|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಚನದೊಳಗೇನಡಗಿದೆ..?

ವಚನದೊಳಗೇನಡಗಿದೆ..?


ಸಾಮಾನ್ಯವಾಗಿ ಮಾನವನ ವ್ಯವಹಾರಗಳು ಮಾತಿನ ಮುಖಾಂತರವಾಗಲಿ ಬರವಣಿಗೆಯ ಮುಖಾಂತರವಾಗಲಿ ನಡೆಯುವುದು ಏಕವಚನ ಅಥವಾ ಬಹುವಚನಗಳ ಬಳಕೆಯಿಂದ. ಅತಿ ಸಲುಗೆ ಇದ್ದರೆ, ಅತಿಯಾದ ಪ್ರೀತಿ ಇದ್ದರೆ, ಪ್ರಾಯದಲ್ಲಿ ಸಣ್ಣವರಾದರೆ, ತನ್ನ ಕೈಕೆಳಗೆ ಕೆಲಸ ಮಾಡುವವರಾದರೆ, ಸಂಬಂಧ ಪಟ್ಟ ವ್ಯಕ್ತಿಯು ಬಹಳ ದೂರವಿದ್ದರೆ.. ಇಂತಹ ಸಂದರ್ಭದಲ್ಲಿ ನಾವು ಹೆಚ್ಚಾಗಿ ಬಳಸುವುದು ಏಕವಚನವನ್ನೇ. ಅದೇರೀತಿ ಸಲುಗೆ ಇರದವರೊಡನೆ, ಗುರು ಹಿರಿಯರೊಡನೆ, ಅಪರಿಚಿತರೊಡನೆ, ಅಧಿಕಾರಿಗಳೊಡನೆ, ಮಹಿಳೆಯರೊಡನೆ ಬಹುವಚನದಲ್ಲಿ ವ್ಯವಹರಿಸುತ್ತೇವೆ. ಇದು ಸಾಮಾನ್ಯವಾಗಿ ಇರುವ ಪದ್ಧತಿ.  


ಇದರ ಇನ್ನು ಕೆಲವು ಆಯಾಮಗಳನ್ನು ನೋಡಿದಾಗ ಅಚ್ಚರಿ ಎನಿಸಬಹುದು. ಆದರೂ ಸತ್ಯವಾಗಿದೆ. ಸಾಮಾನ್ಯವಾಗಿ ತಂದೆ ತಾಯಿಗಳಲ್ಲಿ ಮಕ್ಕಳು ಯಾವ ಭೇದವನ್ನು ಮಾಡದಿದ್ದರೂ ವಚನದ ವಿಷಯಕ್ಕೆ ಬಂದಾಗ ತಂದೆಗೆ ಬಹುವಚನ ತಾಯಿಗೆ ಏಕವಚನ. ಇದು ಯಾಕೆ ಹೀಗೆ ಎಂದು ವಿಮರ್ಶಿಸಿದಾಗ ಕೆಲವೊಂದು ಸತ್ಯಗಳು ಹೀಗಿವೆ. ನಾವು ಹೇಳಬಹುದು ತಾಯಿಯಲ್ಲಿ ಅತಿಯಾದ ಪ್ರೀತಿ ಮಕ್ಕಳಿಗೆ ಇರುವುದರಿಂದ ಏಕವಚನವೇ ಅಲ್ಲಿ ಸಹಜವಾಗಿ ಬರುತ್ತದೆ. ಪ್ರೀತಿ ಹೆಚ್ಚಾದಾಗ ಏಕವಚನವೇ ಪ್ರಸ್ತುತವಾಗುತ್ತದೆ ಎಂದು. ಇರಬಹುದು... ಆದರೆ ಮಕ್ಕಳು ದೊಡ್ಡವರನ್ನೇ ಅನುಕರಿಸುವುದರಿಂದ ತಂದೆಯಾದವನು ತಾಯಿಯನ್ನು ಏಕವಚನದಲ್ಲಿ ಕರೆಯುವುದನ್ನು ಕಂಡು ಮಗುವೂ ತಾಯಿಯೊಡನೆ ಏಕವಚನದಲ್ಲೇ ವ್ಯವಹರಿಸಿದರೆ,  ತಾಯಿಯಾದವಳು ತಂದೆಯನ್ನು ಬಹುವಚನದಲ್ಲಿ ಸಂಬೋಧಿಸುವುದನ್ನು ಕಂಡು ತಂದೆಯೊಡನೆ ಬಹುವಚನದಲ್ಲೇ ವ್ಯವಹರಿಸುತ್ತದೆ. ಮಕ್ಕಳಿಗೆ ಈ ವಚನಗಳ ತಾರತಮ್ಯತೆ ಗೊತ್ತಿಲ್ಲದ ಕಾರಣ ಹಾಗೂ ಹೆತ್ತವರು ತಿದ್ದಿರದ ಕಾರಣ ಮುಂದೆ ಅದು ಗೊತ್ತಾಗುವ ಕಾಲಕ್ಕೆ ಅಭ್ಯಾಸವಾಗಿ ಹೋಗಿರುತ್ತದೆ. ಇನ್ನು ಅಣ್ಣ ತಮ್ಮಂದಿರು ಅಕ್ಕ ತಂಗಿಯರು ಪರಸ್ಪರ ಏಕವಚನದಲ್ಲೇ ವ್ಯವಹರಿಸುವುದು ಸಾಮಾನ್ಯ. ಆದರೆ ಹಿಂದಿನ ಕಾಲದಲ್ಲಿ ಹತ್ತಾರು ಮಕ್ಕಳಿರುತ್ತಿದ್ದುದರಿಂದ ಹಿರಿಯ ಮಕ್ಕಳಿಗೆ ಕಿರಿಯ ಮಕ್ಕಳು ಅಣ್ಣ ಅಥವಾ ಅಕ್ಕ ಎನ್ನುವುದರ ಜತೆಗೆ ಬಹುವಚನವನ್ನೂ ಸೇರಿಸುತ್ತಿದ್ದರು. ಆ ಸಂಸ್ಕೃತಿ ಇಂದು ಒಂದು ಮಗುವಿನ ಸಂಸ್ಕಾರದ ಅಡಿಯಲ್ಲಿ ನಶಿಸಿದೆ. ಅಂತೆಯೇ ವಚನಗಳ ಅಗತ್ಯತೆಯೂ ಕ್ಷೀಣವಾಗಿದೆ.  


ಕೆಲವು ವಿಚಿತ್ರಗಳಿವೆ.. ರಾಜಕೀಯದಲ್ಲಾಗಲಿ, ಕ್ರೀಡೆಯಲ್ಲಾಗಲಿ, ಸಿನೆಮಾದಲ್ಲಾಗಲಿ, ಸಂಗೀತ ಲೋಕದಲ್ಲಾಗಲಿ ಅಥವಾ ಯಾವುದೇ ಕ್ಷೇತ್ರದಲ್ಲಾದರೂ ಭಾರಿ ಸಾಧನೆ ಮಾಡಿದವರಿದ್ದಾರೆ. ಅವರು ನಮ್ಮಿಂದ ಬಹಳ ದೂರದಲ್ಲಿರುವುದರಿಂದ ಅವರನ್ನು ನಾವ್ಯಾರೂ ಬಹುವಚನದಲ್ಲಿ ಕರೆಯುವುದಿಲ್ಲ. ಆದರೆ ಅದೇ ವ್ಯಕ್ತಿ ನಮ್ಮ ಕಣ್ಣೆದುರು ಬಂದಾಗ ನಮ್ಮ ವಚನ ಏಕದಿಂದ ಬಹುವಾಗಿ ಪರಿವರ್ತನೆಯಾಗುವುದು ನಮಗೆ ಅಸಹಜವೆಂದೆನಿಸುವುದಿಲ್ಲ. ಬಹುಷಃ ಸಾಧನೆ ಯಾವುದಿದ್ದರೂ, ಪ್ರಾಯ ಎಷ್ಟಿದ್ದರೂ ವ್ಯಕ್ತಿಯಿಂದ ವ್ಯಕ್ತಿಗೆ ಇರುವ ದೂರವೂ ವಚನಕ್ಕೆ ಕಾರಣವಾಗುತ್ತದೆ. ಉದಾಹರಣೆಗೆ ಕ್ರಿಕೆಟಿನ ದಂತಕತೆಯಾದ ಕಪಿಲ್ ದೇವ್ ಮೈದಾನದಲ್ಲಿ ಆಟವಾಡುತ್ತಿರುವಾಗ ಯಾರೂ ಆತನನ್ನು ಬಹುವಚನದಲ್ಲಿ ಸಂಬೋಧಿಸುವುದಿಲ್ಲ. ಅದೇ ಸಂದರ್ಭ ಆತನೇನಾದರು ನಮ್ಮ ಕಣ್ಣೆದುರಿಗೆ ಬಂದರೆ ತನ್ನಿಂದ ತಾನೆ ಬಹುವಚನದ ಪ್ರಯೋಗವಾಗುತ್ತದೆ. (ಆದರೆ ಕೆಲವೊಂದು ಸಲ ಮನುಷ್ಯನ ಯೋಗ್ಯತೆಗನುಸಾರವಾಗಿ ಇದು ಬದಲಾಗುವುದೂ ಇದೆ. ಉದಾಹರಣೆಗೆ ವಾಜಪೇಯಿ ಅಜ್ಜ. ಇವರನ್ನು ವಿರೋಧ ಪಕ್ಷದವರು ಕೂಡ ಏಕವಚನದಲ್ಲಿ ಮಾತನಾಡಿಸಲಾರರು. ವಾಜಪೇಯಿ ಅಜ್ಜನವರ ವರ್ಚಸ್ಸೇ ಹಾಗೆ. ಎಲ್ಲಿದ್ದರೂ ಬಹುವಚನೀಯರು ಮಾತ್ರವಲ್ಲ ವಂದನೀಯರೇ ಎನಿಸುತ್ತಾರೆ. ಅಪವಾದವೆಂಬಂತೆ ಇಂತಹ ವ್ಯಕ್ತಿಗಳು ಇರುವುದಂತು ಸತ್ಯ.) ಈ ನಿಯಮ ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುತ್ತದೆ. ದೇವರ ವಿಚಾರಕ್ಕೆ ಬಂದಾಗ ನಾವು ಎಲ್ಲ ದೇವರುಗಳನ್ನೂ ಏಕವಚನದಲ್ಲೇ ಕರೆಯುವುದು ಅಥವಾ ಬೇಡಿಕೊಳ್ಳುವುದು. ಆದರೆ ಅದೇ ದೇವರ ಸೇವೆ ಮಾಡುವ ಅಥವಾ ದೇವ ದೂತರೆಂದೆನಿಸಿದ ಸ್ವಾಮಿಗಳಿಗೆ, ಅವಧೂತರಿಗೆ ಬಹುವಚನವೇ ಪ್ರಚಲಿತ.  


