ಪುತ್ತೂರು: ಪರ್ಪುಂಜದ ಸೌಗಂಧಿಕದಲ್ಲಿ ಮಾರ್ಚ್ 6ರಂದು ‘ವರ್ಣ ಸಂಕ್ರಮಣ’ - ಚಿತ್ರ ಕಲಾವಿದೆಯರ ಕಲಾ ಪ್ರದರ್ಶನ ಆರಂಭವಾಗಲಿದೆ. ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ 21 ಮಹಿಳಾ ಕಲಾವಿದರ ಕಲಾರಚನೆಗಳು ಪ್ರದರ್ಶನಗೊಳ್ಳಲಿವೆ.
ಸಂಜೆ 5ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ನಳಿನಿ ಕಜೆ, ಉಷಾ ರಮೇಶ್ ರಾವ್ ಹಾಗೂ ಪದ್ಮಾ ಕೆ. ಆರ್. ಆಚಾರ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಹೆಸರಾಂತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಹಾಗೂ ಹಿರಿಯ ಕವಿ ಚೆನ್ನವೀರ ಕಣವಿ ಅವರಿಗೆ ಸಂಗೀತ ಶ್ರದ್ಧಾಂಜಲಿ ಸಾದರಪಡಿಸಲಾಗುವುದು. ಜತೆಗೆ ಪುತ್ತೂರಿನ ’ಧೀ ಶಕ್ತಿ ಮಹಿಳಾ ಯಕ್ಷ ಬಳಗ’ದಿಂದ ‘ಸಮರ ಸೌಗಂಧಿಕ’ ಯಕ್ಷಗಾನ ತಾಳಮದ್ದಳೆ ಜರುಗಲಿದೆ.
ಕಲಾ ಪ್ರದರ್ಶನ ಮಾ.13ರ ವರೆಗೆ ಪ್ರತಿ ದಿನ ಬೆಳಿಗ್ಗೆ 10ರಿಂದ ಸಂಜೆ 6ರ ತನ ಸಾರ್ವಜನಿಕ ವೀಕ್ಷಣೆಗೆ ತೆರೆದಿರುತ್ತದೆ. ಕಲಾವಿದರಾದ ನಳಿನಿ ಕಜೆ, ವೀಣಾ ಶ್ರೀನಿವಾಸ್, ಸಪ್ನಾ ನೊರೋನ್ಹ, ಅದಿತಿ ಎಂ. ಎಸ್., ವರ್ಷಾ ಮೊಳೆಯಾರ್, ವಸಂತಿ ಸಾಮೆತಡ್ಕ, ಖುರ್ಷಿದ್ ವೈ., ವೀಣಾ ಮಧುಸೂಧನ್, ರಚನಾ ಸೂರಜ್, ಗಾಯತ್ರಿ ನಾಯಕ್, ಝೀನಾ ಕೊಲಾಸೊ, ಜಯಶ್ರೀ, ಜ್ಯೋತಿ ಶೆಟ್ಟಿ, ಆತ್ಮೀ ರೈ, ಸಹಮತ ಬೊಳುವಾರು, ಪೃಥ್ವೀ ಸೌಗಂಧಿಕ, ಸುಮನಾ ಟಿ. ಆರ್., ಗೀತಾಂಜಲಿ, ಸಂಹಿತಾ ಶರ್ಮ, ರೇಷ್ಮಾ ಶೆಟ್ಟಿ ಹಾಗೂ ಗೀತಾ ವಸಂತ ನಾಯಕ್ ಅವರ ಕಲಾ ರಚನೆಗಳು ಪ್ರದರ್ಶನಗೊಳ್ಳಲಿವೆ ಎಂದು ಚಂದ್ರ ಸೌಗಂಧಿಕ ತಿಳಿಸಿದ್ದಾರೆ.