ವಿವಿ ಕಾಲೇಜು: 5 ವರ್ಷಗಳ ಕಾಲ ಪ್ರಾಂಶುಪಾಲ ಹುದ್ದೆ ಸೇರಿದಂತೆ 28 ವರ್ಷ ಸೇವೆ ಸಲ್ಲಿಸಿದ ಡಾ. ಉದಯ್ ಕುಮಾರ್ ನಿವೃತ್ತಿ
ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 5 ವರ್ಷಗಳ ಕಾಲ ಪ್ರಾಂಶುಪಾಲ ಹುದ್ದೆ ಸೇರಿದಂತೆ 28 ವರ್ಷ, ಒಟ್ಟಾರೆ 39 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ದುಡಿದು ವಯೋನಿವೃತ್ತಿ ಹೊಂದಿದ ಡಾ. ಉದಯ ಕುಮಾರ್ ಎಂ ಎ ಇರ್ವತ್ತೂರು ಅವರನ್ನು ಇತ್ತೀಚೆಗೆ ಭಾವಪೂರ್ಣವಾಗಿ ಬೀಳ್ಕೊಡಲಾಯಿತು.
ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಡಾ. ಉದಯ ಕುಮಾರ್ ಎಂ ಎ ಇರ್ವತ್ತೂರು ಅವರ ಸಾಧನೆಯನ್ನು, ವಿಶೇಷವಾಗಿ ಅವರು ಪ್ರಾಂಶುಪಾಲರಾಗಿದ್ದ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು, ಅಪರೂಪದ ನೆನಪುಗಳನ್ನು ಮೆಲುಕುಹಾಕಿದ ಅವರ ಹಿರಿಯ ಸಹೋದ್ಯೋಗಿಗಳು ಕಾಲೇಜಿನ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಯನ್ನು ನೆನಪಿಸಿಕೊಂಡರಲ್ಲದೆ, ವಿದ್ಯಾರ್ಥಿಗಳ ಓದಿನ ಬಗ್ಗೆ ಅವರಿಗಿದ್ದ ಕಾಳಜಿಯನ್ನು ಮೆಚ್ಚಿಕೊಂಡರು. ಸಹೋದ್ಯೋಗಿಗಳಿಗೆ ಅವರು ಕಷ್ಟಕಾಲದಲ್ಲಿ ಮಾಡಿದ ಸಹಾಯವನ್ನೂ ಹಲವರು ಕೃತಜ್ಞತೆಯಿಂದ ನೆನಪಿಸಿಕೊಂಡರು.
ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಸಹ ಪ್ರಾಧ್ಯಾಪಕ ಡಾ. ದಯಾನಂದ ನಾಯಕ್, ಕ್ರೀಡಾ ವಿಭಾಗದ ಡಾ. ಕೇಶವಮೂರ್ತಿ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ, ರಸಾಯನ ಶಾಸ್ತ್ರ ವಿಭಾಗದ ಡಾ.ಲಕ್ಷ್ಮಣ್, ಡಾ. ಉಷಾ, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಡಾ. ಯತೀಶ್ ಕುಮಾರ್, ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಡಾ. ಗಣಪತಿ ಗೌಡ, ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗದ ಡಾ. ಭಾರತಿ ಪ್ರಕಾಶ್, ಅರ್ಥಶಾಸ್ತ್ರ ವಿಭಾಗದ ಡಾ. ಜಯವಂತ ನಾಯಕ್, ಪ್ರಾಣಿಶಾಸ್ತ್ರ ವಿಭಾಗದ ಡಾ. ಕೆ ಎ ನಾಗರತ್ನ, ಹಿಂದಿ ವಿಭಾಗದ ಡಾ. ಸುಮಾ ಆರ್, ಕಂಪ್ಯೂಟರ್ ವಿಜ್ಞಾನ ವಿಭಾಗದ ಡಾ. ವೀರಭದ್ರಪ್ಪ, ಹಿರಿಯ ಲೆಕ್ಕಿಗ ಕೃಷ್ಣಯ್ಯ ಶೆಟ್ಟಿಗಾರ್, ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಡಾ. ರಾಜಲಕ್ಷ್ಮೀ ಎನ್ ಮೊದಲಾದವರು ಮಾತನಾಡಿದರು.
ಡಾ. ಉದಯ್ ಕುಮಾರ್ ಮಾತನಾಡಿ, 'ನಾನು' ಎಂಬುದಕ್ಕಿಂತ, ನಾವು ಜೊತೆಯಾಗಿ ಸಾಧಿಸಿದ್ದೇ ಹೆಚ್ಚು. ನನ್ನ ಆಡಳಿತಾವಧಿಯಲ್ಲಿ ವಿದ್ಯಾರ್ಥಿಗಳಿಗೆ ನೆರವಾಗಲು ಕೈಲಾದಷ್ಟು ಪ್ರಯತ್ನಿಸಿದ್ದೇನೆ” ಎಂದು ತಾವು ಪ್ರಾಂಶುಪಾಲರಾಗಿದ್ದ ಅವಧಿಯಲ್ಲಿ ಎಲ್ಲರೂ ನೀಡಿದ ಸಹಕಾರವನ್ನು ನೆನಪಿಸಿಕೊಂಡರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಅನಸೂಯ ರೈ, ನಿವೃತ್ತ ಪ್ರಾಂಶುಪಾಲರು ತಮ್ಮ ಅವಧಿಯಲ್ಲಿ ಕಾಲೇಜಿಗೆ ಹೊಸ ರೂಪ ನೀಡಿದ್ದಾರೆ, ಎಂದರು. ಕಾಲೇಜಿನ ವತಿಯಿಂದ ಡಾ. ಉದಯ್ ಕುಮಾರ್ ಎಂ ಎ- ಡಾ. ರಾಜಲಕ್ಷ್ಮೀ ಎನ್ ದಂಪತಿಯನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ವಾಣಿಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಸುಧಾ ಎನ್ ವೈದ್ಯ, ಕಛೇರಿ ಅಧೀಕ್ಷಕಿ ಭಾಗ್ಯಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಲತಾ ಎ ಪಂಡಿತ್ ಕಾರ್ಯಕ್ರಮ ನಿರೂಪಿಸಿದರು. ಭೌತಶಾಸ್ತ್ರ ವಿಭಾಗದ ಅರುಣಾ ಕುಮಾರಿ, ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಡಾ. ಗಣಪತಿ ಗೌಡ, ಪೂರ್ವತನ ಪ್ರಾಂಶುಪಾಲ ಡಾ. ಹರೀಶ ಎ ಸಹಕರಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