ಕರಾವಳಿ ಅಭಿವೃದ್ಧಿಗೆ ಪೂರಕ ಬಜೆಟ್: ಶಾಸಕ ಕಾಮತ್

Upayuktha
0



ಮಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಮಂಡಿಸಿದ ರಾಜ್ಯ ಸರಕಾರದ 2022-23ನೇ ಸಾಲಿನ ಆಯವ್ಯಯದಲ್ಲಿ ಮಂಗಳೂರು ನಗರ ಸೇರಿದಂತೆ ಕರಾವಳಿ ಜಿಲ್ಲೆಗೆ ದೊಡ್ಡ ಮಟ್ಟಿನ ಯೋಜನೆಗಳನ್ನು ಪ್ರಕಟಿಸುವುದರ ಮೂಲಕ ನಮ್ಮ ಭಾಗದ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಘೋಷಿಸಿದ್ದಾರೆ ಎಂದು ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.


ಮುಖ್ಯವಾಗಿ ಜಿಲ್ಲೆಗೆ ನಾರಾಯಣಗುರು ವಸತಿ ನಿಲಯ ಶಾಲೆ, ಮಹಿಳಾ ಉದ್ಯೋಗಿಗಳಿಗೆ ವಸತಿ ನಿಲಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಇತರೆ ವರ್ಗದ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕಾಗಿ ದೀನ್ ದಯಾಳ್ ಉಪಾಧ್ಯಾಯ ವಿದ್ಯಾರ್ಥಿ ನಿಲಯ ಸ್ಥಾಪನೆಗೆ ಬಜೆಟ್‍ನಲ್ಲಿ ಘೋಷಣೆ ಮಾಡಲಾಗಿದೆ.  


ಮಂಗಳೂರಿನಲ್ಲಿ ಡಿಜಿಟಲ್ ಸ್ಟಾರ್ಟ್ ಅಪ್ ಕ್ಲಸ್ಟರ್ ಸ್ಥಾಪನೆಗೆ 20 ಕೋಟಿ ರೂ., ಕಡಲ ಕೊರೆತ ತಡೆಗೆ ಹೊಸ ತಂತ್ರಜ್ಞಾನ ಬಳಕೆ, ಪ್ಲಾಸ್ಟಿಕ್ ಮಾಲಿನ್ಯವನ್ನು ನಿರ್ವಹಿಸಲು ವಿಶ್ವಬ್ಯಾಂಕ್ ನೆರವಿನೊಂದಿಗೆ 840 ಕೋಟಿ ರೂ. ವೆಚ್ಚದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಕರಾವಳಿಯಲ್ಲಿ ಬ್ಲೂ ಪ್ಲಾಸ್ಟಿಕ್ ನಿರ್ವಹಣೆ ಯೋಜನೆ ಜಾರಿಗೆ ಘೋಷಣೆ ಮಾಡಿದ್ದಾರೆ. 350 ಕೋಟಿ ರೂ. ವೆಚ್ಚದಲ್ಲಿ ಕೇಂದ್ರದ ನೆರವಿನೊಂದಿಗೆ ಮಂಗಳೂರು ಬಂದರು ವಿಸ್ತರಣೆ ಹಾಗೂ ಲಕ್ಷದ್ವೀಪ ಜೆಟ್ಟಿ ಸೌಲಭ್ಯ ಅಭಿವೃದ್ಧಿ, ಕರಾವಳಿಯಲ್ಲಿ ಸಿಆರ್ ಝಡ್ ನಿಯಮಾವಳಿಗಳನ್ನು ಸರಳೀಕರಿಸಿ ಪರಿಸರ ಸ್ನೇಹಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಯೋಜನೆ ಪ್ರಕಟಿಸಿದ್ದಾರೆ.


