ಸಣ್ಣಕಥೆ: ಆತ್ಮಸ್ಥೈರ್ಯದ ಹಾದಿ

Upayuktha
0


ವಿಧಿಯಾಟದ ಎದುರು ಸೆಣಸಾಡಿ ಸೋತಿದ್ದ ಉಷಾಳು ತನ್ನ ಬದುಕಿನ ಮುಂದಿನ ಹೆಜ್ಜೆಗಳನ್ನೇ ಮರೆತು  ಬಿಟ್ಟಿದ್ದಳು. ಸಂತಸ, ಸಂಭ್ರಮದಿಂದ ನಳನಳಿಸಿದ ಮೊಗವು ಇಂದು ವಿಷಾದ ಚಿತ್ತಕ್ಕೆ ತಿರುಗಿದೆ. ಜಡಿಮಳೆಯ ರಭಸಕ್ಕೆ ರಾಶಿಕಸಗಳು ಕೊಚ್ಚಿ ಹೋಗುವಂತೆ ಉಷಾಳ ಬದುಕಿನಲ್ಲಿದ್ದ ಭರವಸೆಗಳು ಕಾಣದೂರಿಗೆ ಕೊಚ್ಚಿ ಹೋಗಿದೆ.ಭರವಸೆಗಳ ಜೊತೆ ಬದುಕಿನ ಪಯಣವೆನ್ನುವುದನ್ನು ಆಗಾಗ ಸ್ಮರಿಸಿಕೊಂಡರೂ ತನ್ನ ಬದುಕಿನಲ್ಲಿ ವಿಧಿಯಾಡಿದ ಚೆಲ್ಲಾಟವನ್ನು ಕಲ್ಪನೆಗೆ ತಂದುಕೊಂಡಾಗಲೆಲ್ಲಾ ಮನೆಯೆದುರಿನ ಜಗಲಿಗೆ ತಲೆಯೊರಗಿಸಿ ದಿಗ್ಭ್ರಮೆಗೊಳಗಾಗಿ ಕುಳಿತು ಬಿಡುತ್ತಿದ್ದಳು.


ಉಷಾಳನ್ನು ಎಚ್ಚರಿಸಿದ ಸಂತೋಷ್ ರಾಯರು "ಹೆತ್ತೊಡಲನ್ನು  ಕಳೆದುಕೊಂಡ ಸಂಕಟ ಅರ್ಥವಾಗುತ್ತೆ. ಆದರೆ ನೀನು ಹೀಗೆಯೇ ಒಂಟಿತನ ಅನುಭವಿಸಿ ಕುಳಿತಿರಬಾರದು. ಯಾವ ಸಮಯದಲ್ಲಾದರೂ ನಿನ್ನ ಕನಸುಗಳಿಗೆ ರೆಕ್ಕೆ ಕಟ್ಟಲು ಸಜ್ಜಾಗಿದ್ದ ತಾಯಿಯ ಆಶಯವನ್ನು ನೆರವೇರಿಸಬೇಕು ಮಗಾ..." ಎಂದು ತಲೆ ನೇವರಿಸಿದರು. ತನ್ನ ಹೆತ್ತೊಡಲಿನೊಂದಿಗೆ ನಲಿದಾಡಿ ಬೆಳೆದು ಇಂದು ಇನ್ಯಾರದೋ ಆಶ್ರಯ ಪಡೆಯಲು ಒಳಗೊಳಗೆ ಹಿಂಸೆ ಪಡುತ್ತಿದ್ದ ಉಷಾಳು ವಿಧಿಯ ಕ್ರೂರ ಅಟ್ಟಹಾಸದ ಬಗೆಗೆ ಪ್ರತಿಭಟನೆಯ ಕೂಗನ್ನು ಆಗಾಗ ತೋರ್ಪಡಿಸುತ್ತಿದ್ದಳು.


