|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಿರು ಕಾದಂಬರಿ: ದೊಂಬಿ- ಭಾಗ 8

ಕಿರು ಕಾದಂಬರಿ: ದೊಂಬಿ- ಭಾಗ 8



ಒಂದು ದಿನ ಸಂಜೆಯ ಹೊತ್ತು ಬಸ್ಯ ಕಂಠ ಪೂರ್ತಿ ಕುಡಿದು ಬಂದಿದ್ದ, ತನ್ನ ಕೋಪವನ್ನೆಲ್ಲ ಹೊರ ಹಾಕುವಂತೆ  "ಏ ಮಾಲಿ...ಏನಲೇ ನಿಂದು ಕತಿ? ಯಾರನ್ನೋ ಮದ್ವಿ ಆಗಿ ಮೆರೀತಿಯಲ್ಲೇ ....ನಿನ್ ಕಾಲ್ ಮುರಿಯ... ಓ .. ಕಣ್ಣ....ಓ ಕರಿ ಮೂತಿ” ಎಂದು ಮೂದಲಿಸಿದರೆ ಅವನು ಎದ್ದು ಬಂದು ಎರಡು ತದುಕಿದರೆ ಅವನಿಗೂ ತೃಪ್ತಿ....ಬಸ್ಯ ಈ ರೀತಿ ಒದೆ ತಿಂದು ಹೋದದ್ದು ಎಷ್ಟು ಬಾರಿಯೋ. ಮಾಲತಿಗೆ ಈಗ ಏಳು ತಿಂಗಳು, ಹೆರಿಗೆ ಊರಲ್ಲಿ ಮಾಡಿಸುವ ಎಂದು ಅವನು ಹೇಳಿದರೆ ಅರ್ಧ ಮನಸ್ಸಿನಿಂದಲೇ ಒಪ್ಪಿದ್ದಳು ಮಾಲತಿ, ಅವಳಿಗೆ ಬೆಂಗಳೂರು ಎಂದರೆ ಏನೋ ಪ್ರೀತಿ, ಆದರೆ ಇಲ್ಲಿ ಆ ಪರಿಸ್ಥಿತಿಯಲ್ಲಿ ನನ್ನನ್ನು ಕಾಣುವವರು ಯಾರೂ ಇಲ್ಲ. ಇದ್ದೊಬ್ಬ ಅಣ್ಣ ಏನೋ ದ್ವೇಷ ಸಾಧಿಸುವ ತರ ಇರುವಾಗ ಅವನನ್ನು ಹೇಗೆ ನಂಬಲಿ? ಆದರೆ ಕಣ್ಣ ಊರು ಸೇಲಂ ಆದರೆ ಅವನ ಎಲ್ಲಾ ಬಳಗವು ಅಲ್ಲೇ ಇರುವುದು, ಅವರೆಲ್ಲ, ಕಪ್ಪು ಮೈಬಣ್ಣವಾದರೆ ಮಾಲತಿ ತಕ್ಕ ಮಟ್ಟಿಗೆ ಬಿಳಿ ಅಲ್ಲದೆ ರೂಪಸಿ, ಕಣ್ಣನ ಬಳಗದವರಿಗೆಲ್ಲ ಮಾಲತಿ ಎಂದರೆ ಮೆಚ್ಚು. ಪ್ರೀತಿ ವಿಶ್ವಾಸದಿಂದಲೇ ಮಾತನಾಡಿಸುತ್ತಾರೆ.


