ವಿಶ್ವ ಮಹಿಳಾ ದಿನಾಚರಣೆ: ಸ್ತ್ರೀ ಎಂದರೆ....

Upayuktha
0

ಸ್ತ್ರೀ ಎಂದಾಗ ಮೊದಲು ನೆನಪಾಗುವವಳೇ ಅಮ್ಮ. 'ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ?' ಎಂದರು ಕವಿಗಳು. ಆಕೆಯ ಬಳಿ ಸಿಗುವ ಶಾಂತಿ, ನೆಮ್ಮದಿಗಳು ಜಗತ್ತಿನ ಯಾವ ವಸ್ತು ಸಂಗತಿಯ ಬಳಿಯೂ ಸಿಗಲಾರದು. ಈಗಿನಂತೆ ಆಧುನಿಕ ಸವಲತ್ತು ಸೌಲಭ್ಯಗಳಿಲ್ಲದ ಹಿಂದಿನ ಕಾಲದಲ್ಲಿ ಆಕೆ ನಿರ್ವಹಿಸುತ್ತಿದ್ದ ಕೆಲಸಗಳೆಲ್ಲವೂ ನಮಗೆ ಆಶ್ಚರ್ಯ ಹುಟ್ಟಿಸುವಂಥದ್ದು. ಅವಿಭಕ್ತ ಕುಟುಂಬಗಳಲ್ಲಿದ್ದ ಇಂಥ ತಾಯಂದಿರನ್ನೇ ಗಮನಿಸಿ. ಮನೆಯವರ ಅಗತ್ಯಗಳನ್ನೆಲ್ಲ ಪೂರೈಸುತ್ತಾ, ಆಳುಕಾಳುಗಳೆಲ್ಲಾ ನಿಭಾಯಿಸುತ್ತಾ, ದನಕರುಗಳ ಯೋಗಕ್ಷೇಮವನ್ನೆಲ್ಲಾ ನೋಡುತ್ತಾ ಇಡೀ ಸಂಸಾರವನ್ನು ತೂಗಿಸುತ್ತಿದ್ದ ಪರಿಯೇ ಅಚ್ಚರಿ ಹುಟ್ಟಿಸುತ್ತದೆ.

ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟದ ಪುಟಗಳನ್ನು ತೆಗೆದು ನೋಡಿದಾಗ ಅಲ್ಲಿ ನಮಗೆ ಅಬ್ಬಕ್ಕ, ರಾಣಿ ಚೆನ್ನಮ್ಮ, ಒನಕೆ ಓಬವ್ವ, 'ಕಾಳುಮೆಣಸಿನ ರಾಣಿ' ಎಂದು ಕರೆಯಿಸಿಕೊಂಡ ಚೆನ್ನಭೈರಾದೇವಿ ಮುಂತಾದ ಧೀಮಂತೆಯರನ್ನು ನೋಡಬಹುದು. ಅಲ್ಲದೆ ಸಾಧಕರ ಹಿಂದಿನ ಪ್ರೇರಕ ಶಕ್ತಿಯಾಗಿ ಸ್ತ್ರೀಯನ್ನು ನೋಡ ಬಹುದಾದರೆ, ತಾಯಿ ಜೀಜಾಬಾಯಿಯ ಉದಾಹರಣೆಯನ್ನು ಕೊಡಬಹುದು. ಗಾಂಧೀಜಿಯ ಪ್ರೇರಕಶಕ್ತಿ ಕಸ್ತೂರಬಾರನ್ನು ನೋಡಬಹುದು. ಶಿವಾಜಿಯು 'ಛತ್ರಪತಿ ಶಿವಾಜಿ'ಯಾಗಿ ಬೆಳೆಯಬೇಕಾದರೆ ಆತನ ತಾಯಿಯ ಕೊಡುಗೆ ಅಪಾರವಾದುದು. ಅಂತೆಯೇ ಕಸ್ತೂರಬಾರವರು ಗಾಂಧೀಜಿಯವರ ಜತೆಗೆ ಹೋರಾಟದ ಹೆಜ್ಜೆ ಹಾಕಿದವರು.


ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕನೇ ಇರಲಿ, ಆತ ಮಹಾನ್ ಸಾಧಕನಾಗಲು ಪ್ರೇರಕಶಕ್ತಿಯಾಗಿ ಒಂದು ಹೆಣ್ಣು ಇರುತ್ತಾಳೆ. ಆಕೆ ತಾಯಿಯೋ, ಮಡದಿಯೋ, ಅಕ್ಕ ತಂಗಿ ಮಗಳು ಹೀಗೆ ಯಾವುದೋ ರೂಪದಲ್ಲಿರಬಹುದು. ಆಕೆ ಆತನಿಗೆ ಸಂಸಾರ, ಮನೆಯ ಬಿಸಿ ತಟ್ಟದಂತೆ ನಾಜೂಕಾಗಿ ಎಲ್ಲವನ್ನೂ ನಿಭಾಯಿಸುತ್ತಾ ಎಲೆಮರೆಯ ಕಾಯಿಯಂತಿರುತ್ತಾಳೆ.


ಹೆಣ್ಣು ಮನಸ್ಸು ಮಾಡಿದರೆ ಬೇಕಾದ್ದನ್ನು ಸಾಧಿಸಬಲ್ಲಳು. ಮನೆ, ಸಂಸಾರ, ಉದ್ಯೋಗ, ಸಾಧನೆ ಎನ್ನುತ್ತಾ ಎಲ್ಲವನ್ನೂ ನಿಭಾಯಿಸುವ ಛಾತಿ ಹೊಂದಿದ್ದಾಳೆ ಆಕೆ. ಯಾವುದೇ ಕೆಲಸವನ್ನು ನೀಡಿದರೂ ಅಚ್ಚುಕಟ್ಟಾಗಿ ನಿರ್ವಹಿಸಬಲ್ಲಳು. ಕಲೆ, ವಿಜ್ಞಾನ, ಕ್ರೀಡೆ, ರಾಜಕೀಯ, ಸಾಹಿತ್ಯ, ಸಂಗೀತ, ನೃತ್ಯ ಮುಂತಾದ ಎಲ್ಲ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ ಸಾಧಕಿಯರಿದ್ದಾರೆ. ಗಂಗಾಂಬಿಕೆ, ಅಕ್ಕಮಹಾದೇವಿ, ಸಂಚಿಯ ಹೊನ್ನಮ್ಮ ಮುಂತಾದ ವಚನಕಾರ್ತಿಯರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸಿದರೆ; 'ಅಕ್ಷರದವ್ವ' ಎಂದೇ ಹೆಸರಾದ ಸಾವಿತ್ರಿಬಾಯಿ ಪುಲೆ ಹಾಗೂ ಫಾತಿಮಾ ಶೇಖ್ ಇವರು 'ಸ್ತ್ರೀ ಶಿಕ್ಷಣ'ದ ಕ್ರಾಂತಿಯನ್ನೇ ಉಂಟುಮಾಡಿದವರು. ಆನಂದಿ ಬಾಯಿ ಜೋಶಿ, ಕಾದಂಬಿನಿ ಗಂಗೂಲಿ ಮುಂತಾದವರು ವೈದ್ಯರಾಗಿ ಸೇವೆ ಸಲ್ಲಿಸಿದರೆ; ಅನ್ನಾಮಣಿ ಅದಿತಿ ಪಂತ್, ಇಂದಿರಾ ಹಿಂದೂಜಾ, ಸುನೀತಾ ಗುಪ್ತಾ, ಅಸಿಮಾ ಚಟರ್ಜಿ ಮುಂತಾದವರು ವಿಜ್ಞಾನ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದವರು.


ಇಂದಿರಾಗಾಂಧಿ, ಪ್ರತಿಭಾ ಪಾಟೀಲ್, ಸುಚೇತಾ ಕೃಪಲಾನಿ, ನಿರ್ಮಲಾ ಸೀತರಾಮನ್ ಮುಂತಾದವರು ರಾಜಕೀಯಕ್ಕೆ ಹೊಸ ದಿಕ್ಕನ್ನು ತೋರಿಸಿದ ಮಹಿಳೆಯರು. ಗಂಗೂಬಾಯಿ ಹಾನಗಲ್, ಲತಾ ಮಂಗೇಶ್ಕರ್ ಎಂ ಎಸ್ ಸುಬ್ಬುಲಕ್ಷ್ಮಿ, ವಸುಂಧರಾ ದೊರೆಸ್ವಾಮಿ ಮುಂತಾದವರು ಸಂಗೀತ ನೃತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಇನ್ನೂ ಕಥೆ, ಸಾಹಿತ್ಯ ಕ್ಷೇತ್ರದಲ್ಲಿ ನೋಡುವುದಾದರೆ ಕೊಡಗಿನ ಗೌರಮ್ಮ, ವೈದೇಹಿ, ತ್ರಿವೇಣಿ, ಸಾರಾ ಅಬೂಬಕ್ಕರ್, ಅನುಪಮಾ ನಿರಂಜನ, ಎಂ ಕೆ ಇಂದಿರಾ, ಕಮಲಾ ಹಂಪನಾ, ನೇಮಿಚಂದ್ರ, ಸುನಂದಮ್ಮ, ರಾಧಾದೇವಿ, ಗೀತಾ ನಾಗಭೂಷಣ ಮುಂತಾದ ಲೇಖಕಿಯರನ್ನು ಗುರುತಿಸಬಹುದು.


