ಹಣಕೊಟ್ಟು ಆಕ್ಸಿಜನ್ ಖರೀದಿ ಮಾಡುವ ಪರಿಸ್ಥಿತಿ ಬರುವುದು ಬೇಡ: ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ

Upayuktha
0

ಕೃಷಿ ಮೇಳ ಸಮಾರೋಪ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ



ಕೊಲ್ನಾಡು: ರಾಜ್ಯಮಟ್ಟದ ಕೃಷಿ ಮೇಳದ ಕೊನೆಯ ದಿನವಾದ ಆದಿತ್ಯವಾರ ಸಂಜೆ ಶ್ರೀ ರಾಮಕೃಷ್ಣ ಪೂಂಜಾ ವೇದಿಕೆಯಲ್ಲಿ ಸಮಾರೋಪ ಸಭಾ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.

ಅತಿಥಿಗಳನ್ನು ಕೃಷಿ ಮೇಳದ ಉಸ್ತುವಾರಿ ಸಮಿತಿ ಸದಸ್ಯ ಮಹಿಮ್ ಹೆಗ್ಡೆ ಸ್ವಾಗತಿಸಿದರು.

ಕೃಷಿ ಮೇಳದ ಕೋಶಾಧಿಕಾರಿ ಜಗದೀಶ್ ಪೈ ಅವರು ಕೃಷಿ ಮೇಳ ಕೃಷಿ ಸಿರಿ-2022 ಆಯೋಜನೆಯ ಹಿನ್ನೆಲೆ, ವಿನಯ ಕೃಷಿ ಬೆಳೆಗಾರರ ಸಂಘ ಹುಟ್ಟಿಕೊಳ್ಳಲು ಪ್ರೇರಣೆಯ ಕುರಿತು ಪ್ರಾಸ್ತಾವಿಕ ಮಾತಾನ್ನಾಡಿದರು.


ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.


ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದ ಮೂಡಬಿದ್ರಿ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರು, "15ನೇ ಶತಮಾನಕ್ಕೂ ಮೊದಲೇ ಜಗತ್ತಿನಾದ್ಯಂತ ಇಲ್ಲಿನ ಸಾಂಬಾರ ಪದಾರ್ಥ, ಉಪ್ಪು, ಗಂಧಸಾಲೆ ಅಕ್ಕಿ ರವಾನೆಯಾಗುತ್ತಿತ್ತು. ಇದು ದಕ್ಷಿಣ ಕನ್ನಡ ಜಿಲ್ಲೆಯ ಸಾಧನೆ. ಮೂಲ್ಕಿ ಬಪ್ಪನಾಡಿನ ಡೋಲು, ಕಾಂತಾಬಾರೆ ಬೂದಾಬಾರೆ, ಆಗೋಳಿ ಮಂಜಣ್ಣ ಎಲ್ಲರೂ ಪ್ರಸಿದ್ಧರು. ಜಾನಪದ ಲೋಕಕ್ಕೆ ಮೂಲ್ಕಿ ಅನೇಕ ಕೊಡುಗೆಗಳನ್ನು ನೀಡಿದೆ. ನಮಗೆ ಉಸಿರಾಡಲು ಆಕ್ಸಿಜನ್ ಬೇಕು. ಆದರೆ ಇಂದು ಹಣಕೊಟ್ಟು ಅದನ್ನು ಖರೀದಿ ಮಾಡಬೇಕಾದ ಪರಿಸ್ಥಿತಿ ಒದಗಿಬಂದಿದೆ. ಇನ್ನು ಮುಂದೆ ಇಂತಹ ಪರಿಸ್ಥಿತಿ ಖಂಡಿತಾ ಬರುವುದು ಬೇಡ. ಮೂಲ್ಕಿಯಲ್ಲಿ ಜಲ ಸಮೃದ್ಧಿ ಇರುವ ಕಾರಣ ಸಸ್ಯ ಸಮೃದ್ಧಿಯಿದೆ. ನಮ್ಮ ಸಣ್ಣ ಮಕ್ಕಳಿಗೆ ಕೃಷಿಯ ಪ್ರೇರಣೆ ನೀಡುವ ಕೆಲಸ ನಡೆಯಬೇಕು. ಮಕ್ಕಳಿಗೆ ಕೃಷಿ ಬದುಕನ್ನು ಪರಿಚಯಿಸಬೇಕು. ಕೃಷಿಯಲ್ಲಿ ಲಾಭ ಕಡಿಮೆ. ಆದರೆ ಅರೋಗ್ಯ ಖಂಡಿತ ಇದೆ. ಹೊನ್ನ ಬೀಜ ಬಿತ್ತೋಣ. ಉಸಿರನ್ನು ಹಸಿರಾಗಿಸೋಣ, ಜಗದ ದಾಹ ತಣಿಸೋಣ" ಎಂದರು.