ಮದುವೆಯಾದ ಆರು ತಿಂಗಳಿಗೆ ಗಂಡನನ್ನು ಕಳೆದುಕೊಂಡು ಅದೆಷ್ಟೋ ಕಷ್ಟ  ಕಾರ್ಪಣ್ಯಗಳ ನಡುವೆಯೂ ಅನಾಥಳಾಗಿದ್ದ ಉಷಾಳನ್ನು ದತ್ತು ಪಡೆದು ತನ್ನ ಕಷ್ಟದ ಹಾದಿಯನ್ನು ಉಷಾಳೆದುರಿಗಿಡದೆ ಆಕೆಯನ್ನು ಉತ್ತಮ ಸಂಸ್ಕಾರದೊಂದಿಗೆ ಬೆಳೆಸಿದ ತಂಗಿ ಮಾಲಿನಿಯ ಬಗ್ಗೆ ಸಂತೋಷ್ ರಾಯರು ನಿತ್ಯವೂ ಹೆಮ್ಮೆ ಪಡುತ್ತಿದ್ದರು. ಮರಣಶಯ್ಯೆಯಲ್ಲಿ ಮಲಗೋ ಮೊದಲು ಉಷಾಳ ಜವಾಬ್ದಾರಿಯನ್ನು ಸಂತೋಷ್ ರಾಯರಿಗೆ ಮಾಲಿನಿಯು ನೀಡಿದ್ದಳು. ತಂಗಿಯ ಅಕಾಲಿಕ ಮರಣ  ಸಿಡಿಲು ಬಡಿದಂತಾಗಿದ್ದರೂ ಉಷಾಳು ಈಗ ನನ್ನ ಜವಾಬ್ದಾರಿ. ನನ್ನ ವೇದನೆಗಳನ್ನು ಹೊರ ಪ್ರಪಂಚಕ್ಕೆ ಬಿಚ್ಚಿಟ್ಟರೆ ಆಕೆ ಖಂಡಿತವಾಗಿಯೂ ತಾಯಿಯ ಬಗ್ಗೆಯೇ ಯೋಚಿಸುತ್ತಾ ಕೊರಗಿ ಮೂಲೆ ಸೇರುತ್ತಾಳೆ. ಇಲ್ಲ...ಇಲ್ಲ.. ಈ ನತದೃಷ್ಟ ಜೀವನವನ್ನು ಇನ್ನಷ್ಟು ಸಂಕಷ್ಟಕ್ಕೆ ನಾನು ಸಿಲುಕಿಸಲಾರೆ ಎನ್ನುವ ಗಟ್ಟಿ ನಿರ್ಧಾರಕ್ಕೆ ಬಂದು  ಎಚ್ಚೆತ್ತುಕೊಂಡು "ಸವಿತಾ.... ತೋಟಕ್ಕೊಮ್ಮೆ ಹೋಗಿ ಬರುವೆ" ಎಂದೆನ್ನುತ್ತಾ ಹೊರನಡೆದರು.


