ಪ್ರಾತಿನಿಧಿಕ ಚಿತ್ರ
ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದ ಮೂಲಕ ಕೇರಳಕ್ಕೆ ತೆರಳಿದ್ದ ಯುವಕನಿಗೆ ಮಂಕಿ ಪಾಕ್ಸ್ ದೃಢಪಟ್ಟಿರುವುದರಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತ ಮಂಗಳೂರಿನಲ್ಲಿ ಅಲರ್ಟ್ ಮಾಡಿದೆ.
ಜುಲೈ 13 ರಂದು ದುಬೈನಿಂದ ಮಂಗಳೂರು ಏರ್ಪೋರ್ಟ್ ಆಗಮಿಸಿದ್ದ 31 ವರ್ಷದ ಕಣ್ಣೂರು ಮೂಲದ ಯುವಕ ಶಂಕೆಯ ಮೇರೆಗೆ ಕಣ್ಣೂರಿನ ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ತಪಾಸಣೆಗೆ ಒಳಗಾಗಿದ್ದ. ಅಲ್ಲಿ ತಪಾಸಣೆ ನಡೆಸಿದ ವೈದ್ಯರು, ಮಂಕಿ ಪಾಕ್ಸ್ ಇರುವುದನ್ನು ಪತ್ತೆ ಮಾಡಿದ್ದಾರೆ. ಯುವಕನ ಜೊತೆಗಿದ್ದ ವ್ಯಕ್ತಿಗೆ ದುಬೈನಲ್ಲಿ ರೋಗ ದೃಢಪಟ್ಟಿದ್ದರಿಂದ ಈತನೂ ಚಿಕಿತ್ಸೆಗೆ ದಾಖಲಾಗಿದ್ದ. ಈ ನಡುವೆ, ಯುವಕನ ರಕ್ತದ ಮಾದರಿಯನ್ನು ಪುಣೆ ವೈರಾಲಜಿ ಕೇಂದ್ರಕ್ಕೆ ವೈದ್ಯರು ಕಳುಹಿಸಿದ್ದು ಅಲ್ಲಿ ಪಾಸಿಟಿವ್ ಬಂದಿರುವುದು ಪತ್ತೆಯಾಗಿದೆ. ಇದರೊಂದಿಗೆ, ಕೇರಳದಲ್ಲಿ ಎರಡನೇ ಮಂಕಿ ಪಾಕ್ಸ್ ಪ್ರಕರಣ ಪತ್ತೆ ಆದಂತಾಗಿದೆ. ಮೊದಲ ಪ್ರಕರಣ ತಿರುವನಂತಪುರದಲ್ಲಿ ದಾಖಲಾಗಿತ್ತು.
ಇದೇ ವೇಳೆ, ಯುವಕನ ನೇರ ಸಂಪರ್ಕಕ್ಕೆ ಬಂದ 35 ಮಂದಿಗೆ ಐಸೊಲೇಶನ್ ಇರುವಂತೆ ಸೂಚಿಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು, ಆತನ ಜೊತೆಗೆ ಬಂದಿದ್ದ ಪ್ರಯಾಣಿಕರಿಗೆ ಪ್ರತ್ಯೇಕ ಇದ್ದು ನಿಗಾ ವಹಿಸುವಂತೆ ವೈದ್ಯರು ಸೂಚಿಸಿದ್ದಾರೆ.
ಯುವಕ ದುಬೈನಿಂದ ಬಂದಿದ್ದ ವಿಮಾನದಲ್ಲಿ 191 ಪ್ರಯಾಣಿಕರಿದ್ದರು. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ 15, ಉಡುಪಿ ಜಿಲ್ಲೆಯ 6, ಕಾಸರಗೋಡು ಜಿಲ್ಲೆಯ 13, ಕಣ್ಣೂರಿನ ಒಬ್ಬ ಸೇರಿದಂತೆ ಮಂಗಳೂರು ವಿಮಾನ ನಿಲ್ದಾಣದ ಇಮಿಗ್ರೇಶನ್ ವಿಭಾಗದ ಅಧಿಕಾರಿಯೊಬ್ಬರನ್ನು ಐಸೊಲೇಶನ್ ಇರುವಂತೆ ದ.ಕ. ಜಿಲ್ಲಾ ಆರೋಗ್ಯ ಇಲಾಖೆಯಿಂದ ಸೂಚನೆ ನೀಡಲಾಗಿದೆ.
ಇದೇ ವೇಳೆ, ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಮಂಕಿ ಪಾಕ್ಸ್ ಶಂಕಿತರ ಚಿಕಿತ್ಸೆಗಾಗಿ ಪ್ರತ್ಯೇಕ ಐಸೊಲೇಶನ್ ವಾರ್ಡ್ ಆರಂಭಿಸಲಾಗಿದೆ. ಒಂದು ತಿಂಗಳ ಮೊದಲೇ ವಾರ್ಡ್ ಆರಂಭಿಸಲಾಗಿದೆ. ವಿದೇಶಗಳಿಂದ ಆಗಮಿಸುವ ಪ್ರಯಾಣಿಕರ ಮೇಲೆ ನಿಗಾ ಇಡಲಾಗಿದೆ. ಇದಕ್ಕಾಗಿ ಏರ್ಪೋರ್ಟ್ ನಲ್ಲಿ ಕಟ್ಟುನಿಟ್ಟಾಗಿ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಡಾ.ಅಶೋಕ್ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