ಮಂಗಳೂರು: ನಾವು ಹೇಗೆ ಉತ್ತಮ ರೀತಿಯಿಂದ ಮನುಷ್ಯರಾಗಿ ಜೀವಿಸಬೇಕು ಎಂಬ ಮಾದರಿಗಳನ್ನು ತೋರಿಸುವುದು ಒಳ್ಳೆಯ ಕಾವ್ಯದ ಲಕ್ಷಣ. ಅದು ಸಾಂಕೇತಿಕ ರೂಪದಲ್ಲಿರಬಹುದು ಅಥವಾ ಕೆಲವೊಮ್ಮೆ ಸೂಕ್ಷ್ಮವಾಗಿ ಪ್ರತಿಪಾದಿತವಾಗಿರಬಹುದು. ಅದನ್ನು ಅರ್ಥೈಸಿಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿದರೆ ಒಳ್ಳೆಯ ಸಮಾಜ ನಿರ್ಮಾಣ ಆಗುತ್ತದೆ. ಸಾಹಿತಿಯು ನಿಜವಾದ ಅರ್ಥದಲ್ಲಿ ಸಮಾಜ ಸುಧಾರಕ ಎಂದು ಕವಿ, ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ, ವಿ. ವಿ. ಸಂಧ್ಯಾ ಕಾಲೇಜು, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಶಿಕ್ಷಕ – ಶಿಕ್ಷಣ ರಂಗ (ಶಿಶಿರ) ಸಂಯುಕ್ತ ಆಶ್ರಯದಲ್ಲಿ ನಗರದ ವಿಶ್ವವಿದ್ಯಾ ನಿಲಯ ಕಾಲೇಜಿನಲ್ಲಿ ಜರಗಿದ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷ ಸ್ಥಾನದಿಂದ ಅವರು ಮಾತಾಡಿದರು.
ಆರಂಭದಲ್ಲಿ ತುಳು ಅಕಾಡೆಮಿಯ ಸದಸ್ಯೆ ಕಾಂತಿ ಶೆಟ್ಟಿ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ‘ಶಿಶಿರ’ದ ಅಧ್ಯಕ್ಷ ಸುಭಾಶ್ಚಂದ್ರ ಕಣ್ವತೀರ್ಥ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಬಹುಭಾಷಾ ಕವಿಗೋಷ್ಠಿಯಲ್ಲಿ ಕನ್ನಡ, ತುಳು, ಕೊಂಕಣಿ, ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಕವಿಗಳಾದ ಅರವಿಂದ ಪ್ರಭು, ಪ್ರಶಾಂತಿ ಶೆಟ್ಟಿ ಇರುವೈಲು, ಜ್ಯೋತಿ ಮಹದೇವ, ಚಂದ್ರಹಾಸ ಕಣಂತೂರು, ದೀವಿತ್ ಕೋಟ್ಯಾನ್, ವಿಜಯಲಕ್ಷ್ಮಿ ಕಟೀಲು, ಪರಶುರಾಮ್ ಜಿ., ಜೆ. ಮಲ್ಲಿಕಾ ರೈ, ಸ್ಮಿತಾ ಶೆಣೈ, ಸುರೇಶ್ ರಾವ್ ಮೊದಲಾದ ನಲವತ್ತು ಮಂದಿ ಕವಿಗಳು ಸ್ವರಚಿತ ಕವನಗಳನ್ನು ವಾಚಿಸಿದರು.
ವಿ. ವಿ. ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ, ತುಳುಪೀಠದ ಸಂಯೋಜಕ ಡಾ. ಮಾಧವ ಎಂ. ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಿಶಿರದ ಉಪಾಧ್ಯಕ್ಷ ಜಿ. ಕೆ. ಭಟ್ ಸೇರಾಜೆ, ಕಾರ್ಯಕಾರಿಣಿ ಸದಸ್ಯರಾದ ಜ್ನಾನೇಶ್ವರಿ, ಚೇತನ್ ಆರ್. ಮೊದಲಾದವರು ಉಪಸ್ಥಿತರಿದ್ದರು. ಮೇಘಶ್ರೀ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