ಇನ್ನು ಕೆಲವರಿಗೆ ಇನ್ನೊಬ್ಬರನ್ನು ಏಕವಚನದಲ್ಲಿ ಕರೆಯುವುದೂ ಒಂದು ದೊಡ್ಡಸ್ಥಿಕೆಯೇ. ತನಗಿಂತ ಕೆಳಗಿನ ಹುದ್ದೆಯಲ್ಲಿರುವವರನ್ನು ಏಕವಚನದಲ್ಲೇ ಕರೆಯಬೇಕೆಂಬ ಅಲಿಖಿತ ನಿಯಮಗಳಿರುವ ಸಂಸ್ಥೆಗಳೂ ಹಲವಾರಿವೆ. ಉದಾಹರಣೆಗೆ ಪೋಲಿಸ್ ಸ್ಟೇಶನ್, ಖಾಸಗಿ ಸಂಸ್ಥೆಗಳು, ರಾಜಕಾರಣಿಗಳ ಪ್ರಪಂಚ ಇತ್ಯಾದಿ. ಇವರಲ್ಲಿ  ತನಗಿಂತ ಕಿರಿಯ ಹುದ್ದೆಯಲ್ಲಿರುವವರಲ್ಲಿ ಬಹುವಚನದಲ್ಲಿ ವ್ಯವಹರಿಸುವವರು ಬೆರಳೆಣಿಕೆಯ ಮಂದಿ ಮಾತ್ರ. ವಯಸ್ಸಿನಲ್ಲಿ ಕಿರಿಯರಾದರೂ ಹುದ್ದೆ ಅಥವಾ ಅಧಿಕಾರ ಹಿರಿದಾದರೆ ಆತನಿಂದ ಬಹುವಚನದ ನಿರೀಕ್ಷೆ ಯಾರೂ ಮಾಡುವುದಿಲ್ಲ. ಉದಾಹರಣೆಗೆ ಒಬ್ಬ ಧನಿಕನಾದವನು ತನ್ನ ವಾಹನಕ್ಕೆ ಚಾಲಕನನ್ನಿಟ್ಟುಕೊಂಡಲ್ಲಿ ಚಾಲಕನಿಗೆ ಧನಿಕನ ತಂದೆಯ ಪ್ರಾಯವಾದರೂ ಆತ ಚಾಲಕನನ್ನು ಬಹುವಚನದಲ್ಲಿ ಕರೆಯುವುದಿಲ್ಲ. ಅದಕ್ಕೆ ಕಾರಣ ತಾನು ಮಾಲಕನೆಂಬ ಅಹಂಭಾವ ಮತ್ತು ಚಾಲಕನು ತನ್ನ ಕೆಲಸದವನೆಂಬ ದರ್ಪ. ಚಾಲಕನನ್ನು ಬಹುವಚನದಲ್ಲಿ ಕರೆದರೆ ತನ್ನ ಪ್ರತಿಷ್ಠೆ ಮಣ್ಣು ಪಾಲಾದಂತೆಯೇ ಎಂದು ಇಂಥವರ ಅಂಬೋಣ.


ನಾನೊಂದು ಕಾಲದಲ್ಲಿ ಒಬ್ಬ ಮಠಾಧೀಶರಲ್ಲಿ ಚಾಲಕನಾಗಿ ಸೇರಿದ್ದೆ. ಆ ಮಠಾಧೀಶರಿಂದ ವಯೋಮಾನದಲ್ಲಿ ಹಿರಿಯನಾಗಿದ್ದೆ. ನಾನು ಚಾಲಕನಾಗಿ ಸೇರಿದ ಪ್ರಥಮದಲ್ಲಿ ಆ ಮಠಾಧೀಶರು ನನ್ನನ್ನು ಬಹುವಚನದಲ್ಲೇ ಮಾತಾಡಿಸುತ್ತಿದ್ದರು. ನನಗಾದರೊ ಬಹಳ ಆಶ್ಚರ್ಯವಾಗಿತ್ತು. ಇರಲಿ ಈ ಮಠಾಧೀಶರು ಎಲ್ಲರಂತಲ್ಲ ಮಾನವೀಯತೆಗೆ ಮರ್ಯಾದೆ ಕೊಡುವವರು, ಇನ್ನೊಬ್ಬನ ಆತ್ಮಗೌರವವನ್ನು ಗೌರವಿಸುವವರೆಂದು ಅವರಲ್ಲಿ ಅಭಿಮಾನವೂ ಮೂಡಿತ್ತು. ಆದರೆ ಬರಬರುತ್ತ ಬರಬರುತ್ತ ಅವರಿಗೆ ಜ್ಞಾನೋದಯವಾಯಿತು. ತಾನು ತನ್ನ ಚಾಲಕನನ್ನು ಬಹುವಚನದಲ್ಲಿ ಕರೆದರೆ ತನ್ನ ಆತ್ಮಗೌರವಕ್ಕೆ ಕುಂದು ಎಂದು ಪ್ರಯತ್ನ ಪೂರ್ವಕ ಏಕವಚನಕ್ಕೆ ಶರಣಾದರು. ನನಗೆ ಅದರ ಕಲ್ಪನೆ ಇದ್ದುದರಿಂದ ಅಥವಾ ಮಠಾಧೀಶರಾದರೂ ಅವರೂ ಇದೇ ಪ್ರಪಂಚದಲ್ಲಿರುವುದರಿಂದ ವರ್ತಮಾನದ ಪ್ರಪಂಚವನ್ನು ಬಿಟ್ಟು ವ್ಯವಹರಿಸಲಾರರು ಎಂಬ ಸತ್ಯದ ಅರಿವಿದ್ದುದರಿಂದ ನನಗೆ ಅದರಿಂದ ಏನೂ ತೊಂದರೆ ಆಗಿಲ್ಲ. ಬದಲಾಗಿ ಅಷ್ಟು ದಿನ ಅವರ ಗೌರವ ಕೊಡುವ ಮುಖವಾಡಕ್ಕೆ ನನಗೇ ಮುಜುಗರವಾಗಿತ್ತು ಒಳಗೊಳಗೇ ನಗುವೂ ಬಂದಿತ್ತು.  ಮಠಾಧೀಶರದ್ದೇ ಈ ಪರಿಯ ಪಾಡಾದರೆ ಇನ್ನು ನಮ್ಮಂಥವರ ವಿಷಯ ಬಿಡೋಣ.


ಹಾಗೆಯೇ ರಸ್ತೆಗೆ ಇಳಿದರೆ... ವಾಹನ ಯಾವುದೇ ಇರಲಿ ಚಲಾಯಿಸುವವ ಯಾರೇ ಇರಲಿ ಆತನಿಗೆ ಏಕವಚನವೇ ಗತಿ. ಮುಂದಿರುವ ವಾಹನ ತನಗೆ ಕಿರಿ ಕಿರಿ ಉಂಟು ಮಾಡಿದರಂತು ಆ ವಾಹನ ಚಲಾಯಿಸುವವನಿಗೆ ಭ್ರಷ್ಟ ವಚನಗಳ ಸರಮಾಲೆಯೇ ಅರ್ಪಣೆಯಾಗುತ್ತದೆ. ವಿಪರ್ಯಾಸವೆಂದರೆ ಈ ವಚನ ಪ್ರಯೋಗಗಳೂ ಮಾನವನ ಸ್ವಭಾವವನ್ನು ತಿಳಿಸುತ್ತದೆ. ಯಾರು ಸಾತ್ವಿಕ ಸ್ವಭಾವದವನೋ ಆತ ತನಗಿಂತ ಹಿರಿಯರಿರಲಿ ಕಿರಿಯರಿರಲಿ ಸಾಮಾನ್ಯವಾಗಿ ಬಹುವಚನವನ್ನೇ ಉಪಯೋಗಿಸುತ್ತಾನೆ ಮತ್ತು ಆತನಿಗೆ ಏಕವಚನ ಪ್ರಯೋಗ ಬಲು ಕಷ್ಟವೇ ಆಗಿರುತ್ತದೆ. ರಾಜಸ ಸ್ವಭಾವದವನಿಗೆ ಯಾರು ಯಾರಿಗೆ ಯಾವ ಯಾವ ವಚನಗಳನ್ನು ಉಪಯೋಗಿಸಬೇಕೆಂಬ ಪ್ರಜ್ಞೆಯೂ ಇರುತ್ತದೆ. ಹಾಗೆಯೇ ಯಾವ ವಚನವೂ ಆತನಿಗೆ ಅಸಹಜವೆನಿಸದು. ಅಂತೆಯೇ ತಾಮಸ ಸ್ವಭಾವದವನಿಗೆ ಬಹುವಚನದ ಪ್ರಯೋಗವೇ ಅಪರೂಪ.  ಯಾರನ್ನು ಬೇಕಾದರೂ ಯಾವಾಗ ಬೇಕಾದರೂ ಏಕವಚನದಲ್ಲೇ ಮಾತಾಡಿಸಬಲ್ಲ ಮಾತ್ರವಲ್ಲ ಸಹಜವಾಗಿಯೂ ಇರಬಲ್ಲ.