ಸಂತೋಷ್ ರಾಯರ ಮಾವ ತಿಮ್ಮಪ್ಪನವರ  ಮಗಳೇ ಸವಿತಾ.ಕಿತ್ತು ತಿನ್ನುವ ಬಡತನ ಒಂದೆಡೆಯಾದರೆ ವಯಸ್ಸಿಗೆ ಬಂದ ಮಗಳು ಇನ್ನೊಂದೆಡೆ. ಅದೂ ಸಾಕು ಎನ್ನದಕ್ಕೆ ಜನರ ಕೊಂಕು ಮಾತುಗಳೂ ನಿತ್ಯವೂ ಮಾರ್ದನಿಸುತ್ತಿತ್ತು. ಇವೆಲ್ಲದರ  ಯೋಚನೆಯಲ್ಲೇ ತಿಮ್ಮಪ್ಪನವರ ಬದುಕಿನ ಗತಿಯೇ ಬದಲಾಗಿತ್ತು. ಭಗವಂತನ ಅಗ್ನಿ ಪರೀಕ್ಷೆಯನ್ನು ನಿತ್ಯವೂ ಪ್ರಶ್ನಿಸುತ್ತಿದ್ದ ಮಾವನ ಶೋಚನೀಯ ಸ್ಥಿತಿ ನೋಡಿ ಸಂತೋಷ್ ರಾಯರ ಮನವೂ ಅತಿಯಾಗಿ ಕರಗುತ್ತಿತ್ತು. ಒಂದು ದಿನ ಸಂತೋಷ್ ರಾಯರು ತಿಮ್ಮಪ್ಪರನ್ನು ಭೇಟಿಯಾಗಿ ನೀವು ಒಪ್ಪಿಗೆ ನೀಡುವಿರಾದರೆ ನಿಮ್ಮ ಮಗಳನ್ನು ನಾನೇ ವರಿಸುತ್ತೇನೆ ಎಂದಾಗ ತಿಮ್ಮಪ್ಪನವರು ಮಗುವಿನಂತಾಗಿದ್ದರು. ಅವರ ಮಂದಹಾಸದ ಮೊಗವನ್ನು ನೋಡಿಯೇ ಸಂತೋಷ್ ರಾಯರಿಗೆ ಕೃತಾರ್ಥ ಭಾವ ಆವರಿಸಿತ್ತು. ಸವಿತಾ ಅತೀವ ಬಡತನವನ್ನು ಕಣ್ಣೆದುರು ಕಂಡಿದ್ದವಳಾದರೂ ಸಂತೋಷ್ ರಾಯರ   ಮಡದಿಯಾದ ನಂತರದಲ್ಲಿ ಅನಿರೀಕ್ಷಿತ ಬದಲಾವಣೆ ಅವಳಲ್ಲಾಗಿತ್ತು.ಅಸಹಾಯಕ ಮನಸ್ಥಿತಿಯಿಂದ ಅಧಿಕಾರದ ಮದವನ್ನೇ ಆವರಿಸಿಕೊಂಡಿದ್ದಳು. ಶ್ರೀಮಂತಿಕೆಯಲ್ಲಿ ಬೆಳೆಯದಿದ್ದರೂ ಕಷ್ಟ ನಷ್ಟಗಳನ್ನರಿತೇ ಬೆಳೆದಿದ್ದ ಸಂತೋಷ್ ರಾಯರು ಇತರರ ಕಷ್ಟಕ್ಕೆ ಹೆಗಲು ಕೊಡುತ್ತಿದ್ದರು. ರಾಯರ ಸಹಾಯ ಹಸ್ತ ಚಾಚುವ ಗುಣ ಸವಿತಾಳಿಗೆ ಅತಿರೇಕವಾಗಿ ಕಾಣುತಿತ್ತು. ಮನೆಯೆದುರು ಜನ "ರಾಯರೇ ...." ಎಂದು ಕೂಗಿದೊಡನೆ ನನ್ನ ಪತಿಯ ಜೇಬು ಖಾಲಿ ಮಾಡಲೆಂದೇ ಬರುವರಿವರು ಎಂದು ಉದ್ಗರಿಸುತ್ತಲೇ ಒಳ ನಡೆಯುತ್ತಿದ್ದಳು.


ಬಡತನದಲ್ಲೇ ಬೆಳೆದಿದ್ದರೂ ಈಗ ನೆರಳು ನೀಡದ, ಬರೀ ಮುಳ್ಳುಗಳಿಂದಲೇ ಕೂಡಿದ ಜಾಲಿಯ ಮರದಂತಾಗಿದ್ದಳು ಸವಿತಾ.ಮಡದಿಯ ಹಾಹಾಕಾರವನ್ನು ಚೆನ್ನಾಗಿಯೇ ತಿಳಿದಿದ್ದ ಸಂತೋಷ್ ರಾಯರು "ಮಧ್ಯಾಹ್ನದ ಬಿಸಿಲು ಕಳೆದು ಸಂಜೆಯ ಮಬ್ಬು ಬರುವುದು ತಡವಲ್ಲ.ಹತ್ತಿ ಬತ್ತಿಯಾಗಿ, ತೈಲವಾಗಿ ಉರಿಯುವಂತಿರಬೇಕು ನಮ್ಮ ಜೀವನವೂ.." ಎಂದು ಮೆದು ಧ್ವನಿಯಲ್ಲಿ ತಿಳಿಯಪಡಿಸಿದರೂ ಸವಿತಾಳಿಗೆ ಸಂತೋಷ್ ರಾಯರ ಮೇಲಿದ್ದ ಕೋಪ ಕೊಂಚವೂ ಕಡಿಮೆಯಾಗಲಿಲ್ಲ.


