ಕ್ಯಾಂಪಸ್ ಕಲರವ: ಅಂದು ಕಾಲೇಜಿಗೆ ರಜೆ ಎಂದು ಮೊದಲೇ ತಿಳಿದಿದ್ದರೆ?

Upayuktha
0

 



ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬ ಗಾದೆ ಹಿಂದಿನ ಕಾಲದಿಂದಲೂ ಪ್ರಚಲಿತದಲ್ಲಿದೆ. ಇತ್ತೀಚಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಮೈಸೂರಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಸಂಸ್ಕೃತಿ ಚಳವಳಿ 3 ರಲ್ಲಿ ಭಾಗವಹಿಸುವ ಅವಕಾಶ ನನಗೆ ಒದಗಿಬಂದಿತ್ತು. ಸುಮಾರು ಮೂರು ನಾಲ್ಕು ದಿನಗಳಿಂದ ಅಲ್ಲಿ ನಡೆಯುವ ಹಲವಾರು ಸ್ಪರ್ಧೆಗಳಿಗೆ ನಮ್ಮ ಕಾಲೇಜಿನ ಸುಮಾರು 40 ಮಂದಿ ವಿದ್ಯಾರ್ಥಿಗಳು ಸಜ್ಜಾಗುತ್ತಿದ್ದರು. ಪ್ರಯಾಣ ಬೆಳೆಸುವ ಕೊನೆಯ ದಿನ ಮುಸ್ಸಂಜೆ ಹೊತ್ತಿನ ತನಕ ತಯಾರಿಗಳು ನಡೆಯುತ್ತಿದ್ದು ನಂತರ ಮನೆಗೆ ಹೋಗಿ ಮಿಂದು ಎರಡು ರಾತ್ರಿ ಉಳಿದುಕೊಳ್ಳುವಷ್ಟು ಬಟ್ಟೆಬರೆಗಳನ್ನು ಎಲ್ಲಾ ಲಗೇಜಿಗೆ ತುಂಬಿಸಿ ರಾತ್ರಿ ಹೊತ್ತಿಗೆ ಕಾಲೇಜಿನ ಆವರಣದಲ್ಲಿ 40 ಮಂದಿ ಒಟ್ಟುಗೂಡಿ ಪ್ರಯಾಣ ಬೆಳೆಸುವುದರ ದಿನಚರಿಯನ್ನು ಚರ್ಚಿಸಿ, ಹೊರಡುವ ಮುನ್ನ ಒಂದೆರಡು ಸೆಲ್ಫಿಗಳನ್ನು ಕ್ಲಿಕ್ಕಿಸಿ, ನಾಲ್ಕೈದು ಘೋಷಣೆಗಳನ್ನು ಕೂಗಿ, ಬಸ್ಸು ಹತ್ತಿ ಕುಳಿತು ಹತ್ತೂರ ಒಡೆಯ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವರನ್ನು ಸ್ಮರಿಸಿ ಪ್ರಯಾಣವನ್ನು ಪ್ರಾರಂಭಿಸಿದೆವು.