ಕೆಲವೊಮ್ಮೆ ಎಷ್ಟೇ ಬುದ್ಧಿವಂತನಾದರೂ ಅಪರಿಮಿತ ಸಿಟ್ಟು ಬಂದಾಗ, ವಿವೇಕ ಕಳೆದುಕೊಂಡಾಗ ವಚನ ಭ್ರಷ್ಟನಾಗುವುದೂ ಇದೆ. ಅದಕ್ಕೂ ಕಾರಣ ಆ ಕ್ಷಣದಲ್ಲಿ ಆತ ತಾಮಸ ಸವಭಾವದ ಪ್ರಭಾವಕ್ಕೆ ಒಳಗಾದುದೇ. ಆದ್ದರಿಂದ ಕೆಲವು ಸಲ ಏಕವಚನಕ್ಕೂ ತಾಮಸ ಸ್ವಭಾವಕ್ಕೂ ನೇರ ಸಂಪರ್ಕವಿದೆ ಎಂದು ಅನಿಸುವುದಿಲ್ಲವೇ? ಅದೇರೀತಿ ಒಬ್ಬನ ತೇಜೋವಧೆ ಮಾಡಬೇಕಾದರೂ ಈ ವಚನಗಳು ಬಹಳ ನಿರ್ಣಾಯಕವಾಗಿರುತ್ತವೆ. ಹೇಗೆಂದರೆ ಯಾವಾಗಲೂ ಬಹುವಚನದಲ್ಲೇ ವ್ಯವಹಾರ ಮಾಡಿಕೊಂಡಿದ್ದವರಲ್ಲಿ ಏಕಾಏಕಿ ಏಕವಚನದ ಪ್ರಯೋಗ ಮಾಡಿದಾಗ ಎದುರಾಳಿಯು ಕ್ಷಣ ಹೊತ್ತು ದಿಗ್ಭ್ರಮೆಗೊಳ್ಳುವುದಂತು ನಿಜ. ಅದೇ ಏಕವಚನವನ್ನು ಪದೇ ಪದೇ ಪ್ರಯೋಗ ಮಾಡಿದರಂತು ಎದುರಾಳಿಯ ತೇಜೋವಧೆ ಆಗುವ ಜತೆಗೆ ಆತನೊಡನೆ ಸಂಪರ್ಕವೂ ಕಳೆದುಕೊಂಡಂತೆಯೇ. ಇನ್ನೊಂದು ವಿಶೇಷವೆಂದರೆ ಚಿತ್ಪಾವನಿ ಭಾಷೆ ಮತ್ತು ದೇವಭಾಷೆ ಎಂದೆನಿಸಿಕೊಂಡ ಸಂಸ್ಕೃತದಲ್ಲಿ ಬಹುವಚನ ಪ್ರಯೋಗವಿಲ್ಲ. ಎಷ್ಟೇ ದೊಡ್ಡವನಾದರೂ ಸಂಸ್ಕೃತದಲ್ಲಿ ನೀನು ಎಂದೇ ಸಂಬೋಧಿಸುವುದು. ಅದೇರೀತಿ ಚಿತ್ಪಾವನಿ ಭಾಷೆಯಲ್ಲೂ ಮಠಾಧೀಶನಾದರೂ ಅವನು ಇವನೆಂದೇ ವ್ಯವಹರಿಸುವುದು. ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಚಿತ್ಪಾವನರು ಮಾಡಿಕೊಂಡ ಕೆಲವು ಬದಲಾವಣೆಗಳ ಹೊರತಾಗಿ ಏಕವಚನದ ಪ್ರಯೋಗವೇ ಹೆಚ್ಚು. ಏನೇ ಆದರೂ ಈ ವಚನಗಳೊಳಗೂ ಅದೆಷ್ಟೋ ವಿಚಾರಗಳು ಹುದುಗಿದೆ ಎಂದೆನಿಸುವುದಿಲ್ಲವೇ....? 

***********

-ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم