||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಿಂದೂಗಳಲ್ಲಿ ಯಾಕೆ ಒಗ್ಗಟ್ಟಿಲ್ಲ ..??

ಹಿಂದೂಗಳಲ್ಲಿ ಯಾಕೆ ಒಗ್ಗಟ್ಟಿಲ್ಲ ..??


ಹಿಂದೂಗಳಲ್ಲಿ ಒಗ್ಗಟ್ಟಿಲ್ಲ ಎನ್ನುವುದು ವಾಸ್ತವ. ಯಾಕೆ ಒಗ್ಗಟ್ಟಿಲ್ಲ ಎನ್ನುವುದು ಪ್ರಶ್ನೆ. ಯಾಕೆ ಒಗ್ಗಟ್ಟು ಬೇಕು ಎನ್ನುವುದು ಉತ್ತರ. ಹಿಂದೂ ಧರ್ಮವೆಂದು ನಾವು ಏನನ್ನು ನಂಬಿಕೊಂಡು ಬಂದಿರುವೆವೊ ಅದಕ್ಕೆ ಯಾವುದೇ ಆದಿಯೆಂಬುದು ಕಾಣಲಾರೆವು. ಮಾನವ ದಿನದಿಂದ ದಿನಕ್ಕೆ ನಾಗರಿಕತೆಯನ್ನು ಕಲಿಯುವುದರ ಜತೆಗೆ ಜೀವನ ಧರ್ಮವು ತನ್ನಿಂದ ತಾನೆ ಮೈಗೂಡತೊಡಗಿತು. ಒಗ್ಗಟ್ಟಿನಿಂದ ವ್ಯವಹಾರ ಮಾಡುವ ಅನಿವಾರ್ಯತೆ ಆಗ ಇರಲಿಲ್ಲ. ಹೇಗೆಂದರೆ ಒಂದು ಮನೆಯಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಅದು ಕೆಲವು ತಾಸುಗಳೋ ಅಥವಾ ಕೆಲವು ದಿನಗಳೋ ಇರಬಹುದು. ಆದರೆ ಅದು ಪರಸ್ಪರ ಕೊಲ್ಲುವಷ್ಟು ಅಥವಾ ವೈರತ್ವವನ್ನು ಶಾಶ್ವತವಾಗಿ ಉಳಿಸುವಷ್ಟು ಬೆಳೆಯುತ್ತಿರಲಿಲ್ಲ. ಅನಿವಾರ್ಯತೆ ಇದ್ದಲ್ಲಿ ಮನೆ ಬೇರೆಯಾಗಬಹುದು ಊರು ಬಿಡಬಹುದು. ಆದರೂ ಒಗ್ಗಟ್ಟಿನ ಪ್ರಶ್ನೆ ಬರುತ್ತಿರಲಿಲ್ಲ. 