ಬಳಿಕ ಮಾತಾಡಿದ ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಅವರು, "ಸಿರಿ ಎಂದರೆ ತುಳುವಲ್ಲಿ ಪೊಲಿ ಎಂಬ ಅರ್ಥವಿದೆ. ಕೃಷಿ ಎಂಬ ಸಿರಿಯಿಂದ ಲೋಕದ ಅಭಿವೃದ್ಧಿಯಾಗುತ್ತದೆ. ಜನರು ಸಂಘಟಿತರಾದಾಗ ಮಾತ್ರ ಕೃಷಿ ಮೇಳದಂತಹ ಕಾರ್ಯಕ್ರಮ ನಡೆಯಲು ಸಾಧ್ಯ. ಕೃಷಿ ಮತ್ತು ಋಷಿ ಜೊತೆಯಾಗಿ ಸಾಗಿದಾಗ ಮಾತ್ರ ರಾಷ್ಟ್ರ ಉದ್ಧಾರವಾಗುವುದು. ಕೃಷಿಯ ಜೊತೆ ಋಷಿ ಪರಂಪರೆಯಿಂದ ಜಾಗತೀಕರಣ ಮೆಟ್ಟಿ ನಿಲ್ಲಬಹುದು. ರಾಸಾಯನಿಕ ಮುಕ್ತ ಕೃಷಿಗೆ ನಾವು ಹೆಚ್ಚಿನ ಮಹತ್ವ ನೀಡಬೇಕು. ಕೃಷಿ ಮೇಳದ ಆಯೋಜನೆ, ಇಲ್ಲಿನ ವ್ಯವಸ್ಥೆಯನ್ನು ನೋಡಿದರೆ ತುಳುನಾಡಿನ ಹಿಂದಿನ ಪರಂಪರೆ ನೆನಪಿಗೆ ಬರುತ್ತದೆ. ಇಂತಹ ಪ್ರಯತ್ನ ನಾಡಿನ ಎಲ್ಲೆಡೆ ನಡೆದಾಗ ಕೃಷಿಕರು ಮತ್ತೆ ಕೃಷಿಯಲ್ಲಿ ಉಮೇದಿನಿಂದ ತೊಡಗಿಕೊಳ್ಳಬಹುದು" ಎಂದು ಆಶಯ ವ್ಯಕ್ತಪಡಿಸಿದರು.


ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಮೂಡಬಿದ್ರಿ ಕ್ಷೇತ್ರದ ಶಾಸಕ, ಕೃಷಿ ಮೇಳದ ಗೌರವಾಧ್ಯಕ್ಷ ಉಮಾನಾಥ್ ಕೋಟ್ಯಾನ್ ವಹಿಸಿದ್ದರು. ಕೃಷಿ ಮೇಳದ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಅವರು ಕೃಷಿ ಮೇಳದ ಠರಾವು ಅನ್ನು ಶಾಸಕ ಉಮಾನಾಥ್ ಕೋಟ್ಯಾನ್ ಅವರ ಮೂಲಕ ಸರಕಾರಕ್ಕೆ ಮಂಡಿಸಿದರು.



