|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಣ್ಣಗಳ ಹಬ್ಬ ಹೋಳಿ; ನೈಸರ್ಗಿಕವಾಗಿಯೇ ಇರಲಿ

ಬಣ್ಣಗಳ ಹಬ್ಬ ಹೋಳಿ; ನೈಸರ್ಗಿಕವಾಗಿಯೇ ಇರಲಿ


ಚಳಿಗಾಲ ಮುಗಿದು ವಸಂತ ಕಾಲ ಕಾಲಿಡುವ ಸಮಯದಲ್ಲಿ ಬರುವ ಬಣ್ಣಗಳ ಹಬ್ಬ ಹೋಳಿ. ಗಂಡು, ಹೆಣ್ಣು, ಮಕ್ಕಳು, ಮುದುಕರು, ಬಡವ ಬಲ್ಲಿದ, ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಭೇದಭಾವವಿಲ್ಲದೆ ಪರಸ್ಪರ ಬಣ್ಣದ ಓಕುಳಿಯನ್ನು ಎರಚಿಕೊಂಡು ಮನರಂಜನೆಯ ಉತ್ತುಂಗಕ್ಕೇರಿ, ದ್ವೇಷ, ಕ್ರೋಧ, ಮದ ಮತ್ಸರಗಳಿಗೆ ಇತಿಶ್ರೀ ಹಾಡಿ ಪ್ರೀತಿ ಪ್ರೇಮ, ಮಮತೆ, ಗೌರವದಿಂದ ಎಲ್ಲವನ್ನು ಮರೆತು ಸ್ನೇಹ ಹಸ್ತ ಚಾಚುವ ಒಂದು ವಿಶಿಷ್ಠ ಹಬ್ಬವೇ ಹೋಳಿ. ಹೆಚ್ಚಾಗಿ ಉತ್ತರ ಭಾರತದಲ್ಲಿ ಸಂಭ್ರಮಿಸುವ ಈ ಬಣ್ಣಗಳ ಹಬ್ಬ ಇತ್ತೀಚಿಗೆ ದಕ್ಷಿಣ ಭಾರತಕ್ಕೂ ಹಬ್ಬುತ್ತಿವೆ. ಮತ್ತು ಭಾರತ ಒಂದು ವಿವಿಧತೆಯಲ್ಲಿ ಏಕತೆ ಎಂಬ ಮಾತನ್ನು ಸ್ಪಷ್ಟೀಕರಿಸುತ್ತಿದೆ.


ಹಾಡುತ್ತಾ ನಲಿಯುತ್ತಾ ಕುಣಿಯುತ್ತಾ ಪ್ರೀತಿಯಿಂದ ಬಣ್ಣ ಹಚ್ಚಿ ಓಕುಳಿಯಿಂದ ಮಿಂದೇಳುವ ಈ ಹಬ್ಬದಲ್ಲಿ ಹಿಂದಿನ ಕಾಲದಲ್ಲಿ ನೈಸರ್ಗಿಕವಾದ ಬಣ್ಣವನ್ನು ಬಳಸುತ್ತಿದ್ದರು. ಬಹಳ ಹಿಂದೆ ಅರಸಿನ ಪುಡಿ ಮತ್ತು ಅಕ್ಕಿಹಿಟ್ಟು ಬೆರೆಸಿದ ‘ಗುಲಾಲು’ ಬಳಸುತ್ತಿದ್ದರು. ನಂತರದ ದಿನಗಳಲ್ಲಿ ಒಣಗಿದ ಹೂವುಗಳು ಮತ್ತು ನೈಸರ್ಗಿಕವಾದ ಔಷಧಿಯುಕ್ತ ಎಲೆಗಳು ಮತ್ತು ಔಷಧಿ ಸಸ್ಯಗಳಿಂದ ತಯಾರಿಸಿದ ಬಣ್ಣವನ್ನು ಉಪಯೋಗಿಸುತ್ತಿದ್ದರು. ಇದರಿಂದ ದೇಹಕ್ಕೆ ಮತ್ತು ಚರ್ಮಕ್ಕೆ ಯಾವುದೇ ತೊಂದರೆ ಉಂಟಾಗುತ್ತಿರಲಿಲ್ಲ.


ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚಾಗಿ ಕೃತಕವಾದ ರಾಸಾಯನಿಕ ಯುಕ್ತ ಗಾಢವಾದ ಬಣ್ಣಗಳನ್ನು ಬಳಸುವುದರಿಂದಾಗಿ ಚರ್ಮದಲ್ಲಿ ಗುಳ್ಳೆಗಳು, ತುರಿಕೆಗಳು, ಕಣ್ಣಿನಲ್ಲಿ ಅಲರ್ಜಿ ಮತ್ತು ಕೂದಲಿನ ಬಣ್ಣ ಬದಲಾಗುವುದು ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳು ಹೆಚ್ಚು ಹೆಚ್ಚು ಕಾಣಿಸುತ್ತಿವೆ. ಈ ನಿಟ್ಟಿನಲ್ಲಿ ಹೆಚ್ಚು ನಿಗಾವಹಿಸಿ ಹೆಚ್ಚು ನೈಸರ್ಗಿಕವಾದ ಬಣ್ಣಗಳನ್ನು ಬಳಸಿ, ಕೃತಕ ಬಣ್ಣಗಳಿಗೆ ತಿಲಾಂಜಲಿ ಇಟ್ಟು, ಬಣ್ಣಗಳ ಹಬ್ಬ ಹೋಳಿಯನ್ನು ನಿಜವಾಗಿಯೂ ಸ್ಮರಣಿಯವಾಗಿ ಮಾಡಿಕೊಳ್ಳುವ ಅನಿವಾರ್ಯತೆ ಇದೆ ಎಂದರೂ ತಪ್ಪಲ್ಲ. ಬಣ್ಣವಿಲ್ಲದೆ ಬದುಕಿಲ್ಲ ಬದುಕೇ ಬಣ್ಣಗಳಂತೆ ರಂಜನಿಯವಾಗಿರಬೇಕು ಎಂದು ಬಯಸುವುದು ಮನುಷ್ಯನ ಸಹಜದ ಧರ್ಮ. ಆದರೆ ಮಿತಿಮೀರಿ ಅತಿಯಾಗಿ ಕೃತಕ ಬಣ್ಣ ಬಳಸಿದಲ್ಲಿ ಬಣ್ಣ ಬದುಕನ್ನೇ ಕಸಿದೀತು ಎಂಬ ಕಟುಸತ್ಯವನ್ನು ಅರಿತು ಯುವ ಜನರು ಹೆಚ್ಚು  ಜವಾಬ್ದಾರಿಯುತವಾಗಿ ವರ್ತಿಸಿದಲ್ಲಿ ಮಾತ್ರ ಬಣ್ಣಗಳ ಹಬ್ಬದ ಆಚರಣೆ ಹೆಚ್ಚು ಅರ್ಥಪೂರ್ಣವಾದೀತು.


ಏನು ಮುಂಜಾಗರೂಕತೆ ಬಳಸಬೇಕು? 

1) ನಮ್ಮ ಚರ್ಮ ನಮ್ಮ ದೇಹದ ಅತೀ ದೊಡ್ಡ ಅಂಗವಾಗಿದ್ದು ದೇಹವನ್ನು ಬಾಹ್ಯ ವಸ್ತುಗಳಿಂದ ರಕ್ಷಿಸುತ್ತದೆ. ಕೃತಕ ಬಣ್ಣಗಳಲ್ಲಿರುವ ರಾಸಾಯನಿಕಗಳಿಂದ ರಕ್ಷಿಸುವ ಹೊಣೆಗಾರಿಕೆ ಈ ಚರ್ಮಕ್ಕಿದೆ. ಹೊಳಿಯಾಟ ಆಡುವಾಗ ಸಂಪೂರ್ಣವಾಗಿ ಮೈ ಮುಚ್ಚುವ ಕಾಟನ್ ಬಟ್ಟೆ ಧರಿಸಬೇಕು. ಕಪ್ಪು ಬಣ್ಣದಲ್ಲಿರುವ ಸೀಸದ ಅಂಶ (ಲೆಡ್ ಆಕ್ಸೈಡ್) ಕೆಂಪು ಬಣ್ಣದಲ್ಲಿರುವ ಪಾದರಸದ ಅಂಶ (ಮರ್ಕುರಿ ಸಲೈಡ್), ಬೆಳ್ಳಿಯ ಬಣ್ಣದಲ್ಲಿರುವ ಅಲ್ಯೂಮಿನಿಯಂ ಬ್ರೊಮೈಡ್, ಹಸಿರು ಬಣ್ಣದಲ್ಲಿರುವ ತಾರ್ಮದ ಅಂಶ (ಕಾಪರ್ ಸಲ್ಫೇಟ್) ಇವೆಲ್ಲವೂ ಬಹಳ ಸುಲಭವಾಗಿ ಚರ್ಮವನ್ನು ದಾಟಿ ದೇಹಕ್ಕೆ ಸೇರಿಕೊಳ್ಳಬಹುದು. ಸಂಪೂರ್ಣ ಮೈ ಮುಚ್ಚುವ ಬಟ್ಟೆ ಧರಿಸಿದಲ್ಲಿ ಈ ವಿಷಕಾರಕ ರಾಸಾಯನಿಕಗಳು ದೇಹದ ಒಳಗೆ ಪ್ರವೇಶಿಸಲು ಕಷ್ಟವಾಗಬಹುದು. ಅತಿಯಾದ ಗಾಢವಾದ ಬಣ್ಣಗಳಾದ ಹಸಿರು ನೇರಳೆ, ಹಳದಿ ಮತ್ತು ಆರೆಂಜ್ ಬಣ್ಣಗಳಲ್ಲಿ ಹೆಚ್ಚು ಹಾನಿಕಾರಕ ವಿಷಕಾರಕ ವಸ್ತುವಿರುವುದರಿಂದ ಈ ಬಣ್ಣಗಳನ್ನು ಕಡಿಮೆ ಬಳಸಬೇಕು. 

