|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜ್ಞಾನಪೀಠ ಪ್ರಶಸ್ತಿ- ಸಾಹಿತ್ಯ ಲೋಕದ ಅತ್ಯುನ್ನತ ಪುರಸ್ಕಾರ

ಜ್ಞಾನಪೀಠ ಪ್ರಶಸ್ತಿ- ಸಾಹಿತ್ಯ ಲೋಕದ ಅತ್ಯುನ್ನತ ಪುರಸ್ಕಾರ


ಭಾರತದ ಇತಿಹಾಸದಲ್ಲಿ ಅತ್ಯಂತ ಪುರಾತನವಾದ ಮತ್ತು ಪರಮಪೂಜ್ಯವಾದ ಸಾಹಿತ್ಯ ಸಂಬಂಧಿ ಪ್ರಶಸ್ತಿಯೊಂದಿದ್ದರೆ ಅದು ಜ್ಞಾನಪೀಠ ಪ್ರಶಸ್ತಿ ಎಂದರೆ ತಪ್ಪಾಗಲಾರದು. ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರಿಗೆ ಜೀವಂತ ಇರುವಾಗಲೇ (ಮರಣೋತ್ತರವಾಗಿ ಕೊಡುವುದಿಲ್ಲ) ನೀಡುವ ಪ್ರಶಸ್ತಿ ಇದಾಗಿದೆ. ಈ ಜ್ಞಾನಪೀಠ ಪ್ರಶಸ್ತಿ 1965ರಲ್ಲಿ ಆರಂಭವಾಯಿತು. ಪ್ರಖ್ಯಾತ ಕೈಗಾರಿಕೋದ್ಯಮಿಯಾದ ಶ್ರೀ ಸಾಹು ಶಾಂತಿ ಪ್ರಸಾದ್ ಜೈನ್ ಈ ಜ್ಞಾನಪೀಠದ ಸಂಸ್ಥಾಪಕರು. ಇವರ ಪತ್ನಿ ಶ್ರೀಮತಿ ರಮಾ ಜೈನ್ ಇದರ ಮೊದಲ ಅಧ್ಯಕ್ಷೆಯಾದರು. 1944ರ ಫೆಬ್ರವರಿಯಲ್ಲಿ ಕಾಶಿಯಲ್ಲಿ ನಡೆದ ಅಖಿಲ ಭಾರತ ಪ್ರಾಚ್ಯ ವಿದ್ಯಾ ಸಮ್ಮೇಳನದಲ್ಲಿ ಈ ಪ್ರಶಸ್ತಿ ಬಗ್ಗೆ ಆರಂಭಿಕ ಚರ್ಚೆ ನಡೆಸಲಾಯಿತು. ಈ ಸಮ್ಮೇಳನದಲ್ಲಿ ಗತಿಸುತ್ತಿರುವ ಅಪೂರ್ವ ಸಾಹಿತ್ಯ ಕೃತಿಗಳ ಕುರಿತು ಸಂಶೋಧನೆ, ಸಂಪಾದನೆಗಳಿಗೆ ಪ್ರೋತ್ಸಾಹ ನೀಡುವುದು ಮತ್ತು ಅವುಗಳನ್ನು ಬೆಳಕಿಗೆ ತರುವುದು ಹಾಗೂ ಸಮಕಾಲಿನ ಸೃಜನಾತ್ಮಕ ಕೃತಿಗಳನ್ನು ಪ್ರಚುರಪಡಿಸಿ ಕೃತಿಕಾರರನ್ನು ಗೌರವಿಸುವುದು ಎಂಬ ಮಹತ್ತರವಾದ ತೀರ್ಮಾನ ತೆಗೆದುಕೊಳ್ಳಲಾಯಿತು. 21 ವರ್ಷಗಳ ಕಾಲ ಸಾಕಷ್ಟು ಚರ್ಚೆ ಸಂವಾದ ನಡೆದ ಬಳಿಕ ಅದರ ಫಲಶೃತಿಯಾಗಿ 1965ರಲ್ಲಿ ಮೊದಲ ಭಾರತ ಜ್ಞಾನ ಪೀಠ ಪ್ರಶಸ್ತಿ ನೀಡಲಾಯಿತು. ಜ್ಞಾನಪೀಠ ಪ್ರಶಸ್ತಿ ಸಮಿತಿ 1961ರಲ್ಲಿ ಮೇ 22 ರಂದು ಅಸ್ತ್ತಿತ್ವಕ್ಕೆ ಬಂದಿತ್ತು. (ಶ್ರೀ ಸಾಹು ಶಾಂತಿ ಪ್ರಸಾದ್ ಜೈನ್ ಅವರ 50ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ)