ಉಷಾಳು ಸಂತೋಷ್ ರಾಯರ ಪ್ರೀತಿ, ಮಮಕಾರ ಹಾಗೂ ಸಂತೋಷ್ ರಾಯರ ಮಗಳು ಭಾವನಾಳ ಸ್ನೇಹದಿಂದಲೇ ತನ್ನ ಮನದೊಳಗಿನ ದುಗುಡಗಳನ್ನು ಮರೆಯಲೆತ್ನಿಸಿದರೂ ಸವಿತಾಳ ಕೊಂಕು ಮಾತುಗಳು ಟ್ರಾಫಿಕ್ ನ ಕೆಂಪು ಸನ್ನೆಯಂತೆ ಆಕೆಯ ಮನಸ್ಸನ್ನು ಮತ್ತೆ ನೋವಿನೆಡೆಗೆ ಕೇಂದ್ರೀಕರಿಸುವಂತೆ ಮಾಡುತ್ತಿತ್ತು. ಉಷಾಳಿಗೆ ಸಂತೋಷ್ ರಾಯರು ನೀಡುತ್ತಿದ್ದ ಸಲಹೆ, ಸಾಮಾನ್ಯರ ಕಷ್ಟಗಳನ್ನು ಉಷಾ ಹಾಗೂ ಭಾವನಾಳಿಗೆ ಅರ್ಥ ಮಾಡಿಸುತ್ತಿದ್ದ ರೀತಿಯನ್ನು ಕಂಡು ಸವಿತಾಳಿಗೆ ಸಿಟ್ಟು ನೆತ್ತಿಗೇರುತಿತ್ತು. ಎಲ್ಲೋ ಬೀದಿ ಅಲೆಯುತ್ತಿದ್ದ ಹುಡುಗಿ ನಮ್ಮ ಮನೆಗೆ ಪಿಶಾಚಿಯಂತೆ ವಕ್ಕರಿಸಿದಳು. ಈ ಅಲೆಮಾರಿಯಿಂದಾಗಿ ನನ್ನ ಮಗಳ ಮೇಲಿನ ಮಮಕಾರ ನನ್ನ ಗಂಡನಿಗೆ ಕಡಿಮೆಯಾಗಿದೆ ಎನ್ನುವ ಆಲೋಚನೆಯ ಹಾದಿಯೊಂದೇ ಅವಳತ್ತ ಸುಳಿಯುತ್ತಿತ್ತು. ಹೀಗೆಯೇ ಮುಂದುವರಿದರೆ ನಾನು ನನ್ನ ಮಗಳು ಭಿಕ್ಷಾಟನೆಗೆಯೇ ಇಳಿಯಾಬೇಕಾದೀತು ಎನ್ನುವ ಕೇವಲವಾದ ಮನಸ್ಥಿತಿಗೆ ಸವಿತಾಳು ಇಳಿದುಬಿಟ್ಟಿದ್ದಳು.


ಕಹಿ ಘಟನೆಗಳಿಂದ ಮೇಲೆದ್ದು ಬರೆಬೇಕೆನ್ನುವ ಚಡಪಡಿಕೆಯಲ್ಲೇ ಕಲಿಕಾಸಕ್ತಿಯನ್ನು ತೋರಿಸುತ್ತಿದ್ದ ಉಷಾಳನ್ನು ನೋಡಿ ಸಂತೋಷ್ ರಾಯರು ಆನಂದಭಾಷ್ಪ ಸುರಿಸುತ್ತಿದ್ದರು. ಉಷಾಳ ನೋವುಗಳನ್ನು ಮರೆಸಲು ಸಂತೋಷ್ ರಾಯರು ಭಾವನಾಳಿಗಿಂತ ತುಸು ಸಮಯ ಹೆಚ್ಚಾಗಿ ಕಳೆಯುತ್ತಿದ್ದದನ್ನು ಕಂಡು ಸವಿತಾಳ ಮುಖದಲ್ಲಿ ಮೂಡುತ್ತಿದ್ದ ಆಕ್ರೋಶದ ಕೂಗನ್ನು ಮೊದಲೇ ನಿರೀಕ್ಷಿಸಿದ್ದ ರಾಯರು, ತನ್ನ ಮೇಲಿನ ಕೋಪದಿಂದಾಗಿ ಉಷಾಳಿಗೆ ನೀನು ಅನಾಥೆಯೆಂದು ಎಲ್ಲಿ ಹೇಳಿ ಬಿಡುವಳೋ ಎನ್ನುವ ಕಳವಳ ಆಗಾಗ ಉಂಟಾದಾಗ ಕಣ್ಣುಗಳಿಂದ ಬೀಳುತ್ತಿರುವ ಹನಿಗಳನ್ನು ಯಾರಿಗೂ ಕಾಣದಂತೆ ಒರೆಸಿಕೊಂಡು ತೋಟದ ಹಾದಿಯತ್ತ ನಡೆಯುತ್ತಿದ್ದರು.


