ಮಂಗಳೂರು: ಕ್ರೀಡೆ ಮತ್ತು ವಿದ್ಯೆ ಸಮತೋಲನದಲ್ಲಿ ಸಾಗಿದಾಗ ಮಾತ್ರ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ಸಾಧ್ಯ, ಎಂದು ಪೊಲೀಸ್ ಉಪ ಮಹಾನಿರೀಕ್ಷಕ ಹಾಗೂ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅಭಿಪ್ರಾಯಪಟ್ಟರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಸೋಮವಾರ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಮಹಿಳೆಯರ ಅಂತರ್ಕಾಲೇಜು ಹ್ಯಾಂಡ್ಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ದೇಶ ಕಟ್ಟುವ ಕಾರ್ಯ ಮನೆಯಿಂದಲೇ ಆರಂಭವಾಗುತ್ತದೆ. ಕ್ರೀಡೆಯನ್ನು ವ್ಯಕ್ತಿತ್ವ ವಿಕಸನಕ್ಕೆ ಸಮರ್ಥವಾಗಿ ಬಳಸಿಕೊಂಡು ಮನೆಗೆ, ಸಮಾಜಕ್ಕೆ ಆರಂಭವಾದಾಗ ಇದನ್ನು ಸಾಧಿಸಿದಂತಾಗುತ್ತದೆ, ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ, ಕ್ರೀಡೆಯಲ್ಲಿ ಗೆಲುವಷ್ಟೇ ಮುಖ್ಯವಲ್ಲ. ಕ್ರೀಡಾಸ್ಫೂರ್ತಿ ಒಬ್ಬ ಉತ್ತಮ ನಾಗರಿಕನ ಲಕ್ಷಣ ಎಂದರಲ್ಲದೆ, ಕೊವಿಡ್ ಬಳಿಕ ಕ್ರೀಡಾಚಟುವಟಿಕೆಗಳು ಆರಂಭವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಕಾಲೇಜಿನ ದೈಹಿಕ ಶಿಕ್ಷಣ ಉಪನಿರ್ದೇಶಕ ಡಾ. ಕೇಶವಮೂರ್ತಿ ಟಿ ಅತಿಥಿಗಳನ್ನು ಸ್ವಾಗತಿಸಿ ಕ್ರೀಡಾಪಟುಗಳನ್ನು ಪರಿಚಯಿಸಿದರು. ಕುಲಪತಿಗಳು ಬೆಲೂನ್ ಹಾರಿಬಿಡುವ ಮೂಲಕ ಕ್ರೀಡಾಕೂಟಕ್ಕೆ ಸಾಂಕೇತಿಕ ಚಾಲನೆ ನೀಡಿದರೆ, ಪೊಲೀಸ್ ಆಯುಕ್ತರು ಚೆಂಡನ್ನು ಗೋಲ್ ಪೋಸ್ಟ್ ಗೆ ಎಸೆಯುವ ಮೂಲಕ ಪಂದ್ಯಾಟದ ಕ್ರೀಡಾಂಗಣ ಉದ್ಘಾಟಿಸಿದರು.
ಮೊದಲ ದಿನ 11 ತಂಡಗಳು ಆಯ್ಕೆ ಸುತ್ತಿನಲ್ಲಿ ಹಣಾಹಣಿ ನಡೆಸಲಿದ್ದು, ಆರಿಸಿಬರುವ 4 ತಂಡಗಳು ಮಂಗಳವಾರ ಇತರ 4 ತಂಡಗಳ ಜೊತೆ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ನಿವೃತ್ತ ದೈಹಿಕ ಶಿಕ್ಷಣ ಉಪನಿರ್ದೇಶಕ ಡಾ. ದಯಾಕರ್, ಕ್ರೀಡಾ ಸಲಹಾ ಸಮಿತಿ ಸದಸ್ಯರು, ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ಅರ್ಥಶಾಸ್ತ್ರ ವಿಭಾಗದ ಸಂಶೋಧನಾರ್ಥಿ ರೇಖಾ ಶಂಕರ್ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಸಂಘದ ಕಾರ್ಯದರ್ಶಿ ನಚಿಕೇತ್ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿನಿಯರಾದ ವೈಷ್ಣವಿ ಮತ್ತು ಗೌತಮಿ ಪ್ರಾರ್ಥನೆ ನಡೆಸಿಕೊಟ್ಟರು.