ಈ ಆಯ್ಕೆ ಸಮಿತಿಯಲ್ಲಿ ಭಾರತೀಯ ಸಾಹಿತ್ಯದಲ್ಲಿ ಪರಿಪೂರ್ಣವಾದ 11 ಮಂದಿ ಸದಸ್ಯರಿರುತ್ತಾರೆ. ಅವರು ಪ್ರಾಂತೀಯ ಸಮಿತಿಯ ಲೇಖಕರ, ವಿದ್ವಾಂಸರ ಸಲಹೆ ಸೂಚನೆಗಳನ್ನು ತೆಗೆದುಕೊಂಡು ಸಾಹಿತಿಯನ್ನು ಆರಿಸುತ್ತಾರೆ. ಸಮಾನ ಯೋಗ್ಯತೆಯ ಇಬ್ಬರು ಸಾಹಿತಿಗಳು ಅಂತಿಮ ಪಟ್ಟಿಯಲ್ಲಿದ್ದರೆ, ಅವರಿಗೆ ಸಮಾನವಾಗಿ ಪ್ರಶಸ್ತಿಯನ್ನು ಹಂಚುವ ಸಾಧ್ಯತೆ ಇರುತ್ತದೆ. ಭಾರತದ ಸಂವಿಧಾನದ 8ನೇ ಪರಿಚ್ಛೇದ ಮಾನ್ಯತೆ ಮಾಡಿರುವ ಭಾರತದ ಯಾವುದೇ 22 ಭಾಷೆಯ ಸಾಹಿತಿಯನ್ನು ಆಯ್ಕೆ ಮಾಡಬಹುದಾಗಿದೆ. ಭಾರತೀಯರಿಗೆ ಮಾತ್ರ ಈ ಪ್ರಶಸ್ತಿ ನೀಡಲಾಗುತ್ತದೆ. ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ಮಲಿಯಾಳದ ಸಾಹಿತಿ ಶ್ರೀ ಗೋವಿಂದ ಶಂಕರ್ ಕುರುಪ್ ಅವರಿಗೆ ನೀಡಲಾಯಿತು.


ಜ್ಞಾನಪೀಠ ಪ್ರಶಸ್ತಿಯನ್ನು ಸಂಸ್ಕøತದ ಶಬ್ದ ಜ್ಞಾನ ಮತ್ತು ಪೀಠ ಎಂಬ ಶಬ್ದಗಳಿಂದ ಆಯ್ಕೆ ಮಾಡಲಾಗಿದೆ. ಸುಮಾರು 11 ಲಕ್ಷ ರೂಪಾಯಿಗಳ ನಗದು ಹಣ, ದೇವಿ ಸರಸ್ವತಿಯ (ವಾಗ್ಧೇವಿ) ಕಂಚಿನ ಪ್ರತಿಮೆಯನ್ನು ಈ ಪ್ರಶಸ್ತಿ ಒಳಗೊಂಡಿದೆ. ತಾಯಿ ಸರಸ್ವತಿಯನ್ನು ಭಾರತೀಯ ಜ್ಞಾನ ಸಂಗೀತ ಮತ್ತು ಕಲೆಯ ದೇವತೆ ಎಂದೂ ಪೂಜಿಸಲಾಗುತ್ತದೆ. 1982 ರವರೆಗೆ ಲೇಖಕರ ಒಂದು ಕೃತಿಯನ್ನು ಶ್ರೇಷ್ಟ ಕೃತಿಯೆಂದು ಆಯ್ಕೆ ಮಾಡಿ, ಅದನ್ನು ಹೆಸರಿಸಿ, ಪ್ರಶಸ್ತಿ ನೀಡಲಾಗುತ್ತಿತ್ತು. ಆನಂತರ ಲೇಖಕರ ಸಮಗ್ರ ಕೃತಿಯನ್ನು ಪರಿಗಣನೆಗೆ ತೆಗೆದುಕೊಳ್ಳುವ ಸಂಪ್ರದಾಯ ಆರಂಭವಾಯಿತು.


ಈವರೆಗೆ ಸುಮಾರು 62 ಮಂದಿ ಸಾಹಿತಿಗಳು ಈ ಪ್ರಶಸ್ತಿ ಪಡೆದಿರುತ್ತಾರೆ. 11 ಮಂದಿ ಹಿಂದಿ, 8 ಮಂದಿ ಕನ್ನಡಿಗರು, 6 ಮಂದಿ ಬಂಗಾಳಿ ಮತ್ತು ಮಲಯಾಳ, ಗುಜರಾತಿ, ಉರ್ದು, ಮರಾಠಿ, ಓರಿಯ ಭಾಷೆಗಳಲ್ಲಿ ತಲಾ ನಾಲ್ವರು ಮತ್ತು ಅಸ್ಲಾಮೀಸ್  ಹಾಗೂ ತೆಲುಗಿನಲ್ಲಿ ತಲಾ ಮೂವರು ತಮಿಳು ಮತ್ತು ಕೊಂಕಣಿಯಲ್ಲಿ ತಲಾ ಇಬ್ಬರು ಈವರೆಗೆ ಜ್ಞಾನಪೀಠ ಪ್ರಶಸ್ತಿ ಪಡೆದಿರುತ್ತಾರೆ. ಕೊನೆ ಬಾರಿ 2021 ರಲ್ಲಿ ಜ್ಞಾನ ಪೀಠ ಪ್ರಶಸ್ತಿ ನೀಡಲಾಗಿದ್ದು, ಕೊಂಕಣಿ ಸಾಹಿತಿ ಶ್ರೀ ದಾಮೋದರ ಮೌಜೀ ಅವರಿಗೆ ನೀಡಲಾಗಿತ್ತು. ಇಂಗ್ಲೀಷ್, ಕಾಶ್ಮೀರಿ ಮತ್ತು ಸಂಸ್ಕøತ ಭಾಷೆಯಲ್ಲಿ ತಲಾ ಒಬ್ಬರು ಈ ಪ್ರಶಸ್ತಿ ಪಡೆದಿರುತ್ತಾರೆ.


