ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ; ಶಿವಪಂಚಾಕ್ಷರಿ ಪಠಣದೊಂದಿಗೆ ಅಹೋರಾತ್ರಿ ಜಾಗರಣೆ

Upayuktha
0

ಉಜಿರೆ: ಧರ್ಮದ ಮರ್ಮವನ್ನರಿತು ನಮ್ಮನ್ನು ನಾವು ಶುದ್ದೀಕರಿಸಿ ಜಾಗೃತಿಗಾಗಿ ಜಾಗರಣೆ ಮಾಡಬೇಕು. ಸಂಸಾರದ ಕಷ್ಟಗಳನ್ನು ಪಾರು ಮಾಡಲು ಧರ್ಮದ ಅನುಷ್ಠಾನದೊಂದಿಗೆ ದೇವರ ಅನುಗ್ರಹವೂ ಅಗತ್ಯ ಬೇಕಾಗಿದೆ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.


ಅವರು ಮಂಗಳವಾರ ಧರ್ಮಸ್ಥಳದಲ್ಲಿ ಶಿವರಾತ್ರಿ ಸಂದರ್ಭ ಶಿವಪಂಚಾಕ್ಷರಿ ಪಠಣದೊಂದಿಗೆ ಅಹೋರಾತ್ರಿ ಜಾಗರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.


ನಮ್ಮೆಲ್ಲರ ಸುಖ-ಶಾಂತಿ, ನೆಮ್ಮದಿಯೊಂದಿಗೆ ವಿಶ್ವಶಾಂತಿಗಾಗಿ ನಾವು ಪಾರ್ಥನೆ ಮಾಡಬೇಕಾದ ಅನಿವಾರ್ಯತೆ ಹಾಗೂ ಸಂಕ್ರಮಣಕಾಲದಲ್ಲಿ ನಾವು ಈಗ ಇದ್ದೇವೆ. ಧರ್ಮದ ಬಗ್ಗೆ ತಿಳಿವಳಿಕೆ ಇದ್ದು ಆಚರಣೆ ಮಾಡಿದರೆ ಅದು ಹೆಚ್ಚು ಫಲಪ್ರದವಾಗುತ್ತದೆ. ಸತ್ಯ, ಧರ್ಮ, ನ್ಯಾಯ ಮತ್ತು ನೀತಿಯ ಪಾಲನೆಯೊಂದಿಗೆ ಎಲ್ಲರೂ ಸಚ್ಚಾರಿತ್ರ್ಯದ ಸುಜ್ಞಾನಿ ಭಕ್ಷರಾಗಬೇಕು. ಹಿತ-ಮಿತ ಆಹಾರ ಸೇವನೆಯೊಂದಿಗೆ ಶಿಸ್ತು, ಸಂಯಮ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೆಗ್ಗಡೆಯವರು ಹೇಳಿದರು.


ಪಾದಯಾತ್ರಿಗಳು ಪರಿಸರ ಮಾಲಿನ್ಯ ಮಾಡಬಾರದು. ಶಿಸ್ತಿನೊಂದಿಗೆ ಪರಿಸರ ಸಂರಕ್ಷಣೆ ಮಾಡಿ ಸ್ವಚ್ಛತೆಯನ್ನೂ ಕಾಪಾಡಬೇಕು. ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳನ್ನು ಅಲ್ಲಲ್ಲಿ ಬಿಸಾಡಿ ಇತರರಿಗೆ ತೊಂದರೆ ಉಂಟು ಮಾಡಬಾರದು ಎಂದು ಅವರು ಕಿವಿಮಾತು ಹೇಳಿದರು.


ಅತಿಯಾದ ಆಸೆ ಸಲ್ಲದು.ಭಕ್ತರು ಭಗವಂತನ ಪ್ರತಿರೂಪವಾಗಿದ್ದು ನಿಶ್ಚಿಂತೆಯಿಂದ ದೇವರಧ್ಯಾನ, ಪ್ರಾರ್ಥನೆ ಮಾಡಬೇಕು. ನಿತ್ಯದ ವ್ಯವಹಾರದಲ್ಲಿ ಕೂಡಾ ಸತ್ಯ ಮತ್ತು ಧರ್ಮವನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.


ಮಾಣಿಲದ ಮೋಹನದಾಸ ಸ್ವಾಮೀಜಿ ಮಾತನಾಡಿ ಜಾಗರಣೆಯೊಂದಿಗೆ ಅಂತರಂಗ ಹಾಗೂ ಬಹಿರಂಗದಲ್ಲಿ ಭಕ್ತರು ಪರಿಶುದ್ಧರಾಗಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಭಾವಶುದ್ಧಿ, ಕರ್ಮಶುದ್ಧಿ ಮತ್ತು ಮನಶುದ್ಧಿಯೊಂದಿಗೆ ಸಾರ್ಥಕ ಜೀವನ ನಡೆಸಬೇಕು ಎಂದು ಹೇಳಿದರು. ಪಾದಯಾತ್ರೆಯ ರೂವಾರಿ ಬೆಂಗಳೂರಿನ ಹನುಮಂತಪ್ಪ ಗುರೂಜಿ ಮತ್ತು ಮರಿಯಪ್ಪ ಗೌಡ ಉಪಸ್ಥಿತರಿದ್ದರು. ರಾತ್ರಿ ಇಡೀ ಭಕ್ತರು ದೇವರ ಪ್ರಾರ್ಥನೆ, ಧ್ಯಾನ, ಭಜನೆಯೊಂದಿಗೆ ಜಾಗರಣೆ ಮಾಡಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top