ನಿಶ್ಯಬ್ದ ತುಂಬಿದ ಮನೆಯಲ್ಲಿ ಹೆಂಡತಿ ತಂದಿಟ್ಟ ಬಿಸಿ ಬಿಸಿ ಕಾಫಿಯನ್ನು ಹೀರುತ್ತಾ ಸೋಫಾದಲ್ಲಿ ಕುಳಿತು ಓದುತ್ತಿದ್ದ ಉಷಾಳನ್ನು ಕರೆದರು. ಸಂತೋಷ್ ರಾಯರ ಕೂಗಿಗೆ "ಓ..."ಎನ್ನುತ್ತಾ ಓಡಿ ಬಂದ ಉಷಾ ರಾಯರ ಮಾತಿಗೆ ನಿರೀಕ್ಷಿಸತೊಡಗಿದಳು. ಉಷಾಳನ್ನು ಕರೆದೊಡನೆ ಅಡುಗೆ ಮನೆಯಲ್ಲಿ ಒಲೆ ಉರಿಸುತ್ತಿದ್ದ ಸವಿತಾಳ ಕಿವಿ ನೆಟ್ಟಗಾಯಿತು. ಆತುರಾತುರವಾಗಿಯೇ ಓಡಿ ಬಂದು ಹೊಸ್ತಿಲಲ್ಲಿ ಬಾಗಿಲಿಗೆ ತಲೆ ಒರಗಿಸಿ ನಿಂತು ಬಿಟ್ಟಳು.


"ಉಷಾ.. ಕಲಿಕೆಯಲ್ಲಿ ನಿನ್ನ ಆಸಕ್ತಿ ನೋಡಿ  ನನಗೆ ಅತೀವ ಹೆಮ್ಮೆಯಿದೆ. ಭಾವನಾಳಂತೆ ನೀನೂ ಒಳ್ಳೆಯ ಕಾಲೇಜು ಆರಿಸಿಕೊಂಡು ನಿನ್ನ ಗುರಿಯನ್ನು ಸಾಧಿಸಬೇಕು. ನಿನ್ನ ಮುಂದಿನ ನಿರ್ಧಾರವೇನು?" ಎಂದು ಉಷಾಳಿಗೆ ಪ್ರಶ್ನೆಯಿತ್ತಾಗ ಉಷಾಳ ನೇರ ದೃಷ್ಟಿ ಸವಿತಾಳತ್ತ ಚಾಚಿತು. ಸವಿತಾಳ ಮುಖ ಕೆಂಡಾಮಂಡಲವಾಗಿದ್ದನ್ನು ನೋಡಿ ಉಷಾಳಿಗೆ ಮಾತೇ ಮೌನವಾಗಿತ್ತು. ಉಷಾಳ ಮೌನದುತ್ತರ ನೋಡಿ ಭಾವನಾ ಮುಸು ಮುಸು ನಕ್ಕು "ಉಷಾ.. ಹಿಂಜರಿಕೆ ಬೇಡ. ನಿನ್ನ ನಿರ್ಧಾರ ತಿಳಿಸು "ಎಂದಳು.ಉಷಾಳಿಗೆ ಬೆಂಕಿ ಹತ್ತಿದ ಕಾಡಿನಿಂದ ತನ್ನ ಜೀವವನ್ನು ಹೇಗೆ ಉಳಿಸುವುದೆಂಬ ಉಪಾಯವೇ ಹೊಳೆಯದಾಯಿತು. ಮೆಲು ದನಿಯಲ್ಲೇ "ನಿಮ್ಮ ನಿರ್ಧಾರದಂತಾಗಲಿ ಅಪ್ಪಾ.." ಎನ್ನುತ್ತಲೇ ಒಳನಡೆದಳು.


