ಇಂಧನವಿಲ್ಲದೆ ಮುಂದಕೆ ಚಲಿಸುವ
ಸೈಕಲ್ ಪ್ರಗತಿಯ ಚಕ್ರ!
ದುಡಿದುಣ್ಣುವ ಬಡವರ ಪಾಲಿಗೆ
ತೋರಿದೆ ಬದುಕುವ ಸೂತ್ರ!
ದೇಹದ ಕೊಬ್ಬನ್ನು ದಹಿಸಲು ಬೇಕಿದು
ಉಳ್ಳವರ ಮನೆಯ ಆಳಾಗಿ!
ದೂರದ ಯಾತ್ರೆಗೆ ನೆಮ್ಮದಿ ಬಯಕೆಗೆ
ಒಂಟಿ ಪಯಣಕೆ ಜೊತೆಯಾಗಿ!
ಪತ್ರಿಕೆ ಹಾಕುವ ಹುಡುಗನ ಬಿರುಸಿಗೆ
ಟ್ರಿಣ್ ಟ್ರಿಣ್ ಎನ್ನುವ ದನಿಯಾಗಿ!
ಮಕ್ಕಳು ಕಾಯುವ ಕಿಣಿ ಕಿಣಿ ನಾದದ
ಕ್ಯಾಂಡಿಯ ಸೈಕಲ್ ತಾನಾಗಿ!
ಪುಟಾಣಿ ಬಾಲರ ಅಂಗಳದಲ್ಲಿ
ಆಡಿಸಿ ನಗಿಸಲು ಉಪಯೋಗಿ!
ಹಳ್ಳಿಯ ಮಕ್ಕಳ ಶಾಲೆಗೆ ತಲುಪಿಸಿ
ಮೆರೆವುದು ಭಾಗ್ಯದ ಬೆಳಕಾಗಿ!
ಇಂತಹ ಸೈಕಲ್ ಬಳಸುವ ಎಲ್ಲರೂ
ಪರಿಸರ ಪ್ರೀತಿಯ ಕುರುಹಾಗಿ!
ಇಂಧನ ಉಳಿಸುವ ಆರೋಗ್ಯ ಗಳಿಸುವ
ತೆರದಲಿ ಪುಟ್ಟ ಹನಿಯಾಗಿ!!
-ವಿಶ್ವನಾಥ ಕುಲಾಲ್ ಮಿತ್ತೂರು