ಅಗೋ ನೋಡಲ್ಲಿ ಭಾರತ ವಿಶ್ವಗುರುವಾಗಿ ಮೈದಳೆದು ನಿಂದಿರುವಾಗ, ಇಂದೇಕೆ ಕರುನಾಡು ಬಿಸಿರಕ್ತ ಚೆಲ್ಲಿ, ರುದ್ರವಾಗುತಿರೆ.. ಮಾತೆ ಭಾರತಿಯು ಕ್ರುದ್ಧಳಾಗುತಿಹಳು ಕಾಣಿಸದೆ...
ಕಳೆದ ಕೆಲ ದಿನಗಳಿಂದ ಕರುನಾಡಿನಲ್ಲಿ ಧರ್ಮ- ಸಮಾನತೆಯ ಸಂಘರ್ಷದಿಂದ ಭಾರತದ ಭವಿಷ್ಯದ ರೂವಾರಿಗಳ ಚೈತನ್ಯ ಕುಸಿಯುತ್ತಿದೆ. ಅಂದು ಶಾಲೆಯಲ್ಲಿ ನಾವೆಲ್ಲ ಯಾವ ಧರ್ಮದ ಹಂಗೂ ಇಲ್ಲದೆ ಒಟ್ಟಾಗಿ ಹೇಳುತ್ತಿದ್ದ ಈ ಸಾಲುಗಳು, "ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ…" ಈ ಸಂಧರ್ಭದಲ್ಲಿ ತನ್ನ ಮೌಲ್ಯ ಕಳೆದುಕೊಂಡಿದೆ. ಭುಗಿಲೆದ್ದ ಕಿಚ್ಚಿಗೆ ತುಪ್ಪ ಸುರಿಯುವ ಮುನ್ನ ನಾವು ಮಾಡುತ್ತಿರುವ ಈ ಅತಿರೇಕದ ವರ್ತನೆ ನಮ್ಮ ಸ್ಥಿಮಿತ ಕೆಳೆದುಕೊಳ್ಳುವಂತೆ ಮಾಡಿದೆ. ಪ್ರತಿಭಟಿಸುವ ಮುನ್ನ ಸಮಾನತೆಯ ಅರ್ಥವನ್ನು ಸೂಕ್ತೋಪಾದಿಯಲ್ಲಿ ಅರ್ಥೈಸಬೇಕಾಗಿದೆ. ಜೊತೆಗೆ ದೇಶಾಭಿಮಾನ ಮೂಡಿಸಬೇಕಿದೆ.
ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ಹಾಗೂ ಭಾವೈಕ್ಯತೆಯನ್ನು ಸಾರುತ್ತಿರುವ ಸಂಸ್ಕಾರಯುತ ರಾಷ್ಟ್ರ. ಹಿಂದಿನಿಂದಲೂ ಕೈಚಾಚಿ ಬಂದವರಿಗೆ ನೆಲೆಯಿತ್ತು, ಉಪಚರಿಸಿದ ಭವ್ಯ ದೇಶ. ವೇದಗಳ ಕಾಲದಿಂದ ಹಿಡಿದು ಇಲ್ಲಿಯವರೆಗೂ ಭಾರತ ಶಿಕ್ಷಣವನ್ನೇ ಆಧರಿಸಿ ಬೆಳೆದಿದೆಯೇ ಹೊರತು ಕಲಹದಿಂದಲ್ಲ. ಸ್ನೇಹ ಬೆಳೆಸಲು ಬರುವ ವಿವೇಕ, ಶತ್ರುವಿನ ಎದೆಬಿರಿಯಲು ಬರುವ ತಂತ್ರವೂ ಶಿಕ್ಷಣದಿಂದಲೇ. ಕಟ್ಟಕಡೆಗೆ ಧರ್ಮ ಜ್ಞಾನವೂ ಶಿಕ್ಷಣದಿಂದಲೇ. ಶಿಕ್ಷಣವೇ ದೇಶದ ಜೀವನಾಡಿಯಾಗಿರಲು ಭಾರತ ತನ್ನದೇ ಆದ ರೂಪುರೇಷೆಯಲ್ಲಿ ಸಮಾಜದ ಪ್ರತಿಯೋರ್ವನಿಗೂ ಸಮಾನ ಶಿಕ್ಷಣ ಹಕ್ಕನ್ನು ನೀಡಿತ್ತು. ಇದರಿಂದ ದೇಶ ಪ್ರಬುದ್ಧವಾಗುವುದೆಂದು ನಕ್ಕು ನಲಿದಿದ್ದ ಭಾರತಿ ಇಂದು ತನ್ನ ಕಾನೂನೇ ತಪ್ಪಾಗಿದೆಯೆ ಎಂಬ ಸಂದೇಹದಲ್ಲಿದ್ದಾಳೆ.