ಸಂತೋಷ್ ರಾಯರು ಪ್ರತಿಷ್ಠಿತ ಕಾಲೇಜೊಂದಕ್ಕೆ ಉಷಾ ಹಾಗೂ ಭಾವನಾ ಇಬ್ಬರನ್ನೂ ದಾಖಲಾತಿ ಮಾಡಿಸಿದರು. ಈ ವಿಷಯಕ್ಕೆ ವಿಪರೀತವಾಗಿ ವಿಚಲಿತಳಾಗಿದ್ದ ಸವಿತಾಳು ನಿತ್ಯವೂ ಕೊಂಕು ಮಾತುಗಳಿಂದಲೇ  ಉಷಾಳ ಗಾಯದ ಮೇಲೆ ಬರೆ ಎಳೆಯುತ್ತಿದ್ದಳು. ಸವಿತಾಳ ಆಕ್ರೋಶದ ದನಿಗೆ ಕಿವಿಯೇ ಕೊಡದೆ ಉಷಾಳನ್ನು ತನ್ನ ಮಗಳಂತೆ ಕಾಣುತ್ತಿದ್ದ ಸಂತೋಷ್ ರಾಯರ ಬಗ್ಗೆ ನಿತ್ಯವೂ ನೆನೆದು ಕಣ್ಣೀರು ಹಾಕುತ್ತಿದ್ದಳು. ಭಾವನಾಳಿಗಿಂತ ಉಷಾಳ ಅಂಕಗಳು ಹೆಚ್ಚಿದ್ದಾಗ ಸವಿತಾಳು "ಬೀದಿ ಬಿಕಾರಿಗಳಿಗೂ ಸಾಧಿಸೋ ಹುಚ್ಚೇ?!!!" ಎಂದು ಕಾರದ ಪುಡಿ ಎರಚಿದಂತೆ ಹೇಳಿಬಿಡುತ್ತಿದ್ದಳು. ಸವಿತಾಳ ಮಾತಿನ ಪೂರ್ತಿ ಅರ್ಥ ತಿಳಿಯದಿದ್ದರೂ ತನ್ನ ಮನಸ್ಸನ್ನು ಕಳವಳಕ್ಕೆ ಒಳಪಡಿಸಿಕೊಂಡಿದ್ದಳು. ಎಷ್ಟೇ ನಿರ್ಲಕ್ಷ್ಯ ಭಾವದಿಂದ ಸವಿತಾ ಉಷಾಳನ್ನು ನೋಡಿದರೂ ಉಷಾ ಸವಿತಾಳೊಂದಿಗೆ ಆತ್ಮೀಯತೆಯಿಂದಲೇ  ಬೆರೆಯುತ್ತಿದ್ದಳು. ಭಾವನಾಳಿಗೆ ಅಮ್ಮನ ಮಾತಿನ ಬಗ್ಗೆ ಅಸಮಾಧಾನವಿದ್ದರೂ ಅಮ್ಮನ ಕಟುವಾದ ಮಾತಿನ ಚಾಟಿಯೆದುರು ಭಾವನಾಳ ಮಾತುಗಳು ಸೋಲೊಪ್ಪಿಕೊಳ್ಳುತ್ತಿತ್ತು.


