ಮಂಗಳೂರು: ಸಕಾಲದಲ್ಲಿ ರಕ್ತದಾನ ಮಾಡುವುದರಿಂದ ಸಾಮಾನ್ಯ ಮನುಷ್ಯರಿಗೂ ಇತರರ ಜೀವ ಉಳಿಸಲು ಸಾಧ್ಯವಿದೆ. ಕಾಲ ಕಾಲಕ್ಕೆ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಜೀವ ಉಳಿಸಿದ ಸಾರ್ಥಕತೆಯ ಜೊತೆಗೆ ನಮ್ಮ ಆರೋಗ್ಯವು ವೃದ್ಧಿಸುತ್ತದೆ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲದ ಕಾರಣದಿಂದಾಗಿ ರಕ್ತ ದಾನಿಗಳಿಂದಲೇ ರಕ್ತದ ಪೂರೈಕೆ ಆಗ ಬೇಕಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರು ರಕ್ತದಾನ ಮಾಡಿ ಜೀವ ಉಳಿಸುವ ಪುಣ್ಯ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಮಂಗಳೂರು ಹವ್ಯಕ ಸಭಾದ ಅಧ್ಯಕ್ಷ ಸುಬ್ರಮಣ್ಯ ಕಾಶಿಮಠ ಅಭಿಪ್ರಾಯ ಪಟ್ಟರು.
ಚೂಂತಾರು ಸರೋಜಿಸಿ ಭಟ್ ಪ್ರತಿಷ್ಠಾನ (ರಿ) ಮಂಗಳೂರು ಮತ್ತು ಲಯನ್ಸ್ ಕ್ಲಬ್ ಮಂಗಳೂರು ಹಾಗೂ ಹವ್ಯಕ ಸಭಾ ಮಂಗಳೂರು ಇವರ ಆಶ್ರಯದಲ್ಲಿ ಶ್ರೀ ಭಾರತೀ ಕಾಲೇಜು ನಂತೂರು ಹಾಗೂ ರಕ್ತ ನಿಧಿ ವೆನ್‌ಲಾಕ್ ಆಸ್ಪತ್ರೆ ಇದರ ಸಹಕಾರದೊಂದಿಗೆ ಭಾನುವಾರ (ಮಾ.6) ನಗರದ ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜಿನಲ್ಲಿ ರಕ್ತದಾನ ಶಿಬಿರ ನಡೆಯಿತು. ಶ್ರೀ ಕಾಶಿಮಠ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಹಿರಿಯ ವೈದ್ಯರಾದ ಹವ್ಯಕ ಸಭಾ ಮಂಗಳೂರು ಇದರ ನಿಯೋಜಿತ ಅಧ್ಯಕ್ಷರಾದ ಡಾ. ರಾಜೇಂದ್ರ ಪ್ರಸಾದ್ ಇವರು ಮಾತನಾಡಿ, ರಕ್ತದಾನ ಮಾಡಲು ದೊಡ್ಡ ಮನಸ್ಸಿದ್ದರೆ ಸಾಕು. ಇತರರ ನೋವು ನಲಿವು, ಕಷ್ಟ ಕಾರ್ಪಣ್ಯಗಳಿಗೆ ಸ್ವಂದಿಸುವ ಮಾನವೀಯ ಮೌಲ್ಯಗಳನ್ನು ಬೆಳೆÀಸಿಕೊಂಡು ನಿರಂತರ ರಕ್ತದಾನ ಮಾಡಿದಲ್ಲಿ ಸಮಾಜದ ಸ್ವಾಸ್ಥವು ವೃದ್ಧಿಸುತ್ತದೆ ಎಂದು ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು.
ಸರೋಜಿನಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಮುರಲೀ ಮೋಹನ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಗಣೇಶ್ ಸುಂದರ್ ಕೆ.ಜಿ ಅವರು ವಂದನಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ವೆನ್‌ಲಾಕ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಜುಲ್ಫಿಕರ್ ಅಹ್ಮದ್, ಡಾ. ಟಿನ್ನು ವೆಂಕಟ್, ರಕ್ತನಿಧಿ ಉಸ್ತವಾರಿಗಳಾದ ಅಶೋಕ್ ಮತ್ತು ಆಂತೋನಿ ಡಿ’ಸೋಜಾ, ತಾಂತ್ರಿಕ ಅಧಿಕಾರಿಗಳು ಮತ್ತು ಶುಶ್ರೂಶಕ ಆಧಿಕಾರಿಗಳು, ಲಯನ್ಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಸತೀಶ್ ರೈ, ಸುಧಾಮ ರೈ, ಲಯನ್ಸ್ ಸದಸ್ಯರಾದ ಎ.ಜಿ ಶರ್ಮ ಹಾಗೂ ಶ್ರೀಮತಿ ಅನಿತಾ ಬೋಳಂತಕೋಡಿ ಮುಂತಾದವರು ಉಪಸ್ಥಿತರಿದ್ದರು. ವೆನ್‌ಲಾಕ್ ಆಸ್ಪತ್ರೆಯ ತಂತ್ರಜ್ಞರು ಮತ್ತು ವೈದ್ಯರು ಈ ಶಿಬಿರವನ್ನು ನಡೆಸಿಕೊಟ್ಟರು. ಸುಮಾರು 26 ಮಂದಿ ರಕ್ತದಾನ ಮಾಡಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