ಪುತ್ತೂರು: ಪ್ರಸ್ತುತ ದಿನಗಳಲ್ಲಿ ಕ್ಯಾನ್ಸರ್ ರೋಗವು ಹೆಮ್ಮರವಾಗಿ ಬೆಳೆದು ನಿಂತಿದೆ. ಈ ನಿಟ್ಟಿನಲ್ಲಿ ಜನರಲ್ಲಿ ಕ್ಯಾನ್ಸರ್ ಬಗೆಗಿನ ಜಾಗೃತಿ ಮೂಡಿಸುವ ಸಲುವಾಗಿ ಪ್ರಪಂಚದಾದ್ಯಂತ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನವೆಂದು ಗುರುತಿಸಲಾಗುತ್ತದೆ.
ಈ ಪ್ರಯುಕ್ತ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗ, ವಿಜ್ಞಾನ ಸಂಘ, ಐಕ್ಯೂಎಸಿ ಹಾಗೂ ನೇಚರ್ ಕ್ಲಬ್ ಇದರ ಜಂಟಿ ಸಹಯೋಗದಲ್ಲಿ ಒಂದು ದಿನದ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಹಾಗೂ ಪ್ರಸ್ತುತ ಕಕ್ಕಿಂಜೆಯ ಸೈಂಟ್ ಜೋಸೆಫ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಅನನ್ಯ ಲಕ್ಷ್ಮಿ ಗೌರವ ಅತಿಥಿಯಾಗಿ ಭಾಗವಹಿಸಿ ಕ್ಯಾನ್ಸರ್ ಬಗೆಗಿನ ಮಾಹಿತಿ, ಉಂಟಾಗುವ ತೊಂದರೆಗಳು ಹಾಗೂ ಇದನ್ನು ಸರಿಪಡಿಸುವಲ್ಲಿ ಜನರು ವಿಫಲರಾಗುತ್ತಿರುವ ಕಾರಣವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕೆಲಸದ ಒತ್ತಡದಿಂದ ಜನರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದಾಗಿ ಕ್ಯಾನ್ಸರ್ ರೋಗವು ದೊಡ್ಡ ಮಟ್ಟದಲ್ಲೇ ಪರಿಣಮಿಸುತ್ತಿದೆ. ಪುರುಷರಲ್ಲಿ ತಂಬಾಕು ಸೇವನೆಯಿಂದ ಬಾಯಿ ಕ್ಯಾನ್ಸರ್ ಕಾಣಿಸಿಕೊಂಡರೆ, ಮಹಿಳೆಯರಲ್ಲಿ ಹೆಚ್ಚಾಗಿ ಸ್ತನ ಹಾಗೂ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ ಆರೋಗ್ಯದ ಕಾಳಜಿ, ಮಹತ್ವ ಹಾಗೂ ಕ್ಯಾನ್ಸರ್ ಬಗೆಗಿನ ಮುಂಜಾಗ್ರತೆ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ವಹಿಸಿದರು. ಐಕ್ಯೂಎಸಿ ಘಟಕದ ಸಂಯೋಜಕ ಶಿವಪ್ರಸಾದ್ ಕೆ.ಎಸ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಭಾರ್ಗವ ಶೆಟ್ಟಿ ಸ್ವಾಗತಿಸಿ, ಸುಶ್ಮಿತಾ ಭಾರದ್ವಾಜ್ ವಂದಿಸಿದರು. ಅರವಿಂದ ವಿಭಾಸ್ ಕೆ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