ಆದರೆ ಭಾರತೀಯ ದಿಕ್ಕು ತಪ್ಪಿಸಿರುವುದು ನಾವೇ ಅಲ್ಲವೇ… ಸಹೋದರ, ಸಹೋದರಿಯರೇ, ನಾವೆಲ್ಲ ಶಿಕ್ಷಣವಿಲ್ಲದೆ, ಸಾಮಾನ್ಯ ಪ್ರಜ್ಞೆಯೂ ಇಲ್ಲದೆ ಬದುಕಲು ಸಾಧ್ಯವುಂಟೆ? ಮತ್ತೆ ಆದಿಮಾನವರಂತೆ ಅಜ್ಞಾನಿಗಳಾಬೇಕೆ. ನಮಗೆ ಶಿಕ್ಷಣ ನೀಡಿ ಬದುಕು ರೂಪಿಸುವ ವಿದ್ಯಾದೇವಾಲಯಗಳಿಗೆ ಧರ್ಮದ ಆಚರಣೆ ತರುವುದು ಸರಿಯಲ್ಲ. ಅಲ್ಲಿ ನಾವೆಲ್ಲಾ ಸಮಾನರಾಗಿ ಇರಬೇಕಾದರೆ ಸಮಾನವಾದ ವಸ್ತ್ರ ಸಂಹಿತೆ ಇರಬೇಕು ಎಂಬ ಅರಿವೂ ಇಲ್ಲದಾಯಿತೇ… ನಮ್ಮ ಬದುಕು ರೂಪಿಸಲು ಶಾಲಾ, ಕಾಲೇಜು,ಶಿಕ್ಷಕರ ಮುಖ ನೋಡುವ ನಾವೆಲ್ಲಾ ಅಲ್ಲಿನ ಋಣವನ್ನು ತೀರಿಸಲಾದರೂ ಸಮವಸ್ತ್ರ ಧರಿಸಿ ಬರಬಹುದಲ್ಲವೆ...?
ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರವೇ ಸಮಾನತೆಯ ಪ್ರತೀಕವಾಗಿದೆ. ಇದನ್ನು ಅರ್ಥೈಸಿದರೆ ವಿದ್ಯೆ ಪಡೆದು, ಬದುಕು ಕಟ್ಟಿಕೊಂಡು ನಮ್ಮ ಆಚರಣೆಯನ್ನು ನಾವು ನಮ್ಮ ಮನೆಯಲ್ಲಿ ಆಚರಿಸಲು ಶಕ್ತಿಯಾದರೂ ಬಂದೀತೂ. ಇಲ್ಲವಾದರೆ ತುಂಡು ಬಟ್ಟೆಗೂ ಅಲೆಯಬೇಕಾದೀತು...!
-ಶಿವಪ್ರಸಾದ್ ಬೋಳಂತೂರು
ದ್ವಿತೀಯ ಬಿ.ಎ. (ಪತ್ರಿಕೋದ್ಯಮ ವಿಭಾಗ)
ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