||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಯತ್ರ ನಾರ್ಯಸ್ತು ಪೂಜ್ಯಂತೇ...

ಯತ್ರ ನಾರ್ಯಸ್ತು ಪೂಜ್ಯಂತೇ...


ಹೌದು ಎಲ್ಲಿ ಸ್ತ್ರೀಯರು ಪೂಜಿಸಲ್ಪಡುತ್ತಾರೋ ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳೇ ವಾಸ ಮಾಡುತ್ತಿರುತ್ತಾರೆ, ಎಂದು ಹಿಂದೊಬ್ಬ ಮಹಾಜ್ಞಾನಿಯಾದ ಮನು ಎಂಬ ಋಷಿಯು ಹೇಳಿರುತ್ತಾನೆ. ಸ್ತ್ರೀಗೆ ಎಷ್ಟೊಂದು ಉನ್ನತವಾದ ಸ್ಥಾನ ಕೊಟ್ಟಿದ್ದಾರೆ ಹಿರಿಯರು. ಹೆಣ್ಣು ಎಂಬುದು ಭೋಗದ ವಸ್ತುವಲ್ಲ, ಶೋಷಣೆಗೆ ಒಳಪಡಿಸಬೇಕಿಲ್ಲ. ಹೆಣ್ಣು ಕೂಡ ಗಂಡಿನಷ್ಟೇ ಪ್ರಭಾವಿತಳು, ಸಮರ್ಥಳು ಅಲ್ಲದೆ ಒಂದಷ್ಟು ಹೆಚ್ಚೇ ಪ್ರತಿಭಾನ್ವಿತಳು ಎನ್ನುವುದು ಹಿರಿಯರ ಅಭಿಪ್ರಾಯ. ಮಾತ್ರವಲ್ಲ ಅದು ಯಥಾರ್ಥವೂ ಆಗಿದೆ. ಇಂದು ಸ್ತ್ರೀಯು ಶೋಷಣೆಗೆ ಒಳಗಾಗುತ್ತಾಳೆಂದರೆ, ಮೊದಲನೇ ಕಾರಣ ಆಕೆ ದೈಹಿಕವಾಗಿ ಗಂಡಿಗಿಂತ ದುರ್ಬಲವಾಗಿರುವುದೇ ಆಗಿದೆ. ಗಂಡಿನಷ್ಟೇ ಕಾಯಬಲವು ಸ್ತ್ರೀಗೂ ಇರುತ್ತಿದ್ದರೆ, ಇಂದು ನಡೆಯುವ ಅತ್ಯಾಚಾರ ಶೋಷಣೆಗಳು ಖಂಡಿತ ಈ ಪ್ರಮಾಣದಲ್ಲಿ ನಡೆಯುತ್ತಿರಲಿಲ್ಲ.


ಇವತ್ತು ನಿನ್ನೆಯದಲ್ಲ ಅನಾದಿ ಕಾಲದಿಂದಲೂ ಸ್ತ್ರೀ ಶೋಷಣೆ ಎನ್ನುವುದು ಅವ್ಯಾಹತವಾಗಿ ನಡೆಯುತ್ತ ಬಂದಿದೆ. ಬಹುಷ: ಮುಂದೆಯೂ ಇದು ಕಡಿಮೆ ಆಗುವ ಯಾವ ಲಕ್ಷಣಗಳೂ ಗೋಚರಿಸುವುದಿಲ್ಲ. ರಾಮಾಯಣ ಮಹಾಭಾರತವೇ ಆಗಲಿ, ನಮ್ಮ ರಾಜ ಮಹಾರಾಜರ ಕಾಲವೇ ಆಗಲಿ ಅಥವಾ ಇಂದು ಆಧುನಿಕರೆನಿಸಿಕೊಂಡವರ ಕಾಲವೇ ಇರಲಿ ಸ್ತ್ರೀಯರನ್ನು ಅವಕಾಶಕ್ಕಷ್ಟೇ ಬಳಸಿಕೊಂಡು ಬಾಯಲ್ಲಿ ಪೂಜ್ಯರು, ಗೌರವಾನ್ವಿತರು ಎಂದುಕೊಂಡು ಬೊಗಳೆ ಬಿಡುವುದನ್ನೇ ಕಾಣುತ್ತೇವೆ. ರಾಮಾಯಣದಲ್ಲಿ ನೋಡಿದರೆ ಸೀತಾಮಾತೆ ಪಟ್ಟ ಕಷ್ಟ ಯಾರಿಗೆ ಪ್ರೀತಿ? ಸೀತೆಯನ್ನು ಪ್ರಕೃತಿಗೆ, ಶ್ರೀರಾಮನನ್ನು ಪುರುಷನಿಗೆ ಹೋಲಿಸಲಾಗಿದೆ. ಇದರಲ್ಲಿ ಶ್ರೇಷ್ಠ ಕನಿಷ್ಟ ಎಂಬುದೇ ಇಲ್ಲ.ಈ ಪ್ರಪಂಚಕ್ಕೆ ಸ್ತ್ರೀಯಷ್ಟೇ ಪುರುಷನೂ, ಪುರುಷನಷ್ಟೇ ಸ್ತ್ರೀಯೂ ಅನಿವಾರ್ಯರೇ ಆಗಿರುತ್ತಾರೆ. ಆದರೂ ಶ್ರೀರಾಮನ ನೆರಳಾಗಿ ಸೀತೆ ಕಾಣಿಸಿಕೊಳ್ಳುತ್ತಾಳೆ. ಸೀತೆಯ ಅಸ್ತಿತ್ವ ಶ್ರೀರಾಮನನ್ನು ಹೊಂದಿಕೊಂಡಿದೆ. ಎಲ್ಲರೂ ಸಮಾನರು ಎಂದಾಗುತ್ತಿದ್ದಲ್ಲಿ ರಾಮಾಯಣ ಆಗುತ್ತಿರಲಿಲ್ಲ. ಬದಲಾಗಿ ಸೀತಾರಾಮಾಯಣ ಆಗುತ್ತಿತ್ತು.


ಸೀತೆಯ ಅಗ್ನಿ ಪರೀಕ್ಷೆಯ ಕಾಲದಲ್ಲಿ ಕೂಡ ಕವಿ ಸೀತೆಯ ಮೇಲೆ ಕಳಂಕ ಬರಬಾರದೆಂದು ಈ ಕ್ರಿಯೆಯನ್ನು ಮಾಡಿದರೆ, ಅದೇ ಕ್ರಿಯೆಯನ್ನು ಅಂದರೆ ಸೀತಾರಾಮರನ್ನು ಅಗ್ನಿಗೆ ಕಳುಹಿಸಿ ಇಬ್ಬರೂ ಕಳಂಕರಹಿತರು ಎಂಬುದನ್ನು ಸಾಬೀತುಪಡಿಸಿದ್ದರೆ ಅದರ ಸೊಗಸೇ ಬೇರೆ ಆಗುತ್ತಿತ್ತು. ರಾಮಾಯಣವನ್ನು ಪ್ರಶ್ನಿಸುವಷ್ಟು ಜ್ಞಾನವಾಗಲೀ, ಯೋಗ್ಯತೆಯಾಗಲೀ ನಮ್ಮಂಥ ಹುಲು ಮಾನವರಿಗಿಲ್ಲ. ಆದರೆ ನಮ್ಮ ಅಲ್ಪ ಮತಿಗೆ ಉಂಟಾಗುವ  ಗೊಂದಲವನ್ನು ಬಿಡಿಸಿ ಹೇಳುವವರಿರುವಲ್ಲಿವರೇಗೆ ಪ್ರಶ್ನಿಸಲು ತೊಂದರೆ ಏನಿಲ್ಲ. ಮಹಾಭಾರತದಲ್ಲಿ ಕೂಡ ಸ್ತ್ರೀಯ ಶೋಷಣೆಯೇ ಪ್ರಧಾನವಾಗಿರುತ್ತದೆ. ಕಾಯ ಬಲದಲ್ಲಿ ದ್ರೌಪದಿಯು ಪಾಂಡವರಷ್ಟೇ ಸುದೃಢವಾಗಿದ್ದಿದ್ದರೆ ಅವಳ ತಂಟೆಗೆ ಯಾವ ದುರ್ಯೋಧನನೂ ಬರುತ್ತಿರಲಿಲ್ಲ. ಯಾವ ದುಶ್ಯಾಸನನೂ ಬದುಕಿ ಉಳಿಯುತ್ತಿರಲಿಲ್ಲ. ಗಾಂಧಾರಿಯೂ ಪುರುಷ ಪ್ರಧಾನ ರಾಷ್ಟ್ರದಲ್ಲಿ ಧೃತರಾಷ್ಟ್ರನಿಗೆ ಕಣ್ಣು ಕಾಣಿಸದೆಂದು ತಾನೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಳು. ಒಂದು ವೇಳೆ ಗಾಂಧಾರಿಯು ಕುರುಡಿಯಾಗಿರುತ್ತಿದ್ದರೆ ಧೃತರಾಷ್ಟ್ರ ಮದುವೆಯೇ ಆಗುತ್ತಿರಲಿಲ್ಲ. ಒಂದು ವೇಳೆ ಚೆಲುವನ್ನು ನೋಡಿ ಮದುವೆ ಆಗುತ್ತಿದ್ದರೂ ಕಣ್ಣಿಗೆ ಬಟ್ಟೆಯನ್ನಂತೂ ಖಂಡಿತ ಕಟ್ಟಿಕೊಳ್ಳತ್ತಿರಲಿಲ್ಲ. ಎಲ್ಲಿದೆ ಪ್ರಕೃತಿ ಪುರುಷರಿಗೆ ಸಮಾನತೆ? ಪುರುಷನಿಗೇ ಪ್ರಾಧಾನ್ಯತೆ. ಅದಕ್ಕೇ ಮನು ಎಂಬವನು ಸ್ತ್ರೀಯು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂದದ್ದು. ಸ್ತ್ರೀಯನ್ನು ಕೀಳಾಗಿ ಕಂಡದ್ದಲ್ಲ ಆ ಮುನಿ. ಈ ಕೆಟ್ಟ ಪುರುಷ ಪ್ರಧಾನ ಸಮಾಜ ಸ್ತ್ರೀಯನ್ನು ಸ್ವಾತಂತ್ರ್ಯದಲ್ಲಿರಲು ಬಿಡುವುದಿಲ್ಲ ಎಂಬ ತಿಳುವಳಿಕೆಯಿಂದಲೇ. 


ಮುಂದೆ ದಾಸರ ಪರಂಪರೆಯೇ ಬಂದಿದೆ. ಬಹಳ ಜ್ಞಾನಿಯಾದಂಥ ಈ ದಾಸ ಪರಂಪರೆ ಕೂಡ ಸ್ತ್ರೀಯನ್ನು ಯಾಕೆ ಸಾಧನೆಯ ಮಾರ್ಗಕ್ಕೆ ತೊಡಕು ಎಂಬಂತೆ ಬಿಂಬಿಸಿದೆ ಎಂಬುದೇ ಅರ್ಥವಾಗುತ್ತಿಲ್ಲ. ಅದಿಲ್ಲದಿದ್ದರೆ 'ಸತಿ ಸುತರು ಹಿತರೆಂದು ಮತಿ ಮರೆತು ಮಮತೆಯಲಿ.....; ಮಡದಿ ಮಕ್ಕಳ ಕಡೆಗೆ ತೊಲಗಿಸಿಯೆ ಬಿಡಬಹುದು...' ಎಂದು ಮುಂತಾಗಿ ಈ ದಾಸರು ಹಾಡಬೇಕಾದರೆ ಸಾಧನೆಗೆ ಮುಕ್ತಿಗೆ ಪುರುಷ ಮಾತ್ರ ಅಧಿಕಾರಿಯೇ? ಸ್ತ್ರೀಯರು ಮಕ್ಕಳು ಮೋಕ್ಷಕ್ಕೆ ಅರ್ಹರಲ್ಲವೇ? ಪ್ರಶ್ನೆ ಮೂಡದಿದ್ದೀತೇ? ಇದಕ್ಕೆ ಉತ್ತರಿಸುವವರು ಪರುಷರೇ ಆದ್ದರಿಂದ ಹೆಚ್ಚೇನೂ ಬಯಸಲಾಗದು. ಒಂದೇ ಒಂದು ಹಾಡು ಕೂಡಾ ಸ್ತ್ರೀಗೆ ಮೋಕ್ಷ ಸಿಗಲೆಂದು ರಚಿಸಿದ್ದು ನಾ ಕಾಣೆ. ಸ್ತ್ರೀ ಎಂದರೆ ಬರಿದೆ ಭೋಗದ ವಸ್ತು ಎಂದು ಚಿತ್ರಿಸಿದಂತೆ ಕಾಣುವುದಾದರೆ, ದಾಸರು ತಪ್ಪು ಮಾಡಲಾರರು ಎಂದಿಟ್ಟುಕೊಂಡರೆ, ಈ ಗೊಂದಲಗಳಿಗೆ ಎಲ್ಲಿದೆ ಪರಿಹಾರ..?? ...   

ಇರಲಿ ಹಿಂದಿನವರು ಜ್ಞಾನಿಗಳೋ ವಿಜ್ಞಾನಿಗಳೋ ಆಗಿದ್ದರು. ಎಲ್ಲರೂ ಸುಜ್ಞಾನಿಗಳಂತೂ ಖಂಡಿತ ಇರಲಾರರು. ಹಾಗೆಯೇ ಜ್ಞಾನಿಗಳ ತಿಳಿವು ಕೂಡ ಬಹಳ ಎತ್ತರದಲ್ಲಿದ್ದುದರಿಂದ ನಮಗೆ ಅರ್ಥೈಸಿಕೊಳ್ಳುವುದೂ ತುಸು ಕಷ್ಟವೇ.ದಾಸರ ಹಾಡುಗಳಲ್ಲಿರುವ ವಾಕ್ಯಗಳೊಳಗೆ ಕೂಡ ಬೇರೇನಾದರೂ ಅರ್ಥವಿರಲೂಬಹುದು. ನಮಗೆ ಬರಿದೆ ವಾಕ್ಯಾರ್ಥವಾಗುವುದಲ್ಲದೆ ಒಳಾರ್ಥಗಳಿದ್ದಲ್ಲಿ ಬಿಡಿಸಿ ಹೇಳುವವರು ಬೇಕಾಗುತ್ತದೆ.  


ನಮ್ಮ ನಾಗರಿಕ ಪ್ರಪಂಚದಲ್ಲಿ ಕೂಡ ಸ್ತ್ರೀ ಸಮಾನತೆ ಎಂಬ ಬೊಬ್ಬೆ ಕೇಳಿ ಬರುತ್ತಿದೆಯೇ ವಿನಹ ಅನುಷ್ಠಾನದಲ್ಲಿಲ್ಲ. ಉದಾಹರಣೆಗೆ ಮದವೆಯ ಶಾಸ್ತ್ರಗಳಲ್ಲಿ ಯಾರೂ ವರಪೂಜೆಗೆ ಬದಲಾಗಿ ವಧುಪೂಜೆ ಮಾಡಲಾರರು. ವಧುವಿನ ಕಡೆಯವರು ವರಪೂಜೆ ಮಾಡುವಂತೆ, ಪ್ರಕೃತಿಗೆ ಅಭಿಮಾನಿಯಾದ ಸ್ತ್ರೀ ದೇವತೆಗೆ ಪ್ರೀತ್ಯರ್ಥವಾಗಿ ವರನ ಕಡೆಯವರು ಯಾಕೆ ಭೂಮಿ ಪೂಜೆ ಮಾಡುವಂತೆ ವಧುಪೂಜೆ ಮಾಡಬಾರದು.? ಪ್ರಶ್ನಿಸಬಹುದೇ ಹೊರತು ಉತ್ತರ ಸಿಗದು. ಇಂಥ ವರಪೂಜೆಯ ಬದಲಾಗಿ ಸಂಪ್ರದಾಯವನ್ನು ಬದಲಿಸಿ ಚೆಂದವಾಗಿ ವಧುವರರನ್ನು ಕೂರಿಸಿ ಪ್ರಕೃತಿ ಪುರುಷನನ್ನು ಮನದಲ್ಲಿ ಕಲ್ಪಿಸಿಕೊಂಡು ಪೂಜಿಸಿದರೆ ಎಷ್ಟು ಸೊಗಸಲ್ಲವೇ.? ಇಲ್ಲಿ ಕೂಡ ವರನ ಕಡೆಯವರಿಗೆ ಹೆಚ್ಚು ಗೌರವ, ವಧುವಿನ ಕಡೆಯವರೆಂದರೆ ತಾತ್ಸಾರ. ಇದು ತಪ್ಪಲ್ಲವೇ.? ಗೌರವ ಪರಸ್ಪರ ಎರಡು ಕಡೆಯವರಿಗೂ ಸಮಾನವಾಗಿರಬೇಕು.


ಇನ್ನು ಹೆಣ್ಣು ಯಾವಾಗಲೂ ಮದುವೆಯಾಗಿ ಗಂಡಿನ ಮನೆಗೇ ಹೋಗುವುದು ರೂಢಿ. ಗಂಡ ಹೆಂಡತಿ ಒಂದೇಕಡೆ ಇರಬೇಕಾಗಿರುವುದರಿಂದ ಈ ವ್ಯವಸ್ಥೆ ತಪ್ಪಲ್ಲ. ಆದರೆ ಕಾರಣಾಂತರಗಳಿಂದ ಗಂಡು ಹೆಣ್ಣಿನ ಮನೆಯಲ್ಲಿರಬೇಕಾದ ಪ್ರಸಂಗ ಬಂದಲ್ಲಿ ಅದು ಗಂಡಿಗೆ ಅವಮಾನವೆಂಬ ದೃಷ್ಟಿಯಿಂದ ನೋಡುವುದು, ಹೆಂಡತಿ ಮನೆಯಲ್ಲಿರುವವನೆಂಬ ತಾತ್ಸಾರ ಕೂಡ ಸಮಾಜದಲ್ಲಿದೆ. ಪರಸ್ಪರ ಹೊಂದಾಣಿಕೆಯಿಂದ ಹೆಣ್ಣಿನ ಮನೆಯಲ್ಲಿದ್ದರೆ ಅದು ಕೂಡ ನಾಗರಿಕತೆಯೇ. ಕೆಲವು ವಿಚಾರಗಳಲ್ಲಿ ಈಗಿನ ನಾಗರಿಕತೆಗಿಂತ ಹಿಂದಿನವರೇ ಅನುಕರಣೀಯರು. ಹಿಂದೆ ಎಷ್ಟೇ ಮಕ್ಕಳಿದ್ದರೂ ಹೆಣ್ಣುಮಕ್ಕಳಿಗೆ ಬದುಕು ಕಷ್ಟವೆಂಬ ಅರಿವಿದ್ದರೂ ಹೆಣ್ಣುಮಕ್ಕಳನ್ನು ಯಾರೂ ಕೊಲ್ಲುತ್ತಿರಲಿಲ್ಲ. ಆದರೆ ಈಗ ಸ್ಕ್ಯಾನಿಂಗ್ ಎಂಬ ನಾಗರಿಕತನದ ಕೊಡುಗೆಯಿಂದ ಹೆಣ್ಣು ಭ್ರೂಣಗಳನ್ನೇ ನಾಶ ಮಾಡುವ ಪ್ರಕ್ರಿಯೆಯಿಂದಾಗಿ ಲಕ್ಷಾಂತರ ಹೆಣ್ಣುಮಕ್ಕಳು ಹುಟ್ಟುವ ಮೊದಲೇ ಸಾಯುತ್ತವೆ. ಇದೊಂದು ಆಧುನಿಕತೆಯ ಅನಾಗರಿಕ ಲಕ್ಷಣ. 


ಅದೇ ರೀತಿ ದಂಪತಿಗಳಲ್ಲಿ ಯಾರೊಬ್ಬರು ಅಗಲಿದರೂ ದು:ಖವಾಗುವುದು ಸಹಜ. ಆದರೆ ಆ ದು:ಖ ಹೆಣ್ಣಾದವಳಿಗೆ ಜನ್ಮ ಶಾಶ್ವತವಾಗಿ ಕಾಡುವುದಾದರೆ, ಗಂಡಸರಿಗೆ ಹಾಗಿಲ್ಲ. ವರುಷದೊಳಗೇ ಇನ್ನೊಂದು ಮದುವೆ ಆಗಿ ದಾಂಪತ್ಯವನ್ನು ಮುಂದುವರಿಸುತ್ತಾನೆ. (ಇತ್ತೀಚಿನ ದಿನಗಳಲ್ಲಿ ಇದರಲ್ಲಿ ಬದಲಾವಣೆ ಆಗುತ್ತಿರುವುದು ಒಳ್ಳೆಯ ವಿಚಾರ.) ಒಂದುವೇಳೆ ವಿಧವೆಗೆ ಮರುಮದುವೆಯಾದರೂ ಅದು ವಿಧವಾ ವಿವಾಹ. ಆದರೆ ವಿಧುರನಿಗೆ ಹಾಗಲ್ಲ. ಅವನು ಎಷ್ಟೇ ಮದವೆಯಾದರೂ ಅವೆಲ್ಲವೂ ಪುನರ್ವಿವಾಹಗಳಾಗುತ್ತಿದ್ದುವೇ ಹೊರತು ವಿಧುರವಿವಾಹ ಆಗುತ್ತಿರಲಿಲ್ಲ. ಇದೆಲ್ಲ ವ್ಯವಸ್ಥೆಗಳನ್ನು ಪುರುಷನೇ ಮಾಡಿಕೊಂಡಿರುವುದು ಇನ್ನೊಂದು ವಿಪರ್ಯಾಸ. ಇತ್ತೀಚೆಗೆ ಬಸ್ಸಿನಲ್ಲಿ ಚುಡಾಯಿಸಿದರೆಂದು ಹರಿಯಾಣದ ಇಬ್ಬರು ಹುಡುಗಿಯರು ಕಾಮುಕ ಹುಡುಗರಿಗೆ ಚೆನ್ನಾಗಿ ಹೊಡೆದು ಬುದ್ಧಿ ಕಲಿಸಿದ ಘಟನೆ ಮಾಧ್ಯಮದ ಮೂಲಕ ಎಲ್ಲರಿಗೂ ತಿಳಿದಿರುವ ವಿಷಯ.ಇಂತಹ ಧೈರ್ಯ ಎಲ್ಲರಿಗೂ ಇದ್ದರೆ ಅತ್ಯಾಚಾರದಂಥ ಘಟನೆಗಳು ಬಹಳಷ್ಟು ಕಡಿಮೆ ಆದೀತು.  


ಇನ್ನು ಕೆಲವರು ಹೇಳುವಂತೆ ಸ್ತ್ರೀಯರು ಉಡುವ ಬಟ್ಟೆಗಳು ಪ್ರಚೋದನಾಕಾರಿಯಾಗಿದ್ದುದರಿಂದಲೂ ಇಂತಹ ನೀಚ ಕೃತ್ಯಗಳು ನಡೆಯುತ್ತವೆ. ಗಂಡಸರನ್ನು ಪ್ರಚೋದಿಸುವಂಥ ಅತ್ಯಂತ ಬಿಗಿಯಾದ, ಹೆಚ್ಚು ಅಂಗಾಂಗ ತೋರಿಸುವಂಥ ಬಟ್ಟೆ ತೊಡುವುದು ಕೂಡ ಅಪಾಯಕಾರಿಯೇ. ಇದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ. ಸ್ತ್ರೀಯರು ಹೇಳಬಹುದು ನನ್ನ ಮನಸ್ಸಿಗೆ ಸರಿ ಕಂಡಂತೆ ಇರುವ ಸ್ವಾತಂತ್ರ್ಯ ನನಗಿಲ್ಲವೇ ಎಂದು. ಆದರೆ ಇದು ಒಂದು ಹಂತದವರೆಗೆ ಸರಿ ಇರಬಹುದು. ಆದರೆ ಗೌರವಯುತವಾದ ಉಡುಗೆ. ಕಾಮೋತ್ತೇಜಕ ಉಡುಗೆಯ ವ್ಯತ್ಯಾಸವನ್ನು ಗಮನಿಸದೆ, ತಿಳಿಯದೆ ತನ್ನ ಮನಸ್ಸಿಗೆ ಹಿತವಾದುದನ್ನೇ ಉಡುತ್ತೇನೆ ಎಂದುಕೊಂಡಲ್ಲಿ  ನೋಡುವವನು ಮನಸ್ಸು ಚಂಚಲವಾಗದೆ ಇದ್ದೀತೇ,? ಅರೆನಗ್ನಾವಸ್ಥೆಯಲ್ಲಿ ಸ್ತ್ರೀಯನ್ನು ನೋಡುವ ಕಾಮುಕ ದೃಷ್ಟಿಗೆ ಎಲ್ಲ ಸ್ತ್ರೀಯರೂ ಅದೇ ರೀತಿ ಕಾಣುತ್ತಾರೆ. ಆತನೊಳಗೆ ಕಾಮುಕ ಜಾಗೃತನಾಗುತ್ತಾನೆ. ಅವಕಾಶ ಸಿಕ್ಕಲ್ಲಿ ಆಕ್ರಮಿಸುತ್ತಾನೆ. ಬರಿದೇ ಉಡುಪಿನಿಂದಾಗಿ ಆತ ಈ ರೀತಿ ವರ್ತಿಸುತ್ತಾನೆಂದಲ್ಲ. ಆದರೆ ಇಂಥ ನೀಚ ಕೃತ್ಯಗಳಿಗೆ ಉಡುಪಿನ ತೊಡುವಿಕೆಯೂ ಒಂದು ಕಾರಣ ಎಂಬುದರಲ್ಲಿ ಸಂಶಯವಿಲ್ಲ. (ತಪ್ಪು ಹೆಣ್ಣಿದ್ದೇ ಇರಲಿ, ಗಂಡಿದ್ದೇ ಇರಲಿ ಪರಿಣಾಮ ಹೆಣ್ಣಿಗೇ ತಾನೆ. ಆದ್ದರಿಂದ ಹೆಣ್ಣು ಹೆಚ್ಚು ಜಾಗೃತಳಾಗಿರಬೇಕು) ಯಾವುದೇ ತಂದೆ ತಾಯಿ ಕೂಡ ಮಕ್ಕಳು ಹೆಣ್ಣಿರಲಿ ಗಂಡಿರಲಿ ಸಹಜವಾಗಿ ಪ್ರೀತಿಸಬೇಕು. ಮಕ್ಕಳ ಸ್ನಾನ ಪಾನದಿಂದ ತೊಡಗಿ ಬಟ್ಟೆ ತೊಡಿಸಿ ಜಡೆ ಹಾಕಿ ಶಾಲೆಗೆ ಕಳುಹಿಸುವವರೆಗೂ, ಶಾಲೆಯಿಂದ ಬಂದ ಮೇಲೆ ಆಟ ಪಾಠ ಕಲಿಸುವವರೆಗೂ, ರಾತ್ರಿ ಬೆನ್ನು ತಟ್ಟಿ ಮಲಗಿಸುವವರೆಗೂ ಭೇದವನ್ನು  ಮಾಡದೆ ಹೆಣ್ಣಿಗೆ ತಾನು ಹುಟ್ಟಿದ್ದರಿಂದ ಕೀಳರಿಮೆಯು ಬಾರದಂತೆ ಸಾಕಿ ಸಲಹಬೇಕು. ಸಣ್ಣ ಮಕ್ಕಳಿಂದಲೇ ತಮ್ಮ ಬಗ್ಗೆ ಆತ್ಮ ವಿಶ್ವಾಸ ಮೂಡಿದರೆ ತಾನು ಹೆಣ್ಣಾದರೂ ಸ್ವಾಭಿಮಾನಿಯಾಗಿ ಬದುಕಬಲ್ಲೆ ಎಂಬ ಧೈರ್ಯ ಬಂದರೆ, ಅಂಥ ಅವಕಾಶ ಹೆತ್ತವರು, ಸಮಾಜ ಕೊಟ್ಟರೆ ಹೆಣ್ಣು ಶೋಷಿತೆಯಾಗಬೇಕಾಗಿಲ್ಲ.  


