||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಭ್ಯ ಸಂಸ್ಕೃತಿಯನ್ನು ಬಿಂಬಿಸುವ ತುಳುವರ ಯುಗಾದಿ ‘ಬಿಸುಪರ್ಬ’

ಸಭ್ಯ ಸಂಸ್ಕೃತಿಯನ್ನು ಬಿಂಬಿಸುವ ತುಳುವರ ಯುಗಾದಿ ‘ಬಿಸುಪರ್ಬ’-ಭಾಸ್ಕರ್ ರೈ ಕುಕ್ಕುವಳ್ಳಿ


ತುಳುನಾಡು ಹಲವು ವೈವಿಧ್ಯಗಳ ಸಂಗಮ. ಈ ನೆಲದ ಸಂಸ್ಕೃತಿ, ಜನಜೀವನ, ಪ್ರಾಕೃತಿಕ ವೈಶಿಷ್ಟ್ಯಗಳು ಒಂದು ವಿಭಿನ್ನ ಪ್ರಕಾರದ ಛಾಪನ್ನು ಹೊಂದಿದೆ. ಅನೇಕ ಆಚರಣೆಗಳನ್ನು, ಧಾರ್ಮಿಕ ವಿಧಿಗಳನ್ನು, ಹಬ್ಬ ಹರಿದಿನಗಳನ್ನು ಜನಜೀವನದ ಬೇರೆ ಬೇರೆ ಸ್ತರಗಳಲ್ಲಿ ನಡೆಸಿಕೊಂಡು ಬರುವ ತುಳುವರು ಇವುಗಳನ್ನು ತಮ್ಮ ಬದುಕಿನ ಒಂದು ಅವಿಭಾಜ್ಯ ಅಂಗವಾಗಿ ಸ್ವೀಕರಿಸಿದ್ದಾರೆ. ಇಲ್ಲಿನ ಹಬ್ಬಗಳು, ಜಾನಪದ ಕ್ರೀಡೆಗಳು, ಪಾರಂಪರಿP ರೀತಿ-ರಿವಾಜುಗಳು, ಕಟ್ಟುಕಟ್ಟಳೆಗಳು ತುಳುಜನರ ಸಾಂಸ್ಕøತಿಕ ಸಂಪನ್ನತೆಗೆ ಸಾಕ್ಷಿಯಾಗಿವೆ. ಯಕ್ಷಗಾನ ಭೂತಾರಾಧನೆ, ಕಂಬಳ, ಕಳೆಂಜ, ಕರಂಗೋಳು, ಕೋಳಿಕಾಳಗ ಮತ್ತಿತರ ಜಾನಪದ ಆಟಗಳು, ಸಾಂಪ್ರದಾಯಿಕ ಕುಣಿತಗಳು ತುಳುವರದ್ದೇ ಆಗಿ ಪ್ರಸಿದ್ಧಿಯಲ್ಲಿವೆ.


ಈ ನಾಡಿನ ಎಲ್ಲಾ ಆಚರಣೆಗಳೂ ಸಭ್ಯತೆಯ ಎಲ್ಲೆಯನ್ನು ಮೀರದೆ, ಇಲ್ಲಿ ವಾಸವಾಗಿರುವ ಎಲ್ಲರನ್ನೂ ಒಳಗೊಂಡು ಅನಾವರಣಗೊಳ್ಳುವುದರಿಂದ ಐಕ್ಯತಾಭಾವವನ್ನು ಗಟ್ಟಿಗೊಳಿಸುವ ಆಶಯ ಹೊಂದಿದೆ. ತುಳುವರ ಹೊಸವರ್ಷ ಆಚರಣೆಯಾದ ಬಿಸುಪರ್ಬ (ವಿಷುಹಬ್ಬ) ಇದೇ ಬಗೆಯದ್ದು. ಕರ್ನಾಟಕದ ಇತರ ಭಾಗಗಳಲ್ಲಿ ಹೊಸ ಸಂವತ್ಸರ ಆರಂಭಗೊಳ್ಳಲು ಚಾಂದ್ರಮಾನ ಯುಗಾದಿಯಾದರೆ ನಮಗೆ ಸೌರಮಾನ ಯುಗಾದಿ. ಚಂದ್ರನ ಚಲನೆಯನ್ನು ಅನುಸರಿಸಿ ಫಾಲ್ಗುಣಿ ಕಳೆದು ಚೈತ್ರಮಾಸದ ಪ್ರಥಮ ದಿನ ಹೊಸ ವರ್ಷ ಪ್ರಾರಂಭವಾಗುತ್ತದೆ; ಇದು ಚಾಂದ್ರಮಾನ ಯುಗಾದಿ. ಹಾಗೇಯೇ ಸೂರ್ಯನಚಲನೆಯನ್ನು ಹೊಂದಿಕೊಂಡು ಮೀನಮಾಸ ಕಳೆದು ಮೇಷ ಮಾಸದ ಪ್ರಥಮ ದಿನ ಅಂದರೆ ಸಾಮಾನ್ಯವಾಗಿ ಎಪ್ರಿಲ್ ತಿಂಗಳ 14-15ರಂದು ಹೊಸ ವರ್ಷ ಆರಂಭವಾಗುತ್ತದೆ. ತುಳುವರ ಮಟ್ಟಿಗೆ ಇದುವೇ ‘ಬಿಸುಪರ್ಬ. ಆದ್ದರಿಂದ ವಿಷು ‘ತೌಳವ ಯುಗಾದಿ’ ಎಂದೇ ಪ್ರತೀತಿ.


