ರಕ್ತಕ್ಕೆ ಜಾತಿ ಮತ ಬೇಧವಿಲ್ಲ: ಒಡಿಯೂರು ಶ್ರೀ

Upayuktha
0

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಯುವ ರೆಡ್ ಕ್ರಾಸ್ ಘಟಕ, 'ಮಂಗಳ ಯೋಜನೆ' ಗ್ರಾಮ ದತ್ತು ಸ್ವೀಕಾರ ಕಾರ್ಯಕ್ರಮ ಹಾಗೂ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ (ಅಸೈಗೋಳಿ) ಜಂಟಿ ಸಹಯೋಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಬುಧವಾರ ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಯಿತು.


ಶಿಬಿರ ಉದ್ಘಾಟಿಸಿ ಮಾತನಾಡಿದ ಒಡಿಯೂರು ಶ್ರೀ ದತ್ತಾಂಜನೇಯ ಕ್ಷೇತ್ರದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ, ಹೃದಯದಲ್ಲಿ ಪ್ರೀತಿ ಭಾವಗಳು ತುಂಬಿಕೊಂಡಾಗ ದ್ವೇಷಗಳು ದೂರವಾಗಿ ಮಾನವೀಯ ಮೌಲ್ಯಗಳು ಬೆಳೆಯುವಲ್ಲಿ ಸಹಕಾರಿಯಾಗುತ್ತದೆ. ರಕ್ತಕ್ಕೆ ಜಾತಿ ಮತ ಬೇಧವಿಲ್ಲ. ರಕ್ತದಾನ ಬಹಳ ಶ್ರೇಷ್ಠವಾದುದು. ಅದರಲ್ಲೂ ದಾನದ ಹಿಂದಿರುವ ಪ್ರೀತಿ ಬಹಳ ಪ್ರಮುಖವಾದುದು. ವಿಶ್ವವಿದ್ಯಾಲಯ ಹಾಗೂ ಸಂಘ ಸಂಸ್ಥೆಗಳು ಸೇರಿಕೊಂಡು ಇಂತಹ ಶಿಬಿರ ಆಯೋಜನೆ‌ ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.


ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ರಕ್ತದಾನದಂತಹ ಮಹಾನ್ ಕಾರ್ಯ ಬೇರೊಂದಿಲ್ಲ. ಇದು ಜಾತಿ‌, ಮತ, ಧರ್ಮವನ್ನು ಮೀರಿ ನಿಂತಿದೆ. ರಕ್ತ ಸಿಗದೇ ಯಾರೂ ಮರಣಿಸಬಾರದು. ಹಾಗೆಯೇ ರಕ್ತದಾನ ಮಾಡದೇ ಯಾರೂ ಇಹಲೋಕ ತ್ಯಜಿಸಬಾರದು. ರಕ್ತದಾನದ ಬಗ್ಗೆ ಇರುವ ಅಪನಂಬಿಕೆ ದೂರಗೊಳಿಸಬೇಕಿದೆ ಎಂದರು.


ಈಗಾಗಲೇ ಮಂಗಳೂರು ವಿಶ್ವವಿದ್ಯಾನಿಲಯವು ಹತ್ತು ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದು ಗಡಿನಾಡಿನ ಶಾಲೆ ಸೇರಿದಂತೆ ಇನ್ನೂ ಐದು ಶಾಲೆ ದತ್ತು ತೆಗೆದುಕೊಳ್ಳುವ ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದ ಅವರು, ವಿಶ್ವವಿದ್ಯಾನಿಲಯದ ರಕ್ತದಾನಿಗಳ ವೆಬ್ ಪೋರ್ಟಲ್ ಬಿಡುಗಡೆ ಮಾಡಿದರು. ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ ರೈ ಕಲ್ಲಿಮಾರು ಅವರು ಪ್ರಶಾಂತ್ ನಾಯ್ಕ್ ಅವರ ಸಂಕಲನದ 'ರಕ್ತದಾನ ಮಹಾದಾನ- ವೈಜ್ಞಾನಿಕ ಮಾಹಿತಿ' ಎಂಬ ಕೈಪಿಡಿ ಲೋಕಾರ್ಪಣೆಗೊಳಿಸಿದರು.


ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ 7 ನೇ ಬೆಟಾಲಿಯನ್‌ನ ಕಮಾಂಡೆಂಟ್ ಬಿ ಎಂ ಪ್ರಸಾದ್, ಮಂಗಳೂರು ರೆಡ್ ಕ್ರಾಸ್ ಸೊಸೈಟಿಯ ಡಾ. ಜೆ ಎನ್ ಭಟ್ ಅತಿಥಿಗಳಾಗಿ ಭಾಗವಹಿಸಿದ್ದರು. ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಡಾ.ಗೋವಿಂದರಾಜು ಅವರು ಸ್ವಾಗತಿಸಿದರು. ಯುವ ರೆಡ್ ಕ್ರಾಸ್ ಸೊಸೈಟಿ ಕಾರ್ಯಕ್ರಮ ಅಧಿಕಾರಿ ಡಾ.ಪರಮೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳ ಯೋಜನೆ ಸಂಯೋಜಕರಾದ ಪ್ರೊ. ಪ್ರಶಾಂತ್ ನಾಯ್ಕ ವಂದಿಸಿದರು. ಸಂಶೋಧನಾರ್ಥಿ ಚಂದನಾ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ವಿವಿಯ ಯುವ ರೆಡ್ ಕ್ರಾಸ್ ಸೊಸೈಟಿಯ ನೋಡಲ್ ಅಧಿಕಾರಿ ಡಾ. ಗಣಪತಿ ಗೌಡ ಮುಂತಾದವರು ಉಪಸ್ಥಿತರಿದ್ದರು.


ಶ್ರೀ ರಾಮಕೃಷ್ಣ ಪ್ರೌಢಶಾಲೆ ಹರೇಕಳದ ಸೌಜನ್ಯ ಸ್ಕೌಟ್ ಗೈಡ್ ದಳದ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


free website counter

Post a Comment

0 Comments
Post a Comment (0)
To Top