ಅಂದು ಸೋಮವಾರ. ಭಾವನಾ ಹಾಗೂ ಉಷಾಳ ಫಲಿತಾಂಶ ಹೊರಬೀಳುವ ದಿನವಾಗಿತ್ತು.ಸರಿ ಸುಮಾರು ಮಧ್ಯಾಹ್ನದ ಹೊತ್ತಿಗೆ ಉಷಾ  ಕಾಲೇಜಿನಿಂದ ಓಡೋಡಿ ಬಂದು "ಅಮ್ಮಾ.. ಅಮ್ಮಾ.." ಎನ್ನುತ್ತಲೇ ಖುಷಿಯಿಂದ ಬ್ಯಾಗನ್ನು ಕಿತ್ತೆಸೆದ ಭಾವನಾಳ ವರ್ತನೆ ಸವಿತಾಳಿಗೆ ಹೊಸದಾಗಿತ್ತು. ಬಾಗಿಲತ್ತ ನೋಡಿದರೆ ಕಾಲೇಜಿಗೆ ಮೊದಲ ರ್ಯಾಂಕ್ ಪಡೆದು ಉಷಾಳು ತಿಂಡಿ ಪೊಟ್ಟಣವನ್ನು ಕೈಯ್ಯಲ್ಲಿಡಿದು ಭಾವನಾಳ ಉತ್ಸಾಹ ನೋಡಿ ನಗುತ್ತಲೇ ನಿಂತುಬಿಟ್ಟಿದ್ದಳು. ಉಷಾಳ ಮೊಗದಲ್ಲಿ ಮೂಡಿದ್ದ ಮಂದಹಾಸವನ್ನು ನೋಡಿ ಸವಿತಾಳಿಗೆ ಕೆನ್ನೆ ಚದುರಿ ಹೋಗುವಂತೆ ಫಟಾರನೆ ಹೊಡೆಯಬೇಕೆನಿಸಿತು.


"ಬೀದಿ ನಾಯಿಗಳಿಗೆ ಆಶ್ರಯ ಕೊಟ್ಟರೆ ಬಾಲ ಮುದುರಿ ಮಲಗಬೇಕೇ ವಿನಃ ಅನ್ನದೆಂಜಲಿಗೆ ಆಸೆ ಪಡಬಾರದು" ಹಿಂದು ಮುಂದು ಯೋಚಿಸದೆಯೇ ಕಿರುಚಿದಳು ಸವಿತಾ.


ಸವಿತಾಳ ಮಾತುಗಳನ್ನು ಕೇಳುತ್ತಲೇ ಉಷಾಳ ಮನಸ್ಸು ಛಿದ್ರವಾಗಿತ್ತು. ಹಿತ್ತಲಿನಲ್ಲಿ ಕೆಲಸದಲ್ಲಿ ತೊಡಗಿದ್ದ ಸಂತೋಷ್ ರಾಯರು ಸವಿತಾಳ ರಾಕ್ಷಸ ಧ್ವನಿಗೆ ಕಳವಳದಿಂದಲೇ ಓಡೋಡಿ ಬಂದರು. ಬಂದು ನೋಡಿದರೆ ಉಷಾಳ ಕೈಯಲ್ಲಿದ್ದ ಸಿಹಿ ತಿಂಡಿಯ ಪೊಟ್ಟಣ  ಕೆಳಗೆ ಬಿದ್ದು ತಿಂಡಿ ಚದುರಿ ಹೋಗಿತ್ತು. ಉಷಾಳ ಆಕ್ರಂದನದ ಸ್ಥಿತಿ ನೋಡಿ ರಾಯರು ಮೂಕರಾಗಿ ನಿಂತು ಬಿಟ್ಟಿದ್ದರು. ತಮ್ಮನ್ನು ತಾವೇ ಸಮಾಧಾನಿಸಿಕೊಂಡು  ಉಷಾಳ ಬದುಕಿನ ಸತ್ಯ ಸಂಗತಿಗಳನ್ನೆಲ್ಲಾ ತಿಳಿಸಿದರು. ಎಡೆಬಿಡದೆ ಬಿಡುವಿಲ್ಲದೆ ಬರುತ್ತಿದ್ದ ಕಷ್ಟಗಳಿಗೆ ಕುಗ್ಗದೆ, ಅನಾಥಳೆಂಬ ಭಾವನೆಯನ್ನು ಹತ್ತಿರವೂ ಸುಳಿಯಲು ಬಿಡದೆ, ಸಾವಿಗೆ ಸಾಮೀಪ್ಯವಿದ್ದರೂ ದತ್ತು ಮಗಳ ಜವಾಬ್ದಾರಿಯನ್ನು ಮರೆಯದೇ ಇದ್ದ ತಾಯಿ ಹೃದಯದ ಬಗ್ಗೆ ಉಷಾಳಿಗೆ ಅಭಿಮಾನದ ಭಾವ ಮೂಡಿತು. ಮಡದಿಯ ಆಕ್ಷೇಪಣೆಯ ನಡುವೆಯೂ ಸಂತೋಷ್ ರಾಯರು ತೋರಿದ ಅನುಕಂಪ, ಸಾಕಿ ಸಲುಹಿದ ರೀತಿಯನ್ನು ನೆನೆದು ಸಂತೋಷ್ ರಾಯರನ್ನು ಬಿಗಿದಪ್ಪಿ "ನನಗೆ ಬದುಕು ಕೊಟ್ಟವಳೊಬ್ಬಳಾದರೆ ಬದುಕಿನ ದಾರಿ ತೋರಿಸಿದ ನಿಮಗೆ  ನಾನು ಚಿರಋಣಿ ಅಪ್ಪಾ...ನನ್ನ ಬದುಕಿನ ಹಾದಿಯನ್ನು ಕಂಡುಕೊಳ್ಳುವಷ್ಟು ಆತ್ಮಸ್ಥೈರ್ಯ ಈಗ ನನ್ನಲ್ಲಿದೆ" ಎನ್ನುತ್ತಲೇ ತನ್ನ ಬಟ್ಟೆ ಬರೆಗಳೊಂದಿಗೆ ಹೊರನಡೆದ ಉಷಾಳು ರಾಯರ ಯಾವ ಒತ್ತಾಯದ ಮಾತಿಗೂ ಮಣಿಯುವಂತೆ ಕಾಣಲಿಲ್ಲ.