ಬಿಸು ಕಣಿ

‘ಬಿಸು ಭೀಮೆ ಕೊಂಡು ಕಂತ್ಯೆಂಡ

ಅಷ್ಟೆಮಿಗ್ ಕೃಷ್ಣದೇವೆರ್ ಉದಿತ್ ಬರ್ಪೆರ್’


ತುಳು ಭಾಷೆಯ ಈ ಪುಟ್ಟ ನುಡಿಗಟ್ಟಿನಲ್ಲಿ ಹಬ್ಬಗಳಿಗೆ ಕೊನೆ ವಿಷು; ಪ್ರಾರಂಭ ಅಷ್ಟಮಿ ಎಂದು ವ್ಯಕ್ತವಾಗುತ್ತದೆ. ತುಳುನಾಡಿನಲ್ಲಿ ಹಿಂದಿನ ವರ್ಷದ ಕೊನೆಯ ದಿನವೇ ವಿಷು ಸಂಕ್ರಮಣ. ಅಂದು ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಅಲ್ಲಿಗೆ ಪಗ್ಗು ತಿಂಗಳು ಆರಂಭದ ಮೊದಲ ದಿನ. ಆ ದಿನ ಬೆಳಗ್ಗಿನ ಜಾವವೇ ಮನೆಯ ಯಜಮಾನ ತಲೆಸ್ನಾನ ಮಾಡಿ, ಶುಚಿರ್ಭೂತನಾಗಿ ಹೊಸ ಮಡಿಯುಟ್ಟು ಕಣಿ ಇಡುವುದು ಪದ್ಧತಿ. ‘ಬಿಸುಕಣಿ’ ಹೊಸ ವರ್ಷದ ಸಂಭ್ರಮದ ಒಂದು ವಿಶಿಷ್ಟ ಅಭಿವ್ಯಕ್ತಿ. ದೇವರ ಮನೆಯನ್ನು ಶುಚಿಗೊಳಿಸಿ, ಎಲ್ಲಾ ಬಗೆಯ ತರಕಾರಿ ಮತ್ತು ಫಲವಸ್ತುಗಳನ್ನು ಒಂದೆಡೆ ಕೂಡಿಹಾಕಿ, ಎಲೆ-ಅಡಿಕೆ, ಅಕ್ಕಿ-ತೆಂಗಿನಕಾಯಿ, ಕಳಶ ಕನ್ನಡಿಗಳನ್ನು ಅಣಿಗೊಳಿಸಿ, ಹೊಸ ವಸ್ತ್ರ-ನಗನಾಣ್ಯಗಳೊಂದಿಗೆ ಒಪ್ಪವಾಗಿ ಪೇರಿಸಿ ದೇವರಿಗೆ ಅಭಿಮುಖವಾಗಿ ಶ್ರೀಗಂಧ, ಧೂಪ-ದೀಪ ಹಚ್ಚಿಡುವ ವ್ಯವಸ್ಥೆಗೆ ‘ಕಣಿ’ ಎಂದು ಹೆಸರು.