2) ಮನೆಯಲ್ಲಿಯೇ ನೈಸರ್ಗಿಕವಾಗಿ ತಯಾರಾದ ಬಣ್ಣಗಳನ್ನು ಹೆಚ್ಚು ಬಳಸಿ, ಒಣ ಹೂವಿನ ಪುಡಿ, ಅರಿಶಿನ ಹುಡಿ, ಹರ್ಬಲ್ ಔಷಧಿ ಸಸ್ಯಗಳ ಪುಡಿಗಳನ್ನು ಹೆಚ್ಚು ಬಳಸಬೇಕು. ನಸುಗೆಂಪು ಅಥವಾ ನಸು ಗುಲಾಬಿ ಬಣ್ಣಗಳನ್ನು ಹೆಚ್ಚು ಬಳಸಿದಲ್ಲಿ ಉತ್ತಮ. ಯಾಕೆಂದರೆ ಈ ಬಣ್ಣಗಳನ್ನು ಸುಲಭವಾಗಿ ತೆಗೆಯಬಹುದು, ನೋಡಲು ಹಿತವಾಗಿರುತ್ತದೆ ಮತ್ತು ಕಡಿಮೆ ಹಾನಿಕಾರಕವಾಗಿರುತ್ತದೆ.

3) ಬಣ್ಣದೋಕುಳಿ ಆಟದ ಮೊದಲು ಚರ್ಮದ ತೇವಾಂಶ ಉಳಿಸಿಕೊಳ್ಳಲು ತೇವಾಂಶ ಹಿಡಿದಿಡುವ ಲೋಶನ್‌ಗಳನ್ನು ಹೆಚ್ಚು ಬಳಸಿ, ನಿಮ್ಮ ಹೊರಜಗತ್ತಿಗೆ ಹೆಚ್ಚು ಕಾಣಿಸುವ ಅಂಗಗಳಾದ ಮುಖ, ಕೈಕಾಲು ಮತ್ತು ತಲೆಯ ಬಾಗಕ್ಕೆ ಹೆಚ್ಚು ಈ ಲೋಶನ್ ಬಳಸಬೇಕು.  ನೀರು ಹೀರಿಕೊಳ್ಳದ ಸನ್‌ಕ್ರೀಮ್ (ಸೂರ್ಯನ ಶಾಖವನ್ನು ತಡೆಯುವ) ಲೋಷನ್ ಬಳಸಿದಲ್ಲಿ ಚರ್ಮದಲ್ಲಿ ನೀರಿನಾಂಶ ಕಳೆದುಹೋಗದಂತೆ ತಡೆಯಬಹುದು.  ಗಾಡ ರಾಸಾಯನಿಕಯುಕ್ತ ಬಣ್ಣ ತಗುಲಿದ ಬಳಿಕ ತಲೆಗೂದಲು ಮತ್ತಷ್ಟು ಒಣಗುತ್ತದೆ. ಮತ್ತು ಹೆಚ್ಚು ಘಾಸಿಗೊಳ್ಳುತ್ತದೆ. ಈ ಕಾರಣದಿಂದಲೇ ಬಣ್ಣದೋಕುಳಿ ಆಟದ ಮೊದಲು ತಲೆಗೂದಲಿಗೆ ತೆಂಗಿನೆಣ್ಣೆ ಬಳಸಬಹುದು. ಕೂದಲಿನ ಬಣ್ಣ ಮತ್ತು ಸಾಂದ್ರತೆ ಉಳಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಹೇರ್‌ಕ್ರೀಮ್‌ಗಳನ್ನು ಬಳಸಬಹುದು. ಸಾಧ್ಯವಾದಲ್ಲಿ ಹೋಳಿ ಆಟ ಆಡುವಾಗ ಟೋಪಿ ಅಥವಾ ತಲೆಗೂದಲು ಮುಚ್ಚುವ ತಲೆಗವಚ ಧರಿಸಿದಲ್ಲಿ ತಲೆಗೂದಲಿಗೆ ಘಾಸಿಯಾಗುವುದನ್ನು ತಡೆಗಟ್ಟಬಹುದು.


