|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಾಳಿನ ಸೂತ್ರ: ಸುಖವೆಂದೆನಿಸಬೇಕು ಕಷ್ಟಗಳು

ಬಾಳಿನ ಸೂತ್ರ: ಸುಖವೆಂದೆನಿಸಬೇಕು ಕಷ್ಟಗಳು


ಮಾನವರು ಸಹಜವಾಗಿ ಸುಖದಲ್ಲಿ ಬಾಳಬೇಕೆಂದು ಬಯಸುವವರು. ಹುಟ್ಟಿನಿಂದ ತೊಡಗಿ ಮರಣ ಪರ್ಯಂತ ಪ್ರತಿಕ್ಷಣವನ್ನೂ ಸುಖದ ಜೀವನಕ್ಕಾಗಿ ಪಣವಿಟ್ಟವರಂತೆ ಬದುಕುತ್ತಿರುವವರು. ಸುಖದ ಕಲ್ಪನೆಗಳು, ಸುಖದ ಸಾಧನಗಳು, ಸುಖದ ದಾರಿಗಳು ಬೇರೆ ಬೇರೆ ಇರಬಹುದು. ಆದರೆ ಉದ್ದೇಶ ಮಾತ್ರ ಸುಖದಲ್ಲಿರಬೇಕೆಂಬುದೇ ಆಗಿದೆ. ಈ ಹೋರಾಟದಲ್ಲಿ ಎಲ್ಲರೂ ಜಯಶಾಲಿಗಳಾಗುವುದಿಲ್ಲ. ಹಾಗೆಂದು ಜಯಶಾಲಿಗಳಾದವರೆಲ್ಲ ಸುಖದಲ್ಲಿರುತ್ತಾರೆಂಬುದೂ ಇಲ್ಲ. ಆದರೂ ಈ ಪ್ರವೃತ್ತಿ ನಿತ್ಯವೂ ಪ್ರತಿಯೊಬ್ಬರಲ್ಲೂ ನಡೆಯುತ್ತಿರುವುದು ಶಾಶ್ವತ ಸತ್ಯ. ನಡೆದುಕೊಂಡೇ ವ್ಯವಹಾರ ಮಾಡುತ್ತಿದ್ದ ಕಾಲದಲ್ಲಿ ನಡೆದಾಡುವುದು ಕಷ್ಟವೆನಿಸದಿದ್ದರೂ ಇನ್ನೊಬ್ಬರು ಬೈಸಿಕಲ್ನಲ್ಲಿ ತಿರುಗಾಡುವುದನ್ನು ಕಂಡಾಗ ನಮಗೆ ನಡೆಯುವುದು ಕಷ್ಟವೆನಿಸಲು ಪ್ರಾರಂಭವಾಗುತ್ತದೆ. ಅಲ್ಲಿಂದ ಮುಂದೆ ನಮ್ಮ ಪ್ರತಿಯೊಂದು ನಡಿಗೆ ಕೂಡ ಬೈಸಿಕಲ್ನೊಂದಿಗೆ ಅಥವಾ ಅದರ ಅನಿವಾರ್ಯತೆಯ ಸೃಷ್ಟಿಯೊಂದಿಗೆ ಸುತ್ತು ಹಾಕತೊಡಗುತ್ತದೆ. ಮುಂದೆ ತಾನು ಬೈಸಿಕಲ್ ಕೊಂಡುಕೊಳ್ಳಬಲ್ಲೆ ಎಂದು ಅನಿಸಿದಾಗ ನಡಿಗೆಯು ಕಷ್ಟವೆಂದೆನಿಸಲಾರಂಭಿಸುತ್ತದೆ. ಬೈಸಿಕಲ್ನಿಂದ ಏನೆಲ್ಲ ಗುಣಗಳಿವೆ ಎಂದು ಲೆಕ್ಕ ಹಾಕಲು ಪ್ರಾರಂಭವಾಗುತ್ತದೆ. ಕ್ರಮೇಣ ಬೈಸಿಕಲ್ ತುಳಿಯುವುದರಲ್ಲಿ ಸುಖ ಕಾಣಲಾರಂಭವಾಗುತ್ತದೆ. ಇದೇ ರೀತಿ ಪ್ರತಿಯೊಂದು ಹಂತಗಳಲ್ಲೂ ಸುಖವೆಂದೆಣಿಸಿ ಮಾಡಿದ ವ್ಯವಹಾರಗಳು ಕಷ್ಟವಾಗತೊಡಗುತ್ತವೆ.


