ಪ್ರತಿಯೊಬ್ಬರ ಜೀವನದಲ್ಲಿ ಸೋಲು ಮತ್ತು ಗೆಲುವು ಎಂಬುದು ಒಂದು ನಿರ್ದಿಷ್ಟವಾದ ಅಂಶವಾಗಿದೆ. ಸೋಲು ಮತ್ತು ಗೆಲುವು ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ತನ್ನ ಸಾಧನೆಯ ಗುರಿ ಮುಟ್ಟಬೇಕಾದರೆ ಆತ ಸೋಲಿನ ಮೆಟ್ಟಿಲೇರಿ ನಂತರ ತನ್ನ ಗೆಲುವಿನ ದಡಕ್ಕೆ ತಲುಪಬೇಕು. ನಮ್ಮ ಗೆಲುವಿನ ಪಯಣವನ್ನು ಶುರು ಮಾಡಬೇಕಾದರೆ ಒಮ್ಮೆಯಾದರೂ ನಾವು ಸೋಲಬೇಕು ಆಗ ಮಾತ್ರ ನಮ್ಮ ಗೆಲುವಿನ ಗುರಿ ತಲುಪಲು ಸಾಧ್ಯ.
ಏನೇ ಒಂದು ವಿಷಯದಲ್ಲಿ ನಾವು ಗೆಲುವನ್ನು ನಿರಂತರವಾಗಿ ಕಂಡರೆ ಮುಂದೊಂದು ದಿನ ನಾವು ಸೋತರೆ ಆ ಸಮಯದಲ್ಲಿ ನಮ್ಮ ನೋವನ್ನು ತಡೆದುಕೊಳ್ಳುವಷ್ಟು ಸಾಮರ್ಥ್ಯವಿರುವುದಿಲ್ಲ. ಏಕೆಂದರೆ ನಮಗೆ ಗೆಲುವಿನ ಸಂತಸದ ಸಂಭ್ರಮ ಮಾತ್ರ ಗೊತ್ತಿರುತ್ತದೆ ಹೊರತು ಸೋಲಿನ ಅನುಭವ ನಮಗೆ ತಿಳಿದಿರುದಿಲ್ಲ ಆದ್ದರಿಂದ ನಾವು ಏನೇ ಒಂದು ಕೆಲಸ ಅಥವಾ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಂಡಾಗ ಆ ವಿಷಯದ ಪ್ರಾರಂಭದಲ್ಲಿ ಸೋಲನ್ನು ಅನುಭವಿಸಿದರೆ ಮುಂದೆ ನಮ್ಮ ಗೆಲುವಿನ ಗುರಿಯು ತುಂಬಾ ಬಲಿಷ್ಠ ಮತ್ತು ಸ್ಫೂರ್ತಿದಾಯಕವಾಗಿರುತ್ತದೆ.
ಒಮ್ಮೆ ಸೋತರೆ ಮುಂದೆ ನಮಗೆ ದಾರಿಯಿಲ್ಲವೆಂದು ಕುಳಿತರೆ ನಾವು ಸಾಧನೆಯ ಮೆಟ್ಟಿಲೇರಲು ಸಾಧ್ಯವಿಲ್ಲ."ಸೋಲೇ ಗೆಲುವಿನ ಸೋಪಾನ" ಎಂಬ ಗಾದೆ ಮಾತಿನಂತೆ, ಒಮ್ಮೆ ಸೋತರೆ ನಮಗೆ ನಮ್ಮ ಗುರಿ ಮುಟ್ಟುವ ಛಲ ತಾನಾಗಿಯೇ ಹುಟ್ಟುತ್ತದೆ. ನಾವು ಸೋತಾಗ ಹಿಂದಿನಿಂದ ಟೀಕಿಸಲು ಎಷ್ಟೋ ಜನರಿದ್ದಾರೆ. ಅದೇ ನಾವು ಗೆದ್ದರೆ ನಮ್ಮ ಸಾಧನೆಯನ್ನು ಎತ್ತಿ ಹಿಡಿಯಲು ಅವರಿಗೆ ಸಾಧ್ಯವಿಲ್ಲ.
ಸೋತಾಗ ನಮ್ಮನ್ನು ಟೀಕಿಸುವವರು ಇದ್ದಾಗಲೇ ನಾವು ನಮ್ಮ ಗೆಲುವಿನ ಹಾದಿಯನ್ನು ಕಂಡುಕೊಳ್ಳಲು ಸಾಧ್ಯ.
