ಸಂತ ಫಿಲೋಮಿನಾ ಕಾಲೇಜು 'ಫಿಲೋ ಬೊಳ್ಳಿ' ತುಳು ಸಂಘಕ್ಕೆ ಚಾಲನೆ
ಪುತ್ತೂರು: 'ತುಳು ಕೇವಲ ಒಂದು ಭಾಷೆ ಮಾತ್ರವಲ್ಲ; ಅದೊಂದು ಸಮೃದ್ಧವಾದ ಸಂಸ್ಕೃತಿ. ತೌಳವ ಆಚಾರ ವಿಚಾರಗಳಲ್ಲಿ ನಮ್ಮ ಪ್ರಾಚೀನರ ಪ್ರಕೃತಿ ಪೂಜೆಯ ಹಲವಾರು ಹೊಳವುಗಳಿವೆ. ಹಲವು ಭಾಷೆಗಳನ್ನಾಡುವ ಆಧುನಿಕ ಸಮಾಜದಲ್ಲಿ ತುಳುವರು ತಮ್ಮ ಭಾಷೆ ಮತ್ತು ಸಂಸ್ಕೃತಿಗಳನ್ನು ಉಳಿಸಿಕೊಳ್ಳಲು ತುಳುವರು ಬದ್ಧತೆಯಿಂದ ಕೆಲಸ ಮಾಡಬೇಕಾಗಿದೆ. ಅದಕ್ಕಾಗಿ ಎಲ್ಲಾ ಕಡೆ ಸಂಘಟನಾತ್ಮಕ ಚಟುವಟಿಕೆಗಳನ್ನು ನಡೆಸುವ ಅಗತ್ಯವಿದೆ' ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಜಾನಪದ-ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಪಿಜಿ ಸೆಮಿನಾರ್ ಹಾಲ್ ನಲ್ಲಿ 'ಫಿಲೋ ಬೊಳ್ಳಿ' ತುಳು ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಂಗಭೂಮಿ ಮತ್ತು ಸಿನಿಮಾ ನಟ ಸುಂದರ ರೈ ಮಂದಾರ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.
ಸಾಂಪ್ರದಾಯಿಕ ಉದ್ಘಾಟನೆ:
ತುಳುನಾಡಿನ ಸಂಪ್ರದಾಯದಂತೆ ತೆಂಗಿನ ಮರದ ಸಿಂಗಾರವನ್ನು ಅರಳಿಸಿ ತುಳು ಸಂಘವನ್ನು ಉದ್ಘಾಟಿಸಲಾಯಿತು. ಸಂಘದ ವಿದ್ಯಾರ್ಥಿಗಳು 'ತುಳು ಸುಗಿಪು' ನಡೆಸಿಕೊಟ್ಟರು. 'ಪೂವರಿ' ತುಳು ಪತ್ರಿಕೆ ಸಂಪಾದಕ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಮತ್ತು ಕವಿ ಲಕ್ಷ್ಮೀನಾರಾಯಣ ರೈ ಹರೇಕಳ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಡಾ.ಆಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ 'ಸಾಹಿತ್ಯ ಮತ್ತು ಸಂಸ್ಕೃತಿಗೆ ಜಾತಿ-ಧರ್ಮದ ಬಂಧನಗಳಿಲ್ಲ. ಜಾತಿ-ಮತಗಳ ಸಂಕೋಲೆಯನ್ನು ಮೀರಿ ನಿಂತಾಗ ಮಾತ್ರ ಮಾನವ ಸಂಸ್ಕೃತಿ ಉನ್ನತಮಟ್ಟಕ್ಕೆ ಏರುವುದು. ತುಳು ಸಂಘದ ಮೂಲಕ ಸಾಮರಸ್ಯದ ಬದುಕಿಗೆ ಪೂರಕವಾದ ಅನೇಕ ಕಾರ್ಯಕ್ರಮಗಳನ್ನು ಮಾಡುವ ಯೋಜನೆಯಿದೆ' ಎಂದರು.
ತುಳು ಸಂಘದ ಸಂಯೋಜಕಿ ದೀಪಿಕಾ ಸನಿಲ್ ಸ್ವಾಗತಿಸಿದರು. ಬಿಬಿಎ ವಿಭಾಗ ಮುಖ್ಯಸ್ಥ ಪ್ರೊ.ರಾಧಾಕೃಷ್ಣ ಗೌಡ ಅತಿಥಿಗಳನ್ನು ಪರಿಚಯಿಸಿದರು. ಕಾಲೇಜು ಯಕ್ಷಗಾನ ಸಂಘದ ಸಂಯೋಜಕ ಪ್ರಶಾಂತ ರೈ ಪುತ್ತೂರು ವಂದಿಸಿದರು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ದಿನಕರ ಅಂಚನ್ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