4) ನಮ್ಮ ಕಣ್ಣುಗಳು ಬಣ್ಣದೊಳಗಿನ ರಾಸಯನಿಕಗಳಿಗೆ ಬಹಳ ಬೇಗನೆ ಸ್ಪಂದಿಸುವುದರಿಂದ ಸಾಧ್ಯವಾದಷ್ಟು ಕಪ್ಪು ತಂಪು ಕನ್ನಡಕಗಳನ್ನು ಬಳಸಿ ಹೋಲಿ ಆಟವಾಡಿ. ಕಾಂಟಾಕ್ಟ್ ಲೆನ್ಸ್ ಇರುವವರು ಹೋಲಿ ಆಟದ ಮೊದಲು ಕಾಂಟಾಕ್ಟ್ ಲೆನ್ಸ್ ತೆಗೆಯಬೇಕು.  ಒಂದು ವೇಳೆ ಬಣ್ಣ ಕಣ್ಣಿನೊಳಗೆ ಸೇರಿಕೊಂಡಲ್ಲಿ ತಕ್ಷಣವೇ ತಂಪಾದ ಸ್ವಚ್ಚ ನೀರಿನಲ್ಲಿ ತೊಳೆಯಬೇಕು.

5) ಹೋಲಿಯಾಟದ ಬಳಿಕ ಬಣ್ಣ ತೆಗೆಯಲು ಜಾಸ್ತಿ ಗಾಢವಾದ ಸೋಪ್ ದ್ರಾವಣ ಮತ್ತು ಶಾಂಪೂ ಬಳಸಬೇಡಿ. ಸಾಕಷ್ಟು ನೀರು ಬಳಸಿ ಬಣ್ಣ ತೆಗೆಯಬೇಕು. ತಲೆಗೂದಲಿನ ಬಣ್ಣ ತೆಗೆಯಲು ಬೇಬಿ ಶಾಂಪೂ ಬಳಸಬೇಕು. ಅದೇ ರೀತಿ ಹೇರ್ ಕಂಡೀಷನರ್ ದ್ರಾವಣ ಬಳಸಿ, ಕೂದಲಿನ ಬಣ್ಣ ತೆಗೆಯಬೇಕು.  ಚರ್ಮದ ಬಣ್ಣ ತೆಗೆಯಲು ಸೀಮೆಎಣ್ಣೆ, ಪೆಟ್ರೂಲ್, ಡೀಸೆಲ್ ಅಥವಾ ಸ್ಪಿರಿಟ್ ದ್ರಾವಣ ಬಳಸಲೇಬಾರದು ಇವು ಚರ್ಮವನ್ನು ಮತ್ತಷ್ಟು ಒಣಗಿಸಿ ನಿರ್ಜಲೀಕರಣವಾಗಿಸಿ, ಚರ್ಮಕ್ಕೆ ಘಾಸಿಮಾಡಬಹುದು.

6) ದೇಹದ ಯಾವುದೇ ಭಾಗದಲ್ಲಿ ತುರಿಕೆ ಅಥವಾ ಗುಳ್ಳೆ ಕಂಡುಬಂದಲ್ಲಿ ತಕ್ಷಣವೇ ನೀರಿನಿಂದ ಶುಭ್ರವಾಗಿ ತೊಳೆಯಿರಿ, ನೀರಿನಿಂದ ತೊಳೆದ ಬಳಿಕ ಕಾಲಮೈನ್ ಲೋಷನ್ ಅಥವಾ ವಿಟಮಿನ್ ಇ ಕ್ರೀಮ್ ಬಳಸಬಹುದು. ಸೂರ್ಯನ ಪ್ರಖರ ಕಿರಣಗಳಿಗೆ ಒಂದೆರಡು ದಿನ ಮೈಯೊಡ್ಡಲೇಬಾರದು. 

