ಜಗತ್ತಿನ ಅತ್ಯಂತ ಶ್ರೀಮಂತ ಮೌಖಿಕ ಕಲೆಗಳಲ್ಲಿ ಒಂದು ಯಕ್ಷಗಾನ ತಾಳಮದ್ದಳೆ: ಡಾ. ಪ್ರಭಾಕರ ಜೋಶಿ

Upayuktha
0

ವಿವೇಕಾನಂದ ಕಾಲೇಜಿನಲ್ಲಿ ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರ ಉದ್ಘಾಟನೆ


ಪುತ್ತೂರು: ಕಲೆಗೆ ಅದರದ್ದೇ ಆದ ಭಾಷೆಯಿದೆ. ಭರತನಾಟ್ಯ, ಕಥಕ್ಕಳಿ, ಯಕ್ಷಗಾನ ಇನ್ನು ಹಲವು ಕಲೆಗಳು ಸಾಮಾನ್ಯ ಜನರಿಗೆ ಒಂದೇ ರೀತಿ ಕಾಣುತ್ತದೆ. ಈ ಕಲೆಯ ಸ್ವರೂಪಗಳು ಇದನ್ನು ಭಿನ್ನವಾಗಿಸಿದೆ. ಕಲೆಯ ಸ್ವರೂಪವನ್ನು ಅರಿತವರಿಗೆ ಮಾತ್ರ ಈ ನಾಟ್ಯಗಳನ್ನು ಅರ್ಥೈಸಲು ಸಾಧ್ಯ. ಆ ಭಾಷೆಯನ್ನು ಅರ್ಥೈಸಿಕೊಳ್ಳುವುದನ್ನು ಕಲಿಯಬೇಕು ಎಂದು ವಿಶ್ರಾಂತ ಪ್ರಾಧ್ಯಾಪಕ ಹಾಗೂ ಕಲಾವಿದ ಡಾ. ಪ್ರಭಾಕರ ಜೋಷಿ ಹೇಳಿದರು.


ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಐಕ್ಯೂಎಸಿ ಘಟಕ ಹಾಗೂ ವಿವೇಕಾನಂದ ಸಂಶೋಧನ ಕೇಂದ್ರದ ಆಶ್ರಯಲ್ಲಿ ‘ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಭಾರತೀಯ ಸಂಸ್ಕೃತಿ ಮತ್ತು ಲಲಿತಕಲೆಗಳ ಅಧ್ಯಯನ ಕೇಂದ್ರ ಇದರ ಉದ್ಘಾಟನೆ ಹಾಗೂ ಸನ್ಮಾನ ಸಮಾರಂಭ'ವನ್ನು ಉದ್ಘಾಟಿಸಿ ಶನಿವಾರ ಅವರು ಮಾತನಾಡಿದರು.


ವಿಶ್ವದ ಶ್ರೇಷ್ಠ ಕಲೆಗಳಲ್ಲಿ ಯಕ್ಷಗಾನವೂ ಒಂದಾಗಿದೆ. ಜಗತ್ತಿನ ಅತ್ಯಂತ ಶ್ರೀಮಂತ ಮೌಖಿಕ ಕಲೆಗಳಲ್ಲಿ ಒಂದು ಯಕ್ಷಗಾನ ತಾಳಮದ್ದಳೆ. ವಿದ್ಯಾರ್ಥಿಗಳು ಕಲಾವಿದರಾಗಿ ರೂಪುಗೊಳ್ಳುವುದು ಸಂತೋಷದ ವಿಷಯ. ಈ ಕಾರ್ಯದಲ್ಲಿ ಕಾಲೇಜು, ವಿದ್ಯಾರ್ಥಿಗಳಿಗೆ ವೇದಿಕೆಯನ್ನು ಸೃಷ್ಟಿ ಮಾಡುತ್ತಿರುವುದು ಉತ್ತಮ ಕಾರ್ಯ. ಸಂಪ್ರದಾಯಿಕ, ವ್ಯವಸ್ಥಿತ, ಕಲಾ ತರಬೇತಿಯ ಜೊತೆಗೆ ಸೈದ್ಧಾಂತಿಕ ಶಿಕ್ಷಣ ಕೂಡಾ ಅಗತ್ಯವಾಗಿದೆ. ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಲೆಗೆ ವೇದಿಕೆಯ ಕಲ್ಪಿಸುವ ಪ್ರಯತ್ನ ನಡೆಯಬೇಕು. ಈ ನಿಟ್ಟಿನಲ್ಲಿ ಕಲೆಯನ್ನು ಬೆಳೆಸುವ ಹಾಗೂ ಉಳಿಸುವ ಕಾರ್ಯವಾಗಬೇಕು ಎಂದು ತಿಳಿಸಿದರು

