|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಿರು ಕಾದಂಬರಿ: ದೊಂಬಿ- ಭಾಗ-2

ಕಿರು ಕಾದಂಬರಿ: ದೊಂಬಿ- ಭಾಗ-2


ಕೊಟ್ರನೆಂದೇ ಕರೆಯಲ್ಫಡುತ್ತಿದ್ದ ಕೊಟ್ರಬಸಪ್ಪನ ಊರು ಬಿಜಾಪುರದ ಯಾವುದೋ ಒಂದು ಹಳ್ಳಿ. ಬರಗಾಲ ಪೀಡಿತ ಪ್ರದೇಶ ಅದು. ಮಳೆಯಿದ್ದರೆ ಬೆಳೆ, ಅದೂ ಬಿತ್ತನೆ ಕಾಲದಲ್ಲಿ ಮಳೆಯಾದರೆ ಅದರ ಫಸಲು ಕಾಲಕ್ಕೆ ಅಥವಾ ಕಟಾವಿನ ಮಟ್ಟಕ್ಕೆ ಬರುವ ಹಂತದಲ್ಲಿ ಮಳೆ ಕೈಕೊಡುತ್ತಿತ್ತು. ಪಿತ್ರಾರ್ತಿಜವೆಂದು ಬಂದಿದ್ದ ಎರಡು ಎಕ್ರೆಯ ಹೊಲ, ಬೆಳೆ ಬಂದರೆ ಬಂತು ಇಲ್ಲದಿದ್ದರೆ ಇಲ್ಲ, ಅಂತೂ ಕೂಲಿ ನಾಲಿ ಮಾಡಿ ಜೀವನ ಹೇಗೋ ಸಾಗುತ್ತಿತ್ತು. ಒಂದು ಬಾರಿ  ಮುಂಗಾರು ಮಳೆ ಚೆನ್ನಾಗಿತ್ತು ಎಂದು ಊರ ಜಮೀನ್ದಾರರಿಂದ ಸಾಲ ಮಾಡಿ ಬೆಳೆದ ಬೆಳೆ ಮತ್ತೆ ಬಾರದ ಮಳೆಗೆ ಒಣಗಿ ಹೋಗಿತ್ತು, ಹೀಗೆ ಒಂದೆರಡು ಬಾರಿಯಾದಾಗ ಕೂಲಿಮಾಡಿದ ಹಣ ಬಡ್ಡಿಗೂ ಹೋಗಬೇಕಾದುದರಿಂದ ಜಮೀನ್ದಾರರೇ ಸೂಚಿಸಿದಂತೆ ಆ ಜಾಗವನ್ನು ಅವರ ಹೆಸರಿಗೆ ರಿಜಿಸ್ಟರ್ ಮಾಡಿದ್ದಾಯಿತು, ಮೇಲೆ ಕೈಯಲ್ಲಿ ಸ್ವಲ್ಪ ಕಾಸೂ ಸಿಕ್ಕಿತು. ಕೊಟ್ರಬಸಪ್ಪನದು ಚಿಕ್ಕ ಸಂಸಾರ, ಹೆಂಡತಿ ಕಮ್ಲಿ, ಮಗ ಬಸವ ಮತ್ತು ಮಗಳು ಮಾಲತಿ- ಪ್ರೀತಿಯಿಂದ ಬಸ್ಯ ಮತ್ತು ಮಾಲಿ ಎಂದೇ ಕರೆಯುತ್ತಿದ್ದರು.