ಉದಾಹರಣೆಗೆ ನಡೆಯುವಾಗ ಬೈಸಿಕಲ್ ಸುಖವೆಂದೆನಿಸಿದರೆ, ಮೋಟಾರ್ ಬೈಕಿಗೆ ಬಂದಾಗ ಬೈಸಿಕಲ್ ಕಷ್ಟವಾಗತೊಡಗುವುದು. ಮುಂದೆ ಕಾರಿಗೆ ಬದಲಾದಾಗ ಮೋಟಾರ್ ಬೈಕು ಸುಖ ಕೊಡದೆಂದೆನಿಸಿದರೆ ಹೊಸತು ಕಾರಿನಲ್ಲಿರುವ ಸುಖ ಹಳೆಯ ಕಾರು ತಡೆ ಹಿಡಿದಂತೆನಿಸುವುದು. ಹೀಗೆ ನಾವೇ ನಿರ್ಧರಿಸಿದ ಸುಖವು ಮುಂದಿನ ಹಂತಕ್ಕೆ ದುಃಖವಾಗುವುದಾದರೆ ನಾವು ಸುಖವನ್ನು ಹುಡುಕಿಕೊಂಡು ಹೋದಷ್ಟು ಅದು ಒಂದು ಹೆಜ್ಜೆ ಮಂದೆಯೇ ಇರುತ್ತದೆ ಎಂದಾಯಿತು. ಅಂತೆಯೇ ಗುಡಿಸಲಿನಲ್ಲಿರುವಲ್ಲಿಂದ ತೊಡಗಿ ಬಂಗ್ಲೆಗಳಲ್ಲಿ ವಾಸ ಮಾಡುವಲ್ಲಿವರೆಗೆ ಬಂದಂಥ ಪ್ರತಿ ಹಂತಗಳೂ ಕಷ್ಟವೆಂದೇ ಪರಿವರ್ತಿತವಾಗುವುದು ಮಾತ್ರ ಮಾನವನ ಮನಸ್ಸಿನ ವಿಪರ್ಯಾಸವೆಂದೇ ಹೇಳಬೇಕಾಗುತ್ತದೆ. ಮಾಡಿದಂಥ ಉದ್ಯೋಗಗಳಲ್ಲಿ ಕೂಡ ಇದೇ ಅನುಭವಗಳು ನಮ್ಮದಾಗುವುದು. ನಾವೇನನ್ನೊ ಸುಖವೆಂದರಸಿಕೊಂಡು ಹೋಗುವುದು ಅದು ದೊರೆತಾಗ ಅದರ ಮಂದಿನ ಸ್ಥಿತಿಯನ್ನು ಹೊಂಚು ಹಾಕುವುದು. ಅಂತು ಈ ಬೇಟೆ ಯಾವುದೊ ಒಂದು ಹಂತಕ್ಕೆ ಕೊನೆಯಾಗುವುದು ಖಂಡಿತ. ಕೆಲವರಿಗೆ ಜ್ಞಾನೋದಯವಾದಾಗ ಕೊನೆಯಾದರೆ ಕೆಲವರಿಗೆ ಜೀವಿತದ ಕೊನೆಯಾದಾಗಲೇ ಜ್ಞಾನೋದಯವಾಗುವುದು. 


ನಾವು ಅನುಭವಿಸಿ ಬಂದಂಥ ಹಲವಾರು ಸುಖಗಳು ಮುಂದೊಂದು ದಿನ ಸಹಿಸಲಾಗದಂಥ ಕಷ್ಟ ಕೊಡುವುದೂ ಇದೆ. ಉದಾಹರಣೆಗೆ ಆರೋಗ್ಯ ಹದಗೆಟ್ಟಾಗ ಸಣ್ಣ ಪ್ರಾಯದಲ್ಲಿ ಮಾಡಿದಂಥ ಕಸರತ್ತುಗಳು ನೆನಪಾಗಿ ಅಂದಿನ ಆರೋಗ್ಯವನ್ನು ನೆನೆದಾಗ ದುಃಖಗಳು ಉಂಟಾಗುವವು. ಮನೆತುಂಬ ಸದಸ್ಯರಿರುವಾಗ ಇದ್ದಂಥ ಸುಖ ಇಂದು ಒಂಟಿತನದಲ್ಲಿರುವಾಗ ಕಾಡದೇ ಇರಲಾರದು. ಹೆತ್ತವರೊಂದಿಗೆ ಮಕ್ಕಳಾಗಿ, ಸಹೋದರರೊಂದಿಗೆ ಸಲುಗೆ, ಜಗಳ, ಗೆಳೆತನದಿಂದಾಗಿ ಸಂಪೂರ್ಣ ಬಾಲ್ಯವನ್ನು ಕಳೆದ ಸುಖದ ಕ್ಷಣಗಳು, ಎಲ್ಲರೂ ದೊಡ್ಡವರಾಗಿ ಅವರವರ ದಾರಿ ಹಿಡಿದಾಗ ಆಗುವ ನೆನಪುಗಳು ದುಃಖವಾಗಿ ಮುಗಿಬಿದ್ದು ಮನಸನ್ನು ಹಿಂಡಿ ಬಿಡುವವು. ಮುಂದೆ ಯೌವನದಲ್ಲಿ, ವೈವಾಹಿಕ ಜೀವನದಲ್ಲಿ ಸಂಗಾತಿಯೊಂದಿಗೆ ಕಳೆದ ಅತ್ಯಂತ ಸುಖದ ಕ್ಷಣಗಳು ಬಾಳ ಸಂಜೆಯಲ್ಲಿ ಸಂಗಾತಿಯ ಅಗಲಿಕೆ ಉಂಟಾದಾಗ ಜೀವನದ ಅತ್ಯಂತ ದುಃಖದ ಕ್ಷಣಗಳಾಗಿ ಶಾಶ್ವತವಾಗಿ ಘಾಸಿಗೊಳಿಸುತ್ತಲೇ ಇರುವವು. ನಮ್ಮದೇ ಮಕ್ಕಳೊಂದಿಗೆ ಮಕ್ಕಳಾಗಿ ಪ್ರತಿಯೊಂದು ಬೆಳವಣಿಗೆಗೂ ಸಾಕ್ಷಿಯಾಗಿ ಸುಖಿಸಿದ ಗಳಿಗೆಗಳೆಲ್ಲವೂ ಅತ್ಯಂತ ರೋಚಕವಾದವುಗಳು. ಹೆತ್ತವರ ವೃದ್ಧಾಪ್ಯದಲ್ಲಿ ಮಕ್ಕಳು ಆಸರೆ ಇದ್ದರೆ ಆ ನೆನಪುಗಳು ನಿರಂತರ ಸುಖವನ್ನು ನೀಡುವವು. ಒಂದು ವೇಳೆ ಹೆತ್ತವರನ್ನು ಮಕ್ಕಳು ಉಪೇಕ್ಷಿಸಿದರೆ ಮಾತ್ರ ಆ ನೆನಪುಗಳೇ ಭಯಾನಕ ದುಃಖ ತರುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಒಂದು ಕಾಲದ ಸುಖವು ಕಾಲ ಬದಲಾದಾಗ ದುಃಖವಾಗಿ ಪರಿವರ್ತನೆಯಾದರೆ, ಕಷ್ಟವೆಂದೆನಿಸಿದ ದಿನಗಳು ಸುಖವಾಗಿ ಮಾರ್ಪಡುವುದೂ ಇದೆ. ಗತಕಾಲದ ವ್ಯವಹಾರಗಳು ಬಾಳಸಂಜೆಯಲ್ಲಿ ಸುಖವನ್ನೇ ತರುವಂತಾದರೆ ಅನುಭವಿಸಿದ ಎಲ್ಲ ಕಷ್ಟಗಳೂ ವರದಾನವೇ. ಒಂದುವೇಳೆ ಇದಕ್ಕೆ ವಿರೋಧವಾದರೆ ಅನುಭವಿಸಿದ ಎಲ್ಲ ಸುಖಗಳೂ ಶಾಪವಾಗುವುದರಲ್ಲಿ ಸಂದೇಹವಿಲ್ಲ. 


ಕೆಲವೊಂದು ವಿಪರ್ಯಾಸಗಳನ್ನು ನೋಡೋಣ. ನಾನು ಪ್ರಥಮವಾಗಿ ಬೆಂಗಳೂರಿಗೆ ಇಪ್ಪತ್ತು ರೂಪಾಯಿಯ ಟಿಕೇಟು ಪಡಕೊಂಡು ಕೆಂಪು ಬಸ್ಸಲ್ಲಿ ಹೋಗಿದ್ದನ್ನು ಇಂದಿಗೂ ಮರೆಯಲಾರೆ. ಇವತ್ತು ರಾಜಮಾರ್ಗಗಳೇ ಇರಬಹುದು, ಬಸ್ಸುಗಳು ರಾಜಹಂಸಗಳೇ ಇರಬಹುದು ಅಥವಾ ಸ್ವಂತ ವಾಹನಗಳೇ ಇರಬಹುದು ಆದರೆ ಅಂದು ಪ್ರತಿಯೊಂದು ಸ್ಥಳಗಳನ್ನು ಕುತೂಹಲದಿಂದ ನೋಡುತ್ತ, ಚಾಲಕನ ಚಾಲಾಕಿತನದ ಚಾಲನೆಯನ್ನು ಕುತೂಹಲದಿಂದ ಕಾಣುತ್ತ, ಸಾಮಾನ್ಯ ಆಸನಗಳ ಬಸ್ಸಿನಲ್ಲಿ ಕೂತು ಪ್ರಯಾಣಿಸಿದ ಅನುಭವ ಮಾತ್ರ ಇಂದಿಗೂ ಅಪ್ಯಾಯಮಾನವೇ... ಯಾವುದೇ ಶೀತ, ಜ್ವರ ಬಂದರೂ ಔಷಧಿಗೆ ಹಣವಿರದೆ ಕಾಳು ಮೆಣಸಿನ ಖಾರವಾದ ಕಷಾಯವನ್ನು ಅರ್ಧ ಘಂಟೆ ಗುಟುಕು ಗುಟುಕಾಗಿ ಕಣ್ಣಲ್ಲಿ, ಬಾಯಲ್ಲಿ ನೀರು ಬರಿಸಿ ಕುಡಿಯಲು ಕಷ್ಟವೆನಿಸುತ್ತಿದ್ದರೂ ವ್ಯಾಧಿ ಗುಣಮುಖವಾಗುತ್ತಿತ್ತು. ಆದರೆ ಅದರ ಪರಿಣಾಮ ಇಂದು ಸುಖವಾಗಿ ಕಾಣುತ್ತದೆ... ಯೌವನದಲ್ಲಿರುವಾಗ ಕೃಷಿ ಕೆಲಸಕ್ಕೆ ಆಳು ಕಾಳು ಹೇಳುವಷ್ಟು ಅನುಕೂಲವಿಲ್ಲದೆ ಸ್ವಂತ ದುಡಿಯಲು ಕಷ್ಟವಾಗುತ್ತಿದ್ದರೂ ಅದರ ಫಲ ಸುಖವೇ ಆಗಿದೆ... ಅದೇರೀತಿ ಬಡತನ ಮಾನಾಪಮಾನ ಎಲ್ಲವೂ ಸಣ್ಣ ಪ್ರಾಯದಲ್ಲಿ ಕಷ್ಟವನ್ನೇ ಕೊಡುತ್ತಿದ್ದರೂ ಮುಂದೆ ಜೀವನಕ್ಕೆ ಅದರಿಂದ ಬಹಳ ಪಾಠಗಳು ದೊರೆತು ಬದುಕು ಸುಖಾಂತ್ಯವಾಗಲು ಸಾಧ್ಯತೆಗಳಿವೆ. ಹೀಗೇ ಹಲವಾರು ಸಂದರ್ಭಗಳಲ್ಲಿ ಸುಖ ದುಃಖದ ಪರಿಣಾಮ ಜೀವನದ ಪೂರ್ವಾರ್ಧಕ್ಕಿಂತ ಉತ್ತರಾರ್ಧಕ್ಕೆ ಪರಿಣಾಮ ಹೆಚ್ಚು ಬೀರುವುದು. ಆ ನಿಟ್ಟಿನಲ್ಲಿ ಸುಖ ದುಃಖವೆಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆಯಾದಂಥ ಅನುಭವವನ್ನು ನೀಡುವುದು. ಆದರೆ ಯಾವನಿಗೇ ಆದರೂ ಕಷ್ಟಗಳು ಸಣ್ಣ ಪ್ರಾಯದಲ್ಲಿ ಬಂದರೆ ಅದನ್ನು ಆತ ಸಾಧನೆಗಾಗಿ ಬಳಸಿಕೊಳ್ಳಬಹುದು. ವೃದ್ಧಾಪ್ಯದಲ್ಲಿ ಬಂದರೆ..!! ಕಷ್ಟ ಕಷ್ಟ. ಆವಾಗಲೇ ಆತನಿಗೆ ಹಿಂದೆ ಅನುಭವಿಸಿದ ಸುಖಗಳೂ ಕಷ್ಟಗಳಾಗಿ ಕಾಡುವುದು. ಆದ್ದರಿಂದ ಸುಖವೆಂದೆನಿಸುವ ಕಷ್ಟಗಳು ನಮ್ಮದಾಗಲಿ...

**********

-ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post