ಪುತ್ತೂರು: ಭಾರತವು ಸಮೃದ್ಧ ಸಂಸ್ಕೃತಿಯನ್ನು ಹೊಂದಿರುವುದರಿಂದಲೇ ಪ್ರಪಂಚದ ಇತರ ದೇಶಗಳಿಂದ ವಿಭಿನ್ನವಾಗಿ ಗುರುತಿಸಲ್ಪಡುತ್ತದೆ. ಸಂಗೀತ, ಸಾಹಿತ್ಯ, ಕಲೆ ಇವುಗಳಿಗೆ ನಮ್ಮ ಪೂರ್ವಜರು ಹಾಕಿದ ಪಂಚಾಂಗ ಅತ್ಯದ್ಭುತವಾಗಿದೆ. ಸಂಗೀತದ ರಾಗಗಳಾದ ಸಾರಂಗ ರಾಗದಿಂದ ಜಿಂಕೆ ಕುಣಿಯುವುದು, ಮೇಘ ವರ್ಷಿನಿ ರಾಗದಿಂದ ಮಳೆ ಹನಿಯುವುದು ಎಂದರೆ ಸೋಜಿಗ. ಇದನ್ನು ನಾವಿಂದು ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿದೆ. ನಮ್ಮ ಭವ್ಯ ಪರಂಪರೆಯಿಂದ ನಾವು ಭಾರತೀಯರೆಂದು ಹೇಳುವಾಗ ಹೆಮ್ಮೆ ಎನಿಸುತ್ತದೆ ಎಂದು ಸುಬ್ರಹ್ಮಣ್ಯ ನಟ್ಟೋಜರು ಹೇಳಿದರು.
ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಸಮೂಹ ಸಂಸ್ಥೆಗಳಾದ ನೆಲ್ಲಿಕಟ್ಟೆ ಹಾಗೂ ವಸತಿಯುತ ಪದವಿಪೂರ್ವ ವಿದ್ಯಾಲಯ ಬಪ್ಪಳಿಗೆ ಇದರ ಸಾಂಸ್ಕೃತಿಕ ದಿನಾಚರಣೆಯ ಸಲುವಾಗಿ ಹಮ್ಮಿಕೊಂಡಂತಹ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ಶುಭ ಹಾರೈಸಿದರು.
ಆಡಳಿತ ಮಂಡಳಿಯ ಸದಸ್ಯರಾದ ಸುರೇಶ್ ಶೆಟ್ಟಿ ದೀಪ ಪ್ರಜ್ವಲಿಸಿ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ನಂತರ ಛದ್ಮವೇಷ, ಸಂಗೀತ, ಏಕಪಾತ್ರಾಭಿನಯ, ಯೋಗಾಸನ, ಚರ್ಚಾಸ್ಪರ್ಧೆ, ರಂಗೋಲಿ ಮುಂತಾದ ಅನೇಕ ಸ್ಪರ್ಧೆಗಳು ಬೇರೆ ಬೇರೆ ವೇದಿಕೆಯಲ್ಲಿ ನಡೆಸಲ್ಪಟ್ಟವು.
ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಸುರೇಶ್ ಶೆಟ್ಟಿಯವರು ಮಾತನಾಡುತ್ತಾ ಅಲ್ಪ ಸಮಯದ ಅಭ್ಯಾಸದಲ್ಲಿ ಕ್ರೀಡಾಕೂಟದಲ್ಲಿ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಅಂಬಿಕಾದ ವಿದ್ಯಾರ್ಥಿಗಳ ಅದ್ಭುತ ಸಾಧನೆಯನ್ನು ಮೆಚ್ಚಲೇಬೇಕು ಎಂದು ವಿದ್ಯಾರ್ಥಿಗಳನ್ನು ಶ್ಲಾಘಿಸಿ ಶುಭ ಹಾರೈಸಿದರು.
ವಿವಿಧ ಸ್ಪರ್ಧೆಗಳ ವಿಜೇತರಿಗೆ ಸಂಸ್ಥೆಯ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಹಾಗೂ ಸುರೇಶ್ ಶೆಟ್ಟಿಯವರು ಪ್ರಮಾಣ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.
ನೆಲ್ಲಿಕಟ್ಟೆ ಕಾಲೇಜಿನ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ವಸತಿಯುತ ಕಾಲೇಜಿನ ಪ್ರಾಂಶುಪಾಲ ಶಂಕರನಾರಾಯಣ ಭಟ್, ಆಡಳಿತಾಧಿಕಾರಿ ಗಣೇಶ್ ಪ್ರಸಾದ್, ಕ್ಯಾಂಪಸ್ ಡೈರೆಕ್ಟರ್ ಭಾಸ್ಕರ್ ಶೆಟ್ಟಿ, ಹಿರಿಯ ಉಪನ್ಯಾಸಕ ಕೆ ರಾಮಚಂದ್ರ, ಆಂಗ್ಲಭಾಷಾ ಉಪನ್ಯಾಸಕರಾದ ರಾಮಚಂದ್ರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅನನ್ಯ ಪ್ರಾರ್ಥಿಸಿದರು. ಉಪನ್ಯಾಸಕಿ ವಿನುತಾ ವಂದಿಸಿದರು.
ಗಣಕಶಾಸ್ತ್ರ ಉಪನ್ಯಾಸಕಿ ಜಯಂತಿ ಹೊನ್ನಮ್ಮ ಹಾಗೂ ರಸಾಯನಶಾಸ್ತ್ರ ಉಪನ್ಯಾಸಕಿ ಅಕ್ಷತಾ ಎಂ ಕಾರ್ಯಕ್ರಮ ನಿರೂಪಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ಸುಚಿತ್ರಾ ಪ್ರಭು ವಿಜೇತರ ಪಟ್ಟಿ ವಾಚಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