ಮಂಗಳೂರು: ಇನ್ನರ್ ವೀಲ್ ಕ್ಲಬ್ ಮಂಗಳೂರು ಉತ್ತರ ಇದರ ಸದಸ್ಯರು ನಗರದ ವಿಶ್ವವಿದ್ಯಾನಿಲಯ ಕಾಲೇಜಿಗೆ ನೀಡಿರುವ ಸುರಕ್ಷಿತ ಶುದ್ಧೀಕರಿಸಿದ ಕುಡಿಯುವ ನೀರಿನ ವ್ಯವಸ್ಥೆಯನ್ನು ಪ್ರಾಂಶುಪಾಲೆ ಡಾ. ಅನಸೂಯ ರೈ ಮಂಗಳವಾರ ಉದ್ಘಾಟಿಸಿದರು.
ಇನ್ನರ್ ವೀಲ್ ಕ್ಲಬ್ ಮಂಗಳೂರು ಉತ್ತರ ಇದರ ಅಧ್ಯಕ್ಷರೂ ಆಗಿರುವ, ಕಾಲೇಜಿನ ಸೂಕ್ಷ್ಮಾಣುಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಭಾರತಿ ಪ್ರಕಾಶ್, ಸುಮಾರು ರೂ. 45000 ವೆಚ್ಚದ ಈ ಕುಡಿಯುವ ನೀರಿನ ವ್ಯವಸ್ಥೆಯನ್ನು ತಮ್ಮ ತಂದೆ ದಿವಂಗತ ವೈ ಆರ್ ಅಂಜನಿ ಕುಮಾರ್ ಅವರ ಹೆಸರಿನಲ್ಲಿ ದಾನ ಮಾಡಿದರು. ಇದೇ ವೇಳೆ ಕ್ಲಬ್ ವತಿಯಿಂದ ಕಾಲೇಜಿನ ʼಕ್ಲೀನ್ ಕ್ಯಾಂಪಸ್ʼ ಯೋಜನೆಗಾಗಿ ರೂ.9000 ಮೌಲ್ಯದ 10 ದೊಡ್ಡ ಹೊರಾಂಗಣ ಕಸದ ತೊಟ್ಟಿಗಳನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಾಂಶುಪಾಲರು ಅಗತ್ಯ ಚಿಂತನೆ ಹಾಗೂ ಉಪಯುಕ್ತ ಕಾರ್ಯಕ್ರಮಕ್ಕಾಗಿ ಕ್ಲಬ್ ಅನ್ನು ಮತ್ತು ವೈಯಕ್ತಿಕವಾಗಿ ಡಾ. ಭಾರತಿ ಪ್ರಕಾಶ್ ಅವರನ್ನು ಶ್ಲಾಘಿಸಿದರು.
ವಿಶ್ವವಿದ್ಯಾನಿಲಯ ಕಾಲೇಜಿನ ವಿಸ್ತರಣಾ ಚಟುವಟಿಕೆಯ ಭಾಗವಾಗಿ ಮೂಡುಶೆಡ್ಡೆ ಗ್ರಾಮ ಪಂಚಾಯತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 30 ವಿದ್ಯಾರ್ಥಿಗಳಿಗೆ ರೂ. 6000 ಮೌಲ್ಯದ 30 ಇ-ಸ್ಲೇಟ್‌ಗಳನ್ನು ವಿತರಿಸಲಾಯಿತು. ಇನ್ನರ್ ವೀಲ್ ಕ್ಲಬ್ ಮಂಗಳೂರು ಉತ್ತರ ಪ್ರಾಯೋಜಿಸಿದ ಈ ಸ್ಲೇಟ್‌ಗಳನ್ನು ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಕ್ಲಬ್‌ನ ಅಧ್ಯಕ್ಷರು ಹಾಗೂ ಸದಸ್ಯರ ಜೊತೆಯಾಗಿ ಶಾಲೆಯ ಮುಖ್ಯೋಪಾಧ್ಯಾಯ ಗೋವಿಂದ ಪೈ ಅವರಿಗೆ ಹಸ್ತಾಂತರಿಸಿದರು.
ಹುಟ್ಟಿನಿಂದಲೇ ಶ್ರವಣಶಕ್ತಿ ಕಳೆದುಕೊಂಡಿರುವ ಸಮರ್ಥ್ ಮತ್ತು ಇಫ್ಸಾ ಎಂಬ 4 ವರ್ಷದ ಮಕ್ಕಳಿಗೆ ಶ್ರವಣ ಸಾಧನಗಳನ್ನು ವಿತರಿಸಲಾಯಿತು. ಇನ್ನರ್ ವೀಲ್ ಕ್ಲಬ್ ಮಂಗಳೂರು ಮತ್ತು ಕ್ಲಬ್ ನ ಪೂರ್ವತನ ಸದಸ್ಯೆ ಸುಷ್ಮಾ ಬನ್ಸಾಲ್ ಇವುಗಳನ್ನು ಪ್ರಾಯೋಜಿಸಿದ್ದಾರೆ.
ಕ್ಲಬ್‌ನ ಕಾರ್ಯದರ್ಶಿ ವಸಂತಿ ಕಾಮತ್, ಖಜಾಂಜಿ ಗೀತಾ ರೈ, ಐಎಸ್‌ಒ ಉಷಾ ಸುಧಾಕರ್, ಎಡಿಟರ್ ದೀಪಾಲಿ ನಹತಾ, ಮಾಜಿ ಅಧ್ಯಕ್ಷರುಗಳಾದ ರಮಾಮಣಿ, ಸುಷ್ಮಾ ಬನ್ಸಾಲ್, ಶೀಲಾ ಜಯಪ್ರಕಾಶ್, ಸದಸ್ಯರು, ಕೆಂಜಾರಿನ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಕೆ ಇ ಪ್ರಕಾಶ್, ವಿವಿ ಕಾಲೇಜಿನ ರಸಾಯನಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಲಕ್ಷ್ಮಣ್, ಡಾ. ಕೆ ಎಂ ಉಷಾ, ಸೂಕ್ಷ್ಮಾಣುಜೀವಿಶಾಸ್ತ್ರ ವಿಭಾಗದ ಸುಮಂಗಲಾ, ಚೈತ್ರಾ ರೈ ಮೊದಲಾದವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