ರಾಮಾಯಣದ ಕಾಲದಿಂದಲೂ ಚತುರ್ವರ್ಣಗಳಿದ್ದವೇ ಹೊರತು ವರ್ಣ ವರ್ಣಗಳೊಳಗೆ ದ್ವೇಷ ಅಸೂಯೆಗಳೆಂಬ ಅಪಸವ್ಯಗಳಿರಲಿಲ್ಲ. ಜಾತಿಗಳು ಅದೆಷ್ಟೇ ಇದ್ದರೂ ಎಲ್ಲರೂ ನಂಬುವ ದೇವರು ಮಾತ್ರ ಒಂದೇ ಆಗಿತ್ತು. ವಿಷ್ಣು, ಈಶ್ವರ, ಗಣಪತಿ, ದುರ್ಗೆ ಎಂಬಂಥ ಬೇರೆ ಬೇರೆ ದೇವತೆಗಳಿದ್ದರೂ ಅವೆಲ್ಲವೂ ಎಲ್ಲ ವರ್ಣದವರೂ ಆರಾಧಿಸುವವುಗಳೇ ಆಗಿದ್ದುದರಿಂದ ಒಬ್ಬನ ನಂಬಿಕೆ ಇನ್ನೊಬ್ಬನನ್ನು ಕೆರಳುವಂತೆ ಮಾಡುತ್ತಿರಲಿಲ್ಲ. ಕೊಲ್ಲುವಂತೆ ಪ್ರೇರೇಪಿಸುತ್ತಿರಲಿಲ್ಲ. ಒಗ್ಗಟ್ಟಿಲ್ಲದಿದ್ದರೆ ಬದುಕಿಲ್ಲವೆಂಬ ಭಾವ ಇರಲಿಲ್ಲ. ಹಾಗಾದರೆ ಒಗ್ಗಟ್ಟೇ ಇರಲಿಲ್ಲವೇ ಎಂದಾಗ ಖಂಡಿತ ಇತ್ತು. ಆದರೆ ಅದು ತಮ್ಮ ತಮ್ಮ ರಾಜನಿಗೆ ವಿಧೇಯರಾಗಿ ವರ್ತಿಸುವ ಸೇನೆಯೊಳಗೆ ಮಾತ್ರ ಹೆಚ್ಚಾಗಿ ಕಾಣಿಸುತ್ತಿತ್ತು. ಅಲ್ಲಿ ಯುದ್ಧ ಸೋತರೂ ಗೆದ್ದರೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿರಲಿಲ್ಲ. ರಾಜ ಯಾರೇ ಆದರೂ ಪ್ರಜೆಗಳಿಗೆ ಕೆಲವು ಕಾನೂನುಗಳಲ್ಲಿ ವ್ಯತ್ಯಾಸ ಕಾಣಬಹುದೇ ಹೊರತು ದೇವರು, ಧರ್ಮದಲ್ಲಿ ಸಮಸ್ಯೆ ಇರುತ್ತಿರಲಿಲ್ಲ. ಆದ್ದರಿಂದ ಅಲ್ಲಿ ಕೂಡ ಒಗ್ಗಟ್ಟಿನ ಅವಶ್ಯಕತೆ ಇರಲಿಲ್ಲ. ಕೆಲವು ಸಂದರ್ಭಗಳಲ್ಲಿ ರಾಜರುಗಳು ಬದಲಾದರೂ, ಯುದ್ಧಗಳೇ ನಡೆದರೂ, ಅದು ರಾಜ ರಾಜರುಗಳ ನಡುವಿನ ವ್ಯವಹಾರವೇ ಹೊರತು ಸಾಮಾನ್ಯ ಪ್ರಜೆ ಏಕಪ್ರಕಾರವಾಗಿ ಬದುಕುತ್ತಿತ್ತು ಯುದ್ಧಗಳ ಅರಿವಿಲ್ಲದೆಯೇ. ಎಲ್ಲ ಮಾನವರ ಧರ್ಮವು ಒಂದೇ ಆಗಿದ್ದುದರಿಂದ ಮತಾಂತರವಾಗಲಿ, ಆಮಿಷಗಳಾಗಲಿ ಇರಲಿಲ್ಲ. ಇನ್ನು ಸ್ವಭಾವದಲ್ಲಿ ಭೇದಗಳಿದ್ದವು ಸಾತ್ವಿಕ, ರಾಜಸ, ತಾಮಸವೆಂದು. ಆದರೂ ಅವರೆಲ್ಲರು ನಂಬುವ ದೇವರ ವಿಚಾರದಲ್ಲಿ ಯಾವುದೇ ಭೇದಗಳಿರಲಿಲ್ಲ. ಆದ್ದರಿಂದ ಅಲ್ಲಿ ಕೂಡ ಒಗ್ಗಟ್ಟು ಮುಖ್ಯವಾಗಿರಲಿಲ್ಲ.  