ಕಾಯಬಲದಿಂದಷ್ಟೇ ಹೆಣ್ಣು ಗಂಡಿಗಿಂತ ದುರ್ಬಲವಾಗಿರಬಹುದು. ಅದರ ಹೊರತಾಗಿ ಹೆಣ್ಣು ಪ್ರಕೃತಿಯ ಅಭಿಮಾನಿ ದೇವತೆಯ ಸಾಕ್ಷಾತ್ ಪ್ರತಿರೂಪವೆಂದೇ ಹೇಳಬೇಕು. ಪುರುಷನಷ್ಟೇ ಅನಿವಾರ್ಯತೆ ಈ ಸಮಾಜಕ್ಕೆ ಸ್ತ್ರೀಯಿಂದಲೂ ಇದೆ. ಸ್ತ್ರೀ ಪುರುಷ ಜತೆ ಜತೆಯಾಗಿದ್ದರೆ, ಎರಡು ಕಣ್ಣಿಂದ ಒಂದು ನೋಟವನ್ನು ನೋಡಿದಂತೆ, ಎರಡು ಗಾಲಿಗಳಿಂದ ಒಂದು ರಥವು ಸಾಗುವಂತೆ, ಎರಡು ಮುಖದಿಂದ ಒಂದು ನಾಣ್ಯವು ಇದ್ದಂತೆ ಶಾಶ್ವತವಾಗಿ, ಸುರಕ್ಷಿತವಾಗಿ ಸಂತೋಷವಾಗಿರಬಹುದು. ಅದಲ್ಲದೆ ಒಂದು ಮುಖಕ್ಕೆ ಊನವಾದರೂ ಪ್ರಪಂಚವು ಅನಾಹತಕ್ಕೆ ಒಳಗಾಗಬಹುದು. ಮನುವಿನ ಉದ್ದೇಶವೂ ಈಡೇರದು. ಆದ್ದರಿಂದ ಮನುಜಕಲದಲ್ಲಿ ಸ್ತ್ರೀಯರು ಪೂಜಿಸಲ್ಪಡಬೇಕು. ಗೌರವಿಸಲ್ಪಡಬೇಕು. ಜತೆಗೆ ಸುರಕ್ಷಿತವಾಗಿಯೂ ಇರಬೇಕು. ಮನುಜಕುಲವೆಂದು ಯಾಕೆ  ಹೇಳಿದೆನೆಂದರೆ ಈ ಶೋಷಣೆ, ಅತ್ಯಾಚಾರಗಳು ಮನುಜಕುಲದಲ್ಲಿ ಮಾತ್ರ.ಇತರ ಜೀವಿಗಳಲ್ಲಿ ಸಹಜ ಬದುಕಿಗಷ್ಟೇ ಮಹತ್ವ ಹೊರತು ಅಸಹಜ, ಅನೈತಿಕತೆ ಎಂಬ ಪ್ರಶ್ನೆಯೇ ಬರುವುದಿಲ್ಲ. ದ.ರಾ. ಬೇಂದ್ರೆಯವರು ಅಂದಂತೆ ಸಮರಸದ ಜೀವನ ನಮ್ಮದಾಗಲಿ. ಗಂಡು ಹೆಣ್ಣು ಎಂಬ ಭೇದವಿರದ ಸಹಜ ಬಾಳು, ಸುಖದ ಬಾಳು, ಸುಂದರ ಬಾಳು  ನಮ್ಮದಾಗಲಿ. ಹಾಗೆಯೇ ಎಲ್ಲಿ ಸ್ತ್ರೀಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳೇ ಇರುತ್ತಾರಂತೆ. ಅಂತಹ ದೇವತೆಗಳೊಡನೆ ನಾವು ಸದಾ ಇರುವಂತಾಗಲಿ....

-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿhit counter

0 Comments

Post a Comment

Post a Comment (0)

Previous Post Next Post