ನಮ್ಮ ಅಬ್ಬಕ್ಕ ಸ್ವಾತಂತ್ರ್ಯಾಮೃತ ಕವಿನಮನ- ಬಹುಭಾಷಾ ಕವಿಗೋಷ್ಠಿ
ಮಂಗಳೂರು: 'ಭಾರತೀಯ ಸಾಹಿತ್ಯದಲ್ಲಿ ಕಾವ್ಯಪ್ರಕಾರಕ್ಜೆ ಭವ್ಯಪರಂಪರೆ ಇದೆ. ಕಾವ್ಯ ಕಟ್ಟುವ ಕೆಲಸ ಅಷ್ಟೊಂದು ಸುಲಭವಲ್ಲ. ಅದಕ್ಕೆ ಲಯ ಶುದ್ಧಿ ಮುಖ್ಯ. ಕವಿತೆ ಬೇರೆ; ಪದ್ಯ ಬೇರೆ. ಪದ್ಯಗಳೆಂದೂ ಕಾವ್ಯವಾಗುವುದಿಲ್ಲ; ಆದರೆ ಅವುಗಳಲ್ಲಿ ಕಾವ್ಯದ ಹೊಳಹುಗಳು ಇದ್ದಾಗ ಪದ್ಯ ಹೃದ್ಯವಾಗುತ್ತದೆ. ನಮ್ಮ ಕವಿತೆಗಳಿಂದ ಎಂದಾದರೂ ಜಗತ್ತಿಗೆ ಸಂದೇಶ ಕೊಡುವುದಕ್ಕೆ ಸಾಧ್ಯವಾದರೆ ಕವಿತ್ವ ಸಾರ್ಥಕ' ಎಂದು ಹಿರಿಯ ಕವಿ ಮತ್ತು ಸಾಹಿತಿ ಡಾ.ನಾ. ಮೊಗಸಾಲೆ ಹೇಳಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ಮತ್ತು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ ವತಿಯಿಂದ ನಗರದ ಪುರಭವನದಲ್ಲಿ ಜರಗಿದ 'ನಮ್ಮ ಅಬ್ಬಕ್ಕ: ಅಮೃತ ಸ್ವಾತಂತ್ರ್ಯ ಸಂಭ್ರಮದ 'ಸ್ವಾತಂತ್ರ್ಯಾಮೃತ ಕವಿನಮನ: ಬಹುಭಾಷಾ ಕವಿಗೋಷ್ಠಿ'ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 'ಪೂರ್ವಸೂರಿಗಳ ಕವಿತೆಗಳನ್ನು ಓದದಿದ್ದರೆ ಆಧುನಿಕ ಕವಿಗಳು ಬೆಳೆಯಲಾರರು. ಪ್ರಸ್ತುತ ರಾಜಕಾರಣಕ್ಕಿಂತಲೂ ನಮ್ಮ ಸಾಹಿತ್ಯ ಕ್ಷೇತ್ರದ ರಾಜಕೀಯ ಬಹಳ ದೊಡ್ಡದು' ಎಂದವರು ವಿಷಾದಿಸಿದರು.
ಕವಿಗಳಾದ ಮುದ್ದು ಮೂಡುಬೆಳ್ಳೆ, ಮಹಮ್ಮದ್ ಬಡ್ಡೂರು, ರಘು ಇಡ್ಕಿದು, ಕಾ.ವಿ.ಕೃಷ್ಣದಾಸ್, ಅಕ್ಷಯ ಆರ್. ಶೆಟ್ಟಿ ಪೆರಾರ, ಫೆಲ್ಸಿ ಲೋಬೋ, ಮಲ್ಲಿಕಾ ಜೆ.ರೈ ಗುಂಡ್ಯಡ್ಕ, ಅಕ್ಷತಾ ರಾಜ್ ಪೆರ್ಲ, ಅರ್ಚನಾ ಬಂಗೇರ ಕುಂಪಲ ಸ್ವರಚಿತ ಕನ್ನಡ, ತುಳು, ಕೊಂಕಣಿ, ಬ್ಯಾರಿ ಮತ್ತು ಹಿಂದಿ ಕವಿತೆಗಳನ್ನು ಓದಿದರು. ತೋನ್ಸೆ ಪುಷ್ಕಳ್ ಕುಮಾರ್ ಮತ್ತು ಮಾಲಿನಿ ಕೇಶವ ಪ್ರಸಾದ್ ಕವಿತೆಗಳಿಗೆ ರಾಗ ಸಂಯೋಜಿಸಿ ಹಾಡಿದರು. ಸತೀಶ್ ಸುರತ್ಕಲ್, ನವಗಿರಿ ಗಣೇಶ್ ಮತ್ತು ಗೌತಮ್ ಮಂಗಳೂರು ಹಿನ್ನೆಲೆ ಸಂಗೀತ ನೀಡಿದರು.
ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ರಚಿಸಿದ 'ಅಮೃತ ಸಂಭ್ರಮ' ಸ್ವಾತಂತ್ರ್ಯ ಗೀತೆಯನ್ನು ಗಾಯಕರು ಹಾಡಿ ಕವಿಗೋಷ್ಠಿ- ಕಾವ್ಯ ಗಾಯನವನ್ನು ಸಂಪನ್ನಗೊಳಿಸಿದರು. ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಡಾ.ಅರುಣ್ ಉಳ್ಳಾಲ್ ಸ್ವಾಗತಿಸಿ ನಿರೂಪಿಸಿದರು; ಕೋಶಾಧಿಕಾರಿ ಪಿ.ಡಿ. ಶೆಟ್ಟಿ ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