ಮಂಗಳೂರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ನಿಷೇಧಿತ ಸ್ಯಾಟಲೈಟ್ ಫೋನ್ ಸಿಗ್ನಲ್ ಪತ್ತೆ?

Upayuktha
0


ಮಂಗಳೂರು: ಕರಾವಳಿ ಪ್ರದೇಶದಲ್ಲಿ ಉಗ್ರಗಾಮಿ, ನಕ್ಸಲ್ ಚಟುವಟಿಕೆ ನಡೆಯುತ್ತಿದೆಯೇ? ಅಂತಹ  ಸಂದೇಹಗಳಿಗೆ ಈಗ ಮತ್ತೆ ಜೀವ ಬಂದಿದೆ. ಕರಾವಳಿ ಭಾಗದಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಸಿಗ್ನಲ್ ಈಗಾಗಲೇ ಹಲವು ಬಾರಿ ಮತ್ತೆಯಾಗಿದೆ. ಇದೀಗ ಮತ್ತೆ ಸ್ಯಾಟಲೈಟ್ ಫೋನ್ ಸಿಗ್ನಲ್ ಪತ್ತೆಯಾಗಿದೆ.


ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಉಗ್ರಗಾಮಿಗಳ ಸ್ಲೀಪರ್ ಸೆಲ್‌ಗಳು ಕಾರ್ಯಾಚರಿಸುತ್ತಿವೆ ಎಂಬ ಗುಮಾನಿ ನಡುವೆ ಸ್ಯಾಟಲೈಟ್ ಫೋನ್ ಬಳಕೆ ಮತ್ತೆ ಮತ್ತೆ ಪತ್ತೆಯಾಗುತ್ತಿರುವುದು ಪೊಲೀಸ್ ಇಲಾಖೆಗೆ ಆತಂಕ ಮೂಡಿಸಿದೆ. 6 ತಿಂಗಳ ಬಳಿಕ ಕರಾವಳಿಯ 3 ಕಡೆಗಳಲ್ಲಿ ಹಾಗೂ ಚಿಕ್ಕಮಗಳೂರಿನ ದಟ್ಟಾರಣ್ಯದಲ್ಲಿ ನಿಷೇಧಿತ ಸ್ಯಾಟಟೈಟ್ ಫೋನ್‌ಗಳ ಸಿಗ್ನಲ್ ಪತ್ತೆಯಾಗಿದೆ. ಮೇ 23ರಿಂದ 29ರ ವರೆಗೆ ಮಂಗಳೂರಿನ ಎರಡು ಕಡೆ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಯ ದಟ್ಟಾರಣ್ಯದಲ್ಲಿ ಸ್ಯಾಟಟೈಟ್ ಫೋನ್ ಬಳಕೆ ಮಾಡಿರುವುದನ್ನು ಕೇಂದ್ರ ಗುಪ್ತಚರ ಇಲಾಖೆ ಪತ್ತೆ ಮಾಡಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.


ಈ ಹಿನ್ನೆಲೆಯಲ್ಲಿ ರಾಜ್ಯ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಸ್ಥಳಕ್ಕೆ ತೆರಳಿ ತನಿಖೆ ಕೈಗೆತ್ತಿಕೊಂಡಿದೆ. ಕಳೆದ 10 ದಿನಗಳ ಅವಧಿಯಲ್ಲಿ ನಾಲ್ಕು ಕಡೆಗಳಿಂದ ಸ್ಯಾಟಲೈಟ್ ಫೋನ್ ಸಿಗ್ನಲ್ ಸಂಪರ್ಕಿಸಿರುವುದು ಪತ್ತೆಯಾಗಿದೆ. ಈ ಬಾರಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ- ಶಿರಸಿಯ ಮಧ್ಯ ಇರುವ ದಟ್ಟಾರಣ್ಯ ಪ್ರದೇಶದಲ್ಲಿ, ಮಂಗಳೂರು ನಗರ ಹೊರಭಾಗದ ನಾಟೆಕಲ್, ಕುಳಾಯಿ ಹಾಗೂ ಚಿಕ್ಕಮಗಳೂರಿನ ಕಡೂರು-ಬೀರೂರು ನಡುವಿನ ಅರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಸಿಗ್ನಲ್ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಈಗ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಸಿಗ್ನಲ್ ಪತ್ತೆಯಾದ ಪ್ರದೇಶಗಳಿಗೆ ತೆರಳಿ ತನಿಖೆ ಕೈಗೊಂಡಿದ್ದಾರೆ.


ಭಾರತದಲ್ಲಿ ಸ್ಯಾಟಲೈಟ್ ಫೋನ್‌ಗಳ ಸಾರ್ವಜನಿಕ ಬಳಕೆಗೆ ಅನುಮತಿ ಇಲ್ಲ. ಭದ್ರತಾ ಸಂಸ್ಥೆಗಳ ಅತ್ಯುನ್ನತ ಅಧಿಕಾರಿಗಳಿಗೆ, ಇಸ್ರೋದಂತಹ ವರಿಷ್ಠ ವೈಜ್ಞಾನಿಕ ಸಂಸ್ಥೆಗಳ ಕೆಲವೇ ಕೆಲವು ಉನ್ನತಾಧಿಕಾರಿಗಳಿಗೆ ಮಾತ್ರವೇ ಇಂತಹ ಫೋನ್‌ಗಳ ಬಳಕೆಗೆ ಅನುಮತಿ ಇದೆ. ಅದೂ ಸಹ ದೇಶದ ಭದ್ರತೆಯ ವಿಚಾರಕ್ಕೆ ಸಂಬಂಧಿಸಿದಂತೆ ಮಾತ್ರ ಬಳಕೆ ಮಾಡಬಹುದಾಗಿದೆ.


ಆದರೆ ಈಗ ಸ್ಯಾಟಲೈಟ್‌ ಫೋನ್‌ ಸಿಗ್ನಲ್‌ಗಳು ಪತ್ತೆಯಾಗಿರುವ ಪ್ರದೇಶಗಳು ಯಾವುದೇ ಭದ್ರತಾ ಏಜೆನ್ಸಿಗಳ ಅಧೀನದಲ್ಲಿ ಇರುವಂಥದ್ದಲ್ಲ. ಹಾಗಾದರೆ ಯಾರು ಈ ಫೋನ್‌ಗಳನ್ನು ಬಳಕೆ ಮಾಡುತ್ತಿದ್ದಾರೆ ಎಂಬುದೇ ಗುಮಾನಿಗೆ ಕಾರಣವಾಗಿದೆ. ಸತ್ಯಾಂಶ ತನಿಖೆಯಿಂದ ಹೊರಬರಬೇಕಾಗಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top