
ಬಾಲ್ಯದಲ್ಲಿ ನಾವು ಹಿಂದೂ-ಮುಸಲ್ಮಾನರೆಂಬ ಬೇಧವಿಲ್ಲದೆ ಸಹೋದರ-ಸಹೋದರಿಯರಂತೆ ಬಾಳುತ್ತಿದ್ದೆವು. ಧರ್ಮದ ಕಟ್ಟಪ್ಪಣೆಗಳಾಗಲಿ, ರಾಜಕೀಯ ಷಡ್ಯಂತ್ರಗಳಾಗಲಿ ನಮ್ಮನ್ನು ಸುತ್ತುವರೆದಿರಲಿಲ್ಲ. ನಾವು ಶಾಲೆಗಳಲ್ಲಿ ಗಣೇಶ ಚತುರ್ಥಿ, ಸರಸ್ವತಿ ಪೂಜೆಗಳನ್ನು ಆಚರಿಸಿ ಮುಸ್ಲಿಂ ಸಹೋದರ, ಸಹೋದರಿಯರಿಗೆ ಸಿಹಿ ಹಂಚಿದರೆ, ಅವರು ರಂಜಾನ್ ಮತ್ತು ಮೊಹರಂ ಸಂದರ್ಭಗಳಲ್ಲಿ ಸಿಹಿಯುಣಿಸುತ್ತಿದ್ದರು.
ಇಂದು ನಾವು ಬೆಳೆದಿದ್ದೇವೆ ನಮ್ಮಿಂದ ಸದೃಢ ಭಾರತ ಕಟ್ಟಲು ಸಾಧ್ಯ. ಆದರೆ ತಮ್ಮ ಲಾಭಕ್ಕಾಗಿ ರಾಜಕಾರಣಿಗಳು ಹಾಗೂ ಸಂಘಟನೆಗಳು ಇಂದಿನ ಯುವಶಕ್ತಿಯನ್ನು ಧರ್ಮದ ಹೆಸರಿನಲ್ಲಿ ಪ್ರಚೋದಿಸಿ ಒಬ್ಬರ ವಿರುದ್ಧ ಮತ್ತೊಬ್ಬರು ಕತ್ತಿ ಮಸೆಯುವಂತೆ ಮಾಡುತ್ತಿದ್ದಾರೆ. ಇದನ್ನರಿತು ನಾವು ಯಾವುದು ಸರಿ ಯಾವುದು ತಪ್ಪು ಎಂದು ಯೋಚಿಸಿ ಮತ್ತೊಬ್ಬರ ಕೈಗೊಂಬೆಯಾಗಿರದೆ ಸ್ವತಂತ್ರ ನಿರ್ಣಯ ಕೈಗೊಳ್ಳೋಣ.
ರಾಜಕೀಯ ಬೇಡ. ಸೌಹಾರ್ದಯುತ ಶಾಂತಿಯುತ ಸಹಬಾಳ್ವೆ ನಮ್ಮದಾಗಿರಲಿ. ವಿವಿಧತೆಯಲ್ಲಿ ಏಕತೆಯಿರುವ ರಾಷ್ಟ್ರ ನಮ್ಮ ಭಾರತ. ಹಿಜಾಬ್ ವಿವಾದದಲ್ಲಿ ರಾಜಕೀಯ ಮಾಡುವ ಮೂಲಕ ರಾಜಕಾರಣಿಗಳು ಶಾಂತಿ ಕದಡುವ ಪ್ರಯತ್ನ ನಡೆಸುತ್ತಿದ್ದಾರೆ. ಮತೀಯ ವಿಷಬೀಜ ಬಿತ್ತುವವರಿಂದ ಪರಿಸ್ಥಿತಿ ವಿಕೋಪ ಹಂತವನ್ನು ತಲುಪುವ ಮುನ್ನ ಎಲ್ಲರೂ ಎಚ್ಚೆತ್ತುಕೊಳ್ಳೋಣ. ಶಾಲಾ-ಕಾಲೇಜುಗಳು ಮಕ್ಕಳಿಗೆ ಜ್ಞಾನಾರ್ಜನೆ ನೀಡುವ ಕೇಂದ್ರಗಳಾಗಬೇಕೆ ಹೊರತು ಜಾತಿ, ಧರ್ಮ, ಅಸಮಾನತೆ, ಅಸಹಿಷ್ಣುತೆ ಬೆಳೆಸುವ ತಾಣಗಳಾಗಬಾರದು.
ನಾನು ಹಿಂದೂ ಕುಟುಂಬಕ್ಕೆ ಸೇರಿದವನು. ಆದರೆ ಮುಸ್ಲಿಂ ಧಾರ್ಮಿಕ ಸಂಪ್ರದಾಯ ಹಿಜಾಬ್ ವಿರೋಧಿಯಲ್ಲ. ಬಟ್ಟೆ ಧರಿಸುವುದು ಅವರವರ ಸ್ವಾತಂತ್ರ್ಯ. ಆದರೆ ಶಿಕ್ಷಣ ಎಲ್ಲವನ್ನೂ ಮೀರಿ ನಮ್ಮನ್ನ ಬೆಳೆಸುವಂಥದ್ದು. ನಮ್ಮನ್ನು ಪ್ರಜ್ಞಾವಂತರನ್ನಾಗಿ ಮಾಡುವಂಥದ್ದು. ಶಿಕ್ಷಣಕ್ಕಾಗಿ ಹೋರಾಟ ನಡೆಸುವ ಪ್ರತಿ ಹೆಣ್ಣಿನ ಪರ ನಾನು ಬೆಂಬಲ ನೀಡುತ್ತೇನೆ. ಆದರೆ ಶಾಲೆ ಶಿಕ್ಷಣ ಸಮಾನತೆಯ ಪದಗಳು ಬರುವಾಗ ಧರ್ಮವನ್ನು ತ್ಯಜಿಸಿ ಎಲ್ಲರೂ ಸಮಾನ ಸಮವಸ್ತ್ರ ಧರಿಸೋಣ ಕಾಲೇಜಿನ ಹೊರಗಡೆ ನಮ್ಮ ನಮ್ಮ ಧರ್ಮಗಳನ್ನು ಆಚರಿಸೋಣ.
ಅಂದು ದಾನಶೂರ ಕರ್ಣನಿಗೆ ಶಿಕ್ಷಣ ನೀಡಲು ತಿರಸ್ಕರಿಸಿದ್ದ ಜಾತಿ ವ್ಯವಸ್ಥೆ ಇಂದು ಅದೆಷ್ಟೋ ವಿದ್ಯಾರ್ಥಿಗಳಿಗೆ ಶಿಕ್ಷಣದಿಂದ ದೂರ ಉಳಿಯುವಂತೆ ಮಾಡುತ್ತಿದೆ. ಇನ್ನಾದರೂ ಎಚ್ಚೆತ್ತುಕೊಳ್ಳೋಣ ಎಲ್ಲರೂ ಸಮಾನರಾಗಿ ಬಾಳೋಣ.
-ಶಂಕರ್ ಓಬಳಬಂಡಿ
ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿ
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