ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಹತ್ತು ಲಕ್ಷ ಗಿಡಗಳ ನಾಟಿಗೆ ಚಾಲನೆ

Upayuktha
0


ಅರಣ್ಯ ಸಚಿವ ಉಮೇಶ್ ಕತ್ತಿ ಗಿಡಗಳಿಗೆ ನೀರೆರೆಯುವ ಮೂಲಕ ಹತ್ತು ಲಕ್ಷ ಗಿಡಗಳ ನಾಟಿಗೆ ಚಾಲನೆ ನೀಡಿದರು.

*ಅರಣ್ಯ ಸಚಿವರು ಗಿಡಗಳನ್ನು ವಿತರಿಸುತ್ತಿರುವುದು

* ವೃಕ್ಷ ಬಂಧನ, ಗಿಡಗಳನ್ನು ನೆಡುವುದು.


ಉಜಿರೆ: ದೇಶದಲ್ಲಿ ಇತರ ರಾಜ್ಯಗಳಿಗಿಂತ ಕರ್ನಾಟಕ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ರಾಜ್ಯವಾಗಿದೆ. ರಾಜ್ಯದಲ್ಲಿ 6,60,000 ಹೆಕ್ಟೇರ್ ಪ್ರದೇಶವನ್ನು ಡಿ ನೋಟಿಫಿಕೇಶನ್ ಮಾಡಿ ಕಂದಾಯ ಇಲಾಖೆಗೆ ನೀಡಿದ್ದು, ಅರಣ್ಯ ಇಲಾಖೆ 3,30,000 ಹೆಕ್ಟೇರ್‌ನಲ್ಲಿ ಗಿಡ-ಮರಗಳನ್ನು ಬೆಳೆಸಲು ಯೋಜನೆ ರೂಪಿಸಲಾಗಿದೆ ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ರಾಜ್ಯದಲ್ಲಿ ಹತ್ತು ಲಕ್ಷ ಹಣ್ಣಿನ ಗಿಡಗಳ ನಾಟಿ ಕಾರ್ಯಕ್ರಮಕ್ಕೆ ಗುರುವಾರ ಬೆಳ್ತಂಗಡಿ ತಾಲ್ಲೂಕಿನ ಬಡಕೋಡಿ ಗ್ರಾಮದ ಎರ್ಮೋಡಿ ಅರಣ್ಯ ಪ್ರದೇಶದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.


ಬೆಳಗಾವಿ, ಬಾಗಲಕೋಟೆ ಮತ್ತು ಬಿಜಾಪುರದಲ್ಲಿ 57,000 ಹೆಕ್ಟೇರ್ ಪ್ರದೇಶದಲ್ಲಿ ಬಿದಿರು ಬೆಳೆಸಲು ಉದ್ದೇಶಿಸಲಾಗಿದೆ.


ಕಳೆದ ವರ್ಷ ಕಾಡುಪ್ರಾಣಿಗಳ ಕಾಟದಿಂದ ರೈತರಿಗಾದ ನಷ್ಟಕ್ಕೆ ಸರ್ಕಾರದಿಂದ ಇಪ್ಪತ್ತು ಕೋಟಿ ರೂ. ನೆರವು ನೀಡಲಾಗಿದೆ ಎಂದು ಸಚಿವರು ತಿಳಿಸಿದರು.


ಮಾನವರು ಮತ್ತು ಪ್ರಾಣಿಗಳ ಮಧ್ಯೆ ಸಂಘರ್ಷ ತಡೆಯಲು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಆರಂಭಿಸಿದ ಯೋಜನೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಬಗ್ಯೆ ಅರಣ್ಯ ಇಲಾಖೆ ಪೂರ್ಣ ಸಹಕಾರ ನೀಡುತ್ತದೆ ಎಂದು ಭರವಸೆ ನೀಡಿದರು.


ಎಲ್ಲರೂ ಗಿಡ-ಮರಗಳನ್ನು ಬೆಳೆಸಿ, ರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಸುಸ್ಥಿತಿಯಲ್ಲಿ ಪ್ರಕೃತಿ-ಪರಿಸರವನ್ನು ಬಿಟ್ಟುಕೊಡುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದರು.


ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, “ಬದುಕು ಮತ್ತು ಬದುಕಲು ಬಿಡು” ಎಂಬುದು ಜೈನಧರ್ಮದ ಶ್ರೇಷ್ಠ ತತ್ವವಾಗಿದೆ. ನಾವೂ ಬದುಕಿ, ಇತರರೂ ಸುಖ-ಶಾಂತಿ, ನೆಮ್ಮದಿಯಿಂದ ಬದುಕಲು ಬಿಡಬೇಕು. ಪ್ರಾಣಿಗಳ ಮೊದಲ ಶತ್ರು ಮನುಷ್ಯನೆ ಆಗಿದ್ದಾರೆ. ಕಾಡಿನಲ್ಲಿ ಬೇಕಾದ ಆಹಾರ ಸಿಗದೆ ಅವುಗಳು ನಾಡಿಗೆ ಬರುತ್ತವೆ. ಆದುದರಿಂದ ಕಾಡಿನಲ್ಲಿ ಹಣ್ಣಿನ ಗಿಡ-ಮರಗಳನ್ನು ಬೆಳೆಸಿ ಅವುಗಳ ಫಲಗಳನ್ನು ಪ್ರಾಣಿಗಳಿಗೆ ಬಿಟ್ಟು ಬಿಡಲಾಗುವುದು. ಇದರಿಂದ ಕೃಷಿಗೆ ಪ್ರಾಣಿಗಳ ಉಪಟಳ ತಪ್ಪುತ್ತದೆ.


ಪೊಲೀಸರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಈಗ ಜನಸ್ನೇಹಿಯಾಗಿ ಪ್ರೀತಿ-ವಿಶ್ವಾಸದಿಂದ ಕೆಲಸ ಮಾಡುವುದರಿಂದ ಈ ಯೋಜನೆ ಯಶಸ್ವಿಯಾಗುತ್ತದೆ ಎಂದು ಹೆಗ್ಗಡೆಯವರು ಹೇಳಿದರು.


ಪ್ರಶಾಂತ ಪ್ರಕೃತಿ-ಪರಿಸರವನ್ನು ಪ್ರೀತಿಸಿ, ಗಿಡ-ಮರಗಳನ್ನು ಬೆಳೆಸಿ, ಫಲ-ಪುಷ್ಪಗಳನ್ನು ಪ್ರೀತಿಸಿ ಪರಿಸರಕ್ಕೆ ಹೊಂದಿಕೊಂಡು ನಾವು ಬದುಕಿದಾಗ ಪರಿಶುದ್ಧ ಆಮ್ಲಜನಕ ಎಲ್ಲರಿಗೂ ದೊರಕಿ ನಾವು ಆರೋಗ್ಯಪೂರ್ಣ ಜೀವನ ನಡೆಸಬಹುದು.


ದಕ್ಷಿಣ ಕನ್ನಡದಲ್ಲಿ ಉತ್ತಮ ಮಳೆ, ಫಲವತ್ತಾದ ಮಣ್ಣು ಹಾಗೂ ಹೆಚ್ಚು ಅರಣ್ಯ ಪ್ರದೇಶ ಇರುವುದರಿಂದ ಇಲ್ಲಿನ ಪ್ರಕೃತಿ-ಪರಿಸರ ಎಲ್ಲರಿಗೂ ಆಕರ್ಷಣೀಯವಾಗಿದೆ.


ಶಾಸಕ ಹರೀಶ್ ಪೂಂಜ ಮತ್ತು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಶುಭಾಶಂಸನೆ ಮಾಡಿದರು.


ಮಂಡ್ಯ ಜಿಲ್ಲೆಯ ಮಳವಳ್ಳಿಯ ಫಲಾನುಭವಿ ರಮೇಶ್, ಕೆ. ಮಾತನಾಡಿ ಕೆರೆಗಳ ಹೂಳೆತ್ತಿ ಆದ ಪ್ರಯೋಜನವನ್ನು ವಿವರಿಸಿ ಕೃತಜ್ಞತೆ ವ್ಯಕ್ತಪಡಿಸಿದರು.


ಶೀಲಾ ಉಮೇಶ್ ಕತ್ತಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಎಸ್. ನೆಟಲ್‍ಕರ್, ಉಪರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಪಡ್ಯಾರಬೆಟ್ಟದ ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಜೀವಂಧರ ಕುಮಾರ್, ಹೊಸಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರುಣಾಕರ ಪೂಜಾರಿ, ಸಂಪತ್ ಸಾಮ್ರಾಜ್ಯ ಶಿರ್ತಾಡಿ ಉಪಸ್ಥಿತರಿದ್ದರು.


ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಸ್ವಾಗತಿಸಿದರು. ನಿರ್ದೇಶಕರಾದ ಸತೀಶ್ ಶೆಟ್ಟಿ ಧನ್ಯವಾದವಿತ್ತರು. ವಿವೇಕ್ ಪಾೈಸ್ ಮತ್ತು ಯಶವಂತ್ ಕಾರ್ಯಕ್ರಮ ನಿರ್ವಹಿಸಿದರು.

ರಾಜ್ಯದ ವಿಭಜನೆ ಸೂಕ್ತ: ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಉಮೇಶ್ ಕತ್ತಿ, ಜನಸಂಖ್ಯೆಯ ಆಧಾರದಲ್ಲಿ ಕರ್ನಾಟಕವನ್ನು ಎರಡು ರಾಜ್ಯಗಳಾಗಿ ವಿಭಜಿಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಧಾನಿಯವರ ಆಶಯದಂತೆ 2024ರ ಚುನಾವಣೆ ಬಳಿಕ ಜನಸಂಖ್ಯೆಯ ಆಧಾರದಲ್ಲಿ ಕೆಲವು ರಾಜ್ಯಗಳನ್ನು ವಿಭಜನೆ ಮಾಡುವುದಕ್ಕೆ ತನ್ನ ಸಹಮತವಿದೆ ಎಂದು ಹೇಳಿದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top