ಸ್ವಲ್ಪ ಹೊತ್ತು ಒಂದೆರಡು ಹೆಜ್ಜೆ ಹಾಕಿದೆವು ಅಷ್ಟರಲ್ಲಿ ಆ ಕಡೆಯಿಂದ "ಮಕ್ಕಳೇ... ಎಲ್ಲರೂ ನಿಮ್ಮ ನಿಮ್ಮ ಸೀಟಿನಲ್ಲಿ ಕುಳಿತು ವಿಶ್ರಾಂತಿಯನ್ನು ಪಡೆಯಿರಿ....., ನಿದ್ದೆಯನ್ನು ಮಾಡಿ ಯಾಕೆಂದರೆ ನಾಳೆ ದಿನ ನಿಮ್ಮ ಆರೋಗ್ಯ ಹಾಳಾಗಬಾರದು, ಅಲ್ಲಿ ಹೋಗಿ ಸ್ಪರ್ಧೆಗಳಿಗೆ ನೀವು ಸಿದ್ಧರಾಗಬೇಕಾಗಿದೆ ಎಂಬ ದೃಷ್ಟಿಯಿಂದ ಹೇಳುತ್ತಿದ್ದೇನೆ"... ಎಂದು ಅರುಣ್ ಅಣ್ಣ ನ ಕೂಗು ಕೇಳಿಸಿತು. ಅವರ ಸಲಹೆಯಂತೆ ಎಲ್ಲರೂ ಅವರವರ ಸೀಟಿನಲ್ಲಿ ಕುಳಿತು ವಿಶ್ರಾಂತಿ ಪಡೆದೇವು. ಆದರೇನಂತೆ ಕಣ್ಣು ಮುಚ್ಚಿದರು ನಿದ್ರಾದೇವಿ ನಿದ್ದೆಯನ್ನು ಕರುಣಿಸಲೇ ಇಲ್ಲ. ಬಹುಶಃ ನಮ್ಮ ಸಂತೋಷದ ಹಾಹಾಕಾರದ ಕೂಗು, ಕುಣಿತ ನೋಡುವ ಆಸೆ ನಿದ್ರಾದೇವಿಗೆ ಇದ್ದಿರಬೇಕು ಅನಿಸುತ್ತದೆ. ದೂರದ ಪ್ರಯಾಣವೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಯುವಕರ ಪ್ರೇಮಿ ಎಂದೇ ಪ್ರಸಿದ್ಧಿಯನ್ನು ಪಡೆದ ಜಂಗಮವಾಣಿ ಯನ್ನು ಕೈಯಲ್ಲಿ ಹಿಡಿದು ಒಂದೆರಡು ಸೆಲ್ಫಿ ಅನ್ನು ಕ್ಲಿಕ್ಕಿಸಿ ಅದನ್ನು ಸ್ಟೇಟಸ್ ಹಾಕಿ ಮೆರೆದೆವು. ಅನಂತರ ಸ್ವಲ್ಪ ಅವರಿವರ ಜೊತೆ ಹರಟೆ ಹೊಡೆದು ಸುಮ್ಮನಾದೆವು          ಡ್ರೈವರಿಗಂತೂ ಹಾಡು ಇಲ್ಲದೆ ಬಸ್ಸು ಚಲಾಯಿಸಲು ಆಗುತ್ತಿರಲಿಲ್ಲ. ಅದು ಅವರಿಗೆ ಅಭ್ಯಾಸವಾಗಿ ಹೋಗಿತ್ತು. ಅದಕ್ಕಾಗಿ ಹಾಡನ್ನು ಹಾಕಿದ್ದರು. ಕೆಲವರಿಗೆ ಹಾಡುಕೇಳಿದರೆ ನಿದ್ದೆ ಬರುತ್ತಿಲ್ಲ. ಹಾಗಾಗಿ ಡ್ರೈವರಿಗೆ ನಿರಾಶೆಯಾಗಬಾರದು ಮಕ್ಕಳು ನಿದ್ದೆಗೆಡಬಾರದು ಎಂಬ ಉದ್ದೇಶದಿಂದ ಸ್ವಲ್ಪ ಮೆಲ್ಲ ಸ್ವರದಲ್ಲಿ ಹಾಡನ್ನು ಇಟ್ಟರು. ಸ್ವಲ್ಪ ದೂರ ಕಳೆದಾಗ ಡ್ರೈವರಿಗೆ ಪಾಪ ಅನಿಸಿತ್ತೋ ಏನೋ ಗೊತ್ತಿಲ್ಲಾ ಹಾಡು ನಿಲ್ಲಿಸಿ ಕ್ಲೀನರ್ ಜೊತೆ ಹರಟೆ ಹೊಡೆಯುತ್ತಾ ಬಸ್ಸು ಚಲಾಯಿಸಿದರು.