ಒಬ್ಬ ವಿದ್ಯಾರ್ಥಿಯು ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಅದನ್ನು ಸೋಲೆಂದು ನಾವು ಹೇಳುತ್ತೇವೆ. ಇನ್ನು ಮುಂದೆ ಆತನು ತನ್ನ ಜೀವನದಲ್ಲಿ ಮುಂದೆ ಬರಲು ಸಾಧ್ಯವೇ ಇಲ್ಲವೆಂದು ಭಾವಿಸುತ್ತೇವೆ. ಆದರೆ ಆ ವಿದ್ಯಾರ್ಥಿ ಕೇವಲ ಪರೀಕ್ಷೆಯಲ್ಲಿ ಮಾತ್ರವೇ ಅನುತ್ತೀರ್ಣರಾಗಿದ್ದಾನೆ ಹೊರತು, ಅವನ ಜೀವನದಲ್ಲಿ ಅಲ್ಲ. ಆತನ ಜೀವನದಲ್ಲಿ ತನ್ನ ಸಾಧನೆಯ ಗುರಿ ಮುಟ್ಟಲು ಅಥವಾ ಸಾಧಿಸಲು ಆತನ ಜೀವನದಲ್ಲಿ ಹಲವಾರು ಮಾರ್ಗಗಳಿವೆ. ಅದರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಮುಂದೆ ಸಾಗಿದರೆ ಗೆಲುವು ಖಂಡಿತವಾಗಿ ಸಿಕ್ಕೇ ಸಿಗುತ್ತದೆ. ಸೋಲು ಎಂಬುದು ಕ್ರೀಡೆಯಲ್ಲಾಗಲೀ, ಕಲಿಕೆಯಲ್ಲಿ ಆಗಲಿ, ವೃತ್ತಿಯಲ್ಲಾಗಲಿ ಯಾವ ವಿಷಯದಲ್ಲಾದರೂ ಸೋಲು ಸಂಭವಿಸಬಹುದು. ಆ ಸೋಲನ್ನು ಮೆಟ್ಟಿ ನಿಂತರೆ ಮಾತ್ರ ಗೆಲುವಿನ ಶಿಖರವನ್ನು ಏರಲು ಸಾಧ್ಯ.
ಸೋತೆನೆಂದು ನಾವು ಕುಗ್ಗಬಾರದು ಗೆದ್ದೆವೆಂದು ಹಿಗ್ಗಬಾರದು. ಸೋತೆನೆಂದು ಕುಗ್ಗಿದರೆ ನಮ್ಮ ಗುರಿಯನ್ನು ತಲುಪಲು ಅಸಾಧ್ಯ. ಹಾಗೆಯೇ ಗೆದ್ದೆನೆಂದು ಅಹಂಕಾರ ಪಟ್ಟರೆ ಮುಂದೊಂದು ದಿನ ಸೋಲಿನ ಹಾದಿಗೆ ತಲುಪುವ ಸಂದರ್ಭ ಬರಬಹುದು ಆದ್ದರಿಂದ ಸೋತರೂ, ಗೆದ್ದರೂ ಅದನ್ನು ಸಮಾನ ರೀತಿಯಲ್ಲಿ ಮುನ್ನಡೆಸಿಕೊಂಡು ಮುಂದಿನ ದಾರಿಯತ್ತ ನಡೆಯಬೇಕು.
ಹೆತ್ತ ತಂದೆ -ತಾಯಿ ತನ್ನ ಮಗು ಸೋತಾಗ ಅದನ್ನು ಸೋಲೆಂದು ಪರಿಗಣಿಸದೆ ಆ ಮಗುವನ್ನು ಹುರಿದುಂಬಿಸಿ ಮುಂದೊಂದು ದಿನ ಇದೇ ನಿನ್ನ ಗೆಲುವಿನ ಹಾದಿಗೆ ಕಾರಣವಾಗುತ್ತದೆ ಎಂದು ಹೇಳಿದಾಗ ಆ ಸ್ಫೂರ್ತಿದಾಯಕವಾದ ಮಾತು ಆ ಮಗುವಿನ ಯಶಸ್ಸಿಗೆ ಕಾರಣವಾಗುತ್ತದೆ. "ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು" ಎಂಬ ಮಾತಿನಂತೆ ನಮಗೆ ಗುರಿ ಇದ್ದರೆ ಮಾತ್ರ ಗೆಲ್ಲಲು ಸಾಧ್ಯವಿಲ್ಲ, ಗೆಲ್ಲುವಂತಹ ಸಾಮರ್ಥ್ಯ, ಆಸಕ್ತಿ ಮತ್ತು ನಮ್ಮ ತಪ್ಪುಗಳನ್ನು ತಿದ್ದಿ ಹೇಳುವಂತಹ ಗುರು ಇರಬೇಕು ಆಗಲೇ ನಾವು ನಮ್ಮ ಗೆಲುವನ್ನು ಕಂಡುಕೊಳ್ಳಲು ಸಾಧ್ಯ.
-ರಕ್ಷಿತಾ ದಾರೆಪಡ್ಪು
ತೃತೀಯ ಬಿ ಎ ಪತ್ರಿಕೋದ್ಯಮ ವಿಭಾಗ
ಸರಕಾರಿ ಕಾಲೇಜು, ರಥಬೀದಿ ಮಂಗಳೂರು
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