ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯಾಗಿ ಅವಿರೋಧ ಆಯ್ಕೆ ಮಾಡಿ: ಶಾಸಕ ಹರ್ಷವರ್ಧನ್ ಮನವಿ

Upayuktha
0

 



ನಂಜನಗೂಡು: ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನಾಗಿಸುವಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್ ಡಿಎ ಸರಕಾರವು ಸೂಕ್ತವಾದ ಮತ್ತು ದೃಢವಾದ ನಿರ್ಧಾರವನ್ನು ತೆಗೆದುಕೊಂಡಿದ್ದು, ಬಿಜೆಪಿಯ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್ ತತ್ವಕ್ಕೆ ತಕ್ಕಂತೆ ಈ ಆಯ್ಕೆ ನಡೆದಿದೆ ಎಂದು ನಂಜನಗೂಡು ಶಾಸಕ ಬಿ. ಹರ್ಷವರ್ಧನ್ ಹೇಳಿದ್ದಾರೆ.


ಈ ಕುರಿತು ಹೇಳಿಕೆ ನೀಡಿರುವ ಅವರು, ಸ್ವಭಾವತಃ ಒಟ್ಟಾಭಿಪ್ರಾಯ ಹೊಂದಿರುವ ಪಕ್ಷವು ಮಾತ್ರ  ಇಂತಹ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯ. ದ್ರೌಪದಿ ಮುರ್ಮು ಅವರು ಆಯ್ಕೆಯಾದರೆ ಸಾಂವಿಧಾನಿಕ ಉನ್ನತ ಹುದ್ದೆಯನ್ನು ಅಲಂಕರಿಸಿದ, ಬುಡಕಟ್ಟು ಸಮುದಾಯಕ್ಕೆ ಸೇರಿದ ಮೊದಲ ಮಹಿಳೆಯಾಗಲಿದ್ದಾರೆ. ಜೊತೆಗೆ ಭಾರತದ ಎರಡನೇ ಮಹಿಳಾ ರಾಷ್ಟ್ರಪತಿಯೂ ಆಗಲಿದ್ದಾರೆ. 75 ನೇ ವರ್ಷದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಇಂತಹ ನಿರ್ಧಾರ ತೆಗೆದುಕೊಂಡಿರುವ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಸ್ವತಂತ್ರ ಬಂದಮೇಲೆ ಆದಿವಾಸಿಗಳು ಅವಕಾಶ ವಂಚಿತರಾಗಿದ್ದರು, ಆದರೆ ಇಂದು ದ್ರೌಪತಿ ಮುರ್ಮು ಅವರಿಗೆ ಅವಕಾಶ ಮಾಡಿಕೊಟ್ಟಿರುವುದು ನನಗೆ ಬಹಳ ಸಂತೋಷವಾಗಿದೆ ಹಾಗೂ ಇದು ಹೆಮ್ಮೆಯ ವಿಚಾರ ಎಂದಿದ್ದಾರೆ.


ಸರ್ವ ಸಂಸದರೂ ಪಕ್ಷಗಳ ಗಡಿ ಮೀರಿ ಅವರನ್ನು ಬೆಂಬಲಿಸಿ ಎಂದು ವಿರೋಧಪಕ್ಷಗಳಿಗೆ ನಾನು ಮನವಿ ಮಾಡಿಕೊಳ್ಳುತ್ತೇನೆ. ಜುಲೈ 18 ರಂದು ಅವರು ಅವಿರೋಧವಾಗಿ ಆಯ್ಕೆಯಾಗುವಂತಾಗಬೇಕು. ಇದು ಮಹಿಳೆಯೊಬ್ಬರ ಸಾಮರ್ಥ್ಯವನ್ನು ಒಪ್ಪಿಕೊಳ್ಳಲು ಮತ್ತು  ಪ್ರಶಂಸಿಸಲು ಸರಿಯಾದ ಅವಕಾಶವಾಗಿದೆ.  ಸಾರ್ವಜನಿಕ ಜೀವನದಲ್ಲಿ ಅವರ ಅನುಭವವು ತುಂಬಾ ಪ್ರಭಾವಶಾಲಿಯಾಗಿದೆ. ಒಡಿಶಾ ಮೂಲದ ಅವರು ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಶಿಕ್ಷಕಿಯಾಗಿದ್ದರು. ನಂತರ ಪಂಚಾಯತ್ ಸದಸ್ಯರಾಗಿದ್ದರು, ಬಿಜೆಪಿ ಟಿಕೆಟ್ ಪಡೆದು ಎರಡು ಬಾರಿ ಶಾಸಕರಾಗಿದ್ದರು. ಬಿಜೆಪಿ -ಬಿಜೆಡಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರು ಮತ್ತು ನಂತರ ಜಾರ್ಖಂಡ್ನ ಮೊದಲ ಮಹಿಳಾ ರಾಜ್ಯಪಾಲರಾದರು. ಅವರ ವೈಯುಕ್ತಿಕ ಜೀವನದ ದುರಂತಗಳು ಅವರನ್ನು ಸಾರ್ವಜನಿಕ ಸೇವೆಯಿಂದ ಎಂದೂ ಹಿಂದೆಗೆಯುವಂತೆ ಮಾಡಲಿಲ್ಲ ಎಂದು ಹರ್ಷವರ್ಧನ್ ಪ್ರಶಂಸಿಸಿದ್ದಾರೆ.


ಮುರ್ಮು ಅವರು ದೀನದಲಿತರ ಕಲ್ಯಾಣಕ್ಕಾಗಿ ಶ್ರಮಿಸಲು ಸಮುದಾಯದ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಅವರು ಮಹಿಳೆಯರಿಗೆ ಮಾತ್ರವಲ್ಲ, ಪುರುಷರಿಗೆ ಸಹ ಆದರ್ಶ ಪ್ರಾಯರು ಎಂದೂ ಹೇಳಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top