ಪಶ್ಚಿಮ ವಾಹಿನಿ ಯೋಜನೆಗೆ 500 ಕೋಟಿ ರೂ., ಮತ್ಸ್ಯ ಸಿರಿ ಯೋಜನೆ ಮೂಲಕ ಮೀನುಗಾರರ ಆದಾಯ ಹೆಚ್ಚಳಕ್ಕೆ ಕ್ರಮ, ಮೀನುಗಾರಿಗೆ ಅಭಿವೃದ್ಧಿಗೆ ವಿಶೇಷ ಯೋಜನೆಗಳು ಅಲ್ಲದೆ ಕೇಂದ್ರ ಸರಕಾರದ ಸಾಗರಮಾಲಾ ಯೋಜನೆ ಅಡಿಯಲ್ಲಿ 1880 ಕೋಟಿ ವೆಚ್ಚದಲ್ಲಿ ಕರಾವಳಿಯ ಸಮಗ್ರ ಅಭಿವೃದ್ಧಿ ಬಜೆಟ್‍ನಲ್ಲಿ ಸಿಎಂ ಘೋಷಣೆ ಮಾಡಿದ್ದಾರೆ.


ಮೀನುಗಾರಿಗೆ ವಲಯಕ್ಕೆ ಮುಖ್ಯಮಂತ್ರಿ ವಿಶೇಷ ಆದ್ಯತೆ ನೀಡಿದ್ದು, ಆಳ ಸಮುದ್ರ ಮೀನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 100 ಆಳ ಸಮುದ್ರ ಮೀನುಗಾರಿಕೆ ಬೋಟ್‍ಗಳಿಗೆ ಅನ್ವಯವಾಗುವಂತೆ `ಮತ್ಯಸಿರಿ' ಎಂಬ ವಿಶೇಷ ಯೋಜನೆಯನ್ನು ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಪ್ರಕಟಿಸಲಾಗಿದೆ. ಮೀನುಗಾರಿಗೆಗೆ ಅಡ್ಡಿಯಾಗುತ್ತಿರುವ ಅಳಿವೆಬಾಗಿಲಿನಲ್ಲಿ ಡ್ರೆಜ್ಜಿಂಗ್, 5 ಸಾವಿರ ವಸತಿ ರಹಿತ ಮೀನುಗಾರರ ಕುಟುಂಬಗಳಿಗೆ ರಾಜೀವ ಗಾಂಧಿ ವಸತಿ ನಿಗಮದ ಮೂಲಕ ಆದ್ಯತೆ ಮೇರೆಗೆ ಮನೆಗಳ ನಿರ್ಮಾಣವನ್ನು ಬಜೆಟ್‍ನಲ್ಲಿ ಪ್ರಕಟಿಸಲಾಗಿದೆ.


ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಅಲ್ಪಸಂಖ್ಯಾತ ಸಮುದಾಯಗಳಾದ ಕ್ರಿಶ್ಚಿಯನ್ ಹಾಗೂ ಜೈನ ಸಮುದಾಯದ ಅಭಿವೃದ್ಧಿಗೆ 50 ಕೋಟಿ ರೂ. ಮೀಸಲಿಡಲಾಗಿದೆ. ನೆರೆಯ ಕಾಸರಗೋಡಿನಲ್ಲಿ ಕನ್ನಡ ಹೋರಾಟಗಾರ ದಿ.ಕಯ್ಯಾರ ಕಿಞ್ಞಣ್ಣ ರೈ ಹೆಸರಿನಲ್ಲಿ ಕನ್ನಡ ಭವನ ನಿರ್ಮಾಣ ಘೋಷಣೆ ಮಾಡಿದ್ದು, ಹೊರ ನಾಡಿನ ಕನ್ನಡಿಗರ ಬೇಡಿಕೆಯನೂ ಈಡೇರಿಸಿದ್ದಾರೆ. ಇನ್ನು ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ ಆಯೋಜನೆಯನ್ನು ಪ್ರಕಟಿಸಲಾಗಿದ್ದು, ಪ್ರಸಿದ್ಧ ಕಲೆಗೆ ನಮ್ಮ ಸರಕಾರ ವಿಶೇಷ ಒತ್ತು ನೀಡಿದೆ. ಕರಾವಳಿ ಭಾಗಕ್ಕೆ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದ ಮುಖ್ಯಮಂತ್ರಿಯನ್ನು ವಿಶೇಷವಾಗಿ ಅಭಿನಂದಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top