ಯಾವಾಗ ವಿದೇಶದ ದಾಳಿಗಳಿಂದ ಭಾರತ ತತ್ತರಿಸತೊಡಗಿತೋ ಆಗ ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಕಾಣಲಾರಂಭಿಸಿತು. ಯಾಕೆಂದರೆ ವಿದೇಶಗಳಿಂದ ಬಂದಂಥ ದಾಳಿಕೋರರ ಧರ್ಮ, ದೇವರು, ಸ್ವಭಾವ ಎಲ್ಲವೂ ಭಾರತೀಯರಿಗೆ ಅಪರಿಚಿತವಾಗಿತ್ತು ಮಾತ್ರವಲ್ಲ ಅವರ ಕ್ರೌರ್ಯ ಕೂಡ ಅಸಹನೀಯವಾಗಿತ್ತು. ಅಲ್ಲಿವರೆಗೆ ಭಾರತೀಯರ ರಾಜರುಗಳಲ್ಲೇ ಹಲವಾರು ಯುದ್ಧಗಳಾಗುತ್ತಿದ್ದರೂ ಯಾವುದೇ ನಾಗರಿಕರಿಗೆ, ಶ್ರದ್ಧಾ ಕೇಂದ್ರಗಳಿಗೆ, ಕೃಷಿ ಭೂಮಿಗಳಿಗೆ, ಸ್ತೀಯರಿಗೆ, ಮಕ್ಕಳಿಗೆ, ವೃದ್ಧರಿಗೆ ಯಾವುದೇ ರೀತಿಯ ಹಾನಿಗಳಾಗುತ್ತಿರಲಿಲ್ಲ. ಒಂದು ರೀತಿಯ ಧರ್ಮ ಯುದ್ಧವೇ ನಡೆಯುತ್ತಿತ್ತು. ಆದರೆ ವಿದೇಶಿ ದಾಳಿಗಳು ಪೈಶಾಚಿಕತೆಯನ್ನೂ ನಾಚಿಸುವ ರೀತಿಯಲ್ಲಿ ಘಟಿಸತೊಡಗಿದಾಗ ಭಾರತೀಯರು ಈ ರೀತಿಯ ಕ್ರೌರ್ಯಗಳಿಗೆ ಹೊಂದಿಕೊಳ್ಳಲು ಇಂದಿಗೂ ಕಷ್ಟವಾಗುತ್ತಿರುವುದಾದರೆ ಭಾರತೀಯರಲ್ಲಿ ಒಗ್ಗಟ್ಟಿಲ್ಲದಿದ್ದರೂ ಮಾನವೀಯತೆ ಎನ್ನುವುದು ಅದೆಷ್ಟು ರಕ್ತಗತವಾಗಿದೆ ಎಂದು ಕಾಣಬಹುದು.


ವಿದೇಶಿ ಆಕ್ರಮಣಗಳು ಅದರಲ್ಲೂ ಮೊಘಲ್ ಆಕ್ರಮಣಗಳು, ಬ್ರಿಟೀಷ್ ಆಕ್ರಮಣಗಳು ಯಾವುದೇ ಸಿದ್ಧಾಂತಗಳಿಲ್ಲದಿದ್ದರೂ ಬರಿದೇ ಒಗ್ಗಟ್ಟಿನ ಫಲದಿಂದಾಗಿಯೇ ಸಫಲವಾಗುತ್ತಿದ್ದುದರಿಂದ ವಿದೇಶಿಗರು ಭಾರತೀಯರನ್ನು ಒಗ್ಗಟ್ಟಿನ ಬಲದಿಂದ ಆಕ್ರಮಿಸಿದರೆ ಮಟ್ಟ ಹಾಕಬಹುದೆಂದು ಪರಿಗಣಿಸಿದರು. ಮತ್ತು ಅದರಲ್ಲಿ ಯಶಸ್ವಿಯೂ ಆಗತೊಡಗಿದರು. ಭಾರತೀಯರಿಗೆ ಬರಿದೆ ಒಗ್ಗಟ್ಟಿನಲ್ಲಿ ಇಷ್ಟೊಂದು ಬಲವಿದೆ ಎಂದು ಅರಿವಾದಾಗ ಬಹಳಷ್ಟು ಬೆಲೆ ತೆರಬೇಕಾಗಿ ಬಂದದ್ದು ಮಾತ್ರ ಇತಿಹಾಸ. ಸಹಜವಾಗಿಯೇ ಒಂದೊಂದೇ ಅರಸರು ಈ ರಾಕ್ಷಸ ಕ್ರೌರ್ಯಕ್ಕೆ ಬಲಿಯಾಗುತ್ತ ಹೋದರು. ಅದರ ಜತೆಯಲ್ಲಿ ಬಲಾತ್ಕಾರದ ಮತಾಂತರಗಳೂ ಅಸಂಖ್ಯಾತವಾಗತೊಡಗಿದಾಗ ಹಿಂದೂ ಜನಾಂಗ ಜರ್ಝರಿತವಾದದ್ದು ಮಾತ್ರ ಕಟು ಸತ್ಯ. ಅದರಿಂದ ಇಂದಿಗೂ ಹೊರಬರಲಾಗದಿದ್ದದ್ದು ಇನ್ನೂ ನಮಗೆ ಒಗ್ಗಟ್ಟಿನ ಬೆಲೆ ಗೊತ್ತಾಗಲಿಲ್ಲವೆಂಬುದಕ್ಕೆ ಸಾಕ್ಷಿ. ಇವತ್ತು ನಾವು ಹೇಳಿಕೊಳ್ಳಬಹುದು ಹಿಂದೂಗಳು ಬಹುಸಂಖ್ಯಾತರು ಇರುವುದರಿಂದ ನಾವು ಇನ್ನೂ ಕೂಡ ಬಲಿಷ್ಠರಾಗಿದ್ದೇವೆ ಎಂದು. ಆದರೆ ಅದು ಎಷ್ಟು ಹಾಸ್ಯಾಸ್ಪದವೆಂದರೆ ಅದು ಊಹಿಸಲೂ ಕಷ್ಟ. ಹೇಗೆಂದರೆ ನಾವು ಹಿಂದೂಗಳು ಎಂಬ ಭಾವದಲ್ಲಿ ಬದುಕುವುದು ಎರಡನೇಯ ವಿಚಾರ. ಮೊದಲ ಪ್ರಾಶಸ್ತ್ಯ ಜಾತಿಗೇ. ಹಿಂದೂ ಎಂಬ ಧರ್ಮದ ಅಡಿಯಲ್ಲಿ ಸಾವಿರಾರು ಜಾತಿಗಳಿರುವಾಗ,  ಎಲ್ಲರೂ ಅದರಿಂದ ಹೊರಬರಲಾಗದೇ ಇರುವಾಗ ಒಗ್ಗಟ್ಟಿನ ಮಾತೇ ಅಪ್ರಸ್ತುತ. ಇವತ್ತು ಏನಾಗಿದೆ ಎಂದರೆ ಒಗ್ಗಟ್ಟಿನ ಬಲದಿಂದ ಆದಂಥ ಜಾತಿಗಳಿಗೆ ಹಿಂದೂಗಳ ಒಳಗಿರುವ  ಯಾವ ಜಾತಿಗಳೂ ಪ್ರತಿಸ್ಫರ್ಧಿಗಳಲ್ಲ.