ಪ್ರತಿಭಾವಂತಳಾಗಿದ್ದ ಉಷಾಳಿಗೆ ಬದುಕು ಕಂಡುಕೊಳ್ಳುವುದು ಕಷ್ಟವಾಗಲಿಲ್ಲ.ಕೋಟಿ ಕೋಟಿ ಸಂಪಾದನೆ ಮಾಡಿದರೂ  ಹಣ, ಅಧಿಕಾರದ ಆಮಿಷಕ್ಕೆ ಒಳಗಾಗದೆ  ಅನಾಥ ಮಕ್ಕಳಿಗೊಂದು ಶಾಲೆ ತೆರೆದು ಉಚಿತ ವಿದ್ಯಾಭ್ಯಾಸದ ವ್ಯವಸ್ಥೆ ಮಾಡಿದಳು. "ನಿಮ್ಮ ಸಣ್ಣ ಸಣ್ಣ ಸಾಧನೆಗಳಿಗೂ ನೀವೇ ಶಹಬ್ಬಾಸ್  ಎನ್ನಿ.ಅವಮಾನಗಳಿಗೆ ಕುಗ್ಗದೆ ಟೀಕೆಗಳನ್ನೇ  ಚಪ್ಪಾಳೆಯನ್ನಾಗಿ ಪರಿವರ್ತಿಸುವ  ಸಾಮರ್ಥ್ಯವನ್ನು ರೂಢಿಸಿಕೊಳ್ಳಬೇಕು. ಕಿಚ್ಚಿಲ್ಲದವನು ಮಾತ್ರ ಅನಾಥ. ದೃಢವಾದ ಮನಸ್ಸು, ಸ್ಪಷ್ಟ ಗುರಿ, ತ್ರಿವಿಕ್ರಮನಂತಹ ಛಲವಿದ್ದರೆ ಯಶಸ್ಸು ಬಿಸಿಲ್ಗುದುರೆಯಲ್ಲ" ಎನ್ನುತ್ತಾ ಉಷಾಳೇ ಎಲ್ಲರ ಬದುಕಿಗೂ ಸ್ಪೂರ್ತಿಯ ಪುಟವಾಗಿ ನಿಂತಳು.

-ಅಖಿಲಾ ಶೆಟ್ಟಿ ಪುತ್ತೂರು

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top