ಅಲ್ಲದೆ ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ ಮುಂತಾದವರು ಆಕಾಶವನ್ನು ಮುಟ್ಟಿ ಬರಬಲ್ಲೆವು ಎಂದು ತೋರಿಸಿದ ಸಾಧಕಿಯರು. ದೀನದಲಿತರ, ಬಡವರ, ರೋಗಿಗಳ ಸೇವೆಗಾಗಿ ತಮ್ಮನ್ನು ಮುಡಿಪಾಗಿಟ್ಟವರು ಮದರ್ ತೆರೆಸಾರವರು. ಇವರಲ್ಲದೆ ಪಿ ಟಿ ಉಷಾ, ಕರ್ಣಂ ಮಲ್ಲೇಶ್ವರಿ, ಪಿ ವಿ ಸಿಂಧೂ, ಸೈನಾ ನೆಹ್ವಾಲ್, ಮೇರಿಕೋಮ್, ಮಿಥಾಲಿ ರಾಜ್, ಜ್ವಾಲಾ ಗುಟ್ಟಾ, ಅಂಜು ಬಾಬ್ಬಿ ಜಾರ್ಜ್ ಮೊದಲಾದವರು ಕ್ರೀಡಾಕ್ಷೇತ್ರವನ್ನು ಬೆಳಗಿದ ತಾರೆಯರು.


ಅಲ್ಲದೆ ಕರ್ನಾಟಕದ ಏಕೈಕ ಪಕ್ಷಿ ಛಾಯಾಗ್ರಾಹಕಿ ಎಂದು ಹೆಸರು ಮಾಡಿದ ಲೀಲಾ ಅಪ್ಪಾಜಿ, ಐಪಿಎಸ್ ಅಧಿಕಾರಿ ಕಿರಣ್ ಬೇಡಿ, ಇನ್ಫೋಸಿಸ್‌ನ ಸುಧಾಮೂರ್ತಿ, ಧರ್ಮಸ್ಥಳದ ಹೇಮಾವತಿ ಹೆಗ್ಗಡೆ, ಸೇನಾ ಪೈಲಟ್‌ಗಳಾದ ಅವನಿ ಚತುರ್ವೇದಿ, ಶಿವಾಂಗಿ ಸಿಂಗ್, ಭಾವನಾ ಕಾಂತೆ, ಎವರೆಸ್ಟ್ ಶಿಖರವನ್ನು ಏರಿದ ಮೊದಲ ಭಾರತೀಯ ಮಹಿಳೆ ಬಚೇಂದ್ರಿಪಾಲ್, ಅಪಘಾತದಲ್ಲಿ ಕಾಲನ್ನು ಕಳೆದುಕೊಂಡರೂ ಮೌಂಟ್ ಎವರೆಸ್ಟ್ ಏರಿದ ಅರುಣಿಮಾ ಸಿನ್ಹಾ ಹೀಗೆ ಅನೇಕ ಸಾಧಕಿಯರನ್ನು ನೋಡಬಹುದು ಇವರೆಲ್ಲಾ ಅವರವರ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪಾರ. ಇವರಲ್ಲದೆ 'ವೃಕ್ಷಮಾತೆ' ಎನಿಸಿಕೊಂಡ ಸಾಲುಮರದ ತಿಮ್ಮಕ್ಕ, ತುಳಸೀ ಗೌಡ ಇವರ ಸಾಧನೆಯೂ ಕಡಿಮೆಯೇನಲ್ಲ. ಮರಗಳನ್ನು ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸಿ ಪೋಷಿಸಿದ ತಾಯಂದಿರು ಇವರು.


ಇವೆಲ್ಲಾ ಕೆಲವು ಉದಾಹರಣೆಗಳಷ್ಟೆ. ಇಂಥ ಅನೇಕ ಮಹಿಳೆಯರು ತಮ್ಮ ತಮ್ಮ ಸಾಧನೆಗಳಿಂದ ಭವಿಷ್ಯದ ಸಾಧನೆಯ ಹಾದಿಯಲ್ಲಿರುವ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ. ಕವಿ ಶಿವರುದ್ರಪ್ಪನವರು ತಮ್ಮ ಕವನವೊಂದರಲ್ಲಿ ಹೀಗನ್ನುತ್ತಾರೆ- ಆಕಾಶದ ನೀಲಿಯಲ್ಲಿ, ಚಂದ್ರತಾರೆ ತೊಟ್ಟಿಲಲ್ಲಿ, ಬೆಳಕನಿಟ್ಟು ತೂಗಿದಾಕೆ, ನಿನಗೆ ಬೇರೆ ಹೆಸರು ಬೇಕೆ, ಸ್ತ್ರೀ ಎಂದರೆ ಅಷ್ಟೇ ಸಾಕೇ? ಪ್ರಕೃತಿ ನದಿ ಭೂಮಿ ಎಲ್ಲವನ್ನೂ ನಾವು ಸ್ತ್ರೀ ರೂಪವಾಗಿ ನೋಡುತ್ತೇವೆ. ಏಕೆಂದರೆ ಪೊರೆಯುವ ಶಕ್ತಿ ಇರುವವಳು ಹೆಣ್ಣು. ಕಾಯುವ ಶಕ್ತಿ ಇರುವವಳು ಹೆಣ್ಣು. ಮನುಷ್ಯರಲ್ಲೇ ಆಗಲಿ, ಪ್ರಾಣಿಪಕ್ಷಿಗಳಲ್ಲೇ ಆಗಲಿ ಮರಿಗಳ ಲಾಲನೆ ಪಾಲನೆ ಪೋಷಣೆ ಮಾಡುವುದು ಹೆಚ್ಚಾಗಿ ಹೆಣ್ಣು.


ಇಂತಹ ಅಗಾಧ ಶಕ್ತಿ ಇರುವುದರಿಂದಲೇ ತನ್ನನ್ನು ಮೀರಿ ಆಕೆ ಬೆಳೆದು ಬಿಟ್ಟಾಳು ಎಂಬ ಅಂಜಿಕೆ ಪುರುಷ ಸಮಾಜವನ್ನು ಕಾಡಿರಬಹುದು. ಅದಕ್ಕಾಗಿಯೇ ಆತ ಸಂಪ್ರದಾಯ ಕಂದಾಚಾರಗಳ ಹೆಸರಿನಲ್ಲಿ ಆಕೆಯನ್ನು ಹಣಿಯುವ ಯತ್ನ ಮಾಡಿರಬಹುದು. ಅದೇನೇ ಇರಲಿ. ಇವೆಲ್ಲವನ್ನು ಮೀರಿ ಆಕೆ ಬೆಳೆದು ನಿಂತಿದ್ದಾಳೆ. ತನಗೇನು ಬೇಕು ಎಂಬುದನ್ನು ಅರಿಯಬಲ್ಲವಳಾಗಿದ್ದಾಳೆ. ತನಗೆ ಬೇಕಾದ ಶಿಕ್ಷಣ ಉದ್ಯೋಗ ಹೊಂದುವ ಛಾತಿ ಉಳ್ಳವಳಾಗಿದ್ದಾಳೆ. ನಮಗೆ ಒಂದು ದಿನದ ಮೀಸಲಾತಿ ಏಕೆ? ಎಲ್ಲಾ ದಿನಗಳು ನಮ್ಮವೇ. ಖುಷಿಯಾಗಿರೋಣ, ಸಂತಸದಿಂದ ಇರೋಣ, ಹೊಸತನ್ನು ಕಲಿಯೋಣ, ಸದಾ ಧನಾತ್ಮಕವಾಗಿ ಯೋಚಿಸೋಣ ಧನ್ಯವಾದಗಳು.

-ರಾಜೇಶ್ವರಿ ಮಯ್ಯ ಬಲ್ಲೇರಿ ಪುತ್ತೂರು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top