ನಮಗೆ ಇನ್ನೂ ಜಾತಿ ಎಂಬುದು ಸ್ವಭಾವಕ್ಕೆ, ಉದ್ಯೋಗಕ್ಕೆ ಸಂಬಂಧಪಟ್ಟದ್ದು ಎಂಬುದು ಅರ್ಥವಾಗಲೇ ಇಲ್ಲ.  ಸ್ವಭಾವವೋ ಇನ್ನೇನೋ ಅಂತು ನಾವು ಜಾತಿಗಳನ್ನು ಸೃಷ್ಟಿ ಮಾಡಿ ಆಗಿದೆ ಅಥವಾ ಆ ಚಕ್ರದಲ್ಲಿ ಸಿಕ್ಕಿಕೊಂಡಾಗಿದೆ. ಅಷ್ಟು ಬೇಗ ಅದರಿಂದ ಹೊರಬರಲಾಗದು ಒಪ್ಪೋಣ. ಆದರೆ ಜಾತಿಗಿಂತಲೂ ಈ ಜಾತಿಗಳಿಗೂ ಹಿರಿದಾದ ಹಿಂದೂ ಧರ್ಮ ಮುಖ್ಯ ಅದಕ್ಕೆ ನಾವು ಜಾತಿಯ ಚೌಕಟ್ಟನ್ನು ಕಟ್ಟಿ ಸಂಕುಚಿತಗೊಳಿಸಬಾರದೆಂಬ ಭಾವವೇ ನಿರ್ಣಾಯಕವೆಂದು ಅರಿಯಬೇಕು. ನಮ್ಮಲ್ಲಿ ಇವತ್ತು ಏನಾಗಿದೆ ಎಂದರೆ ಯಾರೋ ಒಬ್ಬನಿಗೆ ಅನ್ಯಾಯವಾದರೆ, ಅಪಘಾತವಾದರೆ, ಸಾಂಸಾರಿಕ ತೊಂದರೆಗಳಾದರೆ ಮೊದಲಿಗೆ ನಮ್ಮ ಪ್ರಶ್ನೆ ಆತನ ಜಾತಿ ಯಾವುದು ಎಂದು. ಅದು ಗೊತ್ತಾದಾಗ ಆತ ಹಿಂದುವಾದರೂ ತನ್ನ ಜಾತಿಯವನಲ್ಲವೆಂದು ಅರಿವಾದಾಗ ನಮ್ಮ ಮುಕ್ಕಾಲಂಶ ಸಮಸ್ಯೆ ಪರಿಹಾರವಾದಂತೆಯೇ. ಆಮೇಲೆ ಆತನ ಮೇಲೆ ಅನುಕಂಪ ತೋರುವೆವಾದರೂ ಸಕ್ರಿಯ ಪಾತ್ರವಿಲ್ಲ. ( ಆದರೆ ಇತ್ತೀಚಿನ ದಿನಗಳ ಬೆಳವಣಿಗೆಗಳಲ್ಲಿ ಇಂತಹ ಮನೋಭಾವವು ಬದಲಾಗುತ್ತಿರುವುದು ಆಶಾದಾಯಕ) 