ಬರಗಾಲ... ಮಳೆಯೂ ಇಲ್ಲ.. ಬೆಳೆಯೂ ಇಲ್ಲ, ಕೂಲಿಯೂ ಕಷ್ಟ. ಅಂಥ ಒಂದು ದಿನ ಯಾರೋ ಅಂದರು ’ಬೆಂಗಳೂರಿಗೆ... ಓಗೋ... ಕೂಲಿ ಸಿಗ್ತೈತಿ.. ಛಲೋ ಕಾಸೂ ಬತ್ತೈತಂತ್ರಲಪ್ಪೋ... ದಿನ್ಕ.. ಮುನ್ನೂರಿಂದ ಐದು ನೂರ ತನ್ಕಾನೂ ಬತ್ತೈತಂತ್ರಲೇ" ಎಂದಾಗ ಕೊಟ್ರನ ಬಾಯಲ್ಲಿ ನೀರು ಬಂದಿದ್ದು ಸುಳ್ಳಲ್ಲ. ಊರಲ್ಲಿ ಕೂಲಿ ಮಾಡಿದರೆ ದಿನಕ್ಕೆ ನೂರ ಇಪ್ಪತ್ತು ರೂಪಾಯಿ, ಹೆಣ್ಣಾಳಿಗೆ ಬರಿ ಎಪ್ಪತ್ತೈದು ರೂಪಾಯಿ, ಅದೇ ಬೆಂಗಳೂರಲ್ಲಿ  ಕಡಿಮೆ ಎಂದರೂ ಗಂಡಾಳಿಗೆ ಮುನ್ನೂರೈವತ್ತು ಹೆಣ್ಣಾಳಿಗೆ ಇನ್ನೂರೈವತ್ತು ಸಿಗುತ್ತಂತೆ. ಈ ಮಾತು ಕೊಟ್ರನಿಗೆ ಸ್ವರ್ಗವೇ ಹತ್ತಿರಬಂದಂತಾಯಿತು. ಮುನ್ನೂರೈವತ್ತು ಮತ್ತೆ ಇನ್ನೂರೈವತ್ತು ಒಟ್ಟು ಇಬ್ಬರೂ ದುಡಿದರೆ ದಿನಕ್ಕೆ ಆರು ನೂರು... ಒಂದು ದಿನಕ್ಕೆ! ಊರಲ್ಲಿ ವಾರವಿಡೀ ದುಡಿದರೂ ಒಬ್ಬ ಗಂಡಾಳಿಗೆ ಆರುನೂರು ರೂಪಾಯಿ, ಅದೂ ಖಾಯಂ ಇದ್ದರೆ, ಇಲ್ಲವೆಂದರೆ ದಿನಕ್ಕೆ ನೂರಾ ಇಪ್ಪತ್ತು, ವಾರದಲ್ಲಿ ಎರಡು ಮೂರು ದಿನ ಕೆಲಸ, ಉಳಿದ ದಿನಗಳು ಕೂಲಿ ಇಲ್ಲ. ”ಹೂಂ ..ನ್ರೀ... ನೋಡೂಣು" ಎಂದಿದ್ದ ಕೊಟ್ರ. ಮತ್ತೆ ಬೆಂಗಳೂರಾಗೆ ದಿನವೂ ಕೂಲಿ ಸಿಗ್ತೈತಂತೆ, ಬಾನುವಾರ ಬಿಟ್ಟು, ಇಬ್ರಾಳಿಗೂ ಕೆಲಸ ಇರುತ್ತಂತ್ರಲೇ.. ಎಂಬುದನ್ನು ಕೇಳಿದ ಮೇಲಂತೂ ಬೆಂಗಳೂರಿನ ಕನಸನ್ನೇ ಕಾಣುತ್ತಿದ್ದ. ಈ ಕುರಿತು ಬಸ್ಯ ತನ್ನ ಹೆಂಡತಿ ಕಮ್ಲಿಗೆ ಈ ವಿಷಯ ತಿಳಿಸಿದ್ದ. ಅವಳೂ ಸಂತೋಷದಿಂದಲೇ ಒಪ್ಪಿದ್ದಳು. ಮಾಲಿ ಮತ್ತು ಬಸ್ಯ್ವ ಚಿಕ್ಕವರು ಬಸ್ಯಗೆ ಎಂಟು  ಮತ್ತೆ ಮಾಲಿಗೆ ಇನ್ನೂ ಐದುವರ್ಷ. ಇಬ್ಬರನ್ನೂ ಶಾಲೆಗೆ ಸೇರಿಸಿದ್ದರೂ, ಅವರ ವಿದ್ಯಾಭ್ಯಾಸ ಅಷ್ಟಕ್ಕಷ್ಟೇ ಬಸ್ಯ  ಮೂರನೇ ಕ್ಲಾಸ್ ನಲ್ಲಾದರೆ ಮಾಲಿ ಆಗ ತಾನೇ ಅ...ಆ...ಇ....ಈ... ಕಲಿಯುತ್ತಿದ್ದಾಳೆ. ಅದೂ ಅವರ ಹೊಲ ಯಾವಾಗ ಜಮೀನ್ದಾರರ ಪಾಲಾಗಿತ್ತೋ ಅಂದಿನಿಂದ ಅವರು ಶಾಲೆಗೆ ಹೋಗುತ್ತಿರಲಿಲ್ಲ. ಹೋಗೆಂದು್ ಕೊಟ್ರನೂ ಒತ್ತಾಯ ಮಾಡುತ್ತಿರಲಿಲ್ಲ.


ಒಂದು ದಿನ ಶುಭ ಸಮಾಚಾರ ಬಿತ್ತು ಕೊಟ್ರನ ಕಿವಿಗೆ...ಮುಂದಿನ ಊರಿನಿಂದ ಮೂರು ಕುಟುಂಬಗಳು ಬೆಂಗಳೂರಿಗೆ ವಲಸೆ ಹೋಗುತ್ತವೆ, ತಾನೂ ಅವರೊಂದಿಗೆ ಸೇರಿ ಕೊಳ್ಳಬೇಕೆಂದು ಆಸೆಯಾಯಿತು.