ಹಿಂದೆ ತಿರುಗಿಯೊಮ್ಮೆ ನೋಡಿದೆ ಎಲ್ಲರಿಗೂ ಕುಂಭಕರ್ಣನ ನಿದ್ದೆ !ಆದರೆ ನನ್ನ ಸೀಟಿನವರಿಗೆ ಮತ್ತು ಪಕ್ಕದ ಸೀಟಿನಲ್ಲಿ ಕುಳಿತಿದ್ದವರಿಗೆ ಮಾತ್ರ ನಿದ್ದೆ ಬರಲಿಲ್ಲ. ಅದಾಗಲೇ ಸುಮಾರು ಹನ್ನೆರಡು ಗಂಟೆ ಕಳೆದಿತ್ತು. ದೂರದಲ್ಲಿ  ಬಿದಿರಿನಿಂದ ತಯಾರಿಸಿದ  ಒಂದು ಅಂಗಡಿ ಕಾಣಿಸಿತು. ನಮ್ಮ ಬಸ್ಸ್ ಡ್ರೈವರ್ ಬಸ್ಸ್ ನಿಲ್ಲಿಸಿ ಬಿಸಿಬಿಸಿ ಚಾಯ ಕುಡಿಯಲು ಹೋದರು. ಅವರ ಇಂದಿನಿಂದ ಎಲ್ಲಾ ಹುಡುಗರು ಒಬ್ಬೊಬ್ಬರಾಗಿ ಬಸ್ಸು ಇಳಿದರು. ಅಲ್ಲಿ ಸ್ವಲ್ಪ ವಿಶ್ರಮಿಸಿ ಪುನಃ ಬಸ್ಸ್ ಹತ್ತಿ ಹೊರಟೆವು. ಅದಾದ ನಂತರ ಬಸ್ಸು ನಿಲ್ಲಿಸಿದ್ದು ಅರಮನೆ ನಗರಿ ಮೈಸೂರು ವಿಶ್ವವಿದ್ಯಾನಿಲಯದಲ್ಲೇ. ಬೆಳಗ್ಗೆ ಸುಮಾರು 4 ಗಂಟೆ ಹೊತ್ತಿಗೆ ಅಲ್ಲಿಗೆ ತಲುಪಿದೆವು. ಅಲ್ಲಿ ನಮ್ಮ ಉಳಿವಿಕೆಗಾಗಿ ವಸತಿ ಗೃಹದ ವ್ಯವಸ್ಥೆ ಮಾಡಲಾಗಿತ್ತು. ನಮ್ಮನ್ನು ಅಲ್ಲಿ ಬಿಟ್ಟು ಹುಡುಗರು ಬೇರೆ ವಸತಿ ಗೃಹಕ್ಕೇ ವಿಶ್ರಾಂತಿಗೆ ಹೊರಟು ಹೋದರು.  ಹುಡುಗಿಯರನ್ನು ಮಾತ್ರ ಕರೆದುಕೊಂಡು ಹೋಗುವಾಗ ಏನಪ್ಪಾ ಇದು ಇಲ್ಲಿ ಏನಾಗುತ್ತಿದೆ? ಗೊತ್ತುಗುರಿಯಿಲ್ಲದ ಮುಖಗಳು ಅರೆಬರೆ ಶೈಲಿಯ ಮಾತುಗಳು ಇದೆಲ್ಲವನ್ನು ನೋಡಿ ಇಷ್ಟೊತ್ತು ನಮಗೆ ಧೈರ್ಯಕ್ಕೆ ಕಾಲೇಜಿನ ಹುಡುಗರು ಇದ್ದರು ಇವಾಗ ನಾವೇ ಇರಬೇಕಲ್ಲ ಅಂತ ಮನಸ್ಸಿನಲ್ಲಿ ಅಂದುಕೊಂಡ ಒಳಗೆ ಹೋದೆವು.


