ಶಿವನ ದೇವಾಲಯದಲ್ಲಿ ಅರ್ಧ ಪ್ರದಕ್ಷಿಣೆ ಏಕೆ?

Upayuktha
0


ಮಹಾಲಿಂಗೇಶ್ವರನ ಕೆಲವು ದೇವಸ್ಥಾನಗಳಲ್ಲಿ ಹೊರಸುತ್ತಿನಲ್ಲಿ ಪೂರ್ಣ ಪ್ರದಕ್ಷಿಣೆಯನ್ನು ಹಾಕಬಹುದಾದರೂ, ಒಳಸುತ್ತಿನಲ್ಲಿ  ಪ್ರದಕ್ಷಿಣಾಕಾರವಾಗಿ “ಗೋಮುಖಿ”ಯ ವರೆಗೆ ಮಾತ್ರ ಬಂದು ಅಲ್ಲಿಂದ ಹಿಂತಿರುಗಿ ಅಪ್ರದಕ್ಷಿಣಾಕಾರವಾಗಿ ಗೋಮುಖಿಯ ಇನ್ನೊಂದು ಬದಿಯವರೆಗೆ ಹೋಗಿ ಅಲ್ಲಿಂದ ನಿರ್ಗಮಿಸುತ್ತೇವೆ. “ಗೋಮುಖಿ” ಅಂದರೆ ಶಿವಲಿಂಗದ ಮೇಲೆ ಅಭಿಷೇಕ ಮಾಡಿದ ಜಲವು ಪಾಣಿಪೀಠದ ಮೇಲೆ ಬಿದ್ದು ಅಲ್ಲಿಂದ ಕೆಳಗೆ ಹರಿದುಹೋಗುವ ಮಾರ್ಗ. ಇದು ಕೂಡಾ ಶಿವಲಿಂಗದ ಒಂದು ಭಾಗವೇ ಆಗಿದೆ. ಇದಕ್ಕೆ ಕೆಲವರು “ಗೋಮುಖಿ” ಎಂದರೆ ಇನ್ನು ಕೆಲವರು “ಸೋಮಸೂತ್ರ” ಎನ್ನುತ್ತಾರೆ, ಮತ್ತೆ ಕೆಲವರು “ಹರಿನಾಳ” ಎನ್ನುತ್ತಾರೆ. ಈ ಗೋಮುಖಿಯಿಂದ ಹರಿದುಹೋಗುವ ತೀರ್ಥವನ್ನು ದಾಟಬಾರದು ಎಂದು ಶಾಸ್ತ್ರ ಹೇಳುತ್ತದೆ. ಸೋಮಸೂತ್ರವನ್ನು ದಾಟಬಾರದು ಎಂಬುದಾಗಿ ಪುರಾಣದಲ್ಲಿಯೇ ಉಲ್ಲೇಖಿಸಿದೆ.

 

 

ಸೋಮಸೂತ್ರಾಂತಮಿತ್ಯರ್ಥಃ ಶಿವಂ ಪ್ರದಕ್ಷಿಣೀಕುರ್ವನ್ ಸೋಮಸೂತ್ರಂ ನ ಲಂಘ್ಯೇತ್ ಇತಿ ವಚನಾಂತರಾತ್

ಹೀಗಾಗಿ ಮಹಾಲಿಂಗೇಶ್ವರನ ದೇವಾಲಯದ ಒಳಸುತ್ತಿನಲ್ಲಿ ಪೂರ್ಣ ಪ್ರದಕ್ಷಿಣೆ ಬರಲು ಆಗುವುದಿಲ್ಲ, ಅಲ್ಲಿ ಕೇವಲ ಅರ್ಧ ಪ್ರದಕ್ಷಿಣೆಯಾಗುತ್ತದೆ. ಶಿವನ ದೇವಾಲಯಗಳಲ್ಲಿ ಕೇವಲ ಅರ್ಧ ಪ್ರದಕ್ಷಿಣೆ ಬರಬೇಕು ಎಂಬುದನ್ನು ಈ ಕೆಳಗಿನ ಶ್ಲೋಕವು ಕೂಡಾ ಪುಷ್ಟೀಕರಿಸುತ್ತದೆ.

 

ಏಕಾ ಚಂಡ್ಯಾ ರವೇಃ ಸಪ್ತ ತಿಸ್ತ್ರಃ ಕಾರ್ಯಾ ವಿನಾಯಕೇ ।

ಹರೇಶ್ಚತರರ್ಸ್ತ್ರಃ ಕರ್ತವ್ಯಾಃ ಶಿವಸ್ಯಾರ್ಧಪ್ರದಕ್ಷಿಣಾ ॥

ಅಂದರೆ, ದುರ್ಗಾದೇವಿಗೆ ಅಂದರೆ ಚಂಡಿಕಾ ದೇವಿಗೆ ಒಂದು ಸುತ್ತು, ಸೂರ್ಯದೇವನಿಗೆ ಏಳು ಸುತ್ತುಗಳು, ಗಣೇಶನಿಗೆ ಮೂರು ಸುತ್ತುಗಳು, ವಿಷ್ಣುವಿಗೆ ನಾಲ್ಕು ಸುತ್ತುಗಳು ಹಾಗೂ ಈಶ್ವರನಿಗೆ ಅರ್ಧ ಸುತ್ತು ಮಾತ್ರ ಬರಬೇಕು ಎಂದರ್ಥ.


ಈ ಅರ್ಧ ಸುತ್ತನ್ನು ಯಾವ ಕ್ರಮದಲ್ಲಿ ಬರಬೇಕು ಎಂಬುದನ್ನು ಕೆಳಗಿನ ಚಿತ್ರದಲ್ಲಿ ತೋರಿಸಿದೆ.

 

ಬಹುತೇಕ ಮಹಾಲಿಂಗೇಶ್ವರ ದೇವಾಲಯಗಳಲ್ಲಿ ಈ ಅರ್ಧ ಪ್ರದಕ್ಷಿಣೆಯ ನಿಯಮವನ್ನು ಪಾಲಿಸುತ್ತಿಲ್ಲವಾದರೂ ಅಪರೂಪಕ್ಕೆ ಕೆಲವು ದೇವಾಲಯಗಳಲ್ಲಿ ಮಾತ್ರ ಇದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಹೆಚ್ಚಿನವರಿಗೆ ದೇವಾಲಯ ಯಾವುದೇ ಇರಲಿ, ಮೂರು ಸುತ್ತು ಬಾರದೇ ಇದ್ದಲ್ಲಿ ಮನಸ್ಸಿಗೆ ನೆಮ್ಮದಿ ಆಗುವುದಿಲ್ಲ. ಅಂಥವರು ಇಂತಹ ಮಹಾಲಿಂಗೇಶ್ವರನ ದೇವಾಲಯದಲ್ಲಿ ಹೊರಸುತ್ತಿನಲ್ಲಿಯೇ ಪೂರ್ಣ ಪ್ರದಕ್ಷಿಣೆ ಬರಬಹುದು ಅಥವಾ ಒಳ ಸುತ್ತಿನಲ್ಲಿಯೇ ಮೇಲಿನ ಚಿತ್ರದಲ್ಲಿ ತೋರಿಸಿದಂತೆ ಮೂರು ಸಲ ಅರ್ಧ ಪ್ರದಕ್ಷಿಣೆ ಬರಬಹುದು.

 

-ಹರಿಕೃಷ್ಣ ಹೊಳ್ಳ, ಬ್ರಹ್ಮಾವರ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top