ವೇದಿಕೆಯಲ್ಲಿ ಮಾಜಿ ಸಚಿವ ಬಿ. ನಾಗರಾಜ್ ಶೆಟ್ಟಿ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಧಾರ್ಮಿಕ ಪರಿಷತ್ ಸದಸ್ಯ ಕೆ. ಭುವನಾಭಿರಾಮ ಉಡುಪ, ಬಿಜೆಪಿ ಮುಖಂಡ ಜಗದೀಶ್ ಶೇಣವ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಪೂಜಾ ಪೈ, ಉದ್ಯಮಿ ಸುರೇಶ ರೈ, ಮೇಯರ್ ಪ್ರೇಮಾನಂದ್ ಶೆಟ್ಟಿ, ಸ್ಥಳದಾನಿ ಫ್ರಾನ್ಸಿಸ್ ಪೀಟರ್, ಮೂಲ್ಕಿ ಸೀಮೆ ಅರಮನೆಯ ದುಗ್ಗಣ್ಣ ಸಾವಂತರು, ಕೃಷಿ ಮೇಳದ ಅಧ್ಯಕ್ಷ ವಿಜಯ ಶೆಟ್ಟಿ ಕೊಲ್ನಾಡ್, ಲಯನ್ಸ್ ಮಾಜಿ ಗವರ್ನರ್ ದೇವದಾಸ ಭಂಡಾರಿ, ತುಳು ಅಕಾಡೆಮಿ ಸದಸ್ಯೆ ಕಾಂತಿ ಶೆಟ್ಟಿ, ಕೃಷಿ ಮೇಳದ ಗೌರವಾಧ್ಯಕ್ಷ ಜಿ. ಆರ್. ಪ್ರಸಾದ್, ಜೊತೆ ಕೋಶಾಧಿಕಾರಿ ಸಂತೋಷ್ ಹೆಗ್ಡೆ, ಜೊತೆ ಕಾರ್ಯದರ್ಶಿಗಳಾದ ಸೋಮಪ್ಪ ನಾಯ್ಕ್, ಚಂದ್ರಹಾಸ್ ಕುಂದರ್, ಸಂಚಾಲಕರಾದ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು, ಎ. ಕೃಷ್ಣ ಶೆಟ್ಟಿ ತಾರೆಮಾರ್, ಪ್ರಶಾಂತ್ ಜಿ ಪೈ, ರತ್ನಾಕರ್ ಕುಳಾಯಿ, ವಿನೋದ್ ಸಾಲಿಯಾನ್ ಬೆಳ್ಳಾಯರು,  ಸಲಹೆಗಾರರಾದ ಮೂಲ್ಕಿ ಜೀವನ್ ಕೆ ಶೆಟ್ಟಿ, ತುಕಾರಾಂ ಪೂಜಾರಿ, ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.


ಆರ್.ಜೆ. ಅಭಿಷೇಕ್ ಕಾರ್ಯಕ್ರಮ ನಿರೂಪಿಸಿದರು.


ವೇದಿಕೆಯಲ್ಲಿ ಸಾಧಕರಿಗೆ ಸನ್ಮಾನ:

ಕೃಷಿ ಮೇಳದ ವೇದಿಕೆಯಲ್ಲಿ ಕೃಷಿಯಲ್ಲಿ ಆವಿಷ್ಕಾರ ಮಾಡಿರುವ ಜನಾರ್ಧನ ಗೌಡ ಮೂಡಬಿದ್ರಿ, ಬಿ. ಕೆ. ದೇವರಾಯ ರಾವ್ ಬೆಳ್ತಂಗಡಿ, ಜೇನು ಕೃಷಿಯಲ್ಲಿ ಸಾಧನೆ ಮಾಡಿರುವ ಬಸವನ ಬಾಗೇವಾಡಿಯ ಮಹಾಂತೇಶ್ ಎನ್. ಚೌಧರಿ, ಕೃಷಿ ಕ್ಷೇತ್ರದ ಸಾಧನೆಗಾಗಿ ಚಿಕ್ಕಬಳ್ಳಾಪುರದ ಎಸ್. ಆರ್. ಎಸ್. ದೇವರಾಜ್, ಬೆಳ್ತಂಗಡಿಯ ವಿಠಲ ಶೆಟ್ಟಿ ತಾರೆಮಾರ್ ಅವರನ್ನು ವೇದಿಕೆಯಲ್ಲಿ ಅತಿಥಿಗಳ ಸಮ್ಮುಖದಲ್ಲಿ ಪೇಟಾ ತೊಡಿಸಿ ಶಾಲು ಹೊದೆಸಿ ಸ್ಮರಣಿಕೆ ಕೊಟ್ಟು ಗೌರವಿಸಲಾಯಿತು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top