ಹುಡುಗರೆಲ್ಲ ಭಯಪಡಬೇಡಿ ಏನಾದರೂ ಸಮಸ್ಯೆ ತೊಂದರೆಯಾದಲ್ಲಿ ತಕ್ಷಣ ಒಂದು ಕರೆ ಮಾಡಿ ಎಂದು ಧೈರ್ಯ ಹೇಳಿದರು. ಕೈಯಲ್ಲಿ ಭಾರವಾಗಿದ್ದ ಲಗೇಜು. ಬೆನ್ನಿಗೆ ಒಂದು ಚೀಲ. ಅಲ್ಲದೆ ನಿದ್ದೆಗೂರುವ ಕಣ್ಣುಗಳು ಇವೆಲ್ಲವನ್ನು ಹೊತ್ತುಕೊಂಡು, ಅನುಭವಿಸಿಕೊಂಡು, 2- 3 ಮಹಡಿಗೆ ಮೆಟ್ಟಿಲು ಹತ್ತಿದೆವು. ಅಷ್ಟರಲ್ಲಿ ನಮ್ಮ ರೂಮಿಗೆ ಹೋಗಿ ತಲುಪಿದೆವು. ಎಲ್ಲರೂ ರೂಮ್ ಒಳಗೆ ಹೋಗಿ ಕೈಕಾಲು ಮುಖ ತೊಳೆದು ಆಯಾಸದಿಂದ ನೆಲದಲ್ಲಿ ಬಟ್ಟೆ ಹಾಸಿ ಮಲಗಿಕೊಂಡರು. ಆದರೆ ನನಗೆ ಸ್ನಾನ ಮಾಡದೇ ನಿದ್ದೆಯೂ ಬರಲಿಲ್ಲ. ಅದಲ್ಲದೆ ಬದಲಾದ ಜಾಗ ಬೇರೆ, ಯಾರಿಗೆ ತಾನೇ ನಿದ್ದೆ ಬರುವುದು ಹೇಳಿ... ಅಷ್ಟರಲ್ಲಿ ಗಂಟೆ ಸುಮಾರು ನಾಲ್ಕು ಮುಕ್ಕಾಲು ಕಳೆದಿತ್ತು. ನಂತರ ಸುಮಾರು ಒಂದು ಗಂಟೆಗಳ ಕಾಲ ನಿದ್ದೆ ಬರಲಿಲ್ಲ. ಒಮ್ಮೆ ಕಿಟಕಿಯತ್ತ ಕಣ್ಣು ಹಾಯಿಸಿದೆ ಮಂಜು ಮಂಜಿನ ವಾತಾವರಣ, ಮೈಯೆಲ್ಲಾ ಚಳಿಯಿಂದ ನಡುಗುತ್ತಿತ್ತು. ಬೇಗ ಎದ್ದು ಹಲ್ಲುಜ್ಜಿ,  ಬಿಸಿ ಬಿಸಿ ನೀರಿನಿಂದ ಸ್ನಾನ  ಮಾಡಿ ಆದಮೇಲೆ ಏನೋ ಒಂಥರಾ ಉಲ್ಲಾಸ ನೆಮ್ಮದಿ. ಒಮ್ಮೆ ಅಬ್ಬ ಎನಿಸಿತು.ಬೇಗ ಬೇಗನೆ ಎಲ್ಲರೂ ಸಿದ್ದರಾದೆವು.