ಅಂತೂ ಆ ಊರಿಗೆ ಹೋಗಿ ಅಲ್ಲಿಯ ವಲಸೆ ಹೋಗುವ ಕುಟುಂಬದವರ ಹತ್ತಿರ ಮಾತನಾಡಿ ಹೋಗಲು ಏನೇನು ತಯಾರಿ ಮಾಡಬೇಕೆಂದು ವಿಚಾರಿಸಿದ.  ಅವರು ಕೊಟ್ಟ ಮಾಹಿತಿ  ಒಂದು ಗುಡಿಸಲು ಹಾಕಲು ಬೇಕಾಗುವಷ್ಟೂ ತರ್ಪಾಲು, ಒಂದು ವಾರದ ಮಟ್ಟಿಗೆ ಅಕ್ಕಿ, ಬೇಳೆ ಎಣ್ಣೆ ಇತ್ಯಾದಿ, ಒಂದು ಸೀಮೆ ಎಣ್ಣೆ ಸ್ಟೊವ್, ನೀರು ತುಂಬಿಡಲು ಕೊಡಪಾನ, ಬಕೆಟ್ ಮತ್ತು ಅಡಿಗೆ ಮಾಡಲು ಪಾತ್ರೆ ಪರಿಕರಗಳು ಊಟದ ತಟ್ಟೆ, ಕಂಬಳಿ ಇತ್ಯಾದಿ ಎಲ್ಲವೂ, ಆದಷ್ಟು ಚಿಕ್ಕ ಚಿಕ್ಕ ಕಟ್ಟಗಳನ್ನಾಗಿ ಕಟ್ಟಿ ಕೆಯೆಸ್ಸಾರ್ಟಿಸಿ ಬಸ್ಸಿನ ಮೇಲೆ ಹಾಕಿದರೆ ಮತ್ತೆ ಅದನ್ನು ಬೆಂಗಳೂರಿನಲ್ಲಿ ಇಳಿಸಬಹುದು.  ಆ ಯೋಜನೆಯನ್ನೂ ಹಾಕಿಕೊಂಡದ್ದಾಯಿತು. ವಲಸೆ ಹೋಗಲು ಬೇಕಾದ ಸರಂಜಾಮುಗಳೆಲ್ಲವೂ ರೆಡಿಯಾಯಿತು, ಹಾಗೆಂದು ಸೂಚಿತ ದಿನದಂದು ವಲಸೆ ಹೋಗುವ ನಾಲ್ಕೂ ಕುಟುಂಬಗಳು ಬಿಜಾಪುರದ ಬಸ್ ಸ್ಟೇಂಡಿನಲ್ಲಿ ನೆರೆದಾಯಿತು. ಎಲ್ಲರೂ ಟಿಕೆಟ್ ತೆಗೆದುಕೊಂಡದ್ದೂ ಆಯಿತು, ಕೊಟ್ರ ಕಂಡಕ್ಟರ್ ಬಳಿ ಎರಡುವರೆ ಟಿಕೆಟ್ ಅಷ್ಟೇ ಕೊಂಡ. ಜೀವನಕ್ಕೆ ಗತಿ ಇಲ್ರೀ...ಬೆಂಗಳೂರಿಗ್ ಹೊಂಟೀವ್ರಿ... ಎಂದು ತನ್ನ ಕಥೆಯನ್ನು ಹೇಳಲುದ್ಯುಕ್ತನಾದಾಗ ಕಂಡಕ್ಟರ್ ಗೆ ಏನೂ ಹೇಳಲಾಗಲಿಲ್ಲ, ಸರಿ...ಸರಿ... ಎಂದು ರೈಟ್ ... ಎಂದು ಡ್ರೈವರ್ ಗೆ ಸೂಚನೆ ಕೊಟ್ಟೇ ಬಿಟ್ಟ.

ಬಿಜಾಪುರದಿಂದ ಬೆಂಗಳೂರಿಗೆ ಬರುವ ಕೆಎಸ್ಸಾರ್ಟಿಸಿಯ ಕೆಂಪು ಮೂತಿಯ ಬಸ್ಸು ನಾಲ್ಕು ವಲಸೆ ಕುಟುಂಬಗಳನ್ನು ಹೊತ್ತು ಇತರರೊಂದಿಗೆ ಬೆಂಗಳೂರಿಗೆ ಧಾವಿಸುತ್ತಿತ್ತು.

(ಶಂಕರ ಭಟ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post