ಕಣ್ಣ ಮಾಲತಿಯನ್ನು ರೈಲಿನಲ್ಲಿ ಊರಿಗೆ ಕರೆದುಕೊಂಡು ಬಂದ. ಬಂದ ಒಂದೆರಡು ದಿನದಲ್ಲೆ ಬೆಂಗಳೂರಿನಲ್ಲಿ ಬಹಳ ಗಲಾಟೆ. ತಮಿಳುನಾಡಿಗೆ ನೀರುಬಿಡುತ್ತಿಲ್ಲವೆಂದು ತಮಿಳರ ಅಕ್ರೋಶ. ನಮಗೇ ಕುಡಿಯಲು ಕೃಷಿಗೆ ನೀರಿಲ್ಲ, ಬಿಡಲಾರೆವು ಎಂದು ಇವರು, ಅಂತೂ ಬೆಂಗಳೂರಿನಲ್ಲಿ ಶಾಂತಿಯುತ ಮೆರವಣಿಗೆ ಸಭೆಗಳು ಕ್ರಮೇಣ ಲೂಟಿ, ದೊಂಬಿಗೆ ತಿರುಗಿ ಅದು ಕನ್ನಡ ಮತ್ತು ತಮಿಳರ ಗಲಾಟೆಯೇ ಆಗಿತ್ತು. ಮಲ್ಲೆಶ್ವರ ಮತ್ತು ರಾಜಾಜಿನಗರಗಳು ಮೂಲತಹ ಕನ್ನಡಿಗರು ಅಧಿಕವಿರುವ ಪ್ರದೇಶ. ಆದರೂ ಅಲ್ಲಿ ಕೆಲವು ತಮಿಳರ ಗುಡಿಸಲುಗಳು ಇವೆ, ಅಂಥಹದರಲ್ಲಿ ಕಣ್ಣನದೂ ಒಂದು ಗುಡಿಸಲು. ಬಸ್ಯನಿಗೆ ಇದೇ ಛಾನ್ಸ್ ತನ್ನ ದ್ವೇಷ ಸಾಧಿಸಲು, ಕೆಲವು ಕಿಡಿಗೇಡಿಗಳ ಜೊತೆಗೆ ಗುಂಪಿನಲ್ಲಿ ಬಂದು ಕಣ್ಣ ವಾಸವಿದ್ದ ವಠಾರವನ್ನು ಪುಡಿಮಾಡಿದ. ಬೀಗ ಹಾಕಿದ್ದ ಕಣ್ಣನ ಮನೆ ಪುಡಿಪುಡಿಯಾಗಿತ್ತು.

ಭಾಗ-7 ಓದಲು ಇಲ್ಲಿ ಕ್ಲಿಕ್ಕಿಸಿ

 ಮಲ್ಲೇಶ್ವರದಲ್ಲಿ ಹಲವು ತಮಿಳರ ದಿನಸಿ ಮಂಡಿಗಳೂ ಲೂಟಿಯಾಗಿದ್ದವು. ಆ ಸಂದರ್ಭದಲ್ಲಿ ತಮ್ಮ ಊರುಗಳಿಗೆ ಹೋದ ತಮಿಳರು ಮತ್ತೆ ವಾಪಾಸು ಬಂದಿದ್ದು ಆರುತಿಂಗಳ ನಂತರವೇ. ಹಾಗೆ ದೊಂಬಿ ಗಲಾಟೆಗಳು ಕಡಿಮೆಯಾದಾಗ ತನ್ನ ಮನೆಯನ್ನು ನೋಡಲೆಂದು ಕಣ್ಣ ಒಂದು ಬಾರಿ ಬಂದಿದ್ದ. ಆದರೆ ಅಲ್ಲಿ ಆತನ ಮನೆಯ ಸೊತ್ತುಗಳೆಲ್ಲವೂ ಪುಡಿಪುಡಿಯಾಗಿದ್ದವು, ಟಿವಿ, ಫ್ಯಾನ್, ದಿನಸಿ ಸಾಮಾನು, ಅಡಿಗೆ ಪಾತ್ರೆ ಪರಿಕರಗಳೆಲ್ಲವೂ ಪುಡಿಪುಡಿಯಾಗಿದ್ದವು. ಸರಕಾರಿ ಅಧಿಕಾರಿಗಳು ಪ್ರತಿಯೊಭ್ಭರಿಗೂ ಆದ ನಷ್ಟ ಅಂದಾಜು ಮಾಡಿ ಲೆಕ್ಕ ಹಾಕಿ ಪರಿಹಾರ ಕೊಡಿಸುತ್ತೇವೆಂದು ಹೋದವರು ಮತ್ತೆ ಆ ಕಡೆ ತಲೆ ಹಾಕಿಲ್ಲ.