ಬೆಳಗಿನ ಉಪಹಾರ ಮಾಡಿ, ಆ ದಿನದ ಎಲ್ಲಾ ಕಾರ್ಯಕ್ರಮಗಳನ್ನು ಮುಗಿಸಿ ಪುನಹ ಸುಮಾರು 11 ಗಂಟೆಗೆ ವಸತಿಗೃಹಕ್ಕೆ ಬಂದು ಸ್ನಾನ ಮಾಡಿ ರಾತ್ರಿ ಎರಡು ಗಂಟೆ ವರೆಗೆ ಕೂತು ಒಂದು ಲೇಖನವನ್ನು ಬರೆದೆನು. ಆ ದಿನ ಬೆಳಗ್ಗೆ ಅಲ್ಲಿ ಬಿಡುಗಡೆಯಾಗುವ ನಮ್ಮ ಕಾಲೇಜಿನ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳ ವಿಕಾಸ ಪತ್ರಿಕೆಗೆ ಅಲ್ಲಿ ನಡೆದ ಕಾರ್ಯಕ್ರಮದ ಬಗ್ಗೆ  ಬರೆದು ಕಳಿಸಿದೆ. ನಂತರ ಮಲಗಿ ಪುನಹ ಬೆಳಗ್ಗೆ ಎದ್ದು, ಸ್ವಯಂ ಕೆಲಸಗಳನ್ನು ಮುಗಿಸಿ, ತಿಂಡಿ ತಿಂದು, ಅವತ್ತಿನ ಸ್ಪರ್ಧೆಗಳಲ್ಲಿ ಎಲ್ಲರೂ ಭಾಗವಹಿಸಲು ಸಿದ್ದರಾದೆವು. ಕೊನೆಗೆ ಸಂಜೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಅದಾದ ಬಳಿಕ ಬೇರೆ ಕಡೆಯಿಂದ ಬಂದವರೆಲ್ಲರೂ ಹೊರಟರು. ನಾವು ಮಾತ್ರ ಅಲ್ಲ ಉಳಿದುಕೊಂಡೆವು ನಾವು ಅಲ್ಲಿಂದ ಬೇಗ ಹೊರಟರೆ ನಮ್ಮ ಊರಿಗೆ ಮಧ್ಯರಾತ್ರಿ ತಲುಪುತ್ತಿದ್ದೆವು. ಆಗ ಅವರವರ ಮನೆಗೆ ಹೋಗಲು ಕಷ್ಟವಾಗುತ್ತಿತ್ತು ಎನ್ನುವ ದೃಷ್ಟಿಯಿಂದ ಸ್ವಲ್ಪ ತಡವಾಗಿ ಅಲ್ಲಿಂದ ಹೊರಡುವುದಾಗಿ ನಿರ್ಧರಿಸಿದೆವು. ಹಾಗಾಗಿ ಎಲ್ಲರೂ ಫೋಟೊ ತೆಗೆಯುವುದರಲ್ಲಿ ಮಗ್ನರಾಗಿದ್ದರು. ರಾತ್ರಿ ಅಲ್ಲೇ ಊಟ ಮುಗಿಸಿದ್ದೂ ಆಯಿತು. ಪಯಣ ನಮ್ಮ ಊರಿಗೆ ಸಾಗಿತ್ತು.


ಅಷ್ಟರಲ್ಲಿ ಬಂತೊಂದು ಮೆಸೇಜು "ಮಕ್ಕಳೇ ನಾಳೆ ಕಾಲೇಜಿಗೆ ಬಸವ ಜಯಂತಿಯ ಪ್ರಯುಕ್ತ ರಜೆಯನ್ನು ಪ್ರಾಂಶುಪಾಲರು ಘೋಷಿಸಿದ್ದಾರೆ, ಆದ್ದರಿಂದ ಯಾರೂ ನಾಳೆ ಕಾಲೇಜಿಗೆ ಬರುವ ಅಗತ್ಯವಿಲ್ಲ" ಎಂಬ ಸಂದೇಶವನ್ನು ನೋಡಿ ಛೇ ಸ್ವಲ್ಪ ಮೊದಲೇ ತಿಳಿದಿದ್ದರೆ ಮರುದಿನವೇ ಹೊರಡಬಹುದಿತ್ತು ಅನಿಸಿತು. ಬಸ್ಸಿನಲ್ಲಿ ಇಡೀ ದಿನ ನಿದ್ದೆ ಮಾಡದೆ ಹಾಡಿನೊಂದಿಗೆ ಕುಣಿದಾಡಿದೆವು. ಯಾಕೆಂದರೆ ಇನ್ನೊಮ್ಮೆ ಆ ಕ್ಷಣ ಅನುಭವಿಸುವುದಕ್ಕೆ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ ಆದರೆ ಆ ಕ್ಷಣ ಕುಷಿಯಿಂದ ಅನುಭವಿಸಬೇಕು ಎಂಬ ಕಾರಣಕ್ಕೆ. ಕೆಲವರು ಬೊಬ್ಬೆ ಹೊಡೆದು ಸ್ವರವೇ ಹೋಗಿತ್ತು ಸುಮಾರು  ಗಂಟೆಗಳ ಕಾಲ ಕುಣಿದಾಡಿದೆವು ನಂತರ ಎಲ್ಲರೂ ಮಲಗಿದರು. ಆದರೆ ನಾವು  ಆರೇಳು ಮಂದಿ ನಿದ್ದೆ ಮಾಡದೇ, ನಮ್ಮ ನಮ್ಮ ಅನಿಸಿಕೆಗಳು, ಆಸೆ-ಆಕಾಂಕ್ಷೆಗಳನ್ನು, ಹೀಗೆ ಅನೇಕ ವಿಷಯಗಳ ಬಗ್ಗೆ ಒಬ್ಬರಿಂದೊಬ್ಬರು ಮಾತನಾಡುತ್ತಾ ವಿಷಯ ಹಂಚಿಕೊಂಡೆವು.