ಇಂದು ಮತದಾನದ ವೇಳೆಯಲ್ಲಿ ನಮಗೆ ಇದರ ಪೂರ್ಣ ಅರಿವಾಗುತ್ತದೆ. ಅಲ್ಪಸಂಖ್ಯಾತರು ಎನಿಸಿಕೊಂಡಿರುವ ಮುಸ್ಲಿಮರು ಇರುವುದು ಶೇಕಡಾ ಇಪ್ಪತ್ತರಷ್ಟು. ಆದರೆ ಹಿಂದೂ ಧರ್ಮದಲ್ಲಿ ಯಾವುದೇ ಒಂದು ಜಾತಿ ಶೇಕಡಾ ಇಪ್ಪತ್ತರಷ್ಟಿಲ್ಲ. ಉದಾಹರಣೆಗೆ ಬ್ರಾಹ್ಮಣರು ಶೇಕಡಾ ಎರಡು ಆದರೆ ಇತರ ಸಾವಿರಾರು ಜಾತಿಗಳು ಶೇಕಡಾ ಎಂಬ ಸಂಖ್ಯೆಯನ್ನು ಇಪ್ಪತ್ತಕ್ಕಿಂತ ಮೇಲೆತ್ತುವುದೇ ಇಲ್ಲ. ಅಲ್ಲಿಗೆ ನಾವು ಬಹುಸಂಖ್ಯಾತ ಹಿಂದುಗಳಾದರೂ ಅಲ್ಪ ಸಂಖ್ಯಾತ ಜಾತಿಯವರೆಂದು ಒಪ್ಪಿಕೊಳ್ಳಲೇಬೇಕು. ಅದೇರೀತಿ ವಿದೇಶಗಳಿಂದ ಬಂದಂಥ ಆಕ್ರಮಣಕಾರರಿಗೆ ಅಥವಾ ಆ ಮತಗಳಿಗೆ ಒಗ್ಗಟ್ಟನ್ನು ಬಿಟ್ಟರೆ ಬೇರೆ ಅಸ್ತಿತ್ವವೇ ಇಲ್ಲವೆಂದು ಅವರು ಚೆನ್ನಾಗಿ ಅರಿತಿದ್ದರಿಂದ ಒಗ್ಗಟ್ಟಿನ ಮೂಲಮಂತ್ರವನ್ನು ಅವರು ಯಾವ ಕಾಲಕ್ಕೂ ಬಿಟ್ಟುಕೊಡುವುದಿಲ್ಲ. ಒಂದು ವೇಳೆ ಹಿಂದೂಗಳಂತೆ ಒಗ್ಗಟ್ಟೆಂಬುದನ್ನು ಸಡಿಲಿಸಿದರೆ ಈ ಧರ್ಮಗಳು ಒಂದೇ ವರ್ಷದಲ್ಲಿ ಹೇಳಹೆಸರಿಲ್ಲದಂತಾಗುವುದೂ ಅಷ್ಟೇ ಸ್ಪಷ್ಟ. ಆದ್ದರಿಂದ ವಿದೇಶಿ ಆಕ್ರಮಣಗಳು ಭಾರತೀಯರಿಗೆ ಒಗ್ಗಟ್ಟಿನ ಮಹತ್ವವನ್ನು ತಿಳಿಸಿವೆ ಮಾತ್ರವಲ್ಲ ಬದುಕಿಯೂ ತೋರಿಸಿವೆ ಎಂದೇ ಹೇಳಬೇಕು.