ಮನೆಮಂದಿಯೆಲ್ಲಾ ಮುಂಜಾನೆ ಎದ್ದಕೂಡಲೇ ‘ಕಣಿ’ ಎದುರು ಕಣ್ಣುಬಿಟ್ಟು ಅದಕ್ಕೆ ನಮಸ್ಕರಿಸುವುದು ರೂಢಿ. ಬಳಿಕ, ಮನೆಯ ಯಜಮಾನ, ಅಪ್ಪ-ಅಮ್ಮ’ ಗುರುಹಿರಿಯರಿಗೆ ಕಾಲುಮುಟ್ಟಿ ನಮಸ್ಕರಿಸುವುದು ಪದ್ಧತಿ. ಊರಿನ ದೇವಸ್ಥಾನ, ಭೂತಾಲಯ, ಗುತ್ತಿನಮನೆ, ತರವಾಡುಗಳಲ್ಲಿ ಈ ಕಣಿ ಇಡುವ ಸಂಪ್ರದಾಯ ಬೆಳೆದು ಬಂದಿದೆ.


ತುಳುವರೆಲ್ಲಾ ಬೆಳಿಗ್ಗೆ ಬೇಗನೇ ಎದ್ದು ಸಚೇಲ ಸ್ನಾನ ಮಾಡಿ, ಹೊಸ ಬಟ್ಟೆ ಬರೆಗಳನ್ನು ಧರಿಸಿ ಹಿರಿಯರ ಆಶೀರ್ವಾದ ಬೇಡಿ, ದಿನದ ಚಟುವಟಿಕೆಗಳಿಗೆ ತೊಡಗುವುದು ಬಿಸುಪರ್ಬದ ವಿಶೇಷ. ಕುಟುಂಬದ ಸದಸ್ಯರು ಎಲ್ಲೇ ಇದ್ದರೂ ಆದಿನ ತರವಾಡಿನ ಮನೆಯಲ್ಲಿ ಸೇರಬೇಕು. ದೈವದೇವರು, ಗುರುಕಾರ್ನವರನ್ನು ಪ್ರಾರ್ಥಿಸಿ ಹಬ್ಬದೂಟ ಮಾಡುವುದು ಅಂದು ವಾಡಿಕೆ. ಸ್ನೇಹಿತರ ಮತ್ತು ಬಂಧುಗಳ ಮನೆಗೆ ಭೇಟಿಯಿತ್ತು, ಅಲ್ಲಿರುವ ಹಿರಿಯರಿಗೆ ನಮಸ್ಕರಿಸುವುದು, ಭೋಜನ ಸ್ವೀಕರಿಸುವುದು ಸಂಪ್ರದಾಯ. ಹೆಸರು ಮತ್ತು ಹಸಿಗೇರು ಬೀಜದ ಪಲ್ಯ, ಹೆಸರು ಬೇಳೆಯ ಪಾಯಸ, ಮೂಡೆ, ಕೊಟ್ಟಿಗೆ, ಕಡಬು... ಇತ್ಯಾದಿ ತಿಂಡಿಗಳನ್ನು ಮಾಡಿ  ಇತರರಿಗೆ ಉಣ್ಣಿಸುವುದೆಂದರೆ ಎಲ್ಲಿಲ್ಲದ ಸಂಭ್ರಮ. ಅನ್ಯ ಜಾತಿ-ಧರ್ಮದವರನ್ನು ಈ ದಿನ ವಿಶೇಷವಾಗಿ ಆದರಿಸಿ ಉಪಚರಿಸುತ್ತಾರೆ.  


ಎಳ್ಳು-ಬೆಲ್ಲಕ್ಕೆ ಬದಲಾಗಿ ‘ಬೆಲ್ಲ-ನೀರು’