ಅಷ್ಟರಲ್ಲಿ ಆಗೋ ಬಂತು ವಿವೇಕಾನಂದ ಮಹಾವಿದ್ಯಾಲಯದ ದ್ವಾರ. ಅಯ್ಯೋ ದೇವ್ರೆ ಇಷ್ಟು ಬೇಗ ತಲುಪಿದೆವೋ ಎಂಬ ಕೊರಗು. ಎರಡು ದಿನಗಳ ಕಾಲ ಒಟ್ಟಿಗೆ ಗುಂಪು ಸೇರಿ ಮಾತನಾಡುತ್ತಿದ್ದವರೆಲ್ಲ ಹೀಗೆ ಇನ್ನು ಮಾತನಾಡಲು ಸಿಗುವುದಿಲ್ಲವಲ್ಲ. ಕಾಲೇಜಿನಲ್ಲಿ ಸಿಕ್ಕರೂ ಎಲ್ಲರೂ ತಮ್ಮ ತಮ್ಮ ತರಗತಿಯ ಕೆಲಸದಲ್ಲಿ ಮಗ್ನರಾಗಿರುತ್ತಾರೆ ಎಂಬು ಚಿಂತೆ ಎಲ್ಲರ ಮನಸ್ಸಿನಲ್ಲಿ ಇತ್ತು. ಮೈಸೂರಿಗೆ ಹೋಗುವಾಗ ಎಷ್ಟು ಹೋದರೂ ಮೈಸೂರು ತಲುಪುತ್ತಲೇ ಇರಲಿಲ್ಲ ಆದರೆ ಬರುವಾಗ ಇಷ್ಟು ಬೇಗ ತಲುಪಿತು ಅಂದುಕೊಂಡೆವು. ಆದರೇನಂತೆ ಏನೇ ಆಗಲಿ ನಾವು ನೋಡಿದ ಮೈಸೂರಿನ ಆ ಸೊಬಗು ಅಲ್ಲಿ ನಾವು ಒಗ್ಗಟ್ಟಿನಿಂದ ಕಳೆದ ಎರಡು ದಿನದ ನೆನಪು ಎಂದೆಂದಿಗೂ ಅಚ್ಚಳಿಯದೇ ನೆನಪಿನಲ್ಲಿ ಸದಾ ನಮ್ಮೊಂದಿಗೆ ಜೀವಂತವಾಗಿರುತ್ತದೆ ಎಂಬುದಂತೂ ಸತ್ಯ.


-ದೀಪ್ತಿ ಅಡ್ಡಂತ್ತಡ್ಕ

ಪತ್ರಿಕೋದ್ಯಮ ವಿದ್ಯಾರ್ಥಿನಿ

ವಿವೇಕಾನಂದ ಮಹಾವಿದ್ಯಾಲಯ ನೆಹರೂ ನಗರ ಪುತ್ತೂರು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top