ಮಂಗಳೂರು: ಕಾಸರಗೋಡು ಗಿಡ್ಡ ತಳಿಯ ಹಸು ದೇವಕಿಯು ಇತ್ತೀಚೆಗೆ ಹೆಣ್ಣುಕರುವಿಗೆ ಜನ್ಮ ನೀಡಿದ್ದು ನವಜಾತ ಕರುವಿಗೆ ನಾಮಕರಣ ಮಾಡುವ ಕಾರ್ಯಕ್ರಮವೊಂದನ್ನು ಕಲ್ಕೂರ ಪ್ರತಿಷ್ಠಾನದಿಂದ ಹಮ್ಮಿಕೊಳ್ಳಲಾಗಿದೆ. ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹಾಗೂ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಮಾರ್ಚ್ 7, ಸೋಮವಾರ ಬೆಳಗ್ಗೆ 8ಕ್ಕೆ ವಿಶ್ವೇಶತೀರ್ಥ ವೇದಿಕೆ, ವಾದಿರಾಜ ಮಂಟಪ, ಮಂಜುಪ್ರಾಸಾದ, ಕದ್ರಿ ಕಂಬಳ ರಸ್ತೆ ಇಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಶ್ರೀ ಕ್ಷೇತ್ರ ಕದ್ರಿಯ ವೇ|ಮೂ. ಡಾ| ಪ್ರಭಾಕರ ಅಡಿಗ, ವೇ|ಮೂ. ಡಾ| ಸತ್ಯಕೃಷ್ಣ ಭಟ್ (ಬಾಳಂಭಟ್), ವೇ|ಮೂ ರವಿ ಅಡಿಗ ಕದ್ರಿ, ವೇ| ಮೂ. ಶ್ರೀರಂಗ ಭಟ್ ಕದ್ರಿ ಇವರು ವೈದಿಕ ಮಾರ್ಗದರ್ಶನ ನೀಡಲಿದ್ದು, ಶರವು ರಾಘವೇಂದ್ರ ಶಾಸ್ತ್ರಿ ಮೊದಲಾದ ಗಣ್ಯರ ಉಪಸ್ಥಿತಿಯಲ್ಲಿ ಮಂಗಳೂರು ಮಹಾಮಾಯಿ ದೇವಸ್ಥಾನದ ಶತಮಾನ ಆಚರಿಸುತ್ತಿರುವ ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಕಲಾವಿದರಿಂದ ‘ಧರಣೀ ಮಂಡಲ ಮಧ್ಯದೊಳಗೆ’ ಎಂಬ ಸಾಂಪ್ರದಾಯಿಕ ಯಕ್ಷಗಾನ ಶೈಲಿಯ ಗೋಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.
ಇದೊಂದು ಸ್ವದೇಶಿ ಗೋ-ತಳಿಯ ಅಭಿಯಾನದ ನೆಲೆಯಲ್ಲಿ ಒಂದು ವಿಶಿಷ್ಟ ಸ್ವರೂಪದ ಕಾರ್ಯಕ್ರಮವಾಗಿದೆ. ಆಸಕ್ತರು ಮಕ್ಕಳೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದೆಂದು ಕಾಸರಗೋಡು ಗಿಡ್ಡ ತಳಿಯ ಗೋಮಾತೆ ದೇವಕಿ ಪರವಾಗಿ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