ಯಾವುದೇ ಒಂದು ಹಬ್ಬಕ್ಕೆ ಆಚರಣೆಯಲ್ಲಿ ತುಳುವರು ಇತರರಿಗೆ ಭಿನ್ನವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇದರಲ್ಲಿ ಆಧುನಿಕತೆಯ ಆಡಂಬರ, ನವೀನ ತಂತ್ರಜ್ಞಾನಗಳ ಬಳಕೆ ಕಂಡು ಬರುವುದಿಲ್ಲ. ತುಳುಮಣ್ಣಿನ ಸರಳ ಸುಂದರ ನಡವಳಿಕೆ ಮಾತ್ರ ಇಲ್ಲಿ ವ್ಯಕ್ತವಾಗುತ್ತದೆ. ವಿಷು ಹಬ್ಬದ ಸಂದರ್ಭದಲ್ಲಿಯೂ ಇದನ್ನು ಕಾಣಬಹುದು. ಯುಗಾದಿಯ ‘ಎಳ್ಳು-ಬೆಲ್ಲ’ ಇಲ್ಲಿಲ್ಲ. ಅದರ ಬದಲು ತುಳು ಸಂಸ್ಕøತಿಯ ಸಾಂಪ್ರದಾಯಿಕ ಆಸರು ‘ಬೆಲ್ಲ-ನೀರು’ ನೀಡಿ ಸ್ವಾಗತಿಸುವುದು ಆತಿಥ್ಯದ ವೈಶಿಷ್ಟ್ಯ! ಬೆಲ್ಲ ಮತ್ತು ನೀರಿನ ಎರಕದಂತೆ ಬದುಕಿನಲ್ಲಿ ಸದಾ ಸಿಹಿ ತುಂಬಿರಲಿ ಎಂಬುದು ಇದರ ಆಶಯ. ಅದರೊಂದಿಗೆ ಸುಪುಷ್ಟ ಭೋಜನ ನೀಡಿ ತೃಪ್ತಿಯ ಸಂಕೇತವಾಗಿ ವೀಳ್ಯದೆಲೆ ಅಡಿಕೆ ಕೊಟ್ಟು ಬೀಳ್ಕೊಡುವುದು ಅತಿಥಿ ಸತ್ಕಾರದ ಇನ್ನೊಂದು ಮುಖ. ಜನರು ಸಾಮಾನ್ಯವಾಗಿ ದ್ವೇಷ-ವೈಷಮ್ಯಗಳನ್ನು ಮರೆತು ಸಿಹಿಯನ್ನು ಹಂಚಿ ಪರಸ್ಪರ ಸೌಹಾರ್ದತೆಗೆ ತೆರೆದುಕೊಳ್ಳುವ ಸಂಭ್ರಮದ ವಾತಾವರಣವನ್ನು ಬಿಸುಕಣಿಯಂದು ಕಾಣಬಹುದು.


ಬೆಳೆ ಕಾಣಿಕೆ:

ವಿಷು ಹಬ್ಬದಂದು ಊರಿನ ಪ್ರತಿಷ್ಠಿತರ ಮನೆಬಾಗಿಲು ಎಲ್ಲರಿಗೂ ತೆರೆದಿರುತ್ತದೆ. ಆ ದಿನ ಕೃಷಿಕರ ಮನೆಯಲ್ಲಿ ಬೆಳೆ ಕಾಣಿಕೆ (ಬುಳೆಕಾನಿಕೆ)ಯ ರಾಶಿಯೇ ಬಿದ್ದಿರುತ್ತದೆ. ಹಸಿಗೇರು ಬೀಜ, ಧಾನ್ಯ, ತರಕಾರಿ, ಕಾಯಿಪಲ್ಯ ಇತ್ಯಾದಿಗಳನ್ನು ಧಣಿಗಳಿಗೆ ಒಪ್ಪಿಸಿ ಒಕ್ಕಲಿನವರು ತಮ್ಮ ಗೌರವ ಸಲ್ಲಿಸುತ್ತಾರೆ. ಬೇರೆ ಬೇರೆ ಕುಲಕಸುಬಿನವರು ಮತ್ತು ಹಿಂದುಳಿದ ವರ್ಗದವರು ತಮ್ಮ ಉತ್ಪನ್ನಗಳನ್ನು  ಪ್ರತಿಷ್ಠಿತರ ಅಂಗಳದಲ್ಲಿಟ್ಟು ಕೈಮುಗಿಯುತ್ತಾರೆ. ಇದರಲ್ಲಿ ಮಣ್ಣಿನ ಮಡಿಕೆ, ಕಬ್ಬಿಣದ ಕತ್ತಿ, ನಾರಿನ ಬುಟ್ಟಿ, ಪೂಜೆಯ ಬತ್ತಿ, ಚರ್ಮದ ಪಾದರಕ್ಷೆ. ಮರದ ಸೌಟು, ಮಣೆ, ಚಿನ್ನ ಬೆಳ್ಳಿಯ ಒಡವೆ ಇತ್ಯಾದಿ ಕರಕುಶಲ ವಸ್ತುಗಳು ಸೇರಿರುತ್ತವೆ. ಅದಕ್ಕೆ ಪ್ರತಿಯಾಗಿ ಸಿಹಿಭೋಜನವಲ್ಲದೆ ಹಣ, ವಸ್ತ್ರ, ಅಕ್ಕಿ, ಎಣ್ಣೆ, ತೆಂಗಿನಕಾಯಿಗಳನ್ನು ಪಡೆದು ಸಂತೃಪ್ತರಾಗಿ ತೆರಳುತ್ತಾರೆ.

ತುಳುನಾಡಿನಲ್ಲಿ ಜನರು ಶುಭ ಕಾರ್ಯಗಳನ್ನು ಆರಂಭಿಸಲು ಈ ವಿಷು ಹಬ್ಬದ ದಿನವನ್ನೇ ಪ್ರಶಸ್ತಿವೆಂದು ಭಾವಿಸುತ್ತಾರೆ. ಮನೆಗೆ ಕುಟ್ಟಿ ಹೊಡೆಯುವುದು (ಶಂಕುಸ್ಥಾಪನೆ), ಕೈಬಿತ್ತು ಹಾಕುವುದು (ಬೀಜಬಿತ್ತನೆ), ಸಣ್ಣ ಮಕ್ಕಳಿಗೆ ಕಿವಿ ಚುಚ್ಚುವುದು (ಆಭರಣ ತೊಡಿಸುವುದು) ಇತ್ಯಾದಿ ಈ ದಿನವೇ ನಡೆಯಬೇಕು. ಇದರ ಜೊತೆಗೆ ಕೋಳಿ ಅಂಕ (ಬಿಸು ಕಟ್ಟ), ತೆಂಗಿನಕಾಯಿ ಕುಟ್ಟುವುದು, ಜಟ್ಟಿಕಾಳಗ (ಮಣ್ಣಿನ ಕುಸ್ತಿ) ಇತ್ಯಾದಿ ಜನಪದ ಕ್ರೀಡೆಗಳೂ ಅಂದೇ ನಡೆಯುತ್ತವೆ.


‘ತುಳುಕೂಟ’ದ ಆದರ್ಶ:

ಆಧುನಿಕತೆಯ ಗಾಳಿ ಬೀಸುತ್ತಿರುವ ಇಂದಿನ ದಿನಗಳಲ್ಲಿ ಹಳೆಯ ಆಚರಣೆಗಳೆಲ್ಲ ಮೂಲೆಗುಂಪಾಗುತ್ತಿವೆ. ‘ಹಲೋ...ಹಾಯ್...’ ಸಂಸ್ಕøತಿಯ ಮಧ್ಯೆ, ಕೈಮುಗಿಯುವ, ಕಾಳು ಮುಟ್ಟಿನಮಸ್ಕರಿಸುವ ಪದ್ಧತಿಗಳು ಮರೆಯಾಗುತ್ತಿವೆ. ಗ್ರಾಮೀಣ ಸೊಗಡಿನಿಂದ ಕೂಡಿದ ಸಭ್ಯ ನಾಗರೀಕತೆಯನ್ನು ಮೆರೆದ ನಮ್ಮ ಹಳ್ಳಿಗಳಲ್ಲೇ ಈ ವಾತಾವರಣ ಕಾಣದಿರುವಾಗ ನಗರಗಳಲ್ಲಿ ಅದನ್ನು ನಿರೀಕ್ಷಿಸುವುದು ಕಷ್ಟ. ಬಿಸು ಹಬ್ಬಕ್ಕೂ ಇದೇ ಪರಿಸ್ಥಿತಿ ಬಂದೊದಗಿದರೆ ಅಶ್ಚರ್ಯವಿಲ್ಲ. ಏಕೆಂದರೆ ಈಗ ಹೊಸ ತಲೆಮಾರಿಗೆ ಅದರ ಶುದ್ಧ ಸ್ವರೂಪದ ಕಲ್ಪನೆಯೇ ಇಲ್ಲ. ಹೆಚ್ಚಿನ ಮನೆಗಳಲ್ಲಿ ‘ಬಿಸುಕಣಿ’ ಇಡುವ ಸಂಪ್ರದಾಯ ನಶಿಸಿ ಹೋಗಿದೆ. ಇಂಥ ಸಂದರ್ಭದಲ್ಲಿ ಮಂಗಳೂರಿನ ತುಳುಕೂಟ (ರಿ.) ಕುಡ್ಲ ವರ್ಷಂಪ್ರತಿ ಬಿಸುಪರ್ಬವನ್ನು ಸಾಂಕೇತಿಕವಾಗಿ  ಆಚರಿಸುವ ಮೂಲಕ ಒಂದು ಹೊಸ ಸಂಪ್ರದಾಯವನ್ನು ಹಾಕಿಕೊಟ್ಟಿದೆ.