ಕಣ್ಣ ಮತ್ತು ಮಾಲತಿ ಈಗ ಸೇಲಂ ನಲ್ಲಿ ಖಾಯಂ ಆಗಿ ವಾಸ್ತವ್ಯ ಹೂಡಿದ್ದಾರೆ. ಮಾಲತಿ ಗಂಡು ಮಗುವಿಗೆ  ತಾಯಿ, ಮಗನಿಗೆ ಷಣ್ಮುಗನೆಂದು ಹೆಸರಿಟ್ಟರೆ ಅವರೆಲ್ಲ ಕರಿಯುವುದು ಶಾನು... ಅದು ಅಪಭ್ರಂಶವಾಗಿ ಮತ್ತೆ ಈಗ ಬರಿ ಸಾನು ಮಾತ್ರ ಉಳಿದಿದೆ. ವರ್ಷಗಳು ಉರುಳಿದವು. ಷಣ್ಮುಗ ಈಗ ಬಾಲ್ಯಾವಸ್ಥೆ ಕಳೆದು ಯುವಕನಾಗುತ್ತಿದ್ದಾನೆ. ಕಲಿಯುವುದರಲ್ಲಿ ಆಟ ಓಟಗಳಲ್ಲೂ ಮುಂದು. ಸುಂದರ ಮೈಕಟ್ಟು ಮತ್ತು ಧೃಢಕಾಯ, ಅಲ್ಲಿಯ ಕಪ್ಪು ತೊಗಲಿನ ಜನರ ಮಧ್ಯೆ ಈ ಎಣ್ಣೆಗೆಂಪಿನ ಸುಂದರ ಯುವಕ ಎದ್ದು ಕಾಣುವ ರೂಪ, ಅಷ್ಟೂ ಮಾತ್ರವಲ್ಲ ತುಂಬ ಚುರುಕು ಮತ್ತು ಎಲ್ಲ ಕೆಲಸ ಕಾರ್ಯಗಳಲ್ಲೂ ಮುಂದು. ಕನ್ನಡ ಅಲ್ಪ ಸ್ವಲ್ಪ ಮಾತನಾಡಬಲ್ಲ. ಅವನಿಗೆ ತಾಯಿ ಎಂದರೆ ಬಹು ಪ್ರೀತಿ. ತನ್ನೆಲ್ಲರನ್ನೂ ತೊರೆದು ತಾನು ಮೆಚ್ಚಿದವನನ್ನು ನಂಬಿ ಬಂದ ಅವಳ ಕಥೆಯನ್ನು ಮನೆಯ ಇತರ ಹಿರಿಯ ಹೆಂಗಸರು ಹೇಳುತ್ತಿದ್ದರೆ ಅವನಿಗೆ ಅಮ್ಮನ ಮೇಲೆ ಎಲ್ಲಿಲ್ಲದ ಮಮತೆ. ಹಾಗೆ ಅವನಿಗೆ ಬೆಂಗಳೂರಿನ ಮೇಲೆಯೂ ಪ್ರೀತಿ. ಒಂದೆರಡು ಬಾರಿ ಕಣ್ಣ ಬೆಂಗಳೂರಿಗೆ ಬಂದಾಗ ತಾನೂ ಬಂದಿದ್ದ. ಇಲ್ಲಿಯ ವಿವಿಧ ತರದ ಜನರ ಜೀವನ ವೈಖರಿಯನ್ನು, ಭಾಷೆ, ಕಟ್ಟಡ ರಸ್ತೆಗಳನ್ನು ನೋಡಿ ಇಲ್ಲಿಯ ಜನ ಎಷ್ಟು ಅದೃಷ್ಟವಂತರೆಂದು ಕರುಬಿದ್ದಿದೆ. ನಾನು ದೊಡ್ಡವನಾದಮೇಲೆ ಇಲ್ಲಿ ಕೆಲಸಮಾಡುತ್ತೇನೆ ಎಂಬ ಬಾವನೆ ಅವನ ಮನಸ್ಸಿನಲ್ಲಿ ಬಂದಿದ್ದು ವಿಶೇಷವೇನಲ್ಲ. ಬಸ್ಯ ಆ ದೊಂಬಿಯ ದಿನಗಳಿಂದ ಕಾಣೆಯಾದವನು ಮತ್ತೆ ರಾಜಾಜಿನಗರದ ಕಡೆ ತಲೆ ಹಾಕಿದ್ದಿಲ್ಲ. ಅವನು ಕೆಲಸ ಹುಡುಕುತ್ತ ಫೀಣ್ಯದ ಕಡೆಗೆ ಹೋದವನು ಅಲ್ಲೇ ಯಶವಂತಪುರ ನೆಲಮಂಗಲವೆಂದು ಆ ಕಡೆಯೆ ಇದ್ದ. ಅಲ್ಲದೆ ಅವನಿಗೆ ಮಾಲತಿ ಮತ್ತು ಕಣ್ಣ ಈಗ ಎಲ್ಲಿ ಇದ್ದಾರೆ ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಪರಿಜ್ಞಾನ ಇದ್ದಂತಿಲ್ಲ. ತಾನು ತನ್ನ ಕೆಲಸ ಕುಡಿತ ಇವುಗಳಲ್ಲೇ ದಿನ ತಳ್ಳುತ್ತಿದ್ದ.

(ಶಂಕರ ಭಟ್)

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

0 Comments

Post a Comment

Post a Comment (0)

Previous Post Next Post