7) ನೀವು ಅಸ್ತಮಾ ರೋಗಿಯಾಗಿದ್ದಲ್ಲಿ ಮತ್ತು ಡಸ್ಟ್ ಅಲರ್ಜಿ ಹೊಂದಿದಲ್ಲಿ ಯಾವುದೇ ಕಾರಣಕ್ಕೂ ಒಣ ಪೌಡರ್ ಬಣ್ಣಗಳಲ್ಲಿ ಹೋಲಿ ಆಟವಾಡಬೇಡಿ.

8) ಹೋಲಿ ಹಬ್ಬದ ಅಧಿಕೃತ ಪೇಯವಾದ “ಬಾಂಗ್‌ನ್ನು ಹಿತಮಿತವಾಗಿ ಸೇವಿಸಿ, ಅತಿಯಾಗಿ ಸೇವಿಸಿದಲ್ಲಿ ರಕ್ತದೊತ್ತಡ ಜಾಸ್ತಿಯಾಗಬಹುದು ಮತ್ತು ಹೃದಯದ ಬಡಿತ ಹೆಚ್ಚಾಗುತ್ತದೆ. ಯಾವುದೇ ಕಾರಣಕ್ಕೂ ಆಲ್ಕೋಹಾಲ್ ಜತೆ ಸೇವಿಸಬಾರದು.

9) ನೈಸರ್ಗಿಕ ಸಂಪನ್ಮೂಲಗಳಾದ ನೀರನ್ನು ಹಿತಮಿತವಾಗಿ ಬಳಸಿ, ಅನಾವಶ್ಯಕ ಪೋಲು ಮಾಡಬೇಡಿ. ಬಹಳ ಹತ್ತಿರದಿಂದ ನೀರಿನ ಬುಗ್ಗೆ ಅಥವಾ ಪಿಚಕಾರಿ ಬಳಸುವಾಗ ಜಾಗ್ರತೆಯಿರಲಿ.  


10) ಹೋಲಿ ಆಟ ಆಡುವಾಗ ಜೀವ ಜಗತ್ತಿನ ಎಲ್ಲಾ ಜೀವ ಸಂಕುಲಗಳಿಗೂ ಗೌರವ ನೀಡಿ. ನಮಗೆ ಬದುಕುವ ಹಕ್ಕಿರುವಷ್ಟೇ ಹಕ್ಕು ಆ ಪ್ರಾಣಿ ಸಂಕುಲಗಳಿಗೂ ಇದೆ. ಬೀದಿ ನಾಯಿಗಳಿಗೆ, ದನಕರುಗಳಿಗೆ, ಸಾಕು ಪ್ರಾಣಿಗಳಿಗೆ ಬಣ್ಣ ಹಚ್ಚಿ ವಿಕೃತ ಆನಂದ ಪಡೆಯುವುದು ಬಹಳ ಅಪಾಯಕಾರಿ ಮತ್ತು ಮನುಕುಲಕ್ಕೆ ನಾಚಿಗೆ ಗೇಡಿನ ಸಂಗತಿ.

11) ಬಣ್ಣದೋಕುಳಿ ಸಮಯದಲ್ಲಿ ಸಾಕಷ್ಟು ದ್ರವಾಹಾರ ಮತ್ತು ನೀರು ಸೇವಿಸಬೇಕು. ಕೆಫೆನ್‌ಯುಕ್ತ ಕಾಫಿ, ಟೀ, ಕೋಕ್, ಪೆಪ್ಸಿ ಮತ್ತು ಆಲ್ಕೋಹಾಲ್ ಸೇವನೆ ಕಡಿಮೆ ಮಾಡಬೇಕು. ಇವೆಲ್ಲವೂ ನಿರ್ಜಲೀಕರಣಕ್ಕೆ ಕಾರಣವಾಗಿ ಚರ್ಮದ ಆರೋಗ್ಯ ಮತ್ತು ದೇಹದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳಬಹುದು.