ಪ್ರತಿವರ್ಷ ಸೌರಮಾನ ಯುಗಾದಿಯಂದು ಮಂಗಳೂರಿನ ಯಾವುದಾದರೊಂದು ಕಡೆ ‘ಬಿಸುಕಣಿ’ ಪ್ರತಿಮೆ, ಹಿರಿಯರ ಕಾಲಿಗೆ ಪೊಡಮಡುವ ದೃಶ್ಯ, ದೈವಗಳ ಗುಂಡ, ಸಂಸ್ಕೃತಿಯ ಬಾವಿ, ಬೈಹುಲ್ಲಿನ ತುಪ್ಪೆ; ಮಾರುದೂರದಲ್ಲಿ ಮುಳಿಹುಲ್ಲು ಛಾವಣಿಯ ಮನೆ, ಒಳಗೆ ಅಕ್ಕಿಮುಡಿರಾಶಿ, ತುಳುನಾಡಿನ ಪ್ರಾಚೀನ ಪರಿಕರಗಳು; ದ್ವಾರದಲ್ಲಿ ಬೆಲ್ಲನೀರು, ಎಲೆ ಅಡಿಕೆಯ ಸ್ವಾಗತ, ಆಳೆತ್ತರದ ನಂದಾದೀಪ, ತಾಳೆ-ತಿರಿಯ ಸಾಲು, ತೂಗುವ ಉಜ್ಜಾಲು, ತುಳು ಕೃತಿಗಳ ಪ್ರದರ್ಶನ, ಕೊಂಬು-ವಾದ್ಯ ಇತ್ಯಾದಿ ಕಾಣಸಿಗುತ್ತವೆ. ಇದು ಕುಡ್ಲ ತುಳುಕೂಟ ಏರ್ಪಡಿಸುವ ಶುದ್ಧತುಳು ಆಚಾರ-ವಿಚಾರಗಳನ್ನು ಬಿಂಬಿಸುವ ಬಿಸುಪರ್ಬ. ತುಳು ಸಂಸ್ಕøತಿಯ ಸಂಗೋಪನೆಗಾಗಿ ಈ ತುಳುಕೂಟವನ್ನು ಕಟ್ಟಿದವರು ದಿ.ಎಸ್.ಆರ್.ಹೆಗ್ಡೆ. ದಿ. ದಾಮೋದರ ಆರ್. ಸುವರ್ಣರು ತುಳುಕೂಟದ ಅಧ್ಯಕ್ಷರಾಗಿದ್ದಾಗ 1987ರಲ್ಲಿ ಆರಂಭವಾದ ಬಿಸುಪರ್ಬ ನಿರಂತರವಾಗಿ ತುಳು ಸಂಸ್ಕøತಿಯನ್ನು ಪ್ರತಿಬಿಂಬಿಸುವಂತೆ ಆಚರಿಲ್ಪಡುತ್ತದೆ. ಮಂಗಳೂರು ತುಳುಕೂಟದ ಪ್ರಸಕ್ತ ಪದಾಧಿಕಾರಿಗಳು ಈ ಪರಂಪರೆಯನ್ನೂ ಈಗಲೂ ಮುಂದುವರಿಸುತ್ತಿರುವುದು ಅಭಿನಂದನಾರ್ಹ.


-ಭಾಸ್ಕರ ರೈ ಕುಕ್ಕುವಳ್ಳಿ 

‘ವಿದ್ಯಾ’ ಕದ್ರಿ ಕಂಬಳ ರಸ್ತೆ

ಬಿಜೈ ಮಂಗಳೂರು - 575004

ಮೊಬೈಲ್: 9449016616


hit counter

0 Comments

Post a Comment

Post a Comment (0)

Previous Post Next Post