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಮಾತನಾಡಿ, ದೇರಾಜೆ ಸೀತರಾಮಯ್ಯ ಅವರ ಹೆಸರಿನಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರ, ಭಾರತೀಯ ಸಂಸ್ಕೃತಿ ಮತ್ತು ಲಲಿತಕಲೆಗಳ ಅಧ್ಯಯನ ಕೇಂದ್ರಗಳ ಉದ್ಘಾಟನೆಯ ಮೂಲಕ ಕಾಲೇಜಿನ ಕನಸೊಂದು ನನಸಾಗುತ್ತಿದೆ ಎಂದರು.


ದೇರಾಜೆ ಸೀತಾರಾಮಯ್ಯ ಅವರ ಪುತ್ರ, ರಂಗಕರ್ಮಿ ಮೂರ್ತಿ ದೇರಾಜೆ ಮಾತನಾಡಿ, ನನ್ನ ಅಪ್ಪಯ್ಯ ಅಂದರೆ ದೇರಾಜೆ ಸೀತರಾಮಯ್ಯ ಅವರಿಗೆ ಚೊಕ್ಕಾಡಿಯಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರವನ್ನು ಸ್ಥಾಪಿಸಬೇಕು ಅನ್ನುವ ಕನಸಿತ್ತು. ಯಕ್ಷಗಾನಕ್ಕೆ ಪ್ರಚಾರವನ್ನು ಕೊಡಬೇಕು ಅನ್ನುವ ಉದ್ದೇಶ ಅವರದ್ದಾಗಿತ್ತು. ಅವರ ಕನಸ್ಸನ್ನು ನಗರದ ಪ್ರತಿಷ್ಠಿತ ಕಾಲೇಜು ನನಸು ಮಾಡಿದ್ದು ತುಂಬಾ ಸಂತೋಷದ ವಿಚಾರ. ಕಲೆಯ ಮೂಲ ಹಾಗೂ ಸ್ವರೂಪವನ್ನು ಎಲ್ಲರು ತಿಳಿದಿರಬೇಕು. ಇಲ್ಲದಿದ್ದಲ್ಲಿ ಕಲೆಯು ತನ್ನ ಮಹತ್ವವನ್ನು ಕಳೆದುಕೊಳ್ಳುವ ಸಾಧ್ಯತೆಗಳು ಇದೆ. ಅಧ್ಯಯನ ಕೇಂದ್ರದ ಮೂಲಕ ಬಹಳಷ್ಟು ಅವಕಾಶ ಹಾಗೂ ವೇದಿಕೆಗಳು ವಿದ್ಯಾರ್ಥಿಗಳಿಗೆ ಲಭಿಸುತ್ತದೆ. ಈ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಪ್ರಾಚೀನ ಇತಿಹಾಸವನ್ನು ಭಾರತ ಹೊಂದಿದೆ. ಇದು ಕಲೆ ಸಾಹಿತ್ಯಗಳ ಬೀಡು. ಆದರೆ ಪಾಶ್ಚಾತ್ಯರ ದಾಳಿಯಿಂದ ಶಿಕ್ಷಣ ವ್ಯವಸ್ಥೆ ಬದಲಾಯಿತು. ಒಂದು ವಿಧವಾಗಿ ಮಾನಸಿಕವಾಗಿ ಭಾರತೀಯರನ್ನು ಕುಗ್ಗಿಸುವ ಪ್ರಯತ್ನಗಳು ನಡೆದವು. ಆದರೆ ಭಾರತೀಯರು ಯಾವುದೇ ಕ್ಷೇತ್ರವನ್ನು ತಲುಪುವ ಪ್ರತಿಭೆಯನ್ನು ಹೊಂದಿದ್ದಾರೆ. ನಮ್ಮ ದೇಶದಲ್ಲಿ ಅಪಾರ ಜ್ಞಾನ ಸಂಪತ್ತು, ಹಾಗೆಯೇ ಅದ್ಭುತ ಪ್ರತಿಭೆಗಳಿವೆ. ಅವುಗಳ ಅನಾವರಣ ಆಗಬೇಕಿದೆ. ಇಂದು ಜಾಗತಿಕ ಮಟ್ಟದಲ್ಲಿ ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಭಾರತದ ಅಭಿಪ್ರಾಯವನ್ನು ಕೇಳುವ ಹಂತಕ್ಕೆ ಭಾರತ ಬೆಳೆದಿದೆ ಎಂದು ನುಡಿದರು.


ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ. ಎನ್. ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಈ ಸಂದರ್ಭ ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕರಾಗಿ ಕನ್ನಡ ವಿಭಾಗದ ಉಪನ್ಯಾಸಕ ಡಾ. ಮನಮೋಹನ್ ಎಂ ಹಾಗೂ ಭಾರತೀಯ ಸಂಸ್ಕೃತಿ ಮತ್ತು ಲಲಿತಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕರಾಗಿ ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ವಿಭಾಗದ ಸಂಯೋಜಕಿ ಡಾ. ವಿಜಯ ಸರಸ್ವತಿ ಅವರಿಗೆ ಜವಾಬ್ದಾರಿಯನ್ನು ವಹಿಸಲಾಯಿತು.


ಈ ಸಂದರ್ಭ ಯಕ್ಷಗಾನದ ಹಿರಿಯ ಕಲಾವಿದ ಕುರಿಯ ಗಣಪತಿ ಶಾಸ್ತ್ರಿ, ಸುನಾದ ಸಂಗೀತ ಶಾಲೆಯ ಮುಖ್ಯಸ್ಥ ಹಾಗೂ ಸಂಗೀತ ಗುರು ವಿದ್ವಾನ್ ಕಾಂಚನ ಈಶ್ವರ್ ಭಟ್ ಹಾಗೂ ಪುತ್ತೂರಿನ ವೈಷ್ಣವಿ ನಾಟ್ಯಾಲಯದ ನೃತ್ಯಗುರು ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಕಾಡೂರು ಸೀತಾರಾಮ ಶಾಸ್ತ್ರಿಯವರು ಅಧ್ಯಯನ ಕೇಂದ್ರಕ್ಕೆ ಐದು ಸಾವಿರ ರೂಪಾಯಿ ದೇಣಿಗೆ ನೀಡಿದರು.


ಸಾಂಪ್ರದಾಯಿಕ ಯಕ್ಷಗಾನ ಪ್ರಾರ್ಥನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ವಿವೇಕಾನಂದ ಸಂಶೋಧನ ಕೇಂದ್ರದ ನಿರ್ದೇಶಕ ಡಾ. ಎಚ್.ಜಿ. ಶ್ರೀಧರ್ ಪ್ರಾಸ್ಥಾವಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಸ್ವಾಗತಿಸಿ, ಕನ್ನಡ ವಿಭಾಗದ ಉಪನ್ಯಾಸಕ ಡಾ. ಮನಮೋಹನ್ ಎಂ ವಂದಿಸಿದರು. ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ವಿಭಾಗದ ಸಂಯೋಜಕಿ ಡಾ. ವಿಜಯ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು.


ಸಭಾ ಕಾರ್ಯಕ್ರಮದ ಬಳಿಕ ‘ಕೃಷ್ಣಸಂಧಾನ’ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಪುತ್ತಿಗೆ ರಘುರಾಮ ಹೊಳ್ಳ, ಮದ್ದಳೆ ವಾದಕರಾಗಿ ಕೃಷ್ಣಪ್ರಕಾಶ ಉಳಿತ್ತಾಯ, ಚೆಂಡೆ ವಾದಕರಾಗಿ ಶಂಕರನಾರಾಯಣ ಭಟ್ ಪದ್ಯಾಣ, ಅರ್ಥಧಾರಿಗಳಾಗಿ ಅಶೋಕ ಭಟ್ ಉಜಿರೆ, ರಾಧಾಕೃಷ್ಣ ಕಲ್ಚಾರ್, ಗಣರಾಜ ಕುಂಬ್ಳೆ, ಹರೀಶ್ ಬೊಳಂತಿಮೊಗರು ಭಾಗವಹಿಸಿದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top