12) ಹೋಲಿ ಆಟದ ನಡುವೆ ಕೈ ಬಣ್ಣದಿಂದ ಆವೃತ್ತವಾಗಿರುವಾಗ ಆಹಾರ ಸೇವನೆ ಮಾಡುವುದು ತಪ್ಪಿಸಿ. ಯಾಕೆಂದರೆ ನಿಮ್ಮ ಆಹಾರದ ಜೊತೆಗೆ ರಾಸಯನಿಕಯುಕ್ತ ಬಣ್ಣ ನಿಮ್ಮ ದೇಹಕ್ಕೆ ಸೇರಿ ಮತ್ತಷ್ಟು ಹಾನಿಗಳಿಗೆ ನಾಂದಿ ಹಾಡಬಹುದು. 

13) ಹೋಳಿಯಾಟದ ಮೊದಲು ಉಗುರುಗಳನ್ನು ರಕ್ಷಿಸಲು, ಉಗುರುಗಳಿಗೆ ಪಾರದರ್ಶಕವಾದ ವಾರ್ನಿಶ್ ಹಚ್ಚಿಕೊಳ್ಳಿ. ಅಥವಾ ಎರಡೆರಡು ಪದರಗಳಿರುವ ಉಗುರಿನ ಬಣ್ಣವನ್ನು ಹಚ್ಚಿದಲ್ಲಿ ಉಗುರಿಗಾಗುವ ಹಾನಿ ತಡೆಯಬಹುದು. 

14) ಹೋಳಿ ಹಬ್ಬದ ಅಂತಿಮ ಹಂತದಲ್ಲಿ ಕಾಮ ದಹನ ಮಾಡುವ ಸಂದರ್ಭದಲ್ಲಿ ಸಾಕಷ್ಟು ಬೆಂಕಿ ಅನಾಹುತಗಳಾದ ಪ್ರಮೇಯವಿದೆ. ಮಕ್ಕಳನ್ನು ಬೆಂಕಿಯಿಂದ ದೂರವಿಡಿ ಮತ್ತು ನೈಲಾನ್ ಬಟ್ಟೆ ಧರಿಸಿ ಬೆಂಕಿಯಾಟ ಆಡುವುದು ಸೂಕ್ತವಲ್ಲ.  


ಕೊನೆಮಾತು: ವರ್ಷದಲ್ಲೊಮ್ಮೆ ಬರುವ “ಹೋಳಿ ಹಬ್ಬ” ಬಣ್ಣಗಳ ಹಬ್ಬವೆಂದೇ ಪ್ರಖ್ಯಾತವಾಗಿದೆ. ಬಣ್ಣದಾಟದ ಬಳಿಕ ಹೇಗೆ ನಾವು ಬಣ್ಣಗಳನ್ನು ತೊಳೆದು ಶುಭ್ರವಾಗುತ್ತೇವೆಯೋ ಹಾಗೆಯೇ ನಮ್ಮ ಮನದೊಳಗಿನ ಕಾಮ, ಕ್ರೋದ, ಮದ, ಮತ್ಸರ, ದ್ವೇಷ, ಅಸೂಯೆ ಮುಂತಾದ ಅರಿಷಡ್ಪರ್ಗಗಳು ಕಳೆದುಹೋಗಿ, ಪ್ರೀತಿ ಪ್ರೇಮ, ಶಾಂತಿ, ವಾತ್ಸಲ್ಯ ಭಾತೃತ್ಪಗಳನ್ನು ಹುಟ್ಟು ಹಾಕಿ ಮನುಷ್ಯ ಮನುಷ್ಯರ ನಡುವೆ ಸುಮಧುರ ಭಾಂದವ್ಯಕ್ಕೆ ನಾಂದಿ ಹಾಡಲಿ ಮತ್ತು ಜಗತ್ತಿಗೆ ವಿಶ್ವಬಾತೃತ್ವ ಮತ್ತು ಸಮಾನತೆಯ ಸಂದೇಶ ನೀಡಲಿ ಎಂದು ತುಂಬು ಹೃದಯದಿಂದ ಹಾರೈಸೋಣ. ಹಾಗದಲ್ಲಿ ಮಾತ್ರ ಹೋಳಿ ಹಬ್ಬದ ಆಚರಣೆಗೆ ಹೆಚ್ಚಿನ ಮೌಲ್ಯ ಬಂದು ಅರ್ಥಪೂರ್ಣವಾದೀತು. 

-ಡಾ|| ಮುರಲೀ ಮೋಹನ್ ಚೂಂತಾರು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم