ವಿವಿ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಅಧಿಕಾರಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮ
ಮಂಗಳೂರು: ನಾವು ಮೊದಲು ಮಾನವರಾಗಬೇಕು. ಸೇವಾಮನೋಭಾವನೆ ಪ್ರತಿಯೊಬ್ಬನಿಗೂ ಅತ್ಯಗತ್ಯ. ಈ ನಿಟ್ಟಿನಲ್ಲಿ ಭಾರತೀಯ ರೆಡ್ ಕ್ರಾಸ್ ಮಾಡುತ್ತಿರುವ ಕಾರ್ಯ ಶ್ಲಾಘನೀಯ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಯುವ ರೆಡ್ ಕ್ರಾಸ್ ವತಿಯಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳ ಕಾರ್ಯಕ್ರಮ ಅಧಿಕಾರಿಗಳಿಗೆ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಓರಿಯಂಟೇಶನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಏಕತೆ ಸಾಧಿಸುವುದು ರೆಡ್ ಕ್ರಾಸ್ ಗುರಿ. ಕಷ್ಟಗಳು ಎದುರಾದರೆ ಗುರಿ ಬದಲಾಯಿಸದಿರಿ, ಆದರೆ ತಂತ್ರಗಳನ್ನು ಬದಲಾಯಿಸಿ, ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೆಡ್ ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಮುಖ್ಯಸ್ಥ ಸಿಎ ಶಾಂತಾರಾಮ ಶೆಟ್ಟಿ, ಯುವ ರೆಡ್ ಕ್ರಾಸ್ ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಸಾಧಿಸುತ್ತಿರುವ ಪ್ರಗತಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ರೆಡ್ ಕ್ರಾಸ್ನಲ್ಲಿ ಸೇವಾಮನೋಭಾವದಿಂದ ದುಡಿಯುವವರಿಗೆ ಅಪಾರ ಅವಕಾಶವಿದೆ. ಕಾರ್ಯಕ್ರಮ ಅಧಿಕಾರಿಗಳ ಸಾಧನೆಯನ್ನು ರಾಜ್ಯಮಟ್ಟದಲ್ಲಿ ಗುರುತಿಸಿ ಅವರನ್ನು ಇನ್ನಷ್ಟು ಪ್ರೋತ್ಸಾಹಿಸುವ ಯೋಜನೆಯಿದೆ, ಎಂದರು.
ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀಧರ ಬಾಬು ಮಾತನಾಡಿ, ರೆಡ್ ಕ್ರಾಸ್ನ ಸಾಧನಾಗಾಥೆ ಮುಂದುವರಿಯಲಿ. ಇದಕ್ಕಾಗಿ ತಮ್ಮ ಇಲಾಖೆಯಿಂದ ಬೇಕಾದ ಸಹಕಾರ ನೀಡಲಾಗುವುದು, ಎಂದರು. ಪ್ರಾಂಶುಪಾಲೆ ಡಾ. ಅನಸೂಯ ರೈ, ಕೋವಿಡ್ನಿಂದ ಉಂಟಾಗಿದ್ದ ವಿಷಮ ಪರಿಸ್ಥಿತಿಯಲ್ಲಿ ರೆಡ್ ಕ್ರಾಸ್ ಹಮ್ಮಿಕೊಂಡಿದ್ದ ಲಸಿಕಾ ಅಭಿಯಾನ, ರಕ್ತದಾನ ಶಿಬಿರಗಳಂತಹ ಸೇವಾ ಕಾರ್ಯಗಳನ್ನು ನೆನೆದರು. ರೆಡ್ ಕ್ರಾಸ್ ರಾಜ್ಯ ಶಾಖೆಯ ಪ್ರತಿನಿಧಿ ಯತೀಶ್ ಬೈಕಂಪಾಡಿ ಮಾತನಾಡಿ, ಶೀಘ್ರದಲ್ಲೇ ಯುವ ರೆಡ್ ಕ್ರಾಸ್ ಸ್ವಯಂಸೇವಕರಿಗೆ ಸಮವಸ್ತ್ರ ವಿತರಿಸಲಾಗುವುದು, ಎಂದರು.
ಇದೇ ವೇಳೆ ಯುವ ರೆಡ್ ಕ್ರಾಸ್ ನ ನೂತನ ವೆಬ್ಸೈಟ್ ನ್ನು ಕುಲಪತಿಗಳು ಲೋಕಾರ್ಪಣೆಗೊಳಿಸಿದರು. ಯುವ ರೆಡ್ ಕ್ರಾಸ್ ಜಿಲ್ಲಾ ಉಪಸಮಿತಿಯ ನಿರ್ದೇಶಕ ಸಚೇತ್ ಸುವರ್ಣ ಮತ್ತು ಇನ್ಫೋನಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನ ಐಟಿ ವಿಭಾಗದ ಕಿರಣ್ ಸಾಲಿಯಾನ್ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ. ಗಣಪತಿ ಗೌಡ ಸ್ವಾಗತಿಸಿದರೆ, ವಿವಿ ಕಾಲೇಜಿನ ವೈಆರ್ಸಿ ಕಾರ್ಯಕ್ರಮ ಅಧಿಕಾರಿ ಡಾ. ಕುಮಾರಸ್ವಾಮಿ ಎಂ ಕಾರ್ಯಕ್ರಮ ನಿರೂಪಿಸಿದರು. ಸಚೇತ್ ಸುವರ್ಣ ವಂದಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