ಕನ್ನಡದಲ್ಲಿ ಈವರೆಗೆ ಎಂಟು ಮಂದಿಗೆ ಜ್ಞಾನಪೀಠ ಪ್ರಶಸ್ತಿ ನೀಡಲಾಗಿದೆ. 

1. ಮೊದಲ ಬಾರಿಗೆ 1967ರಲ್ಲಿ ಶ್ರೀ ರಾಮಾಯಣ ದರ್ಶನಂ ಕೃತಿಗೆ ಕುವೆಂಪು (ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ) ಅವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಲಾಯಿತು. 

2. ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ದ.ರಾ.ಬೇಂದ್ರೆ) ಅವರಿಗೆ 1973 ರಲ್ಲಿ ನಾಕುತಂತಿ ಕೃತಿಗೆ ಜ್ಞಾನಪೀಠ ನೀಡಲಾಯಿತು.

3. ಕಡಲ ತಡೆಯ ಭಾರ್ಗವಿ ಎಂದೇ ಪ್ರಖ್ಯಾತರಾದ ಶ್ರೀ ಕೆ. ಶಿವರಾಮ ಕಾರಂತ ಅವರ ಮೂಕಜ್ಜಿಯ ಕನಸುಗಳು ಕೃತಿಗೆ 1977 ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತು.

4. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರಿಗೆ 1983 ರಲ್ಲಿ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ ನೀಡಿದ್ದಕ್ಕೆ ಜ್ಞಾನಪೀಠ ಪ್ರಶಸ್ತಿ ನೀಡಲಾಯಿತು. ಚಿಕ್ಕ ವೀರ ರಾಜೇಂದ್ರ (ಗ್ರಂಥ) ವನ್ನು ವಿಶೇಷವಾಗಿ ಉಲ್ಲೇಖಿಸಲಾಗಿತ್ತು.

5. ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ ಗೋಕಾಕ್) ಅವರಿಗೆ 1990 ರಲ್ಲಿ  ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ ನೀಡಿದ್ದಕ್ಕಾಗಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ವಿಶೇಷ ಉಲ್ಲೇಖ ಭಾರತ ಸಿಂಧು ರಶ್ಮಿ ಕೃತಿ.

6. 1994 ರಲ್ಲಿ ಶ್ರೀ. ಯು.ಆರ್ ಅನಂತ ಮೂರ್ತಿ ಅವರಿಗೆ ಅವರ ಸಮಗ್ರ ಕನ್ನಡ ಸಾಹಿತ್ಯ ಸೇವೆಗಾಗಿ ಜ್ಞಾನಪೀಠ ನೀಡಲಾಯಿತು

7. 1998 ರಲ್ಲಿ ಶ್ರೀ ಗಿರೀಶ್ ಕಾರ್ನಾಡು ಅವರಿಗೆ ಕನ್ನಡ ಆಧುನಿಕ ನಾಟಕ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಗಳಿಗೆ ಜ್ಞಾನಪೀಠ ಪ್ರಶಸ್ತಿ ನೀಡಲಾಯಿತು

8. ಕೊನೆ ಬಾರಿಗೆ ಕನ್ನಡ ಸಾಹಿತ್ಯದ ಶ್ರೀ ಚಂದ್ರಶೇಖರ ಕಂಬಾರ ಅವರಿಗೆ 2010 ರಲ್ಲಿ, ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ ಸೇವೆಗೆ ಜ್ಞಾನಪೀಠ ಪ್ರಶಸ್ತಿ ನೀಡಲಾಯಿತು.


ಒಬ್ಬ ಸಾಹಿತಿಗೆ ಜೀವಮಾನದಲ್ಲಿ ಜ್ಞಾನ ಪೀಠ ಪ್ರಶಸ್ತಿ ಒಮ್ಮೆ ಮಾತ್ರ ನೀಡಲಾಗುತ್ತದೆ. ಒಂದು ಭಾಷೆಯ ಸಾಹಿತಿಗೆ ಪ್ರಶಸ್ತಿ ನೀಡಿದ ಬಳಿಕ ಮೂರು ವರ್ಷದ ಕಾಲ ಆ ಭಾಷೆಯನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ


-ಡಾ|| ಮುರಲೀ ಮೋಹನ್ ಚೂಂತಾರು

ಗೌರವ ಕಾರ್ಯದರ್ಶಿ ಕನ್ನಡ ಸಾಹಿತ್ಯ ಪರಿಷತ್ತು 

ಮಂಗಳೂರು ತಾಲೂಕು

ಪೋನ್: 9845135787

Email: drmuraleechoontharu@gmail.com


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post