ಸಂಶೋಧಕ ಪ್ರವೃತ್ತಿ ಇದ್ದರೆ, ಕಲಿಯುವ ಮನಸ್ಸಿದ್ದರೆ, ತಮ್ಮ ತಮ್ಮ ದೌರ್ಬಲ್ಯಗಳನ್ನು ಒಪ್ಪಿಕೊಳ್ಳುವ ಮನಸ್ಸಿದ್ದರೆ ಇಂತಹ ಆಕ್ರಮಣಗಳಲ್ಲಿಯೂ ಕಲಿಯುವಂಥ ಪಾಠಗಳಿರುತ್ತವೆ ಎಂಬುದಕ್ಕೆ ಭರತ ಭೂಮಿಯೇ ಸಾಕ್ಷಿ. ಮತದಾನದ ವೇಳೆಯಲ್ಲಿ ಬರಿದೆ ಇಪ್ಪತ್ತು ಶೇಕಡಾ ಮತಗಳೇ ನಿರ್ಣಾಯಕವಾಗುತ್ತಿರುವಾಗ ನಾವು ಬಹುಸಂಖ್ಯಾತರೆಂದು ಬೀಗುವುದಕ್ಕೆ ವ್ಯಾವಹಾರಿಕವಾಗಿ ಬೆಲೆಯೇ ಇಲ್ಲದ ವಿಷಯವಾಗದೇ? ಇಲ್ಲಿ ಏನು ಅರ್ಥವಾಗುತ್ತದೆ ಎಂದರೆ ಎಂಭತ್ತು ಶೇಕಡಾ ಹಿಂದೂಗಳು ಕೂಡ ಒಗ್ಗಟ್ಟಿಲ್ಲದಿದ್ದರೆ ಇಪ್ಪತ್ತು ಶೇಕಡಾದಷ್ಟಿರುವುದಕ್ಕಿಂತಲೂ ಕೆಳಹಂತದಲ್ಲಿರುತ್ತಾರೆ ಎನ್ನುವುದು ಸ್ಪಷ್ಟವಾದಂತೆಯೇ.


ಮತ್ತೊಂದು ವಿಚಾರವೆಂದರೆ ಹಿಂದೂಗಳು ಅನ್ಯ ಮತೀಯರನ್ನು ಗೌರವಿಸಿ ಸ್ಥಾನ ಮಾನ ಕೊಟ್ಟಷ್ಟು ಅನ್ಯ ಮತೀಯರು ಹಿಂದೂಗಳನ್ನು ಅಥವಾ ಹಿಂದೂ ಧರ್ಮವನ್ನು ಗೌರವಿಸದಿದ್ದುದೂ ಒಪ್ಪಿಕೊಳ್ಳದಿದ್ದುದೂ ಹಿಂದೂಗಳಿಗೆ ಹಿನ್ನಡೆ ಎನ್ನಬಹುದು. ಹಿಂದೆ ಮುಂದೆ ಹೇಗಿದ್ದರೂ ನಿರ್ಣಾಯಕ ಹಂತದಲ್ಲಿ ಒಗ್ಗಟ್ಟೇ ಕೈ ಹಿಡಿಯುವುದು ಎಂಬುದನ್ನು ಅರ್ಥೈಸಿಕೊಂಡಾಗಲೇ ಹಿಂದೂ ಧರ್ಮ ಉಳಿಯಬಹುದು. ಒಗ್ಗಟ್ಟಿರಬೇಕು ಎಂದಾಕ್ಷಣ ಗಲಾಟೆ ದೊಂಬಿಗಳಲ್ಲಿ ತೊಡಗಬೇಕೆಂದಲ್ಲ, ಆದರೆ ನಮ್ಮ ಮೇಲೆ ದೌರ್ಜನ್ಯಗಳಾದಾಗ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾದರೂ ವರ್ತಮಾನದಲ್ಲಿ ಒಗ್ಗಟ್ಟಿನ ರಕ್ಷಣೆ ಖಂಡಿತ ಬೇಕು. ಸಮರಸದ ಬಾಳಿಗೆ, ಸಮರವಿರದ ಬದುಕಿಗೆ, ಸಮಾನ ಜೀವನಕೆ ಒಗ್ಗಟ್ಟು ಅತಿ ಮುಖ್ಯವೆಂದು ಅಲ್ಲಗೆಳೆಯುವಂತಿಲ್ಲವಷ್ಟೆ.?

***********

-ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post