ಪೂಜ್ಯ ಅಮೋಘಕೀರ್ತಿ ಮುನಿಮಹಾರಾಜರು ಉಜಿರೆಯಲ್ಲಿ ಸಿದ್ಧವನ ಗುರುಕುಲದಲ್ಲಿ ಮಂಗಲಪ್ರವಚನ ನೀಡಿದರು. ಪೂಜ್ಯ ಅಮರಕೀರ್ತಿ ಮುನಿಮಹಾರಾಜರು ಉಪಸ್ಥಿತರಿದ್ದರು.
ಉಜಿರೆ: ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣದ ಗುರಿಯಾಗಿದ್ದು ಶಿಕ್ಷಣದೊಂದಿಗೆ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರವಂತರಾಗಿ, ಮಾನವೀಯ ಮೌಲ್ಯಗಳೊಂದಿಗೆ ಆದರ್ಶ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಪೂಜ್ಯ ಅಮೋಘಕೀರ್ತಿ ಮುನಿಮಹಾರಾಜರು ಹೇಳಿದರು.
ಅವರು ಶನಿವಾರ ಉಜಿರೆಯಲ್ಲಿ ಸಿದ್ಧವನ ಗುರುಕುಲದಲ್ಲಿ ಮಂಗಲ ಪ್ರವಚನ ನೀಡಿದರು.
ತಾಯಿ-ತಂದೆ ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ವಿಶೇಷ ಕಾಳಜಿ ವಹಿಸಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಾರೆ. ಕೇವಲ ಪದವಿ ಗಳಿಸಿ, ಉದ್ಯೋಗ ಮಾಡಿ ಹಣ ಸಂಪಾದನೆ ಮಾಡುವುದೇ ಶಿಕ್ಷಣದ ಗುರಿ ಅಲ್ಲ. ಶಿಕ್ಷಣ ಪಡೆದವರು ನೌಕರಿಗೆ ಸೇರಿದ ಬಳಿಕ ತಮ್ಮ ಸೇವೆಯನ್ನು ಮನೆ ಮತ್ತು ಕುಟುಂಬಕ್ಕೆ ಸೀಮಿತಗೊಳಿಸಬಾರದು. ವಿಶ್ವಮಾನವರಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಮಾನವೀಯತೆಯಿಂದ ಸಮಾಜ ಸೇವೆ ಮಾಡಬೇಕು. ಸಜ್ಜನರಾಗಿ, ಸಮಾಜದ ಸುಸಂಸ್ಕೃತ ನಾಗರಿಕರಾಗಿ ಸಮಾಜ ಸೇವೆ ಮಾಡಿದರೆ ಉತ್ತಮ ಸ್ಥಾನ, ಮಾನ ಹಾಗೂ ಗೌರವ ಸಿಗುತ್ತದೆ ಎಂದು ಹೇಳಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಚತುರ್ವಿಧ ದಾನ ಪರಂಪರೆಯೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆ, ಸಾಧನೆ ಬಗ್ಯೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಧರ್ಮಸ್ಥಳದ ಕೀರ್ತಿಶೇಷ ಮಂಜಯ್ಯ ಹೆಗ್ಗಡೆಯವರು ಮತ್ತು ನೇಮಿಸಾಗರ ವರ್ಣೀಜಿಯವರು ಉಜಿರೆ, ಕಾರ್ಕಳ, ಶ್ರವಬೆಳಗೊಳ ಮೊದಲಾದ ಕಡೆ ಶಿಕ್ಷಣದ ಜೊತೆ ಉತ್ತಮ ಸಂಸ್ಕಾರ ನೀಡಿ ಆದರ್ಶ ವ್ಯಕ್ತಿತ್ವ ರೂಪಿಸುವ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ಉತ್ತಮ ಸೇವೆ ನೀಡಿರುವ ಬಗ್ಯೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಪೂಜ್ಯ ಅಮರಕೀರ್ತಿ ಮುನಿಮಹಾರಾಜರು ಮಂಗಲ ಪ್ರವಚನ ನೀಡಿ, ಉತ್ತಮ ಜೀವನ ನಡೆಸಲು ಸಂಸ್ಕಾರಯುತ ಶಿಕ್ಷಣ ಅಗತ್ಯ. ದೃಢ ಸಂಕಲ್ಪ, ನಿರಂತರ ಪ್ರಯತ್ನ ಮತ್ತು ಏಕಾಗ್ರತೆಯಿಂದ ಕಾರ್ಯಸಿದ್ಧಿಯಾಗುತ್ತದೆ. ಎಲ್ಲರ ಕನಸು ನನಸಾಗುತ್ತದೆ ಎಂದು ಹೇಳಿ ಎಲ್ಲರಿಗೂ ಮಂಗಲ ಆಶೀರ್ವಾದ ನೀಡಿ ಹರಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