|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಡೊಂಗರಕೇರಿ: ಎಸೆಸೆಲ್ಸಿ ಸಾಧಕರಿಗೆ ಸನ್ಮಾನ

ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಡೊಂಗರಕೇರಿ: ಎಸೆಸೆಲ್ಸಿ ಸಾಧಕರಿಗೆ ಸನ್ಮಾನ


ಮಂಗಳೂರು: ಕೆನರಾ ಹೈಸ್ಕೂಲ್ ಅಸೋಸಿಯೇಷನ್, ಮಂಗಳೂರು ಇವರು ಕೆನರಾ ಪ್ರೌಢ ಶಾಲೆ ಡೊಂಗರಕೇರಿ ಮತ್ತುಕೆನರಾ ಪ್ರೌಢ ಶಾಲೆ ಉರ್ವ ಇಲ್ಲಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸುವ ಕಾರ್ಯಕ್ರಮ ಶ್ರೀ ರಮಣ ಪೈ ಸಭಾಭವನದಲ್ಲಿ ನಡೆಯಿತು. ಎರಡು ಪ್ರೌಢಶಾಲೆಗಳ 64 ವಿದ್ಯಾರ್ಥಿಗಳನ್ನು ನಗದು ಬಹುಮಾನವನ್ನು ನೀಡಿ ಅವರ ಹೆತ್ತವರ ಜೊತೆಗೆ ಸನ್ಮಾನಿಸಲಾಯಿತು.


ಕಾರ್ಯಕ್ರಮದ ಮುಖ್ಯ ಅತಿಥಿ ಮಂಗಳೂರು ನಗರ ಪೊಲೀಸ್ ಮುಖ್ಯ ಟ್ರಾಫಿಕ್ ವಾರ್ಡನ್ ಪ್ರೊ. ಎಂ. ಎಲ್ ಸುರೇಶ್ ನಾಥ್ ರವರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡುತ್ತಾ ಅಂಕಗಳನ್ನು ಹೆಚ್ಚಿಸಿಕೊಳ್ಳುವುದು ಮಾತ್ರ ಶಿಕ್ಷಣದ ಗುರಿಯಾಗಬಾರದು. ವಿದ್ಯಾರ್ಥಿಗಳನ್ನು ದೇಶಸೇವೆಗೆ ಸಜ್ಜಾಗುವಂತೆ ಮಾಡುವುದು ಶಿಕ್ಷಕರು ಮತ್ತು ಪೋಷಕರ ಜವಾಬ್ದಾರಿಯಾಗಿದೆ. ಸೈನ್ಯಕ್ಕೆ ಸೇರಿ ದೇಶ ರಕ್ಷಣೆಯ ಕಾರ್ಯದಲ್ಲಿ ತೊಡಗುವುದು ನಮ್ಮ ಮೊದಲ ಆದ್ಯತೆಯಾಗಬೇಕು. ಜ್ಞಾನದ ಜೊತೆ ಕೌಶಲ್ಯಗಳನ್ನು ಬೆಳೆಸಿಕೊಂಡಾಗ ಜೀವನದ ಯಶಸ್ಸು ಸಾಧ್ಯ. ಬರಿಯ ಅಂಕಗಳು ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ ಅದರ ಜೊತೆ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.


ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿ ಎಂ.ಎಸ್. ಪೈ& ಕೋ ಇದರ ಆಡಳಿತ ಪಾಲುದಾರರಾಗಿರುವ, ಕೆನರಾ ಸಂಸ್ಥೆಯ ಹಳೆಯ ವಿದ್ಯಾರ್ಥಿ ಆದಿತ್ಯ ಪೈಯವರು ಮಾತನಾಡುತ್ತ ಸೃಜನಶೀಲ ವಿದ್ಯಾರ್ಥಿಗಳು ಭಾರತೀಯ ನಾಗರಿಕ ಸೇವೆಗಳ ಕಡೆಗೆ ಗಮನಹರಿಸಬೇಕು. ಹೆತ್ತವರು ಮತ್ತು ಶಿಕ್ಷಕರ ಪ್ರೋತ್ಸಾಹ, ವಿದ್ಯಾರ್ಥಿಗಳ ಸತತ ಪ್ರಯತ್ನದಿಂದ ಇಂತಹ ಅವಕಾಶಗಳು ದೊರಕುತ್ತವೆ. ಹೊಸತನವನ್ನು ಹುಡುಕುವ ಸಾಮರ್ಥ್ಯಗಳನ್ನು ನಾವು ಅಂತರ್ಗತಗೊಳಿಸಿ ಕೊಳ್ಳಬೇಕು ಎಂದು ಹೇಳಿದರು.


ಕೆನರಾ ಆಡಳಿತ ಮಂಡಳಿಯ ಮಾನ್ಯ ಕಾರ್ಯದರ್ಶಿಗಳಾದ ರಂಗನಾಥ ಭಟ್ ಮಾತನಾಡಿ, ಗುಣಾತ್ಮಕ ಶಿಕ್ಷಣಕ್ಕೆ ನಮ್ಮ ಸಂಸ್ಥೆಯು ಸದಾ ಪ್ರೋತ್ಸಾಹ ನೀಡುತ್ತ ಬಂದಿದೆ. ಹಣಕಾಸಿನ ಕಾರಣದಿಂದ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯಾಗಬಾರದು. ನೈತಿಕ ಮತ್ತು ಬೌದ್ಧಿಕತೆಯನ್ನು ಬೆಂಬಲಿಸುವ ಕ್ರಿಯಾಶೀಲ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದೆ ಎಂದರು.


ಕೆನರಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಪದ್ಮನಾಭ ಪೈ ಯವರು ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡುತ್ತ ವಿದ್ಯಾರ್ಥಿಗಳು, ನಮ್ಮ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವ ತಮ್ಮ ತಂದೆ ತಾಯಿಗಳನ್ನು ಸದಾ ಗೌರವಿಸಬೇಕು. ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು. ಬದುಕಿನ ಕಷ್ಟಗಳನ್ನು ಮೆಟ್ಟಿನಿಲ್ಲುವ ಆಲೋಚನೆಗಳನ್ನು ಬೆಳೆಸಿಕೊಳ್ಳಬೇಕು. ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳುತ್ತಾ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.


ಕೆನರಾ ಪ್ರೌಢ ಶಾಲೆ, ಡೊಂಗರಕೇರಿ ಇಲ್ಲಿಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅರುಣಾ ಕುಮಾರಿ ಹಾಗೂ ಕೆನರಾ ಪ್ರೌಢ ಶಾಲೆ, ಉರ್ವಾ ಇಲ್ಲಿಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ನವಿತಾ ಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಾಗೂ ಸಂಸ್ಥೆಯ ನಿವೃತ್ತ ಮುಖ್ಯೋಪಾಧ್ಯಾಯರುಗಳು, ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಸಂಗೀತ ಶಿಕ್ಷಕಿ ಶ್ರೀಮತಿ ರಚನಾ ಕಾಮತ್ ಇವರ ನಿರ್ದೇಶನದಲ್ಲಿ ಮೂಡಿಬಂದ ಶಾಲಾ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವು ಕೆನರಾ ಪ್ರೌಢ ಶಾಲೆ, ಡೊಂಗರಕೇರಿ ಇದರ ಸಂಚಾಲಕರಾದ ಬಸ್ತಿ ಪುರುಷೋತ್ತಮ ಶೆಣೈ ಇವರ ಸ್ವಾಗತದೊಂದಿಗೆ, ಕೆನರಾ ಪದವಿಪೂರ್ವ ಕಾಲೇಜಿನ ಸಂಚಾಲಕರಾದ ಗೋಪಾಲಕೃಷ್ಣ ಶೆಣೈ ಇವರ ವಂದನಾರ್ಪಣೆಯೊಂದಿಗೆ ಮುಕ್ತಾಯಗೊಂಡಿತು.


ಕೆನರಾ ಪ್ರೌಢ ಶಾಲೆ ಉರ್ವ ಇಲ್ಲಿಯ ಶಿಕ್ಷಕಿ ಶ್ರೀಮತಿ ಲೀನಾ ಭಟ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 تعليقات

إرسال تعليق

Post a Comment (0)

أحدث أقدم