳನ್ನು ಅನಗತ್ಯವಾಗಿ ಆಹ್ವಾನಿಸಿದಂತೆ ಆಗುವ ಎಲ್ಲಾ ಸಾಧ್ಯತೆ ಮುಕ್ತವಾಗಿದೆ. ಒಟ್ಟಿನಲ್ಲಿ ಸಕ್ಕರೆಯ ಅಂಶವನ್ನು ಕಡಿಮೆ ಮಾಡಿ, ಅತೀ ಅಗತ್ಯವಿದ್ದಲ್ಲಿ ಮಾತ್ರ ಕೃತಕ ಸಿಹಿಕಾರಕ ಬಳಸುವುದರಲ್ಲಿಯೇ ಜಾಣತನ ಅಡಗಿದೆ ಎಂಬ ಸತ್ಯವನ್ನು ಅರಿತು ಪಾಲಿಸಿದಲ್ಲಿ ನೂರು ಕಾಲ ಸುಖವಾಗಿ ಬದುಕಬಹುದು.


-ಡಾ|| ಮುರಲೀ ಮೋಹನ್‍ಚೂಂತಾರು

BDS, MDS,DNB,MOSRCSEd(U.K), FPFA, M.B.A

ಮೊ : 9845135787

drmuraleechoontharu@gmail.com


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top